ಸುಗಂಧಿ ಬೇರು- 07: ಗೋದಾವರಿ ಪರುಳೇಕರ್: ‘ಮಾನವ ಎಚ್ಚೆತ್ತಾಗ ಸಮಾನತೆಯ ಕನಸುಗಳು…’

ಭಾರತದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿಯೇ ಮಾನವ ಗುಲಾಮಗಿರಿಯ ವಿರುದ್ಧ ಸಿಡಿದೆದ್ದು ಹೋರಾಡಿದವರಲ್ಲಿ ಗೋದಾವರಿ ಪರುಳೇಕರ್(1907-1996) ಮುಖ್ಯರಾಗಿದ್ದಾರೆ. ಅವರು ಮಹಾರಾಷ್ಟ್ರದ ಪ್ರಥಮ ಮಹಿಳಾ ಕಾನೂನು ಪದವಿಧರರಾಗಿದ್ದಾರೆ. ಗಾಂಧೀಜಿಯವರ ರಾಜಕೀಯ ಗುರುಗಳಾಗಿದ್ದ ಗೋಪಾಲಕೃಷ್ಣ ಗೋಖಲೆಯವರ (ಸೋದರ ಸಂಬಂಧಿಯ ಮಗಳು) ‘ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿ’ಯ ಸದಸ್ಯರಾದ ಮೊದಲ ಮಹಿಳೆಯು ಹೌದು. ಅವರಿಗೆ ಬಾಬಾಸಾಹೇಬ್ ಅಂಬೇಡ್ಕರ್ ಅವರು ಸ್ಥಾಪಿಸಿದ ‘ಸ್ವತಂತ್ರ ಕಾರ್ಮಿಕ ಪಕ್ಷ’ದ ಕಾರ್ಯದರ್ಶಿಯಾಗಿದ್ದ ಶಾಮರಾವ್ ಪರುಳೇಕರ್ ಅವರ ಪರಿಚಯವಾಗುತ್ತದೆ. ಅವರು ಶಾಮರಾಯರ ಮಾರ್ಕ್ಸ್ ವಾದಿ ಮತ್ತು ಕಮ್ಯುನಿಸ್ಟ್ ಚಿಂತನೆಗಳಿಂದ ಪ್ರಭಾವಿತರಾಗುತ್ತಾರೆ; ಮುಂದೆ ಅವರು ಶಾಮರಾಯರನ್ನು ಮದುವೆಯಾಗುತ್ತಾರೆ. ಭಾರತದ ಕಾರ್ಮಿಕ ಚಳವಳಿಯ ಹೋರಾಟದಲ್ಲಿ ಈ ಸಮಾನ ಮನಸ್ಕ ಪರುಳೇಕರ್ ದಂಪತಿಗಳ ಜೀವನವು ಹೊಸ ಅಧ್ಯಾಯವನ್ನೇ ತೆರೆಯಿತು. ಗೋದಾವರಿ ಪರುಳೇಕರ್ ಆದಿವಾಸಿಗಳ ಬದುಕಿನಲ್ಲಿ ಬೆಳಕನ್ನು ಮೂಡಿಸಿದ ದಿಟ್ಟ ನಾಯಕಿಯಾಗಿದ್ದಾರೆ.

ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರೋಧಿಯಾಗಿದ್ದ ಗೋದಾವರಿ ಪರುಳೇಕರ್ ಅವರು ಸಾಕಷ್ಟು ಬಾರಿ ಜೈಲುವಾಸ ಅನುಭವಿಸಿದವರು; ಅವರು ದುಡಿಯುವ ವರ್ಗದವರ ಸಂಕೋಲೆಗಳನ್ನು ಕಳಚುವುದಕ್ಕೆ ಸಂಘರ್ಷಾತ್ಮಕ ಬದುಕನ್ನು ಆಯ್ಕೆ ಮಾಡಿಕೊಳ್ಳುತ್ತಾರೆ; ಅವರಿಗೆ ಸಾಮಾಜಿಕ ನ್ಯಾಯದಲ್ಲಿ ಅಪಾರ ನಂಬಿಕೆಯಿತ್ತು. ಪರುಳೇಕರ್‌ರವರು ಮಹಾರಾಷ್ಟ್ರದ ಠಾಣಾ ಜಿಲ್ಲೆಯ ದಹಾಣು, ಉಂಬರಗಾಂವ್, ಖತ್ತಲವಾಡ, ಝರಿ ಗ್ರಾಮಗಳಲ್ಲಿ ದಾರುಣತೆಯಿಂದ ಕೂಡಿದ ವಾರಲೀ ಆದಿವಾಸಿಗಳ ಬಾಳಿನಲ್ಲಿ ಅರಿವನ್ನು ಆಸ್ಪೋಟಿಸಿದ ಬಗೆಯು ಮೈನವಿರೇಳಿಸುವ ಕಥನವಾಗಿದೆ. ಎರಡನೇ ಮಹಾಯುದ್ಧ ಮುಗಿದ ತರುವಾಯದಲ್ಲಿ 1945ರಿಂದ ಒಂದು ದಶಕದವರೆಗೆ ತಮ್ಮ ಹೋರಾಟವನ್ನು ನಡೆಸುತ್ತಾರೆ. ಅವರು ತಮ್ಮ ಪತಿ ಶಾಮರಾಯರ ಒತ್ತಾಸೆಯ ಮೇರೆಗೆ 1968ರಲ್ಲಿ ಜೈಲಿನಲ್ಲಿದ್ದಾಗಲೇ ಮರಾಠಿಯಲ್ಲಿ ‘ಆದಿವಾಸಿ ಬಂಡಾಯ’ ಎಂಬ ಕ್ರಾಂತಿಕಾರಿ ಕೃತಿಯನ್ನು ಬರೆಯುತ್ತಾರೆ. ಇದು ಭಾರತೀಯ ಹಲವು ಭಾಷೆಗಳಿಗೆ ಅನುವಾದಗೊಂಡಿದೆ; ಜಗತ್ತಿನ ಹಲವು ಭಾಷೆಗಳಿಗೂ ಅನುವಾದವಾಗಿದೆ. 1972ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪುರಸ್ಕಾರವನ್ನು ಪಡೆದ ಈ ಕೃತಿಯನ್ನು ಕನ್ನಡದಲ್ಲಿ ಸರಸ್ವತಿ ರಿಸಬುಡ್ ಅವರು ‘ಮಾನವ ಎಚ್ಚೆತ್ತಾಗ’ ಎಂದು ಅನುವಾದಿಸಿದ್ದಾರೆ. ಈ ಕೃತಿಯು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ‘ಅಧ್ಯಯನ ಪ್ರಕಾಶನ’ದಿಂದ 2000ರಲ್ಲಿ ಪ್ರಕಟವಾಗಿದೆ.

‘ಮಾನವ ಎಚ್ಚೆತ್ತಾಗ’ ಕೃತಿಯಲ್ಲಿ ಬ್ರಾಹ್ಮಣ ವರ್ಗದಿಂದ ಬಂದ ಗೋದಾವರಿ ಪರುಳೇಕರ್ ಅವರು ಸುಖದ ಸುಪ್ಪತ್ತಿಗೆಯನ್ನು ತೊರೆದು ಕಲ್ಲು ಮುಳ್ಳಿನ ದಾರಿಯಲ್ಲಿ ನಡೆದ ಬದುಕನ್ನು ತೆರೆದಿಟ್ಟಿದ್ದಾರೆ. ಇದು ಪರುಳೇಕರ್‌ರ ಆತ್ಮಕತೆ ಎನ್ನುವುದಕ್ಕಿಂತ ಅವರು ವಾರಲೀ ಆದಿವಾಸಿಗಳಲ್ಲಿ ಸಾಮಾಜಿಕ ಜಾಗೃತಿ ಮತ್ತು ರಾಜಕೀಯ ಪ್ರಜ್ಞೆಯನ್ನು ಮೂಡಿಸಿದ ಕಥನವಾಗಿದೆ. ದಿನಕ್ಕೆ ಹತ್ತಾರು ಮೈಲಿ ನಡೆದುಕೊಂಡು ಈ ಆದಿವಾಸಿಗಳನ್ನು ಭೇಟಿ ಮಾಡುತ್ತಾರೆ. ಚೆದುರಿ ಹೋಗಿದ್ದ ಅವರನ್ನು ಒಗ್ಗೂಡಿಸಿ ಸಭೆಗಳನ್ನು ನಡೆಯಿಸಿ ಅವರ ನಾಗರಿಕ ಹಕ್ಕುಗಳನ್ನು ಕುರಿತು ಅರಿವನ್ನು ಮೂಡಿಸಲು ಪ್ರಯತ್ನಿಸುತ್ತಾರೆ. ಇಂತಹ ಕಾರ್ಯದಿಂದ ಜಮೀನುದಾರರು ಮತ್ತು ಅಂದಿನ ಸರ್ಕಾರದಿಂದಲೂ ಪ್ರತಿರೋಧವನ್ನು ಎದುರಿಸಬೇಕಾಗುತ್ತದೆ. ಗೋದಾವರಿಯವರು ಆದಿವಾಸಿಗಳ ಬದುಕಿನ ಬವಣೆಗಳನ್ನು ನೋಡುತ್ತಲೇ ಇದಕ್ಕೆಲ್ಲ ಹೊಣೆಗಾರರು ಇವರಲ್ಲ ಎಂಬುದನ್ನು ಮನಗಾಣುತ್ತಾರೆ. ಪರುಳೇಕರ್‌ರವರು ತಮ್ಮನ್ನು ತಾವು ವಾರಲೀ ಆದಿವಾಸಿಗಳೊಂದಿಗೆ ಗುರುತಿಸಿಕೊಳ್ಳುತ್ತಾರೆ. ಈ ಕೃತಿಯಲ್ಲಿ ಅವರು ತಮಗೆ ಎದುರಾದ ಸವಾಲುಗಳನ್ನು ಸ್ವೀಕರಿಸುತ್ತಲೇ ಆದಿವಾಸಿಗಳ ಗುಲಾಮಗಿರಿ ಬದುಕಿನ ಕಾರಣಗಳನ್ನು ಮುಕ್ತ ಮನಸ್ಸಿನಿಂದ ದಾಖಲು ಮಾಡಿದ್ದಾರೆ. ಈ ಕೃತಿಯಲ್ಲಿ ಅವರ ವೈಯಕ್ತಿಕ ಜೀವನದ ವಿವರಗಳೇ ಕಾಣಸಿಗುವುದಿಲ್ಲ. ಯಾಕೆಂದರೆ ಅಷ್ಟರಮಟ್ಟಿಗೆ ಅವರ ಬದುಕು ಆದಿವಾಸಿಗಳೊಂದಿಗೆ ಬೆರೆತು ಹೋಗಿದೆ.

ಕಂದಾಯವನ್ನು ವೃದ್ಧಿಸಿಕೊಳ್ಳಲು ಬ್ರಿಟಿಶ್‌ರಿಂದ ಪ್ರಾರಂಭವಾದ ಖಾಯಂ ಜಮೀನುದಾರಿ ಪದ್ಧತಿಯು ಭಾರತದಲ್ಲಿ ರೈತರ ಶೋಷಣೆಗೆ ದಾರಿ ಮಾಡಿಕೊಟ್ಟಿತು. ಇದರಿಂದ ಭೂಮಾಲಿಕ ವರ್ಗವು ರೈತರ ರಕ್ತ ಮಾಂಸವನ್ನು ಹೀರಿಲಾರಂಭಿಸಿದರು. ಯಾವುದೇ ಪ್ರತಿಫಲವಿಲ್ಲದೇ ತಮ್ಮನ್ನು ತಾವು ತೇದುಕೊಂಡು ಜಮೀನುದಾರುಗಳ ಸಂಪತ್ತನ್ನು ಹೆಚ್ಚಿಸಿದರು. ಜಮೀನುದಾರರ ದಬ್ಬಾಳಿಕೆಯಿಂದ ಈ ವಾರಲೀಗಳು ಅವರ ತೋಟ ಮತ್ತು ಮನೆಗಳಲ್ಲಿ ಜೀತಕ್ಕೆ ಇರಬೇಕಾಗಿತ್ತು.  ವಾರಲೀ ಆದಿವಾಸಿಗಳಿಗೆ ತಾವು ಶೋಷಿತರಾಗುತ್ತಿದ್ದೇವೆ ಎನ್ನುವ ಪರಿವೆಯೂ ಇರಲಿಲ್ಲ. ಒಂದು ಶತಮಾನದ ಹಿಂದೆ ಇದೇ ಆದಿವಾಸಿಗಳು ಭೂಮಿಯ ಒಡೆತನವನ್ನು ಹೊಂದಿದ್ದರು. ಆದರೆ ಈ ಭೂಮಾಲಿಕರು ಮತ್ತು ಲೇವಾದೇವಿಗಾರರು ಈ ಆದಿವಾಸಿಗಳ ಭೂಮಿಯನ್ನು ನಿಧಾನವಾಗಿ ಕಬಳಿಸಿದರು. ಇದರ ಬಗ್ಗೆ ಪ್ರಶ್ನೆ ಮಾಡಿದರೆ ವಾರಲೀಗಳ ಮೇಲೆ ಮಾರಣಾಂತಿಕ ಹಲ್ಲೆಗಳನ್ನು ನಡೆಸುತ್ತಿದ್ದರು; ದಾರಿದ್ರ್ಯದಲ್ಲಿ ಬೆಂದು ಹೋಗಿದ್ದ ವಾರಲೀಗಳ ಜೀವನಕ್ಕೆ ಮತ್ತಷ್ಟು ಬರೆಯನ್ನು ನೀಡುತ್ತಿದ್ದರು. ವಾರಲೀಗಳ ಮೇಲಿನ ಈ ದಬ್ಬಾಳಿಕೆ ಮತ್ತು ಶೋಷಣೆಗೆ ಯಾರೂ ಕಿವಿಗೊಟ್ಟಿರಲಿಲ್ಲ. ಇಂತಹ ದುರ್ಭರ ಪರಿಸ್ಥಿತಿಯಲ್ಲಿ ಗೋದಾವರಿ ಪರುಳೇಕರ್ ಅವರು ಈ ವಾರಲೀಗಳ ಕಷ್ಟ ಕೋಟಲೆಗಳನ್ನು ಪ್ರತ್ಯಕ್ಷವಾಗಿ ಕಾಣುತ್ತಾರೆ. ಕಾಡುಮೇಡುಗಳಲ್ಲಿ ವಾಸವಾಗಿದ್ದ ಈ ವಾರಲೀಗಳ ಬಿಡಾರಗಳನ್ನು ಶೋಧಿಸಿ ಅವರ ಸಂಕಷ್ಟಗಳಿಗೆ ಕಣ್ಣಾಗುತ್ತಾರೆ; ಅವರೊಳಗಿನ ಕಿಚ್ಚನ್ನು ಬಡಿದೆಬ್ಬಿಸುತ್ತಾರೆ. ಮನುಷ್ಯತ್ವವನ್ನು ನಾಶಮಾಡುವ ಅಮಾನುಷ ಜೀತ ಪದ್ಧತಿಯ ವಿರುದ್ಧ ಬಂಡೇಳಲು ವಾರಲೀ ಆದಿವಾಸಿಗಳನ್ನು ಸಂಘಟಿತಗೊಳಿಸುತ್ತಾರೆ.

ಜಮೀನುದಾರರು ವಾರಲೀ ಹೆಂಗಸರ ಮೇಲೆ ಹಿಂಸೆ, ದೌರ್ಜನ್ಯ, ಮಾನಸಿಕ ಕಿರುಕುಳ, ಅತ್ಯಾಚಾರಗಳನ್ನೂ ಎಸಗುತ್ತಿದ್ದರು. ಸರ್ಕಾರಿ ನೌಕರಶಾಹಿಯ ಬೆಂಬಲವು ಈ ಜಮೀನುದಾರರ ಪರವಾಗಿಯೇ ಇರುತ್ತಿತ್ತು. ಉಂಬರಗಾಂವ್‌ನ ಒಬ್ಬ ಭಾರಿ ಜಮೀನುದಾರನೇ ನ್ಯಾಯಾಧೀಶನಾಗಿದ್ದನು. ಪ್ರತಿಭಟಿಸಿದರೆ ಅವರನ್ನು ಬಿಡಾರಗಳಿಂದ ಬಹಿಷ್ಕರಿಸುವ ಬೆದರಿಗೆ ಹಾಕುತ್ತಿದ್ದರು. ಒಂದು ವೇಳೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದರೂ, ನ್ಯಾಯಾಲಯದಲ್ಲಿ ಕೇಸು ಬಿದ್ದು ಹೋಗುತ್ತಿತ್ತು. ಹೊಟ್ಟೆ ಬಟ್ಟೆಗಿಲ್ಲದ ವಾರಲೀ ಜನರ ಕೈಯಿಂದ ವಕೀಲು ಫೀಸು ಕೊಡಲಾಗುತ್ತಿರಲಿಲ್ಲ. ಈ ವಾರಲೀ ಜನರ ಇಂತಹ ದುಃಸ್ಥಿತಿಯನ್ನು ಪರಿವರ್ತಿಸುವ ದಿಟ್ಟ ಹೆಜ್ಜೆಗಳನ್ನು ಇಟ್ಟ ಪರುಳೇಕರ್‌ರವರು ಸಕ್ರಿಯ ಕಾರ್ಯಕರ್ತೆಯಾಗಿ ದುಡಿದರು. ಪರುಳೇಕರ್‌ರ ನಾಯಕತ್ವದಲ್ಲಿ ವಾರಲೀ ಆದಿವಾಸಿಗಳು ತಮ್ಮ ಬದುಕಿನಲ್ಲಿ ಆಗುತ್ತಿರುವ ಅನ್ಯಾಯವನ್ನು ಎದುರಿಸಲು ಕೆಚ್ಚೆದೆಯ ಆತ್ಮವಿಶ್ವಾಸವನ್ನು ಪಡೆದುಕೊಂಡರು. ಅಂತಿಮವಾಗಿ ಸಂಘಟಿತರಾಗಿ ಜಮೀನುದಾರರ ವಿರುದ್ಧ ತಿರುಗೇಟು ನೀಡುವುದರಲ್ಲಿ ಸಫಲರಾಗುತ್ತಾರೆ.

ಉಂಬರಗಾಂವ್ ತಾಲ್ಲೂಕಿನ ಝರಿ ಎಂಬ ಹಳ್ಳಿಯಲ್ಲಿ 1945ರಲ್ಲಿ ಸಂಘಟಿಸಲಾದ ಒಂದು ಸಮ್ಮೇಳನದಲ್ಲಿ ಐದು ಸಾವಿರ ಆದಿವಾಸಿಗಳಲ್ಲಿ ಐನೂರಕ್ಕೂ ಹೆಚ್ಚು ಮಹಿಳೆಯರೇ ಇದ್ದರು. ಅವರ ಎದುರಿನಲ್ಲಿ ಪರುಳೇಕರ್ ಅವರು ಭಾಷಣವನ್ನು ಮಾಡಿ ನಾಲ್ಕು ಮುಖ್ಯ ಠರಾವುಳನ್ನು ಮಂಡಿಸುತ್ತಾರೆ. ಅವುಗಳೆಂದರೆ, 1. ಜಮೀನುದಾರರು ಹನ್ನೆರಡಾಣೆ ನಗದು ರೂಪದಲ್ಲಿ ಕೂಲಿ ನೀಡಬೇಕು; ಕೊಡದಿದ್ದರೆ ಭೂಮಿಯ ಉಳುಮೆ ಮಾಡುವ ಹಾಗಿಲ್ಲ. 2. ಶೋಷಕರಾದ ಜಮೀನುದಾರರಿಗೆ ಯಾವುದೇ ಬಿಟ್ಟಿ ಸೇವೆ ಮಾಡದಿರುವುದು. 3. ಜಮೀನುದಾರರು ಹಲ್ಲೆ ನಡೆಸಿದರೆ ಆ ಕ್ಷಣದಲ್ಲಿಯೇ ಪ್ರತಿಭಟಿಸುವುದು. 4. ಆದಿವಾಸಿಗಳೆಲ್ಲ ಒಗ್ಗಟ್ಟಾಗುವುದು. ಇಂತಹ ಸಾಮಾಜಿಕ ಅರಿವಿನಿಂದ ಎಚ್ಚೆತ್ತ ಆದಿವಾಸಿಗಳು ಬಂಡಾಯವನ್ನು ಹೂಡಲ ಸಜ್ಜಾದರು. ಶತಮಾನಗಳಿಂದ ತಮ್ಮನ್ನು ಕಟ್ಟಿ ಹಾಕಲಾಗಿದ್ದ ಸಂಕೋಲೆಗಳಿಂದ ವಿಮೋಚಿತರಾಗಲು ಹಂಬಲಿಸಿದರು. ಈ ಹೋರಾಟದಲ್ಲಿ ಅನೇಕ ಆದಿವಾಸಿಗಳು ಹುತಾತ್ಮರೂ ಆಗುತ್ತಾರೆ. ಪರುಳೇಕರ್ ಅವರಿಂದ ದೊರೆತ ನಿರಂತರ ಪ್ರೋತ್ಸಾಹ, ಬೆಂಬಲ ಮತ್ತು ಸಹಕಾರಕ್ಕೆ ಈ ಆದಿವಾಸಿಗಳ ಹೃದಯ ಕರಗಿ ಹೋಗುತ್ತದೆ. ಇವರ ನಿಷ್ಠೆ ಮತ್ತು ನಂಬಿಕೆಯನ್ನು ಪರುಳೇಕರ್‌ರವರು ಈ ಕೃತಿಯಲ್ಲಿ ಮನದುಂಬಿ ಸ್ಮರಿಸಿದ್ದಾರೆ. ಎಷ್ಟೋ ಬಾರಿ ಈ ಆದಿವಾಸಿಗಳ ಕಣ್ಣೋಟದಲ್ಲಿ ಕಾಣುವ ಸಂತಸವನ್ನು ಗುರುತಿಸಿ ಭಾವುಕರಾಗಿದ್ದಾರೆ. ಅವರು ಈ ಆದಿವಾಸಿಗಳ ಬದುಕಿನಲ್ಲಿ ಸಂತಸವನ್ನು ಮತ್ತು ಸಮಾನತೆಯನ್ನು ತರುವುದಕ್ಕಾಗಿ ಅವಿಶ್ರಾಂತ ಶ್ರಮಿಸಿದ್ದಾರೆ.

ಗೋದಾವರಿಯವರು ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತೆಯಾಗಿ ಕೆಲಸ ಮಾಡಿದ್ದರಿಂದ ಅಂದಿನ ಬ್ರಿಟಿಷ್ ಪ್ರಭುತ್ವದಿಂದಲೂ ತೊಂದರೆಗಳನ್ನು ಅನುಭವಿಸುತ್ತಾರೆ. ಸ್ವಾತಂತ್ರೋತ್ತರ ಭಾರತದಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರದಿಂದಲೂ ಜೈಲುವಾಸಕ್ಕೆ ತುತ್ತಾಗುತ್ತಾರೆ. ಎಂತಹದೇ ಆಪಾದನೆಗಳಿಗೂ ಇವರು ಕುಗ್ಗಿ ಹೋದವರಲ್ಲ; ಎಂತಹದೇ ಕಷ್ಟ ಕಾರ್ಪಣ್ಯಗಳು ಎದುರಾದಾಗಲೂ ಅವುಗಳನ್ನು ತಾಳ್ಮೆಯಿಂದ ಸಹಿಸಿಕೊಂಡು ದಮನಿತರ ಸಾಮಾಜಿಕ ನ್ಯಾಯಕ್ಕಾಗಿ ಸದಾ ಹೋರಾಡಿದವರು. ಪರುಳೇಕರ್ ಎಂಬ ಈ ಅಪ್ರತಿಮ ಹೋರಾಟಗಾರ್ತಿಯು ತನ್ನ ಮರಣದ ಮೂರು ವರ್ಷ ಮೊದಲೇ ತನ್ನ ಚರ ಮತ್ತು ಸ್ಥಿರ ಆಸ್ತಿಯನ್ನೆಲ್ಲ ಭಾರತೀಯ ಕಮ್ಯುನಿಸ್ಟ್ ಪಕ್ಷಕ್ಕೆ ವಿಲ್ ಬರೆದಿದ್ದರು. ವರ್ಗ ಅಸಮಾನತೆಯ ಮೂಲವಾಗಿರುವ ಸಂಪತ್ತನ್ನು ತಮ್ಮ ಕೊನೆಗಾಲದಲ್ಲಿ ನಿರಾಕರಿಸಿದ ಪರುಳೇಕರ್ ಅಪ್ಪಟ ಮಾರ್ಕ್ಸ್ ವಾದಿಯಾಗಿದ್ದಾರೆ.

ಭಾರತದಲ್ಲಿ ಆದಿವಾಸಿಗಳು, ಕೂಲಿ ಕಾರ್ಮಿಕರು, ದಲಿತರು ಅಂಚಿನ ಸಮುದಾಯಗಳಾಗಿ ದಿನನಿತ್ಯದ ಬದುಕಿಗಾಗಿ ಹೋರಾಟವನ್ನು ನಡೆಸುವುದು ಮಾಮೂಲಾಗಿರುತ್ತದೆ. ಉತ್ಪಾದನೆಯ ಮೂಲವಾಗಿರುವ ಭೂಮಿ ಅಥವಾ ಸಣ್ಣಪುಟ್ಟ ಆಸ್ತಿಪಾಸ್ತಿಗಳೂ ಇಲ್ಲದ ಇಂತಹ ಸಮುದಾಯಗಳ ಬದುಕು ದುರ್ಭರವಾಗಿರುತ್ತದೆ. ಎಷ್ಟೋ ಸಲ ಸರ್ಕಾರದ ಯೋಜನೆಗಳಿಂದಲೂ ನಿರಾಶ್ರಿತರಾಗುತ್ತಲೇ ಇರುತ್ತಾರೆ. ಇವರ ಸಾಮಾಜಿಕ ಮತ್ತು ಆರ್ಥಿಕ ಹಕ್ಕುಗಳಿಗಾಗಿ ಅನೇಕರು ಶ್ರಮಿಸಿದ್ದಾರೆ. ಪಶ್ಚಿಮ ಬಂಗಾಲದಲ್ಲಿ ಪ್ರಖ್ಯಾತ ಲೇಖಕಿ ಮಹಾಶ್ವೇತಾ ದೇವಿಯವರು ಅಲ್ಲಿಯ ಆದಿವಾಸಿಗಳ ಜೊತೆಯಲ್ಲಿ ಕೆಲಸ ಮಾಡಿದ್ದಾರೆ. ಅವರ ಬಹುತೇಕ ಕತೆ ಕಾದಂಬರಿಗಳ ಕಥನವು ಆದಿವಾಸಿಗಳ ಬದುಕಿನೊಂದಿಗೆ ಲಗತ್ತುಗೊಂಡಿರುತ್ತದೆ. ‘ನರ್ಮದಾ ಬಚಾವೋ’ ಆಂದೋಲನದ ಮೇಧಾ ಪಾಟ್ಕರ್‌ರವರು ಸರ್ಕಾರ ನಿರ್ಮಿಸಿದ ಆಣೆಕಟ್ಟು ಯೋಜನೆಯಿಂದ ನಿರಾಶ್ರಿತರಾದ ಸಾವಿರಾರು ಆದಿವಾಸಿಗಳ ಮೂಲಭೂತ ಹಕ್ಕುಗಳ ಪರವಾಗಿ ಹೋರಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಗೋದಾವರಿ ಪರುಳೇಕರ ಅವರು ಭಾರತದಲ್ಲಿ ಆದಿವಾಸಿಗಳನ್ನು ಒಳಗೊಂಡಂತೆ ದುಡಿಯುವ ಸಮುದಾಯಗಳ ಬದುಕನ್ನು ಹಸನಾಗಿಸಲು ಶ್ರಮಿಸಿದ ಮೊದ ಮೊದಲ ಮಹಿಳೆಯಾಗಿದ್ದಾರೆ.

‘ಮಾನವ ಎಚ್ಚೆತ್ತಾಗ’ ಕೃತಿಯ ಅನುವಾದಕರಾದ ಸರಸ್ವತಿ ರಿಸಬುಡ್ ಅವರು ಈ ಮೊದಲು ಭಾರತದ ಪ್ರಖ್ಯಾತ ಸಮಾಜಶಾಸ್ತ್ರಜ್ಞೆ ಇರಾವತಿ ಕರ್ವೆಯವರ ‘ಯುಗಾಂತ’ ಕೃತಿಯನ್ನು ಕನ್ನಡಕ್ಕೆ ತಂದಿದ್ದಾರೆ. ಮರಾಠಿಯಿಂದ ಅನೇಕ ಕೃತಿಗಳನ್ನು ಕನ್ನಡ ಭಾಷೆಗೆ ಅನುವಾದಿಸಿದ್ದಾರೆ. ‘ಮಾನವ ಎಚ್ಚೆತ್ತಾಗ’ ಕೃತಿಯು ಗೋದಾವರಿ ಪರುಳೇಕರ್ ಅವರ ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ದೃಷ್ಟಿಕೋನವನ್ನು ಮುಂಚೂಣಿಗೆ ತಂದಿದೆ.

 

  • ಸುಭಾಷ್ ರಾಜಮಾನೆ, ಯಲಹಂಕ ಪದವಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ  ಕೆಲಸ ನಿರ್ವಹಿಸುತ್ತಿರುವ ಸುಭಾಷ್ ಅವರು ಮೂಲತಃ ಬೆಳಗಾವಿಯವರು. ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ರಹಮತ್ ತರೀಕೆರೆ ಅವರ ಮಾರ್ಗದರ್ಶನದಲ್ಲಿ ಕನ್ನಡ ವಿಮರ್ಶೆಯಲ್ಲಿ ಜಾತಿ ಆಯಾಮಗಳ ಕುರಿತು ಅಧ್ಯಯನ ನಡೆಸಿ ಪಿಎಚ್.ಡಿ.ಪದವಿ ಗಳಿಸಿದ್ದಾರೆ. ಕನ್ನಡ ಇಂಗ್ಲಿಷ್‌, ಮರಾಠಿ, ಹಿಂದಿ ಭಾಷೆಗಳನ್ನು ಬಲ್ಲ ಸುಭಾಷ್ ಅವರು ಸಿನೆಮಾ ವಿಮರ್ಶೆಗಳನ್ನು ಬರೆದಿದ್ದಾರೆ. ಅನುವಾದದಲ್ಲಿ ವಿಶೇಷ ಆಸಕ್ತಿ ಹೊಂದಿರುವ  ಅವರು ದಿ ಆರ್ಟಿಸ್ಟ್‌ ಸಿನಿಮಾದ ಚಿತ್ರಕತೆಯನ್ನು,  ವಿಕ್ಟರ್‌ ಫ್ರಾಂಕ್‌ಲ್ ನ ಮ್ಯಾನ್ ಸರ್ಚ್ ಫಾರ್ ಮೀನಿಂಗ್ ಕೃತಿಯನ್ನು ’ಬದುಕಿನ ಅರ್ಥವನು ಹುಡುಕುತ್ತ..’ಶೀರ್ಷಿಕೆಯ ಅಡಿಯಲ್ಲಿ, ಗ್ರೀಕ್ ಪಿಲಾಸಫರ್ ಎಪಿಕ್ಟೆಟಸ್ ಬರಹಗಳನ್ನು ಮತ್ತು ತಿಚ್ ನ್ಹಾತ್ ಹಾನ್ ನ ಬರಹಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಹಳೆಯ, ಅಪರೂಪದ ಪುಸ್ತಕಗಳನ್ನು ಸಂಗ್ರಹಿಸಿ ಅವುಗಳ ಸಾಂಸ್ಕೃತಿಕ ಮಹತ್ವಗಳನ್ನು ಚರ್ಚಿಸುವುದು ಕೂಡ ಸುಭಾಷ್ ಅವರ ನೆಚ್ಚಿನ ಹವ್ಯಾಸ.
  • ನಿಮ್ಮ ಪ್ರತಿಕ್ರಿಯೆಗಳನ್ನು rajamanesubash98@gmail.com, ensuddii@gmail.comಇಲ್ಲಿಗೆ ಬರೆಯಿರಿ
ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights