ಹಳ್ಳಿ ಮಾತು-4: ಗ್ರಾಮಗಳಲ್ಲಿ ಉಳುಮೆ ದನಗಳಿಲ್ಲ; ಇದ್ದರೂ ಅವು ರೈತನ ಕೊಟ್ಟಿಗೆಯಲ್ಲಿಲ್ಲ
“ನೇಗಿಲು ಹಿಡಿದು ಹೊಲದೊಳು ಹಾಡುತಾ, ಉಳುವಾ ಯೋಗಿಯ ನೋಡಿಲ್ಲಿ” ಎಂಬ ಗೀತೆಯನ್ನು ಕೇಳದವರು ಅಪರೂಪ. ರಾಷ್ಟ್ರಕವಿ ಕುವೆಂಪು ರಚನೆಯ ಈ ಹಾಡು ಕರ್ನಾಟಕದ ಅಧಿಕೃತ ರೈತ ಗೀತೆ. ಈ ಗೀತೆ ಕಿವಿ ಮೇಲೆ ಬೀಳುತ್ತಿದ್ದರೆ, ಜೋಡಿ ದನಗಳಿಗೆ ಕಟ್ಟಿದ ನೇಗಿಲಿಗೆ ರೈತ ತನ್ನ ದೇಹ ಭಾರ ಹಾಕಿ ಉಳುಮೆ ಮಾಡುತ್ತಿರುವ ದೃಶ್ಯ ಕಣ್ಮುಂದೆ ಬರುತ್ತದೆ.

ಗ್ರಾಮೀಣ ಭಾರತದ ನಿತ್ಯ ನೂತನವಾಗಿದ್ದ ಈ ದೃಶ್ಯ ಕಾಣಲು ಈಗ ಹುಡಕಾಡಬೇಕಾಗಿದೆ. ಗ್ರಾಮಗಳಲ್ಲಿ ಉಳುಮೆ ದನಗಳ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಸೂರ್ಯಾಸ್ತದ ಸಮಯ ಗೋಧೋಳಿ ಸಮಯವೆಂದೇ ಜನಜನಿತವಾಗಿತ್ತು. ಕಳೆದ ಸುಮಾರು ಮೂವತ್ತು ವರ್ಷಗಳ ಜಾಗತೀಕರಣ ಧೋರಣೆಗಳು ಉಳುಮೆ ದನಗಳನ್ನು ಇಲ್ಲವಾಗಿಸಿವೆ. “ಮುಂಗಾರು ನಾಟಿ ಸಮಯದ ಸಂಜೆ ಗ್ರಾಮದ ಎಲ್ಲಾ ಹಾದಿಯಲ್ಲೂ ಒಂದೇ ಸಮನೆ ಧಾವಿಸಿ ಬರುತ್ತಿದ್ದ ರಾಸುಗಳ ಕೊರಳು ಗೆಜ್ಜೆಯ ನಿನಾದವೇ ಊರಲ್ಲೆಲ್ಲಾ ಮೊಳಗುತ್ತಿತ್ತು. ಈಗ ಯಾರ ಮನೆಯಲ್ಲಿ ಉಳುಮೆ ದನಗಳಿರಬಹುದು ಎಂದು ಹುಡುಕಾಡಿ ಲೆಕ್ಕ ಹಾಕಬೇಕಾಗಿದೆ” ಎನ್ನುತ್ತಾರೆ ತಳಗವಾದಿ ಗ್ರಾಮದ ಟಿ. ಹೆಚ್. ಆನಂದ್.
1300 ಕೃಷಿ ಕುಟುಂಬ ಇರುವ ಈ ಗ್ರಾಮದಲ್ಲಿ ಲೆಕ್ಕ ಹಾಕಿದರೆ 50 ಜೋಡಿ ದನ ಸಿಕ್ಕರೆ ಅದೇ ಹೆಚ್ಚು. ಈಗ ಉಳಿದಿರುವ ಈ 50 ಜೋಡಿ ದನಗಳು ಬಹುತೇಕ ರೈತನ ಕೊಟ್ಟಿಗೆಯಲ್ಲಿ ಇಲ್ಲ; ಬದಲಾಗಿ ಉಳುಮೆ-ಸಾಗಾಣಿಕೆ ಕೃಷಿ ಕೂಲಿ ನಂಬಿ ಜೀವನ ನಡೆಸುತ್ತಿರುವ ಕೃಷಿ ಕೂಲಿಕಾರನ ಸಾಧನವಾಗಿದೆ.

ರಾಷ್ಟ್ರಕವಿ ಕುವೆಂಪು ರವರು ಚಿತ್ರಿಸಿರುವಂತೆ ರೈತನ ಸಾಧನವಾಗಿ ದನಗಳು ಈಗ ಉಳಿದಿಲ್ಲ. ಬೇಸಾಯದ ವೆಚ್ಚಗಳನ್ನು ಎಣಿಸುವಾಗ ದನಗಳ ಮೌಲ್ಯ ಸಾಮಾನ್ಯವಾಗಿ ಲೆಕ್ಕಕ್ಕೆ ಬರುವುದಿಲ್ಲ. ಇವತ್ತಿನ ಮಾರುಕಟ್ಟೆಯಲ್ಲಿ ಒಂದು ಸಾಧಾರಣ ಜೋಡಿ ದನಗಳ ಬೆಲೆ ಒಂದು ಲಕ್ಷ ರೂಗಳು. ಟೈರ್ ಎತ್ತಿನಗಾಡಿ ಬೆಲೆ 1995-96 ರಲ್ಲಿ 8 ಸಾವಿರದಿಂದ 10 ಸಾವಿರ ಇತ್ತು. ಈಗ ಒಂದು ಲಕ್ಷ ರೂ ಗೂ ಹೆಚ್ಚು. ಜಾಗತೀಕರಣ ದ ವಿಸ್ಮಯ ನೋಡಿ; ಕಾರಿನ ಬೆಲೆಗಿಂತ ಜೋಡಿ ದನಗಳ ಬೆಲೆ ದುಬಾರಿ. “ಒಂದು ಸಾರಿ ಲಾಳ ಕಟ್ಟಿಸಲು 400 ರೂ ಇಂದ 450 ರೂ ಬೇಕು. ದುಡಿಮೆ ಸಂದರ್ಭದಲ್ಲಿ ಒಂದು ತಿಂಗಳು ಸಹ ಬರಲ್ಲ. ವರ್ಷಕ್ಕೆ ಕನಿಷ್ಠ 7 ರಿಂದ 8 ಸಾರಿ ಲಾಳ ಕಟ್ಟಿಸಬೇಕು. ಪ್ರತಿದಿನ 150 ರೂ ಬೆಲೆ ತಗುಲುವ ಕನಿಷ್ಠ ಐದು ಕೆಜಿ ಹಿಂಡಿ (ಪಶು ಆಹಾರ) ಜೊತೆಗೆ ವೈದ್ಯಕೀಯ ಉಪಚಾರದ ವೆಚ್ಚ ಎಲ್ಲಾ ಲೆಕ್ಕ ಹಾಕಿದರೆ ತಿಂಗಳಿಗೆ ಐದು ಸಾವಿರ ರೂ ಬೇಕು” ಎನ್ನುತ್ತಾರೆ ಆಣೆಗೆರೆ ಗ್ರಾಮದ ಅಂಕಪ್ಪ.
ಬೆಳೆ ಆದಾಯವೂ ಬೇಸಾಯ ಲಾಗುವಾಡುಗಳ ವೆಚ್ಚಕ್ಕೆ ಸರಿ ಹೊಂದದೇ ಇರುವಾಗ ದನಗಳ ನಿರ್ವಹಣಾ ಖರ್ಚು ಭರಿಸುವುದಾದರೂ ಹೇಗೆ? ಹೀಗಾಗಿ ಉಳುಮೆ ದನಗಳ ಸಾಕಾಣಿಕೆ ಗೋಜಿಗೆ ಹೋಗುತ್ತಿಲ್ಲ. ಈಗ ದನಗಳನ್ನು ಸಾಕುವುದು ಎಂದರೆ ಒಂದು ದುಸ್ಸಾಹಸವೇ ಆಗಿದೆ. ನೈಜ ಬೆಳೆ ಆದಾಯದಿಂದ ಕುಟುಂಬ ನಿರ್ವಹಣೆಗೆ ಮಾಸಿಕ ಐದು ನೂರು ಗಿಟ್ಟದಿರುವಾಗ ಐದು ಸಾವಿರ ಖರ್ಚು ಮಾಡುವುದು ಒಂದು ದುಸ್ಸಾಹಸವೇ ಅಲ್ಲವೇ? ಆಕಸ್ಮಿಕವಾಗಿ ರಾಸುಗಳು ಮರಣ ಹೊಂದಿದರೆ ತೀರಿಸಲಾಗದ ಸಾಲದ ಹೊರೆಗೆ ಸಿಲುಕುವ ಅಪಾಯ ಬೇರೆ. “ಒಂದು ಜೋಡಿ ದನ ಸಾಕುವ ಕನಿಷ್ಠ ಸಾಮಾರ್ಥ್ಯ ಗಳಿಸಬೇಕಾದರೆ ಐದು ಎಕರೆ ಜಮೀನಾದರೂ ಇರಬೇಕು ಅಥವಾ ಉಳುಮೆ-ಸಾಗಾಣಿಕೆ ಕೂಲಿಗೆ ಒಡ್ಡಿಕೊಂಡ ದೈಹಿಕ ದುಡಿಮೆಗಾರನಿರಬೇಕು” ಎನ್ನುತ್ತಾರೆ ಬೋರಾಪುರ ಶಂಕರೇಗೌಡ.

ಕೃಷಿ ಯಂತ್ರೋಪಕರಣ -ಸರಕು ಸಾಗಾಣಿಕೆ ವಾಹನಗಳ ಬಳಕೆ ಉತ್ತೇಜಿಸುವ ಸರ್ಕಾರದ ಕ್ರಮಗಳು, ಸಬ್ಸಿಡಿ ಯೋಜನೆಗಳು ಒಂದು ಕಡೆಯಾದರೆ, ಟ್ರಾಕ್ಟರ್ -ಟಿಲ್ಲರ್ ಉಳುಮೆ ವೆಚ್ಚಕ್ಕಿಂತ ರಾಸುಗಳ ಉಳುಮೆ ವೆಚ್ಚ ದುಬಾರಿ ಆದ ಸನ್ನಿವೇಶವು ಉಳುಮೆ ದನಗಳಿಂದ ರೈತರನ್ನು ದೂರ ತಳ್ಳುತ್ತಿವೆ. ಕೇವಲ ಮೂರು ಎಕರೆ ಇರುವ ರೈತರಿಗೂ ಸಾಲ ಮೇಳ ಆಯೋಜಿಸಿ ಟ್ರಾಕ್ಟರ್ ಸಾಲ ನೀಡಲಾಗಿದೆ. ಸಾರ್ವಜನಿಕ ಬ್ಯಾಂಕುಗಳ ಮೂಲಕ ಟ್ರಾಕ್ಟರ್ ಕಂಪನಿಗಳಿಗೆ ಮಾಡಿದ ಸರ್ಕಾರದ ಚಮಚಾ ಬಂಡವಾಳದ ಸೇವೆ ಈಗ ರೈತರ ಕೊರಳಿಗೆ ಉರುಳಾಗಿದೆ. ಒಂದು ಕಡೆ ಕೆಟ್ಟು ನಿಂತಿರುವ ಟ್ರಾಕ್ಟರ್, ಇನ್ನೊಂದು ಕಡೆ ಬ್ಯಾಂಕಿಗೆ ಆಧಾರವಾಗಿರುವ ಜಮೀನು. ಹೀಗೆ ಅಡಕತ್ತರಿಯಲ್ಲಿ ಸಿಕ್ಕಿದ ಬದುಕಾಗಿದೆ. “ರಾಸುಗಳ ಮೂಲಕ ನಡೆಯುವ ಉಳುಮೆಗೆ ಒಂದು ಎಕರೆಗೆ 1600 ರೂ ರಿಂದ 1800 ರೂ, ಆದರೆ ಅದೇ ಟ್ರಾಕ್ಟರ್ ಉಳುಮೆಗೆ 900 ರೂ ರಿಂದ 1000 ರೂ ತಗುಲುತ್ತದೆ ಮಾತ್ರವಲ್ಲ; ಉಳುಮೆ ಸಮಯವೂ ಗಂಟೆಗಳ ಲೆಕ್ಕದಲ್ಲಿ. ಹಾಗಾಗಿ ಒಟ್ಟು ಉಳುಮೆಯ ಶೇಕಡಾ 80 ಕ್ಕಿಂತ ಹೆಚ್ಚು ಟ್ರಾಕ್ಟರ್-ಟಿಲ್ಲರ್ ಗಳಿಂದಲೇ ನಡೆಯುತ್ತಿದೆ” ಎನ್ನುತ್ತಾರೆ ಅಡಗನಹಳ್ಳಿ ಗ್ರಾಮದ ಗಿರೀಶ್.

ಆದರೆ ಹೈನುಗಾರಿಕೆ ರಾಸುಗಳ ಸಂಖ್ಯೆಯಲ್ಲಿ ವಿಪರೀತ ಹೆಚ್ಚಳ ಆಗಿದೆ. ಕೃಷಿ ಕೂಲಿ ಕೆಲಸ ಗಣನೀಯವಾಗಿ ಕಡಿತಗೊಂಡಿರುವ ಸನ್ನಿವೇಶದ ಆದಾಯ ಕೊರತೆಯನ್ನು ಹೈನುಗಾರಿಕೆ ಜಾನುವಾರು ಪೋಷಣೆಯಲ್ಲಿ ಸರಿದೂಗಿಸಿಕೊಳ್ಳುವ ಪ್ರಯತ್ನ ಈ ಗಮನಾರ್ಹ ಹೆಚ್ಚಳಕ್ಕೆ ಕಾರಣ.
ಭೂ ಹಿಡುವಳಿ ಹೆಚ್ಚು ಇರುವವರು ಹೆಚ್ಚೆಚ್ಚು ಬೇಸಾಯ ಹಿಡುವಳಿಯನ್ನು ಕ್ರೋಢೀಕರಿಸಿಕೊಂಡು ಅತಿ ಹೆಚ್ಚು ಬಂಡವಾಳ ಬಯಸುವ, ಆಧುನಿಕ ಯಂತ್ರೋಪಕರಣಗಳ ಮೇಲೆ ಆಧಾರಿತವಾದ ಕೃಷಿಗೆ ಆಸಕ್ತಿಗೆ ತೋರುತ್ತಿದ್ದರೆ, ಕೃಷಿ ಕೂಲಿಕಾರರು, ಸಣ್ಣ ಮತ್ತು ಅತಿ ಸಣ್ಣ ಹಿಡುವಳಿದಾರರು ತಮ್ಮ ಜೀವನೋಪಾಯಕ್ಕಾಗಿ ಹೆಚ್ಚೆಚ್ಚು ಜಾನುವಾರುಗಳ ಸಾಕಾಣಿಕೆಗೆ ಒಲವು ತೋರುತ್ತಿದ್ದಾರೆ. ಈ ವಿದ್ಯಮಾನವು ಜಾನುವಾರುಗಳಿಲ್ಲದ ದೊಡ್ಡ ಹಿಡುವಳಿದಾರರು, ಜಾನುವಾರುಗಳೇ ಆಧಾರವಾಗಿರುವ ಬಡ ರೈತಾಪಿಗಳು ಎಂಬ ಗ್ರಾಮೀಣ ವೈರುಧ್ಯವನ್ನು ನಿರ್ಮಿಸಿದೆ. “ನಮ್ಮೂರಲ್ಲಿ 1977 ರಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘ ಪ್ರಾರಂಭವಾಯಿತು. ಆಗ ಹೈನುಗಾರಿಕೆ ಜಾನುವಾರುಗಳ ಪೈಕಿ ಶೇಕಡಾ 80 ಎಮ್ಮೆ,ಉಳಿದವು ದೇಸಿ ತಳಿಯ ಹಳ್ಳಿಕಾರ್ ಹಸುಗಳು. ಈಗ ಶೇಕಡಾ 80 ರಷ್ಟು ಜರ್ಸಿ, ಹೆಚ್ ಎಫ್ ತಳಿಯ ಸೀಮೆ ಹಸುಗಳೇ ತುಂಬಿವೆ” ಎಂದು ಹೈನುಗಾರಿಕೆ ಉದ್ದಿಮೆ ಬೆಳವಣಿಗೆ ಬಗ್ಗೆ ವಿವರಿಸಿದವರು ಮದ್ದೂರು ತಾಲ್ಲೂಕು ಮರಳಿಗ ಗ್ರಾಮದ ಎಂ.ಸಿ.ಪುಟ್ಟಸ್ವಾಮಿ.

ಮರಳಿಗ ಗ್ರಾಮದಂತೆ ಮಂಡ್ಯ ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲೂ ಹೈನುಗಾರಿಕೆ ಬೆಳೆದಿದ್ದು, ಪ್ರತಿನಿತ್ಯ ಸುಮಾರು 9 ಲಕ್ಷ ಲೀಟರ್ ನಷ್ಟು ಜಿಲ್ಲಾ ಹಾಲು ಸಹಕಾರ ಒಕ್ಕೂಟಕ್ಕೆ ಸರಬರಾಜು ಆಗುತ್ತಿದೆ. ಹೈನುಗಾರಿಕೆ ಇಷ್ಟು ಬೆಳೆದಿದ್ದರೂ ಸಹಕಾರ ಸಂಘಗಳ ಜಾಲದಿಂದಾಗಿ ನಿಶ್ಚಿತ ಆದಾಯ ಖಾತರಿ ಆಗಿದ್ದರೂ ಅಂತರಾಷ್ಟ್ರೀಯ ವ್ಯಾಪಾರ ಒಪ್ಪಂದಗಳ ಕಾರಣದಿಂದ ಸಹಕಾರಿ ರಂಗ ನಲುಗುತ್ತಿದೆ. ಕೃಷಿ ಬಿಕ್ಕಟ್ಟು ಭೂ ಹಿಡುವಳಿ ಮತ್ತು ಜಾನುವಾರುಗಳ ನಡುವಿನ ಸಂಬಂಧವನ್ನೇ ಬದಲಿಸಿ ಉಳುಮೆ ದನಗಳನ್ನು ದೈಹಿಕ ದುಡಿಮೆಗಾರನ ಸಾಧನವಾಗಿಸಿದ್ದರೆ, ಹೈನು ರಾಸುಗಳನ್ನು ಬಡ ರೈತಾಪಿ ಕುಟುಂಬಗಳ ಸಂಕಷ್ಟದ ನಿಟ್ಟುಸಿರನ್ನಾಗಿಸಿದೆ.
ಹೀಗೆ ಬಹುತೇಕ ಗ್ರಾಮೀಣ ಭಾರತದ ಜನ ಜೀವನವೇ ಅಸ್ಥಿರ-ಅಭದ್ರಗೊಂಡ ಸ್ಥಿತಿಗೆ ತಲುಪಿದೆ. ಇಂತಹ ತಳವೇ ಕಿತ್ತು ಹೋದ ಗ್ರಾಮೀಣ ಜನ -ಜೀವನವನ್ನು ಬದಲಾಯಿಸುವುದಾಗಿ ಘೋಷಿಸಿ ಕರ್ನಾಟಕ ಅಗ್ರಿ ಬಿಸಿನೆಸ್ ಪಾಲಿಸಿ 2010 ಅನ್ನು ಕರ್ನಾಟಕ ಸರ್ಕಾರ ಅಂಗೀಕರಿಸಿದೆ. ಈ ಧೋರಣಾ ಕ್ರಮವು ‘ಕೃಷಿ ಪ್ರವಾಸೋದ್ಯಮ’ ಉತ್ತೇಜಿಸಿ ಬೆಳೆಸುವುದಾಗಿ ಹೇಳಿಕೊಂಡಿದೆ. ಪ್ರವಾಸಿಗರಿಗೆ ಎತ್ತಿನಗಾಡಿ ಸವಾರಿ, ಮೇಕೆಗೆ ಹುಲ್ಲು ತಿನ್ನಿಸುವುದು ಮುಂತಾದವುಗಳು ರೈತರ ಜೀವನವನ್ನು ಸುಭದ್ರಗೊಳಿಸಲಿದೆ ಎಂಬ ಹಾಸ್ಯಾಸ್ಪದ ಪ್ರಸ್ತಾಪಗಳನ್ನು ಹೊಂದಿದೆ. ಇದು ಕೇವಲ ಹಾಸ್ಯಾಸ್ಪದ ಮಾತ್ರವೇ ಅಲ್ಲ; ಅಮಾನವೀಯ, ಅನಾಗರಿಕ ಮತ್ತು ಗ್ರಾಮೀಣ ಭಾರತದ ಘನತೆ, ಸ್ವಾಭಿಮಾನ, ಸಮೃದ್ದತೆಗೆ ಎಸಗಿದ ಮಹಾದ್ರೋಹ.

ರೈತಾಪಿ ಕೃಷಿ ಎಂಬುದು ಕೇವಲ ಜೀವನೋಪಾಯದ ಆರ್ಥಿಕ ಚಟುವಟಿಕೆ ಮಾತ್ರವೇ ಅಲ್ಲ; ಒಂದು ಸಾಮುದಾಯಿಕ, ಸಾಂಸ್ಕೃತಿಕ ಬದುಕಿನ ಅಭಿವ್ಯಕ್ತಿ. ಪರಿಸರ ಸ್ನೇಹಿ ಹಾಗೂ ಜೀವಿ ಪರಿಸರ ಸುಸ್ಥಿರತೆಯನ್ನು ಕಾಪಾಡಿಕೊಂಡು ಬದುಕನ್ನು ಪೊರೆಯುವ ಒಂದು ಅಪೂರ್ವ ಅವಿಷ್ಕಾರ. ಸಂಕ್ರಾಂತಿ, ಹೊನ್ನೇರು ಮುಂತಾದ ಅಗಣಿತ ಸಾಂಸ್ಕೃತಿಕ ಹಬ್ಬ-ಸಂಭ್ರಮಗಳ ವೇದಿಕೆ ಮತ್ತು ದನಗಳ ಸರಣಿ ಜಾತ್ರೆಗಳ ಜಾಲವೇ ಪರಸ್ಪರ ಹೆಣೆದುಕೊಂಡ ಜಾನಪದ ಮಾರುಕಟ್ಟೆ.

ಜಾನುವಾರು ಮಾರಾಟ-ಖರೀದಿ ನಿಷೇಧಿಸುವ, ಪಾರಂಪರಿಕ ಜಾನುವಾರು ಮಾರುಕಟ್ಟೆ ನಿಯಂತ್ರಿಸುವ 2017 ರ ಮೇ 23 ರ ನರೇಂದ್ರ ಮೋದಿ ಸರ್ಕಾರದ ಪ್ರಕಟಣೆ ಇಡೀ ಗ್ರಾಮೀಣ ಆರ್ಥಿಕತೆಯ ಮೇಲಿನ ಮತ್ತೊಂದು ಮಾರಣಾಂತಿಕ ಪ್ರಹಾರ. ವ್ಯಾಪಕ ವಿರೋಧದ ಕಾರಣದಿಂದ ಆರು ತಿಂಗಳ ನಂತರ ವಾಪಸ್ಸು ಪಡೆದಿದ್ದರೂ ‘ಗೋ ರಕ್ಷಣೆ’ ನೆಪದ ಧಾಳಿ -ದಾಂಧಲೆ ದೇಶದಾದ್ಯಂತ ಅವ್ಯಾಹತವಾಗಿ ನಡೆಯುತ್ತಿದೆ. ದುಡಿಮೆ ಸಾಮಾರ್ಥ್ಯ ಕಳೆದುಕೊಂಡ ಆರ್ಥಿಕವಾಗಿ ಪ್ರಯೋಜನವಿಲ್ಲದ ರಾಸುಗಳ ಮಾರಾಟ ಹಾಗೂ ಆ ನಂತರದ ಆರ್ಥಿಕ ಚಟುವಟಿಕೆಗಳ ಮೇಲೆ ಉಂಟಾದ ದಿಗ್ಬಂಧನ, ರೈತಾಪಿ ಜೀವನದ ಆರ್ಥಿಕ ಸರಪಳಿಯನ್ನು ತುಂಡರಿಸಿದೆ.
ಸುಮಾರು ಒಂದು ವರ್ಷದ ಹಿಂದೆ ಹೈನುಗಾರಿಕೆಗಾಗಿ ಕಾರ್ಕಳದಿಂದ ಮಲೆನಾಡು ಗಿಡ್ಡ ತಳಿಯ ಹಸು ತರಲು ಹೋಗಿದ್ದ ಮದ್ದೂರು ತಾಲ್ಲೂಕು ಬನ್ನಹಳ್ಳಿ ಗ್ರಾಮದ ಸಾವಯವ ಕೃಷಿಕ ಶಿವು “ಖರೀದಿ, ಸಾಗಾಟಕ್ಕೆ ಬೇಕಾದ ಎಲ್ಲಾ ದಾಖಲೆಗಳನ್ನು ಹೊಂದಿದ್ದರೂ, ದ ಕ ಜಿಲ್ಲೆಯ ಕಾರ್ಕಳ ಹಾಗೂ ವೇಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗೋರಕ್ಷಕರು ಅಡ್ಡ ಹಾಕಿ ಕಿರುಕುಳ ನೀಡಿದರು. ಬೆಳ್ತಂಗಡಿ ಶಾಸಕರೇ ರೈತರಾದ ನಮ್ಮ ಮೇಲೆ ಕೇಸು ದಾಖಲಿಸುವಂತೆ ಒತ್ತಡ ಹಾಕುತ್ತಿದ್ದರು. ಕರ್ನಾಟಕ ಪ್ರಾಂತ ರೈತ ಸಂಘದ ದಕ್ಷಿಣ ಕನ್ನಡ ಹಾಗೂ ಮಂಡ್ಯ ಜಿಲ್ಲೆಯ ಕಾರ್ಯಕರ್ತರ ಪ್ರಯತ್ನದಿಂದ ಸುರಕ್ಷಿತವಾಗಿ ಊರು ಸೇರುವಂತಾಯಿತು ” ಎಂದು ನಿಟ್ಟುಸಿರುಬಿಟ್ಟರು. ಹೀಗೆ ನಿಟ್ಟುಸಿರು ಬಿಟ್ಟು ಬನ್ನಹಳ್ಳಿ ಕೃಷಿಕ ಶಿವು ರೀತಿ ಜಾನುವಾರು ಖರೀದಿ-ಮಾರಾಟಕ್ಕೆ ಹಿಂಜರಿದವರು ಬಹಳಷ್ಟು.
ಹೀಗೆ ಜಾಗತೀಕರಣ ಪ್ರೇರಿತ ಕೃಷಿ ಬಿಕ್ಕಟ್ಟು ಗ್ರಾಮೀಣ ಭೂ ಒಡೆತನ ಹಾಗೂ ಜಾನುವಾರು ನಡುವಿನ ಸಂಬಂಧವನ್ನೇ ಪಲ್ಲಟಗೊಳಿಸಿದೆ; ಜೊತೆಗೆ ಇಡಿಯಾಗಿ ಜಾನುವಾರು ಆರ್ಥಿಕತೆಯ ಮೇಲೆಯೇ ಗದಾಪ್ರಹಾರ ನಡೆಸುತ್ತಿದೆ.
- ಟಿ ಯಶವಂತ, ಮದ್ದೂರು ತಾಲೂಕಿನ ತೊರೆಶೆಟ್ಟಿಹಳ್ಳಿಯಲ್ಲಿ ವಾಸವಾಗಿರುವ ಯಶವಂತ್, ಹೊಸ ತಲೆಮಾರಿನ ಸಾಮಾಜಿಕ ಕಾರ್ಯಕರ್ತರ ಪೈಕಿ ಮುಂಚೂಣಿಯಲ್ಲಿರುವ ಗುಂಪಿನಲ್ಲಿ ಅಷ್ಟು ಸದ್ದು ಮಾಡದೇ ಕೆಲಸ ಮಾಡಿಕೊಂಡು ಹೋಗುತ್ತಿದ್ದಾರೆ. ವಿದ್ಯಾರ್ಥಿಯಾಗಿದ್ದಾಗಿನಿಂದಲೂ ಸಕ್ರಿಯವಾಗಿರುವ ಅವರು ಈ ಸದ್ಯ ಪ್ರಾಂತ ರೈತ ಸಂಘದ ಸಂಘಟಕರು. ಬೇರು ಮಟ್ಟದ ಬೆಳವಣಿಗೆಗಳನ್ನು ಜಾಗತಿಕ ರಾಜಕೀಯಾರ್ಥಿಕತೆಯ ಹಿನ್ನೆಲೆಯಲ್ಲಿ ವಿಶ್ಲೇಷಿಸುವ ಯಶವಂತ್ ತುಂಬಾ ಗಂಭೀರವಾಗಿ ಬರೆದುಬಿಡುತ್ತಾರೆ ಎಂಬ ಆತಂಕವನ್ನು ಹೋಗಲಾಡಿಸುವಂತೆ ಈ ಸರಣಿ ಬರೆಯುತ್ತಿದ್ದಾರೆ.
- ನಿಮ್ಮ ಪ್ರತಿಕ್ರಿಯೆಗಳನ್ನು ಈ ಈಮೇಲ್ ಐಡಿಗಳಿಗೆ yashavantha.t@gmail.com, ensuddii@gmail.com ಕಳುಹಿಸಿ ಅಥವಾ 9448572764 ವಾಟ್ಸ್ ಆಪ್ ನಂಬರ್ ಗೆ ಕಳುಹಿಸಿ.

