BJP ಸರ್ಕಾರದ ವಿರುದ್ಧ ‘ಲೆಕ್ಕಕೊಡಿ’ ಅಭಿಯಾನ: ಜನರ ಪರವಾಗಿ ಕಾಂಗ್ರೆಸ್‌ನ 06 ಪ್ರಶ್ನೆಗಳು

ಕೊರೊನಾ ವೈರಸ್‌ ಹಾಗೂ ಸೋಂಕಿನಿಂದ ಎದುರಾಗಿರುವ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಎದುರಿಸಲು ವಿಫಲವಾಗಿರುವ ಸರ್ಕಾರ, ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ 2,000 ಕೋಟಿ ರೂಗಳ ಅವ್ಯವಹಾರ ನಡೆಸಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ ಮುಖಂಡರು ಆರೋಪಿಸಿದ್ದಾರೆ. ಇದಕ್ಕಾಗಿ ವೈದ್ಯಕೀಯ ಪರಿಕರಗಳ ಖರೀದಿಯ “ಲೆಕ್ಕಕೊಡಿ ಅಭಿಯಾನ”ವನ್ನು ಕಾಂಗ್ರೆಸ್‌ ಆರಂಭಿಸಿದೆ.

ಪಿಪಿಇ ಕಿಟ್‌ ಹಾಗೂ ಇನ್ನಿತರ ಉಪಕರಣಗಳ ಖರೀದಿ ಕುರಿತಂತೆ ಶನಿವಾರ  ‘ಲೆಕ್ಕಕೊಡಿ’ ಅಭಿಯಾನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಚಾಲನೆ ನೀಡಿರುವ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ, ‘ಪಕ್ಷದ ಎಲ್ಲ ಶಾಸಕರು, ಸಂಸದರು, ಕಾರ್ಯಕರ್ತರು ವಿಡಿಯೊ ಮಾಡಿ, ಶೇರ್ ಮಾಡುವ ಮೂಲಕ ಅಭಿಯಾನದಲ್ಲಿ ಭಾಗವಹಿಸಬೇಕು’ ಎಂದು ಮನವಿ ಮಾಡಿದ್ದಾರೆ.

‘ಕೊರೊನಾ ನಿಯಂತ್ರಣಕ್ಕಾಗಿ ವೈದ್ಯಕೀಯ ಸಾಮಗ್ರಿಗಳ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ’ ಎಂದು ಆರೋಪಿಸಿರುವ ಕಾಂಗ್ರೆಸ್ ಪಕ್ಷ, ‘#ಲೆಕ್ಕಕೊಡಿ’ ಎಂಬ ಹ್ಯಾಷ್ ಟ್ಯಾಗ್‌ ನೊಂದಿಗೆ ರಾಜ್ಯ ಸರ್ಕಾರದ ವಿರುದ್ಧ ‌ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಅಭಿಯಾನ ಆರಂಭಿಸಿದೆ. ಸಿದ್ದರಾಮಯ್ಯನವರು ಸರ್ಕಾರಕ್ಕೆ 6 ಪ್ರಶ್ನೆಗಳನ್ನು ಕೇಳಿದ್ದಾರೆ.

‘ರಾಜ್ಯದ ಜನರು ಲೆಕ್ಕ ಕೇಳುತ್ತಿದ್ದಾರೆ. ಲೆಕ್ಕ ಕೇಳುವುದು ಜನರ ಹಕ್ಕು, ಲೆಕ್ಕ ಕೊಡುವುದು ಸರ್ಕಾರದ ಕರ್ತವ್ಯ’ ಎಂದಿರುವ ಸಿದ್ದರಾಮಯ್ಯ, ಆರು ಪ್ರಶ್ನೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದಾರೆ.

  1. ‘ಕೊರೊನಾ ಸೋಂಕು ಬಂದಾಗಿನಿಂದ ಇದುವರೆಗೆ ರಾಜ್ಯ ಸರ್ಕಾರ ಖರ್ಚು ಮಾಡಿರುವ ಹಣ ಎಷ್ಟು. ಕೇಂದ್ರ ಸರ್ಕಾರ ಎಷ್ಟು ನೀಡಿದೆ. ಯಾವ ಯಾವ ಇಲಾಖೆ, ಯಾವ ಯಾವ ಬಾಬ್ತಿಗೆ ಎಷ್ಟು ಹಣ ಖರ್ಚು ಮಾಡಿದೆ?
  2. ಪಿಪಿಇ ಕಿಟ್‌, ಟೆಸ್ಟ್‌ ಕಿಟ್‌, ಗ್ಲೋವ್‌, ಸಾನಿಟೈಸರ್‌, ಥರ್ಮಲ್‌ ಸ್ಕ್ಯಾನರ್, ಕಿಯೋಸ್ಕ್‌ ಮುಂತಾದವುಗಳಿಗೆ ಮಾರುಕಟ್ಟೆ ದರ ಎಷ್ಟು. ನೀವು ಪ್ರತಿಯೊಂದನ್ನೂ ಯಾವ್ಯಾವ ದರದಲ್ಲಿ ಖರೀದಿಸಿದ್ದೀರಿ. ಯಾವ್ಯಾವ ಕಂಪನಿಗಳಿಂದ ಖರೀದಿಸಿದ್ದೀರಿ?
  3. ಈವರೆಗೆ ಫುಡ್ ಕಿಟ್‌, ಫುಡ್ ಪ್ಯಾಕೇಜ್ ಎಷ್ಟು ಕೊಟ್ಟಿದ್ದೀರಿ. ಯಾರಿಗೆ ಕೊಟ್ಟಿದ್ದೀರಿ. ಪ್ರತಿಯೊಂದಕ್ಕೆ ಎಷ್ಟು ಹಣ ಖರ್ಚು ಮಾಡಿದ್ದೀರಿ? ಆಹಾರ ತಯಾರಿಸಿ ಕೊಟ್ಟವರು ಯಾರು, ತಾಲ್ಲೂಕುವಾರು, ವಾರ್ಡ್‌ವಾರು ಲೆಕ್ಕ ಕೊಡಿ?
  4. ವಲಸೆ ಕಾರ್ಮಿಕರಿಗೆ ಪ್ರಯಾಣದ ಸಂದರ್ಭದಲ್ಲಿ ಎಷ್ಟು ಫುಡ್‌ ಕಿಟ್‌ ಕೊಟ್ಟಿದ್ದೀರಿ. ಏನೇನು ಕೊಟ್ಟಿದ್ದೀರಿ. ಪ್ರತಿ ಕಿಟ್‌ಗೆ ಖರ್ಚಾದ ಹಣ ಎಷ್ಟು?
  5. ಸಂಕಷ್ಟದಲ್ಲಿರುವ ಜನರಿಗೆ ಕೇಂದ್ರ– ರಾಜ್ಯ ಘೋಷಿಸಿದ ಪ್ಯಾಕೇಜ್‌ಗಳು ಯಾವುವು? ಯಾವ ವೃತ್ತಿಯವರಿಗೆ, ಯಾವ್ಯಾವ ಸಮುದಾಯದವರಿಗೆ ಎಷ್ಟು ಹಣ ಬಿಡುಗಡೆ ಮಾಡಿದ್ದೀರಿ?
  6. ಕೊರೊನಾ ಸಂಕಷ್ಟದಲ್ಲಿರುವವರ ಆರೈಕೆಗೆ ಎಷ್ಟು ಖರ್ಚು ಮಾಡಿದ್ದೀರಿ?’

ಕೊರೊನಾ ಸೋಂಕಿನ ಹಾವಳಿ ಹೆಚ್ಚಾದಾಗಿನಿಂದ ಇಲ್ಲಿಯವರೆಗೆ ಸರ್ಕಾರವನ್ನು ನಾನಾ ರೀತಿಯಲ್ಲಿ ಪ್ರಶ್ನಿಸುತ್ತಿರರುವ ಕಾಂಗ್ರೆಸ್‌, ವೈದ್ಯಕೀಯ ಕಿಟ್‌ಗಳ ಖರೀದಿಯಲ್ಲಿ ಸರ್ಕಾರ ಹಗರಣ ನಡೆಸಿದೆ ಎಂದು ಆರೋಪಿಸಿದೆ.

ಕಾಂಗ್ರೆಸ್‌ನ  ಲೆಕ್ಕಕೊಡಿ ಅಭಿಯಾನ ಕುರಿತು ಬಿಜೆಪಿ ಸಚಿವರು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, “ಕಾಂಗ್ರೆಸ್‌ ಲೆಕ್ಕಕೊಡಿ ಅಭಿಯಾನ ಮಾಡುವುದಕ್ಕಿಂತ ಜಾಗೃತಿ ಅಭಿಯಾನ ಮಾಡಿದರೆ ಒಳ್ಳೆಯದು. ರಾಜಕೀಯ ಸುಳ್ಳು ಆರೋಪ ಬಿಟ್ಟು ಕಾಂಗ್ರೆಸ್ ಕೂಡ ನಮ್ಮ ಜೊತೆಗೆ ಕೈಜೋಡಿಸಬೇಕು” ಎಂದು ಕೃಷಿ ಸಷಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.

‘ಕೋವಿಡ್‌ ಉಪಕರಣಗಳ ಖರೀದಿಯಲ್ಲಿ ₹ 2 ಸಾವಿರ ಕೋಟಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ತಮ್ಮ ಬಳಿ ಇರುವ ದಾಖಲೆಗಳನ್ನು ಬಹಿರಂಗಪಡಿಸಲಿ. ಅವರಿಗೆ ಶಕ್ತಿ ಇದ್ದರೆ ತಪ್ಪಿತಸ್ಥರನ್ನು ಜೈಲಿಗೂ ಕಳುಹಿಸಲಿ’ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಸವಾಲು ಹಾಕಿದ್ದಾರೆ.

‘ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಬರೀ ಹಗರಣಗಳನ್ನೇ ಮಾಡಿದ್ದು, ಕಾಮಾಲೆ ರೋಗದವರಿಗೆ ಕಾಣೋದೆಲ್ಲ ಹಳದಿ. ಅವರು ಆ ಕಾಯಿಲೆಯಿಂದ ಹೊರ ಬರಲಿ. ಇಲ್ಲದಿದ್ದರೆ ಯಾರೆಲ್ಲ ಎಲ್ಲೆಲ್ಲಿಗೆ ಹೋಗಿ ಬಂದಿದ್ದಾರೆ ಎಂದು ಹೇಳಬೇಕಾಗುತ್ತದೆ. ಕಾಂಗ್ರೆಸ್‌ನವರು ಎಷ್ಟು ಹಗರಣಗಳನ್ನು ಮಾಡಿಲ್ಲ? ಕೇಂದ್ರದಲ್ಲಿ ಅಧಿಕಾರ ಕಳೆದುಕೊಂಡದ್ದೇ ಹಗರಣಗಳ ಕಾರಣಕ್ಕೆ. ಮೊಸರಿನಲ್ಲಿ ಕಲ್ಲು ಹುಡುಕುವುದನ್ನು ಬಿಡಲಿ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿರುಗೇಟು ನೀಡಿದ್ದಾರೆ.


ಇದನ್ನೂ ಓದಿ: ಎರಡು ತಿಂಗಳಲ್ಲಿ ಯಡಿಯೂರಪ್ಪ ಸರ್ಕಾರ 2,200 ಕೋಟಿ ಲೂಟಿ ಹೊಡೆದಿದೆ: ಸಿದ್ದರಾಮಯ್ಯ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights