ಭೂವಿವಾದ; ನ್ಯಾಯ ಸಿಗದೆ ಮುಖ್ಯಮಂತ್ರಿ ಕಚೇರಿ ಎದುರೆ ಬೆಂಕಿ ಹಚ್ಚಿಕೊಂಡ ಮಹಿಳೆಯರು!

ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿರುವ ಮುಖ್ಯಮಂತ್ರಿ ಆದಿತ್ಯನಾಥ್ ಅವರ ಕಚೇರಿ ಲೋಕ್‌ ಭವನದ ಬಳಿ ಇಬ್ಬರು  ಮಹಿಳೆಯರು ಶುಕ್ರವಾರ ಸಂಜೆ ತಮಗೆ ತಾವೆ ಬೆಂಕಿ ಹಚ್ಚಿಕೊಂಡ ಘಟನೆ ನಡೆಸಿದೆ.

ಉತ್ತರ ಪ್ರದೇಶದ ಅಮೆಥಿ ಜಿಲ್ಲೆಯ ಪ್ರಕರಣವೊಂದರಲ್ಲಿ ಪೊಲೀಸರು ನಿಷ್ಕ್ರಿಯರಾಗಿದ್ದಾರೆಂದು ಆರೋಪಿಸಿ ಮಹಿಳೆಯರು ಬೆಂಕಿ ಹಚ್ಚಿಕೊಂಡಿದ್ದು, ಒಬ್ಬರನ್ನು ಗುಡಿಯಾ ಎಂದು ಗುರುತಿಸಲಾಗಿದೆ. ಇಬ್ಬರಿಗೂ ಸುಟ್ಟ ಗಾಯಗಳಾಗಿದ್ದು ಲಕ್ನೋದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

“ಲೋಕ್ ಭವನ ಬಳಿ ಇಬ್ಬರು ಮಹಿಳೆಯರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಓರ್ವ ಮಹಿಳೆಯನ್ನು ಪೊಲೀಸರು ರಕ್ಷಿಸಿದ್ದಾರೆ, ಇನ್ನೊಬ್ಬ ಮಹಿಳೆ ಗಂಭೀರ ಸ್ಥಿತಿಯಲ್ಲಿದ್ದಾರೆ” ಎಂದು ಜಂಟಿ ಪೊಲೀಸ್ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ) ನವೀನ್ ಅರೋರಾ ತಿಳಿಸಿದ್ದಾರೆ.

ಅಮೆಥಿಯ ಜಾಮೋ ಪ್ರದೇಶದ ತಮ್ಮ ಹಳ್ಳಿಯಲ್ಲಿ ತಮ್ಮ ನೆರೆಹೊರೆಯವರು ಚರಂಡಿ ತ್ಯಾಜ್ಯದ ವಿವಾದದಲ್ಲಿ ಬೆದರಿಕೆ ಹಾಕುತ್ತಿದ್ದಾರೆ. ಆದರೆ ಪೊಲೀಸರು ತಮ್ಮ ದೂರುಗಳ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಹಾಗೂ ಪೊಲೀಸರು ಕೂಡಾ ನೆರೆಹೊರೆಯವರೊಂದಿಗೆ ಸೇರಿ ಕಿರುಕುಳ ನೀಡುತ್ತಿದ್ದಾರೆ ಎಂದು ಮಹಿಳೆಯರು ಆರೋಪಿಸಿದ್ದಾರೆ.

ಪ್ರಕರಣದಲ್ಲಿ ಪೊಲೀಸ್ ಠಾಣೆಯ ಇಬ್ಬರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ.

“ಮೇ 9 ರಂದು ಮಹಿಳೆ ಮತ್ತು ಆಕೆಯ ನೆರೆಹೊರೆಯವರು ಚರಂಡಿ ವಿವಾದದ ಬಗ್ಗೆ ಜಗಳವಾಡಿದ್ದರು. ಎರಡೂ ಪಕ್ಷಗಳು ಈ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಿವೆ. ನಾವು ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಿದ್ದೇವೆ. ವಿವರವಾದ ವಿಚಾರಣೆಗೆ ಆದೇಶಿಸಲಾಗಿದೆ” ಎಂದು ಅಮೇಥಿಯ ಪೊಲೀಸ್ ವರಿಷ್ಠಾಧಿಕಾರಿ ಖ್ಯಾತಿ ಗಾರ್ಗ್ ಹೇಳಿದ್ದಾರೆ.

ಪ್ರಕರಣದ ಬಗ್ಗೆ ವಿರೋಧ ಪಕ್ಷಗಳು ತೀವ್ರವಾಗಿ ಆದಿತ್ಯನಾಥ್ ಸರ್ಕಾರವನ್ನು ತರಾಟೆಗೆ ಪಡೆದಿದ್ದಾರಲ್ಲದೆ ರಾಜ್ಯವನ್ನು ಜಂಗಲ್ ರಾಜ್ ಎಂದು ಕರೆದಿದ್ದಾರೆ.

ಊನಾ ಚಳುವಳಿಯ ನಾಯಕ ಹಾಗೂ ಗುಜರಾತ್‌ ಶಾಸಕ ಜಿಗ್ನೇಶ್ ಮೇವಾನಿ, ಓ ಭರತವರ್ಷದ ಯಜಮಾನರೇ ಅವಮಾನದಲ್ಲಿ ಮುಳುಗಿ ಸಾಯಿರಿ, ಈ ಮಹಿಳೆ ಎಂತಹ ಭೀಕರ ಕಿರುಕುಳಕ್ಕೆ ಒಳಗಾಗಿರಬಹುದು. ತನ್ನ ಧ್ವನಿಯನ್ನು ಯುಪಿ ಆಡಳಿತಕ್ಕೆ ತಲುಪಿಸಲು ಜೀವಂತ ಸುಟ್ಟುಹೋಗಬೇಕಾಗಿರುವುದು ಎಂತಹ ನೋವು ಇದ್ದಿರಬಹುದು. ಸ್ವಲ್ಪವಾದರೂ ನಾಚಿಕೆಯಿದ್ದರೆ ಆದಿತ್ಯನಾಥ್ ರಾಜಿನಾಮೆ ಕೊಡಲಿ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಯೋಗಿ ಆದಿತ್ಯನಾಥ್ ಸರ್ಕಾರವು ಬಡವರ ಸಮಸ್ಯೆಗಳನ್ನು ಬಗೆಹರಿಸುತ್ತಿಲ್ಲ, ಯುಪಿಯಲ್ಲಿ ಸರ್ಕಾರ ಇನ್ನೂ ಇದೆಯೇ ಎಂದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದ್ದಾರೆ.

ಈ ಪ್ರಕರಣದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರವನ್ನು ಬಹುಜನ ಸಮಾಜ ಪಕ್ಷದ ಮುಖ್ಯಸ್ಥ ಮಾಯಾವತಿ ಆಗ್ರಹಿಸಿದ್ದಾರೆ.

“ಭೂ ವಿವಾದ ಪ್ರಕರಣದಲ್ಲಿ ತಾಯಿ ಮತ್ತು ಮಗಳು ಲಖನೌದ ಸಿಎಂ ಕಚೇರಿಯ ಮುಂದೆ ಆತ್ಮಹತ್ಯೆ ಮಾಡಿಕೊಳ್ಳಬೇಕಾಯಿತು. ಯುಪಿ ಸರ್ಕಾರ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು. ಅಂತಹ ಘಟನೆಗಳು ಮತ್ತೆ ಸಂಭವಿಸದಂತೆ ಹಾಗೂ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಿ” ಎಂದು ಮಾಯಾವತಿ ಟ್ವೀಟ್ ಮಾಡಿದ್ದಾರೆ.


ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಇಬ್ಬರು ಅರ್ಚಕರ ಕೊಲೆ; ಕೋಮು ಬಣ್ಣ ನೀಡಬೇಡಿ ಎಂದು ಬೋಧಿಸಿದ ಶಿವಸೇನೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights