ಲೈಂಗಿಕ ಅಲ್ಪಸಂಖ್ಯಾತರಿಗೂ ಅರೆಸೈನಿಕ ಪಡೆಗಳಲ್ಲಿ ಅವಕಾಶ: ಮೋದಿ ಸರ್ಕಾರ

ನೇಮಕಾತಿ ವಿಧಾನದಲ್ಲಿ ಗಮನಾರ್ಹ ಬದಲಾವಣೆಯನ್ನು ಸೂಚಿಸುವ ಗೃಹ ಸಚಿವಾಲಯವು (ಎಂಎಚ್‌ಎ) ಟ್ರಾನ್ಸ್‌ಜೆಂಡರ್‌ಗಳನ್ನು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಿಗೆ (ಸಿಎಪಿಎಫ್) ನೇಮಕ ಮಾಡುವ ಇಚ್ಚೆಯನ್ನು ವ್ಯಕ್ತಪಡಿಸಿದೆ.

ಗೃಹ ಸಚಿವಾಲಯವು ಅರೆಸೈನಿಕ ಪಡೆಗಳಿಗೆ ಕಳುಹಿಸಿದ ಸಂದೇಶದಲ್ಲಿ, ತಮ್ಮ ಪಡೆಗಳಿಗೆ ಟ್ರಾನ್ಸ್‌ಜೆಂಡರ್‌ಗಳನ್ನು ನೇಮಕ ಮಾಡುವ ಬಗ್ಗೆ ಅವರ ಅಭಿಪ್ರಾಯಗಳನ್ನು ಕೇಳಿದೆ ಮತ್ತು ಆಯಾ ಪಡೆಗಳ ನೇಮಕಾತಿ ನಿಯಮಗಳಲ್ಲಿ ಮಾಡಬೇಕಾದ ಅಗತ್ಯ ತಿದ್ದುಪಡಿಗಳ ವಿವರಗಳನ್ನು ಕೋರಿದೆ.

ಒಂದು ತಿಂಗಳ ಹಿಂದೆ ಕಳುಹಿಸಿದ ಎಂಆರ್‌ಎ ಪತ್ರದಲ್ಲಿ, ಸಿಆರ್‌ಪಿಎಫ್, ಬಿಎಸ್‌ಎಫ್, ಎಸ್‌ಎಸ್‌ಬಿ, ಸಿಐಎಸ್ಎಫ್ ಮತ್ತು ಐಟಿಬಿಪಿಯ ಸಿಬ್ಬಂದಿ ವಿಭಾಗಗಳನ್ನು ಈ ಕುರಿತು ತಮ್ಮ ಅಭಿಪ್ರಾಯಗಳನ್ನು ತಿಳಿಸುವಂತೆ ಕೇಳಿತ್ತು.  ಎರಡು ವಾರಗಳ ಹಿಂದೆ, ಬಿಎಸ್ಎಫ್ ತನ್ನ ಉತ್ತರವನ್ನು ಕಳುಹಿಸಿದ್ದು, ಸಚಿವಾಲಯದ ಕ್ರಮವನ್ನು ಸ್ವಾಗತಿಸುವುದಾಗಿ ಹೇಳಿದೆ. ಅಲ್ಲದೆ, ನೇಮಕಾತಿ ನಿಯಮಗಳಲ್ಲಿನ ಬದಲಾವಣೆಗಳ ವಿವರಗಳನ್ನು ಕಳಿಸಿದ್ದು, ಸರ್ಕಾರದ ಕ್ರಮ ಅನುಕೂಲವಾಗಲಿದೆ ಎಂದು ತಿಳಿಸಿದೆ.

ಬುಧವಾರ ಉಳಿದ ಪಡೆಗಳಿಗೆ ಕಳುಹಿಸಲಾದ ಹೊಸ ಪತ್ರವೊಂದರಲ್ಲಿ, “ಲಿಂಗ ಸೂಚಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸಲು ಮೂರನೇ ಲಿಂಗವಾಗಿ ಪುರುಷ / ಸ್ತ್ರೀಯರ ಜೊತೆಗೆ 2020ಎರ ಒಸಿಎಪಿಎಫ್ (ಎಸಿ) ಪರೀಕ್ಷಾ ನಿಯಮಗಳಲ್ಲಿ ಸೇರಿಸುವ ಬಗ್ಗೆ  ಸಿಆರ್ಪಿಎಫ್, ಐಟಿಬಿಪಿ, ಎಸ್‌ಎಸ್‌ಬಿ ಮತ್ತು ಸಿಐಎಸ್‌ಎಫ್‌ನಿಂದ ಪ್ರತಿಕ್ರಿಯೆ ಬಂದಿಲ್ಲ” ಎಂದು ಎಂಎಚ್‌ಎ ಹೇಳಿದೆ.

ಈ ನೇಮಕಾತಿಗಳನ್ನು ಸಾಮಾನ್ಯ ಕೇಡರ್‌ನಲ್ಲಿ ಮಾಡಲಾಗುವುದು, ಅಂದರೆ ಅವರು ಯುದ್ಧದ ಸಂದರ್ಭಗಳಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಅಲ್ಲದೆ, ಗಡಿಯಲ್ಲಿ ಹಾಗೂ ಕಾನೂನು ಮತ್ತು ಸುವ್ಯವಸ್ಥೆಯ ಸಮಯದಲ್ಲಿ ಆಜ್ಞಾ ಪಾಲಕರಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ಸಹಾಯಕ ಕಮಾಂಡೆಂಟ್‌ಗಳ ನೇಮಕಾತಿ (ಅಧಿಕಾರಿಗಳಿಗೆ ಪ್ರವೇಶ ಹಂತ) ಕುರಿತ ಪತ್ರದಲ್ಲಿ ಹೇಳಲಾಗಿರುವುದಾಗಿ ಮೂಲಗಳು ತಿಳಿಸಿವೆ.

“ಯುದ್ಧ ಪಡೆಗಳಲ್ಲಿ ಮಹಿಳೆಯರಿಗೆ ಅವಕಾಶ ನೀಡಿದ ನಂತರ, ಮತ್ತೊಂದು ಪ್ರಮುಖ ಕ್ರಮವಾಗಿದೆ. ತೃತೀಯ ಲಿಂಗಿಗಳಿಗೆ ಸರ್ಕಾರವು ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ಸಮಾನ ಹಕ್ಕುಗಳನ್ನು ನೀಡುತ್ತಿರುವ ಮತ್ತು ಈಗಾಗಲೇ ಸರ್ಕಾರಿ ನೌಕರರಾಗಿ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಅವರು ಪಡೆಗಳಲ್ಲಿ ಸಮಾನ ಅವಕಾಶಗಳನ್ನು ಪಡೆಯದಿರಲು ಯಾವುದೇ ಕಾರಣಗಳಿಲ್ಲ” ಎಂದು ಸಿಎಪಿಎಫ್ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಅಧಿಕಾರಶಾಹಿ ಎಷ್ಟು ವೇಗವಾಗಿ ಚಲಿಸುತ್ತದೆ ಎಂಬುದರ ಆಧಾರದ ಮೇಲೆ ನಿಜವಾದ ನೇಮಕಾತಿಗೆ ಸ್ವಲ್ಪ ಸಮಯ ತೆಗೆದುಕೊಳ್ಳಬಹುದು ಎಂದು ಮೂಲಗಳು ತಿಳಿಸಿವೆ.

ಇದಕ್ಕಾಗಿ “ಸಿಎಪಿಎಫ್‌ಗಳ ನೇಮಕಾತಿ ನಿಯಮಗಳಲ್ಲಿ ಪ್ರತ್ಯೇಕವಾಗಿ ಬದಲಾವಣೆಗಳು ಬೇಕಾಗುತ್ತವೆ. ಸರಿಯಾದ ಸಮಾಲೋಚನೆ ಮತ್ತು ಅನುಮೋದನೆಯ ನಂತರ ಗೃಹ ಸಚಿವಾಲಯದ ಸಿಬ್ಬಂದಿ ಮತ್ತು ತರಬೇತಿ ಇಲಾಖೆಗೆ ಈ ವಿಷಯವನ್ನು ತಿಳಿಸಲಾಗುವುದು. ನಂತರ ಅದಕ್ಕೆ ಕ್ಯಾಬಿನೆಟ್‌ನ ಅನುಮೋದನೆ ಅಗತ್ಯವಿದೆ. 2020 ರ ನೇಮಕಾತಿ ಸೆಪ್ಟೆಂಬರ್‌ನಲ್ಲಿ ಪ್ರಾರಂಭವಾಗಲಿದೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights