ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರ ರಾಜಕೀಯ ಹಾದಿ: ಒಂದು ನೋಟ

ಭಾರತ ರತ್ನ ಪುರಸ್ಕೃತ ಹಾಗೂ ಭಾರತದ 13ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದ ಪ್ರಣಬ್‌ ಮುಖರ್ಜಿಯವರು, ಐದು ದಶಕಗಳ ಕಾಲ ರಾಷ್ಟ್ರ ರಾಜಕಾರಣದಲ್ಲಿ ಸೇವೆ ಸಲ್ಲಿಸಿದ್ದಾರೆ. ಕಾಂಗ್ರೆಸ್​ನ ಹಿರಿಯ ನಾಯಕರಾಗಿದ್ದ ಅವರು ರಾಷ್ಟ್ರಪತಿ ಆಗುವುದಕ್ಕೂ ಮುನ್ನ ಭಾರತ ಸರ್ಕಾರದಲ್ಲಿ ಹಲವು ಮಹತ್ವದ ಖಾತೆಗಳನ್ನು ನಿಭಾಯಿಸಿದ್ದರು. ಮುಖರ್ಜಿ ಅವರು 2009ರಿಂದ 2012ರವರೆಗೆ ಕೇಂದ್ರ ವಿತ್ತ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಆ ಬಳಿಕ ರಾಷ್ಟ್ರಪತಿಯಾಗಿ ಐದು ವರ್ಷ ಸೇವೆ ಸಲ್ಲಿಸಿ 2017ರಲ್ಲಿ ನಿವೃತ್ತರಾಗಿದ್ದರು. ಅಲ್ಲದೆ, 2019ರಲ್ಲಿ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನವನ್ನೂ ಪಡೆಸಿದ್ದರು.

1969ರಲ್ಲಿ ಮುಖರ್ಜಿ ಅವರಿಗೆ ರಾಜಕೀಯವಾಗಿ ಬಹುದೊಡ್ಡ ತಿರುವು ಸಿಗುತ್ತದೆ. ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರ ಸಹಾಯದಿಂದ ಸಂಸತ್ತಿನ ಮೇಲ್ಮನೆಯಾದ ರಾಜ್ಯಸಭೆಗೆ ಕಾಂಗ್ರೆಸ್​ನಿಂದ ಪ್ರಣಬ್ ಮುಖರ್ಜಿ ಆಯ್ಕೆಯಾಗುತ್ತಾರೆ. ಅಲ್ಲಿಂದ ಅವರು  ರಾಜಕೀಯವಾಗಿ ಹಿಂದಿರುಗಿ ನೋಡಿದ್ದೆ ಇಲ್ಲ. ಇಂದಿರಾ ಗಾಂಧಿ ಅವರ ಪರಮಾಪ್ತರಲ್ಲಿ  ಒಬ್ಬರಾದ ಮುಖರ್ಜಿ 1973ರಲ್ಲಿ ಇಂದಿರಾ ಗಾಂಧಿ ಅವರ ಸಂಪುಟದಲ್ಲಿ ಸಚಿವರೂ ಆಗುತ್ತಾರೆ.

1975-77ರ ಅವಧಿಯ ಆಂತರಿಕ ತುರ್ತು ಪರಿಸ್ಥಿತಿ ವೇಳೆ ಹಲವು ಕಾಂಗ್ರೆಸ್​ ನಾಯಕರು ಆರೋಪಕ್ಕೆ ಗುರಿಯಾದಂತೆ ಇವರು ಸಹ ಆರೋಪಗಳಿಗೆ ತುತ್ತಾಗುತ್ತಾರೆ. ಆ ಬಳಿಕ ಮುಖರ್ಜಿ ಅವರು ಕೇಂದ್ರ ಸಚಿವ ಸಂಪುಟದಲ್ಲಿ ಮಹತ್ವದ ಖಾತೆಗಳನ್ನು ನಿಭಾಯಿಸಿದರು. ಮೊದಲ ಬಾರಿಗೆ 1982-84ರ ಅವಧಿಯಲ್ಲಿ ಹಣಕಾಸು ಸಚಿವರಾದರು. ಅಷ್ಟೇ ಅಲ್ಲದೇ 1980ರಿಂದ 85ರವರೆಗೆ ರಾಜ್ಯಸಭೆಯ ನಾಯಕರಾಗಿಯೂ ಸೇವೆ ಸಲ್ಲಿಸಿದ್ದರು.

Bharath rathna
ಪ್ರಣಬ್ ಮುಖರ್ಜಿ ಅವರು ಭಾರತ ರತ್ನ ಪ್ರಶಸ್ತಿ ಪಡೆದ ಸಂದರ್ಭ

ಇಂಧಿರಾಗಾಂಧಿಯವರ ಹತ್ಯೆಯಾದ ನಂತರ, ಕಾಂಗ್ರೆಸ್‌ನೊಂದಿಗೆ ಮನಸ್ಥಾಪ ಉಂಟಾಗಿ ತಾವೇ ರಾಷ್ಟ್ರೀಯ ಸಮಾಜವಾದಿ ಕಾಂಗ್ರೆಸ್ ಎಂಬ ಸ್ವಂತ ಪಕ್ಷವೊಂದನ್ನು ಸ್ಥಾಪಿಸಿದರು. ಬಳಿಕ ರಾಜೀವ್ ಗಾಂಧಿ ಅವರೊಂದಿಗೆ ವೈಮನಸ್ಸು ತಿಳಿಗೊಂಡು ಅವರ ಸಖ್ಯ ಗಳಿಸಿಕೊಂಡ ಬಳಿಕ 1989ರಲ್ಲಿ ಪಕ್ಷವನ್ನು ಕಾಂಗ್ರೆಸ್​ನೊಂದಿಗೆ ವಿಲಿನಗೊಳಿಸಿದರು. 1991ರಲ್ಲಿ ರಾಜೀವ್ ಗಾಂಧಿ ಹತ್ಯೆ ಬಳಿಕ ಮುಖರ್ಜಿ ಅವರ ರಾಜಕೀಯ ಜೀವನ ಮತ್ತೆ ಮುನ್ನೆಲೆಗೆ ಬರಲು ಆರಂಭಿಸಿತು.

ಆಗ ಪ್ರಧಾನಿಯಾಗಿದ್ದ ಪಿ.ವಿ. ನರಸಿಂಹರಾವ್ ಅವರು 1991ರಲ್ಲಿ ಮುಖರ್ಜಿ ಅವರನ್ನು ಯೋಜನಾ ಆಯೋಗದ ಮುಖ್ಯಸ್ಥರನ್ನಾಗಿ ನೇಮಿಸಿದರು. ಮತ್ತು 1995ರಲ್ಲಿ ವಿದೇಶಾಂಗ ಸಚಿವರಾದರು. ಇದರೊಂದಿಗೆ ಕಾಂಗ್ರೆಸ್​ ಪಕ್ಷದ ಹಿರಿಯ ನಾಯಕರಾಗಿ ಗುರುತಿಸಿಕೊಂಡ ಮುಖರ್ಜಿ, ಮುಂದೆ ಸೋನಿಯಾ ಗಾಂಧಿ ಅವರ ರಾಜಕೀಯ ಮಾರ್ಗದರ್ಶಕರಾಗಿ 1998ರಲ್ಲಿ ಕಾಂಗ್ರೆಸ್​ ಅಧ್ಯಕ್ಷರಾಗಲು ಪ್ರಮುಖ ಪಾತ್ರ ವಹಿಸಿದ್ದರು.

ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರೊಗ್ರೆಸ್ಸಿವ್ ಅಲೈಯನ್ಸ್​ (ಯುಪಿಎ) ಸರ್ಕಾರ 2004ರಲ್ಲಿ ಮರಳಿ ಅಧಿಕಾರಕ್ಕೆ ಬಂತು. ಆಗ ಮುಖರ್ಜಿ ಅವರು ಮೊದಲ ಬಾರಿಗೆ ಲೋಕಸಭೆ ಚುನಾವಣೆಗೆ ನಿಂತು ಗೆದ್ದು ಬರುತ್ತಾರೆ. ಅಂದಿನಿಂದ ಅವರು ರಾಜೀನಾಮೆ ನೀಡುವವರೆಗೂ (2012) ಪ್ರಧಾನಿ ಮನಮೋಹನ್ ಸಿಂಗ್ ಸರ್ಕಾರದಲ್ಲಿ ಎರಡನೇ ವ್ಯಕ್ತಿಯಾಗಿಯೇ ಗುರುತಿಸಿಕೊಳ್ಳುತ್ತಾರೆ.2004-06ರವರೆಗೆ ರಕ್ಷಣಾ ಖಾತೆ, 2006-09 ರವರೆಗೆ ವಿದೇಶಾಂಗ ಖಾತೆ ಹಾಗೂ 2009ರಿಂದ 2012ರವರೆಗೆ ಹಣಕಾಸು ಖಾತೆಗಳನ್ನು ನಿಭಾಯಿಸುತ್ತಾರೆ. ಅಷ್ಟೇ ಅಲ್ಲದೇ ಸರ್ಕಾರದ ಹಲವು ಸಮಿತಿಗಳ ಮುಖ್ಯಸ್ಥರಾಗಿಯೂ ಮತ್ತು ಲೋಕಸಭಾ ನಾಯಕರಾಗಿಯೂ ಸೇವೆ ಸಲ್ಲಿಸುತ್ತಾರೆ.

2012ರ ಜುಲೈನಲ್ಲಿ ಯುಪಿಎ ಮೈತ್ರಿಯಿಂದ ಮುಖರ್ಜಿ ಅವರನ್ನು ರಾಷ್ಟ್ರಪತಿ ಸ್ಥಾನಕ್ಕೆ ನಾಮನಿರ್ದೇಶನ ಮಾಡಲಾಗುತ್ತದೆ. ಪೂರ್ಣ ಬಹುಮತ ಹೊಂದಿದ್ದ ಯುಪಿಎಯಿಂದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಮುಖರ್ಜಿ ಅವರು ತಮ್ಮ ಪ್ರತಿಸ್ಪರ್ಧಿ ಪಿ.ಎ.ಸಂಗ್ಮಾ ಅವರನ್ನು ಭಾರೀ ಮತಗಳ ಅಂತರದಲ್ಲಿ ಸೋಲಿಸಿ ಭಾರತದ ಮೊದಲ ಪ್ರಜೆಯಾದರು.

2017ರಲ್ಲಿ ಮುಖರ್ಜಿ ಅವರ ರಾಷ್ಟ್ರಪತಿ ಅವಧಿ ಮುಕ್ತಾಯವಾದ ಬಳಿಕ ಅವರು ಮತ್ತೆ ರಾಷ್ಟ್ರಪತಿ ಮರುಚುನಾವಣೆಯಲ್ಲಿ ಅಭ್ಯರ್ಥಿಯಾಗಲು ಇಚ್ಛಿಸಲಿಲ್ಲ. ಆ ವೇಳೆಗೆ ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು ರಾಜಕೀಯವಾಗಿ ನಿವೃತ್ತಿ ಪಡೆದರು. 2017ರ ಜುಲೈ 25ರಂದು ಅವರ ರಾಷ್ಟ್ರಪತಿ ಅವಧಿ ಮುಕ್ತಾಯಗೊಂಡಿತು. ಬಳಿಕ 2018ರ ಜೂನ್​ನಲ್ಲಿ ರಾಮನಾಥ ಕೋವಿಂದ್ ಅವರು ರಾಷ್ಟ್ರಪತಿಯಾದರು. 2018ರ ಜೂನ್​ನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್​ಎಸ್​ಎಸ್​) ಸಮಾರಂಭದಲ್ಲಿ ಪಾಲ್ಗೊಂಡ ಮೊದಲ ಮಾಜಿ ರಾಷ್ಟ್ರಪತಿ ಕೂಡ ಪ್ರಣಬ್ ಮುಖರ್ಜಿ.

ಪ್ರಣಬ್ ಮುಖರ್ಜಿ ಬಾಲ್ಯಜೀವನ

ಬ್ರಿಟಿಷ್ ಭಾರತದ ಅವಧಿಯಲ್ಲಿ ಬಂಗಾಳ ಪ್ರಾಂತ್ಯದಲ್ಲಿ (ಈಗ ಅದು ಪಶ್ಚಿಮ ಬಂಗಾಳದ ಬಿರಭೂಮ್​ ಜಿಲ್ಲೆ) ಬೆಂಗಾಳಿ ಕುಟುಂಬದಲ್ಲಿ 1935 ಡಿಸೆಂಬರ್ 11ರಂದು ಪ್ರಣಬ್ ಜನಿಸುತ್ತಾರೆ. ಇವರ ತಂದೆ ಕಾಮದ್ ಕಿನ್ಕರ್ ಮುಖರ್ಜಿ ಅವರು ಸ್ವತಂತ್ರ ಚಳವಳಿಯಲ್ಲಿ ಸಕ್ರಿಯರಾಗಿರುತ್ತಾರೆ. ಮತ್ತು 1952 ಮತ್ತು 1964ರಲ್ಲಿ ಪಶ್ಚಿಮಬಂಗಾಳ ವಿಧಾನ ಪರಿಷತ್​ ಸದಸ್ಯರಾಗಿ ಸೇವೆ ಸಲ್ಲಿಸುತ್ತಾರೆ. ಮತ್ತು ಎಐಸಿಸಿ ಸದಸ್ಯರಾಗಿರುತ್ತಾರೆ. ಪ್ರಣವ್ ಅವರ ತಾಯಿ ರಾಜಲಕ್ಷ್ಮೀ ಮುಖರ್ಜಿ.

ಪ್ರಣಬ್ ಮುಖರ್ಜಿ ಸುರಿಯಲ್ಲಿನ ವಿದ್ಯಾಸಾಗರ ಕಾಲೇಜಿನಲ್ಲಿ ಶಿಕ್ಷಣ ಪಡೆಯುತ್ತಾರೆ. ಆ ಬಳಿಕ ಕಲ್ಕತ್ತಾ ವಿಶ್ವವಿದ್ಯಾಲಯಕ್ಕೆ ಸೇರಿಕೊಳ್ಳುತ್ತಾರೆ. ಶಿಕ್ಷಣದ ಬಳಿಕ ಕಲ್ಕತ್ತಾದ ವಿದ್ಯಾಸಾಗರ ಕಾಲೇಜಿನಲ್ಲಿ ರಾಜಕೀಯ ವಿಜ್ಞಾನ ವಿಷಯದ ಉಪನ್ಯಾಸಕರಾಗಿ (ಸಹಾಯಕ ಪ್ರಾಧ್ಯಾಪಕ) ಸೇವೆ ಸಲ್ಲಿಸುತ್ತಾರೆ.

ಅಷ್ಟೇ ಅಲ್ಲದೇ ದೇಶಿರ್ ದಕ್​ ಎಂಬ ಪತ್ರಿಕೆಯಲ್ಲಿ ಪತ್ರಕರ್ತರಾಗಿಯೂ ಕೆಲ ಕಾಲ ಕೆಲಸ ನಿರ್ವಹಿಸುತ್ತಾರೆ. ಆನಂತರ ರಾಜಕೀಯ ರಂಗ ಪ್ರವೇಶಿಸುತ್ತಾರೆ.


ಇದನ್ನೂ ಓದಿ:  ಭಾರತದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ವಿಧಿವಶ

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights