ಬಿಜೆಪಿ ಸೇರಲು 35 ಕೋಟಿ ಆಮಿಷವೊಡ್ಡಿದ್ದ ಸಚಿನ್ ಪೈಲಟ್: ಕಾಂಗ್ರೆಸ್‌ ಶಾಸಕ ಆರೋಪ

ತನ್ನನ್ನು ಬೆಂಬಲಿಸುವಂತೆ ನನಗೆ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ 35 ಕೋಟಿ ರೂಪಾಯಿ ಆಮಿಷವೊಡ್ಡಿದ್ದಾರೆ ಎಂದು ರಾಜಸ್ಥಾನದ ಕಾಂಗ್ರೆಸ್ ಶಾಸಕ ಗಿರಿರಾಜ್ ಸಿಂಗ್ ಮಾಲಿಂಗ ಆರೋಪಿಸಿದ್ದಾರೆ.

ರಾಜಸ್ಥಾನದಲ್ಲಿ ರಾಜಕೀಯ ಬಿಕ್ಕಟ್ಟು ಉಲ್ಬಣಗೊಂಡಿರುವ ನಡುವೆಯೇ ಕಾಂಗ್ರೆಸ್ ಶಾಸಕ ಗಿರಿರಾಜ್ ಸಿಂಗ್ ಪತ್ರಕರ್ತರೊಡನೆ ಮಾತನಾಡಿ ಶಾಸಕರ ಕುದುರೆ ವ್ಯಾಪಾರ ನಡೆಯುತ್ತಿದೆ ಎಂಬ ಆರೋಪಕ್ಕೆ ಮತ್ತಷ್ಟು ಪುಷ್ಠಿ ನೀಡಿದ್ದಾರೆ.

ರಾಜಸ್ಥಾನದ ಬಾರಿ ಕ್ಷೇತ್ರವನ್ನು ಪ್ರತಿನಿಧಿಸುವ ಗಿರಿರಾಜ್ ಸಿಂಗ್ ಮಾಲಿಂಗ ಈ ಕುರಿತು ಮುಖ್ಯಮಂತ್ರಿಗಳಿಗೆ ವರದಿ ಸಲ್ಲಿಸಿದ್ದೇನೆ ಎಂದಿದ್ದಾರೆ.

ಕಾಂಗ್ರೆಸ್ ತೊರೆದು ತನ್ನೊಡನೆ ಬಿಜೆಪಿ ಸೇರುವಂತೆ ಸಚಿನ್ ಪೈಲಟ್ ನನಗೂ ಆಮಿಷವೊಡ್ಡಿದ್ದರು. ಅದನ್ನು ನಾನು ನಿರಾಕರಿಸಿದೆ. ಇದು ಒಳ್ಳೇಯದಲ್ಲ ಮತ್ತು ನಾನು ಹಣಕ್ಕಾಗಿ ಕೆಲಸ ಮಾಡುವುದಿಲ್ಲ ಎಂದು ತಿಳಿಸಿದ್ದೆ. -ಸಿಂಗ್

ನಾನು ಬಿಎಸ್‌ಪಿ ಪಕ್ಷವನ್ನು 2008 ರಲ್ಲಿ ತೊರೆದೆ. ಏಕೆಂದರೆ ಅಲ್ಲಿ ಟಿಕೆಟ್ ಪಡೆಯಲು ಹಣ ನೀಡಬೇಕಾಗಿತ್ತು. ಆದರೆ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಆ ವ್ಯವಸ್ಥೆಯಿಲ್ಲ ಎಂದು ನಾನು ಕೇಳಿದ್ದೆ. ಸಚಿನ್ ನನಗೆ ಸಾಕಷ್ಟು ಹಣವನ್ನು ನೀಡುವುದಾಗಿ ತಿಳಿಸಿದರು. ಹಣದ ಬಗ್ಗೆ ಚಿಂತೆ ಬಿಡಿ ನಿಮಗೆಷ್ಟು ಬೇಕು ಹೇಳಿ, 35 ಕೋಟಿ ಅಥವಾ ಅದಕ್ಕಿಂತ ಹೆಚ್ಚು ಸಿಗುತ್ತದೆ ಎಂದು ಸಚಿನ್ ತಿಳಿಸಿದ್ದರು. ಆದರೆ ಅದು ತಪ್ಪು ಎಂದು ನಾನು ಹೇಳಿದೆ ಎಂದಿದ್ದಾರೆ.

ಮಾಲಿಂಗ ಅವರು ಪೈಲಟ್ ಅವರೊಂದಿಗೆ 2-3 ಬಾರಿ ಸಂಭಾಷಣೆ ನಡೆಸಿದ್ದಾರೆ. ಮೊದಲು ಡಿಸೆಂಬರ್‌ನಲ್ಲಿ ಪಂಚಾಯತ್ ಚುನಾವಣೆ ಸಮಯದಲ್ಲಿ ಮತ್ತು ನಂತರ ಕಳೆದ ತಿಂಗಳು ರಾಜ್ಯಸಭಾ ಚುನಾವಣೆಗೆ ಮೊದಲು ಎಂದು ಅವರು ತಿಳಿಸಿದ್ದಾರೆ.

ಈ ಮಧ್ಯೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಬೆಂಬಲಿಗ ಶಾಸಕರು ಫೆರ್ ಮೌಂಟ್ ಹೋಟೆಲ್ ನಲ್ಲಿ ತಂಗಿದ್ದು ಹಾಡು-ಆಟದಲ್ಲಿ ತೊಡಗಿದ್ದಾರೆ. ಶಾಸಕರು ನಾವು ಗೆದ್ದೆ ಗೆಲ್ಲುವೆವು ಹಾಡು ಮತ್ತು ಅಂತ್ಯಾಕ್ಷರಿಯಲ್ಲಿ ತೊಡಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇನ್ನೊಂದೆಡೆ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

19 ಮಂದಿ ಬಂಡಾಯ ಕಾಂಗ್ರೆಸ್ ಶಾಸಕರು, ಇಬ್ಬರು ಪಕ್ಷೇತರರು ಸೇರಿದಂತೆ ಒಟ್ಟು 21 ಮಂದಿ ಶಾಸಕರು ಸಚಿನ್ ಪೈಲಟ್ ಅವರ ಬೆಂಬಲಕ್ಕೆ ನಿಂತಿದ್ದಾರೆ ಎಂದು ವರಿದಿಗಳು ತಿಳಿಸಿವೆ.

ಈ ಮುಂಚೆ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಮತ್ತು ಕಾಂಗ್ರೆಸ್ ಶಾಸಕನ ನಡುವಿನ ಕುದುರೆ ವ್ಯಾಪಾರದ ಆಡಿಯೋ ವೈರಲ್ ಆಗಿತ್ತು. ಆ ಕುರಿತು ಸಚಿವರು ಸೇರಿದಂತೆ ಎಲ್ಲರ ಹೇಳಿಕೆ ಪಡೆದು ವಿಚಾರಣೆ ನಡೆಯುತ್ತಿದೆ. ಈ ನಡುವೆಯೇ ಕಾಂಗ್ರೆಸ್ ಶಾಸಕರನ್ನು ತಮ್ಮತ್ತ ಸೆಳೆಯಲು ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಕೂಡ ಹಣದ ಆಮಿಷವೊಡ್ಡಿರುವ ಸುದ್ದಿ ವೈರಲ್ ಆಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights