ಅಯೋಧ್ಯೆ: ದಲಿತರು ಮತ್ತು ಸವರ್ಣೀಯರ ನಡುವಿನ ಘರ್ಷಣೆಗೆ ಕಾರಣವಾದ ಮಕ್ಕಳ ಜಗಳ: ಆರು ಮಂದಿಗೆ ಗಾಯ

ಸವರ್ಣಿಯರ ಮತ್ತು ದಲಿತ ಮಕ್ಕಳ ನಡುವೆ ಆರಂಭವಾದ ಜಗಳವು ದೊಡ್ಡವರವರೆಗೂ ತಾರಕಕ್ಕೇರಿ ಕನಿಷ್ಠ ಆರು ಜನರು ಗಾಯಗೊಂಡ ಘಟನೆ ಉತ್ತರ ಪ್ರದೇಶದ ಅಯೋಧ್ಯೆಯ ಹಳ್ಳಿಯೊಂದರಲ್ಲಿ ಜರುಗಿದೆ.

ಜುಲೈ 18 ರಂದು ನಡೆದ ಘಟನೆಯಲ್ಲಿ ಪೊಲೀಸರು ಎರಡು ಸಮುದಾಯಗಳ ಜನರ ಮೇಲೆ ಎಫ್‌ಐಆರ್ ದಾಖಲಿಸಿದ್ದಾರೆ. ತನಿಖಾ ಪ್ರಕ್ರಿಯೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

“ಹೈದರ್‌ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಸಮರ್ಧೀರ್ ಗ್ರಾಮದಲ್ಲಿ ಚಕಮಕಿ ಸಂಭವಿಸಿದೆ. ಇದು ಒಂದು ಕೊಳದ ಬಳಿ ಎರಡೂ ಸಮುದಾಯದ ಮಕ್ಕಳ ನಡುವಿನ ಜಗಳವಾಗಿ ಪ್ರಾರಂಭವಾಯಿತು ಮತ್ತು ಮತ್ತಷ್ಟು ಹೆಚ್ಚಾಯಿತು. ಎರಡೂ ಕಡೆಯ ಜನರು ಒಬ್ಬರಿಗೊಬ್ಬರು ಕಲ್ಲು ತೂರಾಟ ನಡೆಸಿದರು, ಅದರಲ್ಲಿ ಕೆಲವರು ಗಾಯಗೊಂಡರು” ಎಂದು ಪ್ರದೇಶದ ಸರ್ಕಲ್ ಇನ್ಸ್‌ಪೆಕ್ಟರ್‌ ಕೋಮಲ್ ಪ್ರಸಾದ್ ಮಿಶ್ರಾ ಹೇಳಿದ್ದಾರೆ.

ಹಿಂಸಾಚಾರದ ಎರಡೂ ಕಡೆಯವರು ಪರಸ್ಪರರ ವಿರುದ್ಧ ದೂರು ದಾಖಲಿಸಿದ್ದಾರೆ. ಪ್ರತಿ ಎಫ್‌ಐಆರ್‌ನಲ್ಲಿ ಸುಮಾರು ಎಂಟು ಜನರ ಹೆಸರನ್ನು ಉಲ್ಲೇಖಿಸಲಾಗಿದೆ. ಎಫ್‌ಐಆರ್‌ನಲ್ಲಿ ಸವರ್ಣಿಯ ಜನರ ವಿರುದ್ಧ ಎಸ್‌ಸಿ / ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯ ಸೆಕ್ಷನ್‌ಗಳನ್ನು ಹಾಕಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

“ಪ್ರಸ್ತುತ ಗ್ರಾಮದ ಪರಿಸ್ಥಿತಿ ಶಾಂತಿಯುತವಾಗಿದೆ. ನಾವು ಗ್ರಾಮದಲ್ಲಿ ಶಾಂತಿ ಸಮಿತಿ ಸಭೆಯನ್ನು ಸಹ ಆಯೋಜಿಸಿದ್ದೇವೆ ಮತ್ತು ಅಲ್ಲಿ ಪೊಲೀಸ್ ತುಕಡಿಯನ್ನು ನಿಯೋಜಿಸಲಾಗಿದೆ” ಎಂದು ಹೇಳಿದ್ದಾರೆ.

ಈ ಪ್ರಕರಣದಲ್ಲಿ ಪೊಲೀಸರು ಇನ್ನೂ ಯಾವುದೇ ಬಂಧನಗಳನ್ನು ಮಾಡಿಲ್ಲ. “ಆರೋಪಿಗಳು ಪರಾರಿಯಾಗಿದ್ದಾರೆ ಮತ್ತು ನಾವು ಅವರನ್ನು ಬಂಧಿಸಲು ಪ್ರಯತ್ನಿಸುತ್ತಿದ್ದೇವೆ” ಎಂದು ಕೋಮಲ್ ಪ್ರಸಾದ್ ಮಿಶ್ರಾ ಹೇಳಿದ್ದಾರೆ.


ಇದನ್ನೂ ಓದಿದಲಿತ ಯುವಕನ ಮೇಲೆ ಮಾರಣಾಂತಿಕ ಹಲ್ಲೆ; ಹಲ್ಲೆಗೊಳಗಾದವನ ಮೇಲೆಯೇ ಎಫ್‌ಐಆರ್‌ ದಾಖಲಿಸಿದ ಪೊಲೀಸ್‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights