ಹತ್ರಾಸ್ ಅತ್ಯಾಚಾರ ಸಂತ್ರಸ್ಥೆಯ ತಂದೆಗೆ ಹೇಳಿಕೆ ಬದಲಿಸುವಂತೆ ಧಮಕಿ ಹಾಕಿದ ಜಿಲ್ಲಾಧಿಕಾರಿ: ವಿಡಿಯೋ ವೈರಲ್
ಹತ್ರಾಸ್ ಅತ್ಯಾಚಾರ ಸಂತ್ರಸ್ತೆಯ ಮೃತದೇಹವನ್ನು ಕುಟುಂಬವರಿಗೆ ನೀಡದೇ ತಾವೇ ರಾತ್ರೋರಾತ್ರಿ ಪೊಲೀಸರು ಸುಟ್ಟು ಹಾಕಿದ್ದಾರೆ. ಇದಕ್ಕೆ ದೇಶದಾದ್ಯಂತ ಹಲವು ಅನುಮಾನ ಹಾಗೂ ತೀವ್ರ ಆಕ್ರೋಶಗಳಿಗೆ ಕಾರಣವಾಗಿದೆ. ಇಂತಹ ಸಮಯದಲ್ಲೇ ಹತ್ರಾಸ್ ಡಿಎಂ (ಜಿಲ್ಲಾಧಿಕಾರಿ) ಯುವತಿಯ ತಂದೆಯ ಬಳಿ ಹೋಗಿ ಹೇಳಿಕೆಯನ್ನು ಬದಲಾಯಿಸುವಂತೆ ಧಮಕಿ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿದೆ.
“ತಾನು ಮುಖ್ಯಮಂತ್ರಿಯೊಂದಿಗೆ ಮಾತನಾಡಿದ್ದು, ನನ್ನ ಎಲ್ಲಾ ಬೇಡಿಕೆಗಳನ್ನು ಈಡೇರಿಸುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ. ಅವರ ಆಶ್ವಾಸನೆಯಿಂದ ನಾನು ತೃಪ್ತನಾಗಿದ್ದೇನೆ. ಜನರು ಯಾವುದೇ ರೀತಿಯ ಪ್ರತಿಭಟನೆ ಮಾಡಬೇಡಿ ಎಂದು ಮನವಿ ಮಾಡುತ್ತೇನೆ” ಎಂದು ಯುವತಿಯ ತಂದೆ ಹೇಳಿದ್ದಾಗಿ ಮಾಧ್ಯಮಗಳು ಹೇಳಿತ್ತು. ಜೊತೆಗೆ ಅವರು ಸಹಿ ಮಾಡಿದ ಪತ್ರವು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.
ಯುವತಿಯ ತಂದೆಯ ಹೇಳಿಕೆ ಎನ್ನಲಾದ ಪತ್ರ
ಆದರೆ ಹಲವಾರು ಜನರು, ಇದು ಯುವತಿಯ ತಂದೆಯನ್ನು ಬೆದರಿಸಿ ಕೊಡಿಸಿರುವ ಹೇಳಿಕೆ ಎಂದು ಅನುಮಾನ ವ್ಯಕ್ತಪಡಿಸಿದ್ದರು. ಇದೀಗ ಜಿಲ್ಲಾಧಿಕಾರಿ ಬೆದರಿಸುವ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ ಜಿಲ್ಲಾಧಿಕಾರಿಯೂ ಯುವತಿಯ ತಂದೆಯೊಂದಿಗೆ, “2-3 ದಿನಗಳಲ್ಲಿ ಮಾಧ್ಯಮಗಳು ಹೊರಡುತ್ತವೆ. ನಾವು ನಿಮ್ಮೊಂದಿಗೆ ನಿಲ್ಲುತ್ತೇವೆ. ನಿಮ್ಮ ಹೇಳಿಕೆಯನ್ನು ಬದಲಾಯಿಸಲು ನೀವು ಬಯಸುತ್ತೀರಾ ಎಂಬುದು ನಿಮಗೆ ಬಿಟ್ಟದ್ದು” ಎಂದು ಒತ್ತಾಯಿಸುವುದನ್ನು ಕೇಳಬಹುದಾಗಿದೆ.
"आपकी इच्छा है कि आपको बार-बार बयान बदलना है, नहीं बदलना है। कहीं हम भी न बदल जाए।"
योगी सरकार के DM हाथरस गैंगरेप पीड़िता के पिता पर दबाव डालने के लिए उन्हें धमका रहे हैं।pic.twitter.com/y963IEaX1E
— AAP (@AamAadmiParty) October 1, 2020
ಇದನ್ನು ಆಮ್ ಆದ್ಮಿ ಪಕ್ಷ ತನ್ನ ಟ್ವಿಟ್ಟರ್‌ನಲ್ಲಿ ಹಾಕಿ, “ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಯ ತಂದೆಯ ಮೇಲೆ ಒತ್ತಡ ಹೇರಲು ಆದಿತ್ಯನಾಥ್ ಸರ್ಕಾರದ ಹತ್ರಾಸ್‌ನ ಡಿಎಂ ಬೆದರಿಕೆ ಹಾಕುತ್ತಿದ್ದಾರೆ” ಎಂದು ಬರೆದಿದೆ.
ಇದನ್ನೂ ಓದಿ: ಹತ್ರಾಸ್ ಅತ್ಯಾಚಾರ ಪ್ರಕರಣ: ಜಗತ್ತಿನ ಮುಂದೆ ಸತ್ಯಬಿಚ್ಚಿಟ್ಟ ವರದಿಗಾರ್ತಿ ತನುಶ್ರೀ ಪಾಂಡೆ!
ಪ್ರಿಯಾಂಕಾ ಗಾಂಧಿ ಟ್ವೀಟ್ ಮಾಡಿ “ಸಂತ್ರಸ್ತೆಯ ಹಳ್ಳಿಗೆ ಹೋಗುವುದನ್ನು ಯುಪಿ ಸರ್ಕಾರ ಏಕೆ ತಡೆಯುತ್ತಿದೆ? ಹತ್ರಾಸ್ ಡಿಎಂ ಸಂತ್ರಸ್ತೆಯ ಕುಟುಂಬಕ್ಕೆ ಬೆದರಿಕೆ ಹಾಕುತ್ತಿದ್ದಾನೆ. ಅಲ್ಲಿಗೆ ಮಾಧ್ಯಮಗಳಿಗೆ ಹೋಗಲು ಸಾಧ್ಯವಾಗುವುದಿಲ್ಲ. ಜೊತೆಗೆ ಯುಪಿ ಸರ್ಕಾರವು ಸಂತ್ರಸ್ತೆಯ ಕುಟುಂಬಕ್ಕೆ ಬಹಿರಂಗವಾಗಿ ಬೆದರಿಕೆ ಹಾಕುತ್ತಿದ್ದಾರೆ. ಈ ಜನರು ದಬ್ಬಾಳಿಕೆಯವರು.” ಎಂದು ಕಿಡಿಕಾರಿದ್ದಾರೆ.
ಸೆಪ್ಟೆಂಬರ್ 14 ರಂದು ದೆಹಲಿಯಿಂದ 200 ಕಿ.ಮೀ ದೂರದಲ್ಲಿರುವ ಹತ್ರಾಸ್ ಎಂಬ ಹಳ್ಳಿಯಲ್ಲಿ ದಲಿತ ಯುವತಿಯನ್ನು ಸಾಮೂಹಿಕ ಅತ್ಯಾಚಾರ ಮಾಡಲಾಗಿತ್ತು. ಯುವತಿ ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಗಾಯಗಳು, ಮೂಳೆ ಮುರಿತ ಸೇರಿದಂತೆ ನಾಲಿಗೆ ತುಂಡಾಗಿ ಅತ್ಯಂತ ಗಂಭೀರ ಸ್ಥಿತಿಯಲ್ಲಿ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಎನ್ನಲಾಗಿದೆ.
ಇದನ್ನೂ ಓದಿ: ಹತ್ರಾಸ್ ಗ್ಯಾಂಗ್ ರೇಪ್ ಪ್ರಕರಣ : ಸಿಬಿಐ ತನಿಖೆಗೆ ಒತ್ತಾಯಿಸಿದ ಸಂತ್ರಸ್ತೆಯ ತಂದೆ!