ರಾಜ್ಯದಲ್ಲಿ NPR ಜಾರಿಗೊಳಿಸದಂತೆ ಸರ್ಕಾರವನ್ನು ಒತ್ತಾಯಿಸುವುದಾಗಿ ಕರ್ನಾಟಕ ಕಾಂಗ್ರೆಸ್ ನಿರ್ಧಾರ
ಕರ್ನಾಟಕದಲ್ಲಿ NPR/NRC/CAAಯನ್ನು ಜಾರಿಗೊಳಿಸದಂತೆ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ಮೇಲೆ ಕಾಂಗ್ರೆಸ್ ಪಕ್ಷವು ಒತ್ತಡ ತರುವುದಾಗಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಸೋಮವಾರ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ನಿರ್ಧರಿಸಲಾಗಿದೆ.
ಕೇಂದ್ರ ಸರ್ಕಾರವು ದೇಶದಾದ್ಯಂತ ಜಾರಿಗೆ ತರಲು ಮುಂದಾಗಿರುವ NPR/NRC/CAA ಯನ್ನು ವಿರೋಧಿಸಿ ಕಳೆದ ನೂರು ದಿನಗಳಿಂದ ಜನರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಆದರೂ ಎಚ್ಚೆತ್ತುಕೊಳ್ಳದ ಕೇಂದ್ರ ಸರ್ಕಾರ ಜಾರಿ ಮಾಡಿಯೇ ತೀರುತ್ತೇವೆಂಬ ಹಠಕ್ಕೆ ಬಿದ್ದಿರುವುದನ್ನು ರಾಜ್ಯ ಕಾಂಗ್ರೆಸ್ ಪಕ್ಷ ವಿರೋಧಿಸಿದೆ.
ದೇಶದಾದ್ಯಂತ ಅಹಿಂಸಾತ್ಮಕವಾಗಿ ನಡೆಯುತ್ತಿರುವ ಈ ಹೋರಾಟವನ್ನು ಹತ್ತಿಕ್ಕಲು ಸರ್ಕಾರ ನಡೆಸುತ್ತಿರುವ ಪಿತೂರಿ ಮತ್ತು ಹಿಂಸೆಯನ್ನು ಗಂಭೀರವಾಗಿ ಸಭೆಯು ಗಂಭೀರವಾಗಿ ಪರಿಗಣಿಸಿ ಚರ್ಚಿಸಲಾಗಿದೆ.
ಕರ್ನಾಟಕದಲ್ಲಿ ಏಪ್ರಿಲ್ ತಿಂಗಳಿನಿಂದ ಎನ್‌ಪಿಆರ್ ಜಾರಿಗೊಳಿಸುವುದಾಗಿ ಉಪಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಘೋಷಿಸಿದ್ದರು. ಎನ್‌ಪಿಆರ್ ಸಂವಿಧಾನದ ಆಯಶಕ್ಕೆ ವಿರುದ್ಧವಾದ ನಿಯಮಗಳನ್ನು ಹೊಂದಿರುವುದರಿಂದ ಜಾರಿಗೊಳಿಸಬಾರದು ಎಂದು ಸಭೆಯಲ್ಲಿ ನಿರ್ಣಯಿಸಲಾಗಿದೆ.
ಸಂವಿಧಾನದ ಮೂಲ ಆಶಯ ರಕ್ಷಿಸುವುದು ರಾಜಕೀಯ ಪಕ್ಷಗಳ ಆಧ್ಯ ಕರ್ತವ್ಯವಾಗಿದೆ. ದೇಶದ ಜನರ ನೆಮ್ಮದಿಗೆ ಯಾವುದೇ ಆತಂಕ ಮತ್ತು ಭಯ ಇಲ್ಲದ ವಾತಾವರಣ ಸೃಷ್ಟಿಸುವುದು ನಮ್ಮೆಲ್ಲರ ಕರ್ತವ್ಯ. ಸಂವಿಧಾನದ ಮೂಲ ಆಶಯವನ್ನು ರಕ್ಷಿಸುವ ದೃಷ್ಟಿಯಿಂದ ರಾಜ್ಯದಲ್ಲಿ NPR ಜಾರಿಗೆ ತರದಂತೆ ಒತ್ತಾಯಿಸುವುದಾಗಿ ಕಾಂಗ್ರೆಸ್ ಶಾಸಕಾಂಗ ಪಕ್ಷವು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

