ಹಿಂದಿ ಹೇರಿಕೆಯ ವಿರುದ್ಧ ಹೆಚ್‌ಡಿಕೆ ಆಕ್ರೋಶ! ಆಯುಷ್ ಇಲಾಖೆಯ ಕಾರ್ಯದರ್ಶಿ ವಜಾಗೊಳಿಸಲು ಆಗ್ರಹ!

ಹಿಂದಿ ಹೇರಿಕೆಯ ವಿರುದ್ಧ ತೀವ್ರತರದಲ್ಲಿ ಧನಿ ಎತ್ತಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಆಯುಷ್‌ ಇಲಾಖೆಯ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.

ಇತ್ತೀಚೆಗೆ, ತಮಿಳುನಾಡಿನ ಸಂಸದೆ ಕನಿಮೋಳಿ ಅವರಿಗಾದ ಹಿಂದಿ ಹೇರಿಕೆ ಅವಮಾನ ವಿರೋಧಿಸಿ ಧ್ವನಿಯೆತ್ತಿದ್ದ ಹೆಚ್.ಡಿ.ಕುಮಾರಸ್ವಾಮಿ ಈಗ ಆಯುಷ್ ಇಲಾಖೆಯಲ್ಲಿನ ಹಿಂದಿಹೇರಿಕೆ ಅಹಮ್ಮಿಕೆಯನ್ನು ವಿರೋಧಿಸಿದ್ದಾರೆ.

ಆಯುಷ್ ಇಲಾಖೆ ಆಯೋಜಿಸಿದ್ದ ವರ್ಚುವಲ್ ತರಬೇತಿಯಲ್ಲಿ ಇಲಾಖೆಯ ಕಾರ್ಯದರ್ಶಿ ರಾಜೇಶ್ ಕೊಟೆಚಾ ಅವರು, ‘ಹಿಂದಿ ಭಾಷೆ ಗೊತ್ತಿಲ್ಲದವರು ಹೊರ ಹೋಗಬಹುದು’ ಎಂದು ಹೇಳಿದ್ದು ಅವರನ್ನು ಅಮಾನತ್ತುಗೊಳಿಸಿವಂತೆ ಹೆಚ್‌ಡಿಕೆ ಆಗ್ರಹಿಸಿದ್ದಾರೆ.

ಆಯುಷ್ ಇಲಾಖೆ ಆಯೋಜಿಸಿದ್ದ ವರ್ಚುವಲ್ ತರಬೇತಿಯಲ್ಲಿ ಇಲಾಖೆಯ ಕಾರ್ಯದರ್ಶಿ ರಾಜೇಶ್‌ ಕೊಟೆಚಾ ‘ಹಿಂದಿ ಮಾತನಾಡಲು ಆಗದವರು ತರಬೇತಿಯಿಂದ ಹೊರನಡೆಯಬಹುದು. ನನಗೆ ಚೆನ್ನಾಗಿ ಇಂಗ್ಲಿಷ್ ಮಾತನಾಡಲು ಬರುವುದಿಲ್ಲ,’ ಎಂದು ಹೇಳಿರುವುದು ತಿಳಿಯಿತು. ಇದೇನು ಇಂಗ್ಲಿಷ್‌ ಬಾರದೆಂಬ ವಿನಂತಿಯೋ, ಹಿಂದಿ ಹೇರಬೇಕು ಎಂಬ ನಾಚಿಕೆ ಇಲ್ಲದ ಉತ್ಸಾಹವೋ? ಎಂದು ಪ್ರಶ್ನಿಸಿದ್ದಾರೆ.

ಸಂವಿಧಾನ ಬದ್ಧ ‘ಒಕ್ಕೂಟ ವ್ಯವಸ್ಥೆ’ ಎಂಬುದು ಈ ದೇಶದ ಒಗ್ಗಟ್ಟಿನ ಮಂತ್ರ. ಇಲ್ಲಿನ ಪ್ರತಿ ಭಾಷೆಗಳೂ ಒಕ್ಕೂಟ ವ್ಯವಸ್ಥೆಯ ಭಾಗ. ಹೀಗಿರುವಾಗ, ಹಿಂದಿ ಮಾತನಾಡಲು ಬಾರದ ಕಾರಣಕ್ಕೆ ತರಬೇತಿ ಕಾರ್ಯಕ್ರಮದಿಂದ ಹೊರ ಹೋಗಿ ಎಂಬುದು ಒಕ್ಕೂಟ ವ್ಯಸ್ಥೆಯ ಉಲ್ಲಂಘನೆಯಲ್ಲವೇ? ಸಂವಿಧಾನ ವಿರೋಧಿ ನಡೆಯಲ್ಲವೇ? ಎಂದು ಕಿಡಿಕಾರಿದ್ದಾರೆ.

ಹಿಂದಿ ಬಾರದೆಂಬ ಕಾರಣಕ್ಕೆ ಕನ್ನಡಿಗರೂ ಸೇರಿದಂತೆ ಮಿಕ್ಕೆಲ್ಲ ಭಾಷೆಗಳ ಜನ ಈ ದೇಶದಲ್ಲಿ ಇನ್ನೆಷ್ಟು ತ್ಯಾಗ ಮಾಡಬೇಕು? ಹಿಂದಿ ಶ್ರೇಷ್ಠತೆಯ ಗೀಳಿನಲ್ಲಿರುವ ಆಯುಷ್‌ ಇಲಾಖೆಯ ಕಾರ್ಯದರ್ಶಿ ರಾಜೇಶ್‌ ಕೊಟೆಚಾ ಅವರ ವಿರುದ್ಧ ಕೇಂದ್ರ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳ ಬೇಕು. ಒಕ್ಕೂಟ ವ್ಯವಸ್ಥೆಯನ್ನು ಗೌರವಿಸಬೇಕು ಎಂದು ಒತ್ತಾಯಿಸಿದ್ದಾರೆ.


ಇದನ್ನೂ ಓದಿ: ಏಕ ಭಾಷೆ ಹಿಂದಿ ಹೇರಿಕೆಯನ್ನು ವಿರೋಧಿಸಿ ಯುವ ಕಾಂಗ್ರೆಸ್ ಬೃಹತ್ ಪ್ರತಿಭಟನೆ…

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights