UPSC ಪಾಸಾದ ಜಾಮಿಯಾದ ವಿದ್ಯಾರ್ಥಿಗಳ ವಿರುದ್ಧ ದ್ವೇಷದ ಪ್ರೋಮೊ ಪ್ರಸಾರ: ನಿರೂಪಕನ ವಿರುದ್ಧ ದೂರು

UPSC ಪಾಸಾದ ಜಾಮಿಯಾ ವಿವಿ ಮುಸ್ಲಿಂ ವಿದ್ಯಾರ್ಥಿಗಳ ವಿರುದ್ದ ದ್ವೇಷ ಬಿತ್ತುವ “ಮುಸ್ಲಿಮರ ಹೊಸ ಜಿಹಾದ್‌, ಯುಪಿಎಸ್‌ಸಿ ಜಿಹಾದ್, ಜಾಮಿಯಾ ಕೆ ಜಿಹಾದ್‌” ಎಂದು ತಮ್ಮ ಚಾನೆಲ್‌ನಲ್ಲಿ ಕಾರ್ಯಕ್ರಮ ಮಾಡುವುದಾಗಿ ಟ್ವಿಟ್ಟರ್‌ನಲ್ಲಿ ಅದರ ಪ್ರೊಮೊವನ್ನು ಹಾಕಿಕೊಂಡಿದ್ದ ಸುದರ್ಶನ ನ್ಯೂಸ್ ಚಾನೆಲ್‌ನ ನಿರೂಪಕ ಸುರೇಶ್ ಚಾವಂಕೆ ವಿರುದ್ದ ಅಹ್ಮದ್‌ನಗರದ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ದೂರು ದಾಖಲಾಗಿದೆ.

ಆಗಸ್ಟ್ 4 ರಂದು ಈ ಬಾರಿಯ ಯುಪಿಎಸ್‌ಸಿ ಫಲಿತಾಂಶ ಹೊರಬಂದಿದ್ದು, 829 ವಿದ್ಯಾರ್ಥಿಗಳು ಆಯ್ಕೆಯಾಗಿದ್ದರು. ಇದರಲ್ಲಿ ಜಾಮಿಯಾ ರೆಸಿಡೆನ್ಶಿಯಲ್ ಕೋಚಿಂಗ್ ಸೆಂಟರ್‌ನಿಂದ 30 (15 ಮುಸ್ಲಿಮರು 15 ಮುಸ್ಲಿಮೇತರರು) ಅಭ್ಯರ್ಥಿಗಳು ಆಯ್ಕೆಯಾಗಿದ್ದರು.

“ದುರುದ್ದೇಶದ ವಿಷಯವನ್ನು ಪ್ರಸಾರ ಮಾಡಿದ್ದಕ್ಕಾಗಿ ಟಿವಿ ಚಾನೆಲ್ ವಿರುದ್ಧ ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಲು ನಾವು ಸಭೆ ಕರೆದಿದ್ದೇವೆ. ಯುಪಿಎಸ್ಸಿ ಪರೀಕ್ಷೆ ಪಾಸ್ ಮಾಡಿದ ಜಾಮಿಯಾ ರೆಸಿಡೆನ್ಶಿಯಲ್ ಕೋಚಿಂಗ್ ಅಕಾಡೆಮಿಯ ಪ್ರತಿಯೊಬ್ಬ ವಿದ್ಯಾರ್ಥಿಯು, ದ್ವೇಷ ಹರಡುವ ವಿಷಯಕ್ಕಾಗಿ ಚಾನೆಲ್ ವಿರುದ್ಧ ಎಫ್ಐಆರ್ ದಾಖಲಿಸಬೇಕು” ಎಂದು ಜಾಮಿಯಾ ಮಿಲಿಯಾ ಇಸ್ಲಾಮಿಯಾ ಉಪಕುಲಪತಿ ನಜ್ಮಾ ಅಖ್ತರ್ ಹೇಳಿದ್ದಾರೆ.

“ಈ ವರ್ಷ ಯುಪಿಎಸ್‌ಸಿಯಲ್ಲಿ ಆಯ್ಕೆಯಾದ ಜಾಮಿಯಾ ರೆಸಿಡೆನ್ಶಿಯಲ್ ಕೋಚಿಂಗ್ ಅಕಾಡೆಮಿಯ 30 ವಿದ್ಯಾರ್ಥಿಗಳಲ್ಲಿ ಸುಮಾರು 50 ಪ್ರತಿಶತ ಅಭ್ಯರ್ಥಿಗಳು ಮುಸ್ಲಿಮೇತರರು ಎಂದು ಅವರಿಗೆ ತಿಳಿದಿಲ್ಲ” ಎಂದು ಅವರು ಹೇಳಿದ್ದಾರೆ.

ಸುರೇಶ್ ಚಾವಂಕೆ ಆಗಸ್ಟ್ 25 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಆರೆಸ್ಸೆಸ್‌ಗೆ ಟ್ಯಾಗ್ ಮಾಡಿ ಈ ಪ್ರೋಮೋವನ್ನು ಟ್ವೀಟ್ ಮಾಡಿದ್ದಾರೆ.

ಅದರಲ್ಲಿ ಭಾರತೀಯ ಅಧಿಕಾರಶಾಹಿಯಲ್ಲಿ ಮುಸ್ಲಿಮರ ನುಸುಳುಕೋರತನ ಎಂದು ಕರೆದು, ಮುಸ್ಲಿಮರು ಪ್ರತಿಷ್ಠಿತ ನಾಗರಿಕ ಸೇವೆಗಳ ಪರೀಕ್ಷೆಯನ್ನು ಭಾರಿ ಸಂಖ್ಯೆಯಲ್ಲಿ ಹೇಗೆ ಉತ್ತೀರ್ಣರಾಗುತ್ತಿದ್ದರೆ ಎಂದು ಪ್ರಶ್ನಿಸಿದ್ದಾರೆ. ಅವರು ಜಾಮಿಯಾದ ರೆಸಿಡೆನ್ಶಿಯಲ್ ಕೋಚಿಂಗ್ ಅಕಾಡೆಮಿಯ ವಿದ್ಯಾರ್ಥಿಗಳನ್ನು “ಜಿಹಾದಿಸ್ ಆಫ್ ಜಾಮಿಯಾ” ಎಂದು ಉಲ್ಲೇಖಿಸಿ, ‘ಯುಪಿಎಸ್‌ಸಿ ಜಿಹಾದ್’ ಎಂಬ ಹ್ಯಾಶ್‌ಟ್ಯಾಗ್ ಅನ್ನು ಕೂಡಾ ಬಳಸಿದ್ದಾರೆ.

ಅವರ ಟ್ವೀಟ್ ಅನ್ನು ಮತ್ತು ಟ್ವಿಟ್ಟರ್ ಖಾತೆಯನ್ನು ಅಮಾನತುಗೊಳಿಸಬೇಕು ಮತ್ತು ಅವರ ಮೇಲೆ ಎಫ್ಐಆರ್ ದಾಖಲಿಸಬೇಕು ಎಂದು ಒತ್ತಾಯಿಸಲಾಗಿತ್ತು.

ಆರ್‌ಟಿಐ ಕಾರ್ಯಕರ್ತ ಸಾಕೇತ್ ಗೊಖಲೆ ದ್ವೇಷ ಹರಡಿದ್ದಕ್ಕಾಗಿ ಅವರ ಮೇಲೆ ದಾಖಲಾಗಿರುವ ದೂರಿನ ಪ್ರತಿಯನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಕೃತ್ಯವನ್ನು ಖಂಡಿಸಿರುವ ಐಪಿಎಸ್ ಅಸೋಸಿಯೇಷನ್, ಇದು ಪತ್ರಿಕೋದ್ಯಮದ ಬೇಜವಾಬ್ದಾರಿ ಮತ್ತು ಕೋಮುವಾದಿ ನಡೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಜಾಮಿಯಾ ಮಿಲಿಯಾ ಇಸ್ಲಾಮಿಯಾದ ರೆಸಿಡೆನ್ಶಿಯಲ್ ಕೋಚಿಂಗ್ ಅಕಾಡೆಮಿ, ನಾಗರಿಕ ಸೇವೆಗಳ ಆಕಾಂಕ್ಷಿಗಳಿಗೆ ಹಾಸ್ಟೆಲ್ ಸೌಲಭ್ಯದೊಂದಿಗೆ ಉಚಿತ ತರಬೇತಿಯನ್ನು ನೀಡುತ್ತದೆ. ಈ ಸೌಲಭ್ಯವು ಅಲ್ಪಸಂಖ್ಯಾತ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವರ್ಗದ ಅಭ್ಯರ್ಥಿಗಳಿಗೆ ಮಾತ್ರ ಮುಕ್ತವಾಗಿದೆ. ಮಹಿಳಾ ಅಭ್ಯರ್ಥಿಗಳು ಈ ಅವಕಾಶವನ್ನು ಪಡೆಯಲು ಅರ್ಹರಾಗಿದ್ದಾರೆ.

ಶಿಕ್ಷಣ ಸಚಿವಾಲಯ ಬಿಡುಗಡೆ ಮಾಡಿದ ಕೇಂದ್ರ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಜೆಎನ್‌ಯು ಮತ್ತು ಅಲಿಗಡ್ ಮುಸ್ಲಿಂ ವಿಶ್ವವಿದ್ಯಾಲಯ ಸೇರಿದಂತೆ 40 ಕೇಂದ್ರೀಯ ವಿಶ್ವವಿದ್ಯಾನಿಲಯಗಳನ್ನು ಹಿಂದಿಕ್ಕಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ಪ್ರಥಮ ಸ್ಥಾನ ಪಡೆದಿದೆ.


ಇದನ್ನೂ ಓದಿ: ಅಧ್ಯಕ್ಷಗಿರಿ ತಿರಸ್ಕರಿಸಿದ ಬಿಜೆಪಿ ಶಾಸಕ: ಮಂತ್ರಿಗಿರಿಗೆ ಶುರುವಾಯ್ತು ಕಸರತ್ತು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights