8 ಪೊಲೀಸರ ಕೊಂದ ಆರೋಪಿ ಹಿಡಿಯಲು 25 ತಂಡ ರಚಿಸಿದ ಯುಪಿ ಪೊಲೀಸ್

8 ಪೊಲೀಸರ ಮೇಲೆ ಗುಂಡು ಹಾರಿಸಿ ನಿರ್ಧಯವಾಗಿ ಕೊಂದ ರೌಡಿ ಶೀಟರ್ ವಿಕಾಸ್ ದುಬೆಯನ್ನು ಬಂಧಿಸಲು 25 ಕ್ಕೂ ಹೆಚ್ಚು ಉತ್ತರ ಪ್ರದೇಶ ಪೊಲೀಸರ ತಂಡಗಳನ್ನು ರಚಿಸಲಾಗಿದೆ. ರಾಜ್ಯದ ಎಲ್ಲಾ ಗಡಿಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು ಕ್ರಿಮಿನಲ್‌ಗಳನ್ನು ಹಿಡಿಯಲು ಪೊಲೀಸರು ಬಲೆ ಬೀಸಿದ್ದಾರೆ.

ಕಾನ್ಪುರದ ಇನ್ಸ್ಪೆಕ್ಟರ್ ಜನರಲ್ ಮೋಹಿತ್ ಅಗರ್ವಾಲ್ ಮಾತನಾಡಿ “ವಿಕಾಸ್ ದುಬೆ ಮತ್ತು ಸಹಚರರನ್ನು ಬಂಧಿಸಲು, 25 ತಂಡಗಳನ್ನು ರಚಿಸಲಾಗಿದೆ, ಇಂದು ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಇತರ ರಾಜ್ಯಗಳಲ್ಲಿ ಹುಡುಕುತ್ತಿವೆ” ಎಂದು ಪಿಟಿಐಗೆ ಹೇಳಿದ್ದಾರೆ.

ಕಣ್ಗಾವಲು ತಂಡವು 500 ಕ್ಕೂ ಹೆಚ್ಚು ಮೊಬೈಲ್ ಫೋನ್‌ಗಳನ್ನು ಸ್ಕ್ಯಾನ್ ಮಾಡುತ್ತಿದ್ದು, ಸುಮಾರು 60 ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ದುಬೆಯ ಮಾಹಿತಿಯನ್ನು ಪಡೆಯಲು ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಇಷ್ಟೇ ಅಲ್ಲದೆ ಆರೋಪಿಗಳನ್ನು ಬಂಧಿಸಲು ಉತ್ತರ ಪ್ರದಶ ಪೊಲೀಸರ ವಿಶೇಷ ಕಾರ್ಯಪಡೆಗೂ ಸಹ ಸಜ್ಜಾಗಿದೆ.

ದುಬೆ ಬಗ್ಗೆ ಮಾಹಿತಿ ನೀಡಿದವರಿಗೆ 50,000 ರೂ.ಗಳ ನಗದು ಬಹುಮಾನ ಘೋಷಿಸಲಾಗಿದ್ದು, ಮಾಹಿತಿ ಒದಗಿಸುವವರ ಗುರುತನ್ನು ರಹಸ್ಯವಾಗಿಡಲಾಗುವುದು ಎಂದು ಅಗರ್‌ವಾಲ್ ತಿಳಿಸಿದ್ದಾರೆ.

ಎನ್‌ಕೌಂಟರ್‌ನಲ್ಲಿ ಗಾಯಗೊಂಡ ಏಳು ಪೊಲೀಸರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ಅವರು ತಿಳಿಸಿದ್ದಾರೆ. ಲಕ್ನೋದ ಕೃಷ್ಣನಗರ ಪ್ರದೇಶದ ದುಬೆ ಅವರ ಮನೆಯ ಮೇಲೆ ಪೊಲೀಸರು ಶುಕ್ರವಾರ ತಡರಾತ್ರಿ ದಾಳಿ ನಡೆಸಿದ್ದರು.

ಹತ್ಯೆಗೀಡಾದ ಪೊಲೀಸರ ಕುಟುಂಬ ಸದಸ್ಯರನ್ನು ಭೇಟಿಯಾದ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಕಾನ್ಪುರದಲ್ಲಿ ದುಃಖಿತ ಕುಟುಂಬಗಳಿಗೆ ತಲಾ ಒಂದು ಕೋಟಿ ರೂ. ಪರಿಹಾರ ಘೋ‍‍‍‍‍ಷಿಸಿದ್ದಾರೆ.

ನಗರದ ಸಮೀಪದ ಹಳ್ಳಿಯೊಂದರಲ್ಲಿ ಡಿಎಸ್‌ಪಿ ಸೇರಿದಂತೆ ಒಟ್ಟು ಎಂಟು ಮಂದಿ ಪೊಲೀಸ್ ಸಿಬ್ಬಂದಿಯನ್ನು ದುಬೆಯ ಸಹಚರರರು ಗುಂಡಿಕ್ಕಿ ಕೊಂದಿದ್ದಾರೆ. ದುಬೆಯನ್ನು ಬಂಧಿಸಲು ಗುರುವಾರ ಮಧ್ಯರಾತ್ರಿ ಬಿಕ್ರು ಗ್ರಾಮಕ್ಕೆ ಪ್ರವೇಶಿಸಿದ ಪೊಲೀಸರ ಮೇಲೆ ಮೇಲ್ಛಾವಣಿಯಿಂದ ಗುಂಡಿನ ಮಳೆಗೆರೆಯಲಾಗಿತ್ತು. 8 ಪೊಲೀಸರು ಸ್ಥಳದಲ್ಲೇ ಅಸುನೀಗಿದರೆ 7 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.


ಇದನ್ನೂ ಓದಿ; ಪೊಲೀಸರ ಮೇಲೆ ರೌಡಿಶೀಟರ್‌ಗಳ ಗುಂಡಿನ ದಾಳಿ; 8 ಪೊಲೀಸರ ಹತ್ಯೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights