ಯಾರನ್ನಾದರೂ ಎದುರಿಸಬಹುದು, ಜಗತ್ತು ತನ್ನಂತಿದೆ ಎಂದು ನರೇಂದ್ರ ಮೋದಿ ಭಾವಿಸಿದ್ದಾರೆ: ರಾಹುಲ್‌ಗಾಂಧಿ

ಗಾಂಧಿ ಕುಟುಂಬಕ್ಕೆ ಸೇರಿರುವ ಮೂರು ಟ್ರಸ್ಟ್‌ಗಳ ಮೇಲೆ ತನಿಖೆ ನಡೆಸಲು ಕೇಂದ್ರ ಸರ್ಕಾರ ಆದೇಶಿಸಿದೆ. ಗಾಂಧಿ ಕುಟುಂಬಕ್ಕೆ ಸೇರಿದ ರಾಜೀವ್ ಗಾಂಧಿ ಫೌಂಡೇಶನ್, ರಾಜೀವ್ ಗಾಂಧಿ ಚಾರಿಟೇಬಲ್ ಟ್ರಸ್ಟ್ ಮತ್ತು ಇಂದಿರಾ ಗಾಂಧಿ ಸ್ಮಾರಕ ಟ್ರಸ್ಟ್‌ಗಳಲ್ಲಿ ಹಣಕಾಸು ಅಕ್ರಮ ನಡೆದಿದೆ ಎಂಬ ಆರೋಪದ ಮೇಲೆ ತನಿಖೆ ನಡೆಸಲು ಸರ್ಕಾರ ಸಮಿತಿಯನ್ನು ರಚಿಸಿದೆ. ತನಿಖೆಗೆ ಆದೇಶಿಸಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹರಿಹಾಯ್ದಿದ್ದಾರೆ.

ಸತ್ಯಕ್ಕಾಗಿ ಹೋರಾಡುವವರನ್ನು ಬೆದರಿಸಲು ಸಾಧ್ಯವಿಲ್ಲ. ಹೇಡಿತನ ಕೃತ್ಯಗಳನ್ನು ಎಸಗುತ್ತಿರುವ, ಭಯಭೀತ ಸರ್ಕಾರದ ಸಂಚು ಮತ್ತು ಕುರುಡು ಬೆದರಿಕೆಯ ತಂತ್ರಗಳಿಗೆ ಕಾಂಗ್ರೆಸ್ ಬಗ್ಗುವುದಿಲ್ಲ. ತನ್ನ ಕೃತ್ಯಗಳು ಬಯಲಾಗುವ ಆತಂಕಕ್ಕೆ ಸಿಲುಕಿರುವ ಮೋದಿ ಸರ್ಕಾರ ಎಲ್ಲರನ್ನೂ ಬೆದರಿಸುವ ಮತ್ತು ಅವರ ಸ್ಥೈರ್ಯವನ್ನು ಕುಗ್ಗಿಸುವ ಉಪಾಯ ಮಾಡುತ್ತಿದೆ. ಇವರ ಸಂಚಿಗೆ ಯಾರೂ ಬಗ್ಗುವುದಿಲ್ಲ ಎಂದಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ರಾಹುಲ್‌ ಗಾಂಧಿ, “ಜಗತ್ತು ತನ್ನಂತೆಯೇ ಇದೆ ಎಂದು ನರೇಂದ್ರ ಮೋದಿ ಭಾವಿಸಿದ್ದಾರೆ. ಪ್ರತಿಯೊಬ್ಬರಿಗೂ ಬೆಲೆ ಕಟ್ಟುತ್ತಾ ಹೋಗಿ ಅವರನ್ನು ಬೆದರಿಸಬಹುದು ಎಂದು ಅಂದುಕೊಂಡಿದ್ದಾರೆ. ಯಾರು ಸತ್ಯಕ್ಕಾಗಿ ಹೋರಾಡುತ್ತಾರೆಯೋ ಅವರಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಮತ್ತು ಅವರನ್ನು ಬೆದರಿಸಲು, ಹೆದರಿಸಲು ಸಾಧ್ಯವಿಲ್ಲ ಎಂಬುದನ್ನು ಅವರು ಅರ್ಥ ಮಾಡಿಕೊಂಡಿಲ್ಲ” ಎಂದಿದ್ದಾರೆ.

ರಾಜೀವ್ ಗಾಂಧಿ ಫೌಂಡೇಶನ್, ರಾಜೀವ್ ಗಾಂಧಿ ಚಾರಿಟೇಬಲ್ ಟ್ರಸ್ಟ್ ಮತ್ತು ಇಂದಿರಾ ಗಾಂಧಿ ಮೆಮೋರಿಯಲ್ ಟ್ರಸ್ಟ್ ನಲ್ಲಿ ವಿದೇಶಿ ಹಣ ಕೊಡುಗೆ ಮತ್ತು ಆದಾಯ ತೆರಿಗೆ ಪಾವತಿ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ತನಿಖೆ ನಡೆಸಲು ಆದೇಶಿಸಲಾಗಿದ್ದು ಅಂತರ ಸಚಿವಾಲಯ ಸಮಿತಿ ತನಿಖೆಗೆ ಸಹಕರಿಸಲಿದೆ.

ಭಾರತದ ಭದ್ರತಾ ಹಿತಾಸಕ್ತಿ,ಪ್ರಾದೇಶಿಕ ಸಮಗ್ರತೆ, ಕೋವಿಡ್ -19 ಬಿಕ್ಕಟ್ಟು ನಿರ್ವಹಣೆ, ಸಾಮಾನ್ಯ ಜನರ ಜೀವನ ಮತ್ತು ಜೀವನೋಪಾಯ, ಆರ್ಥಿಕ ಸ್ಥಿತಿ ತೀರಾ ಹದಗೆಟ್ಟಿರುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಅವುಗಳನ್ನು ನಿರ್ವಹಿಸುವಲ್ಲಿ ಸಂಪೂರ್ಣವಾಗಿ ಎಡವಿದೆ. ಇಂತಹ ಸಮಯದಲ್ಲಿ ಮೋದಿ ಮತ್ತು ಅಮಿತ್ ಶಾ ಹತಾಶೆಯಿಂದ ಕಾಂಗ್ರೆಸ್ ವಿರುದ್ಧ ಸೇಡು ತೀರಿಸಿಕೊಳ್ಳುವ ಮನಸ್ಥಿತಿ ತೋರಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights