ಫ್ಯಾಕ್ಟ್‌ಚೆಕ್: ಪ್ರಖ್ಯಾತಿಗಾಗಿ ಕುಖ್ಯಾತಿ ಕೆಲಸಕ್ಕೆ ಇಳಿದ ಯೋಧ !

ಆರು ಜನರ ಗುಂಪು ತನ್ನ ಮೇಲೆ ದಾಳಿ ನಡೆಸಿ ಬೆನ್ನಿನ ಮೇಲೆ ಪಿಎಫ್‍ಐ (PFI) ಎಂದು ಬರೆದಿದೆ ಎಂದು ಯೋಧರೊಬ್ಬರು ದೂರು ನೀಡಿದ್ದರು. ಗಂಭೀರ ಪ್ರಕರಣವಾದ ಕಾರಣ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿ ಪ್ರಕರಣವನ್ನು ಬೇಧಿಸಿದ್ದಾರೆ.

ಇದೇ ಘಟನೆಯನ್ನು ಮಾಜಿ ಸಚಿವ ಸಿ.ಟಿ.ರವಿ ಮತ್ತು ಇತರೆ ಬಿಜೆಪಿ ಬೆಂಬಲಿತ ಸಾಮಾಜಿಕ ಮಾಧ್ಯಮಗಳ ಬಳಕೆದಾರರು ವಿಡಿಯೋ ಪೋಸ್ಟ್‌ಅನ್ನು ಹಂಚಿಕೊಂಡು “ಜಿಹಾದಿಗಳು ನಮ್ಮ ಸೈನಿಕ ಎಸ್ ಕುಮಾರ್ ಅವರ ಬೆನ್ನಿನ ಮೇಲೆ PFI ಎಂದು ಬರೆದಿದ್ದಾರೆ. ಕೇರಳದ ಕಮ್ಯುನಿಸ್ಟ್ ಸರ್ಕಾರವು ಈ ಭಯೋತ್ಪಾದಕರ ವಿರುದ್ಧ ನಿರ್ದಯವಾಗಿ ಕ್ರಮ ಕೈಗೊಳ್ಳಲು ಇದು ಸಕಾಲ” ಎಂದು ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

ಕತೆ ಕಟ್ಟಿ ಸುಳ್ಳು ದೂರು ನೀಡಿದ್ದ ಯೋಧ

ಯೋಧ ಶೈನ್‍ಕುಮಾರ್ ಗುಂಪೊಂದು ತನ್ನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿದ್ದ. ಬಳಿಕ ಕೈ ಕಟ್ಟಿ ಬೆನ್ನಿನ ಮೇಲೆ ಪಿಎಫ್‍ಐ ಎಂದು ಬರೆದಿದ್ದಾರೆ ಎಂದು ದೂರು ನೀಡಿದ್ದ. ದೂರಿನನ್ವಯ ಕೊಲ್ಲಂನ ಕಡಕ್ಕಲ್ ಠಾಣೆ ಪೊಲೀಸರು ತನಿಖೆ ನಡೆಸಿದ್ದರು. ಆದರೆ ಯಾವುದೇ ಸುಳಿವು ಸಿಗದಿದ್ದಾಗ ಯೋಧ ಹಾಗೂ ಆತನ ಸ್ನೇಹಿತನ ಮೇಲೆ ಅನುಮಾನಗೊಂಡು ವಿಚಾರಣೆ ನಡೆಸಿದಾಗ ನಿಜ ಸಂಗತಿ ಬಯಲಾಗಿದೆ.

ಬಂಧಿತ ಯೋಧ, ತನ್ನ ನಿವಾಸದ ಹತ್ತಿರದ ರಬ್ಬರ್ ತೋಟದಲ್ಲಿ 6 ಜನರಿದ್ದ ಗುಂಪು ಭಾನುವಾರ ರಾತ್ರಿ ಈ ಕೃತ್ಯ ಎಸಗಿದೆ ಎಂದು ಹೇಳಿಕೊಂಡಿದ್ದ. ತನ್ನ ಎರಡೂ ಕೈಗಳನ್ನು ಹಿಂದಕ್ಕೆ ಕಟ್ಟಿ, ಥಳಿಸಿದ್ದರು. ಬಳಿಕ ಬೆನ್ನಲ್ಲಿ ಹಸಿರು ಬಣ್ಣ ಬಳಸಿ ಪಿಎಫ್‍ಐ ಎಂದು ಬರೆದಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದ.

ಸೈನಿಕನಿಗೆ ಪ್ರಸಿದ್ಧಿ ಪಡೆಯುವ ಬಯಕೆ ಇತ್ತು. ಅದಕ್ಕಾಗಿ ಇಡೀ ಕಥೆಯನ್ನು ಸೃಷ್ಟಿಸಲಾಗಿತ್ತು ಎಂದು ಶೈನ್ ಕುಮಾರ್ ಅವರ ಸ್ನೇಹಿತ ಜೋಶಿ, ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ. ತನ್ನ ಅಂಗಿ ಹರಿದು, ಬೆನ್ನಿನ ಮೇಲೆ ಪಿಎಫ್‌ಐ ಎಂದು ಬರೆಯುವಂತೆ ಶೈನ್ ತಮಗೆ ಸೂಚನೆ ನೀಡಿದ್ದರು. ಮದ್ಯದ ಅಮಲಿನಲ್ಲಿದ್ದ ತಾನು ಅದನ್ನು ತಪ್ಪಾಗಿ ಅರ್ಥ ಮಾಡಿಕೊಂಡು ‘ಡಿಎಫ್‌ಐ’ ಎಂದು ಬರೆದಿದ್ದಾಗಿ ಜೋಶಿ ಹೇಳಿದ್ದಾರೆ.

“ನಾನು ಕುಡಿದಿದ್ದೆ. ಮೊದಲು ನಾನು ‘ಡಿಎಫ್‌ಐ’ ಎಂದು ಬರೆದಿದ್ದೆ. ಆದರೆ ಅದು ಪಿಎಫ್‌ಐ ಆಗಬೇಕು ಎಂದು ಕುಮಾರ ಹೇಳಿದ್ದ. ಹೀಗಾಗಿ ಬಳಿಕ ಅದನ್ನು ತಿದ್ದಿ ಪಿಎಫ್‌ಐ ಎಂದು ಬರೆದೆ. ತನಗೆ ಹೊಡೆಯುವಂತೆ ನನಗೆ ಸೂಚಿಸಿದ್ದ. ಆದರೆ ನಾನು ಕುಡಿದಿದ್ದರಿಂದ ನನಗೆ ಅದು ಸಾಧ್ಯವಾಗಲಿಲ್ಲ. ತನ್ನನ್ನು ನೆಲದ ಮೇಲೆ ಎಳೆದುಕೊಂಡು ಹೋಗಿ ಮಲಗಿಸುವಂತೆ ಅವನು ಹೇಳಿದ್ದ. ತೂರಾಡುತ್ತಿದ್ದ ನನಗೆ ಅದು ಕೂಡ ಸಾಧ್ಯವಾಗಲಿಲ್ಲ. ತನ್ನ ಬಾಯಿ ಮತ್ತು ಕೈಗಳಿಗೆ ಟೇಪ್ ಹಾಕುವಂತೆ ಸೂಚಿಸಿದ. ಹಾಗೆ ಮಾಡಿ ನಾನು ಅಲ್ಲಿಂದ ಹೊರಟೆ” ಎಂದು ಜೋಶಿ ವಿವರಿಸಿದ್ದಾರೆ. ಘಟನೆಯಲ್ಲಿ ಬಳಸಿದ ಹಸಿರು ಪೇಂಟ್, ಬ್ರಷ್ ಮತ್ತು ಟೇಪ್ ಅನ್ನು ಜೋಶಿ ಮನೆಯಲ್ಲಿ ಪೊಲೀಸರು ಪತ್ತೆ ಮಾಡಿದ್ದಾರೆ.

ಕೃಪೆ : ಆಲ್ಟ್‌ನ್ಯೂಸ್

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಕರ್ನಾಟಕ ಸಾರಿಗೆಯ ಬಸ್ಸಿನ ಮೇಲೆ ಮುಸ್ಲಿಮರು ಕಲ್ಲೂ ತೂರಾಟ ನಡೆಸಿದರೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights