ಕೃಷಿ ಕಾನೂನುಗಳನ್ನು ಮುಂದಿನ ಆದೇಶದವರೆಗೆ ಸ್ಥಗಿತಗೊಳಿಸಿದ್ದೇವೆ: ಸುಪ್ರೀಂ ಕೋರ್ಟ್
ಮೂರು ಕೃಷಿ ಕಾನೂನುಗಳ ಅನುಷ್ಠಾನವನ್ನು ಮುಂದಿನ ಆದೇಶದವರೆಗೆ ಸ್ಥಗಿತಗೊಳಿಸಲಿದ್ದೇವೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಎ ಬೋಬ್ಡೆ ಹೇಳಿದ್ದಾರೆ.
ವಿವಾದಾತ್ಮಕ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಕುರಿತ ಪ್ರಕರಣದ ತೀರ್ಪು ನೀಡುವ ವೇಳೆ “ನಾವು ಇಲ್ಲಿರುವುದು ಸಮಸ್ಯೆಯನ್ನು ಬಗೆಹರಿಸಲಿಕ್ಕೆ. ಹಾಗಾಗಿ ಪ್ರತಿಭಟನಾಕಾರರು ಮತ್ತು ಕೇಂದ್ರ ಸರ್ಕಾರದ ನಡುವೆ ಮಾತುಕತೆ ನಡೆಸಲು ಸಮಿತಿಯನ್ನು ರಚಿಸುತ್ತೇವೆ” ಎಂದು ಬೋಬ್ಡೆ ತಿಳಿಸಿದ್ದಾರೆ.
ಕೃಷಿ ಅರ್ಥಶಾಸ್ತ್ರಜ್ಞ ಅಶೋಕ್ ಗುಲಾಟಿ, ಹರ್ಸಿಮ್ರತ್ ಮನ್, ಪ್ರಮೋದ್ ಜೋಶಿ ಸೇರಿದಂತೆ ಹಲವು ಜನ ಸಮಿತಿಯಲ್ಲಿರುತ್ತಾರೆ ಎಂದು ಸಿಜೆಐ ನೇತೃತ್ವದ ನ್ಯಾಯಪೀಠ ಉಲ್ಲೇಖಿಸಿದೆ. ಸುಪ್ರೀಂನ ಪೂರ್ಣ ಆದೇಶ ಸಂಜೆಯ ವೇಳೆಗೆ ಲಭ್ಯವಾಗಲಿದೆ.
“ನಾವು ಸಮಸ್ಯೆಯನ್ನು ಬಗೆಹರಿಸಲು ಇಲ್ಲಿದ್ದೇವೆ. ನೀವು ಅನಿರ್ದಿಷ್ಠಾವಧಿ ಪ್ರತಿಭಟನೆ ಮಾಡಲು ಬಯಸಿದರೆ ಮಾಡಿ. ಈ ಸಮಸ್ಯೆಯನ್ನು ಬಗೆಹರಿಸಬೇಕೆಂಬ ನೈಜ ಕಾಳಜಿಯಿರುವವರು ಸಮಿತಿಯಲ್ಲಿರುತ್ತಾರೆ. ಈ ಸಮಿತಿಯು ಕೃಷಿ ಕಾನೂನುಗಳನ್ನು ಅಧ್ಯಯನ ಮಾಡುತ್ತದೆಯೇ ವಿನಾಃ ನಿಮ್ಮನ್ನು ಶಿಕ್ಷಿಸುವುದಿಲ್ಲ ಅಥವಾ ಯಾವುದೇ ಆದೇಶ ನೀಡುವುದಿಲ್ಲ. ನಾವು ಹೋರಾಟನಿರತ ಸಂಘಟನೆಗಳ ಅಭಿಪ್ರಾಯಗಳನ್ನು ಗಣನೆಗೆ ತೆಗೆದುಕೊಳ್ಳುತ್ತೇವೆ. ಇದರಿಂದ ಕಾಯ್ದೆಗಳ ಬಗ್ಗೆ ಸ್ಪಷ್ಟ ಚಿತ್ರಣ ಸಿಗುತ್ತದೆ” ಎಂದು ಸಿಜೆಐ ಹೇಳಿದ್ದಾರೆ.
ಗೌರವಾನ್ವಿತ ಸುಪ್ರೀಂ ಕೋರ್ಟ್ ಕೃಷಿ ಕಾಯ್ದೆಗಳ ಜಾರಿಯನ್ನು ತಡೆಯುವ ಸುಪ್ರೀಂ ಕೋರ್ಟ್ ಸಲಹೆಯನ್ನು ಎಲ್ಲ ಸಂಘಟನೆಗಳು ಸ್ವಾಗತ್ತಿಸುತ್ತವೆ. ಆದರೆ ರೈತ ಸಂಘಟನೆಗಳು ಸಾಮೂಹಿಕವಾಗಿ ಹಾಗೂ ವ್ಯಕ್ತಿಗತವಾಗಿ ಸುಪ್ರೀಂ ಕೋರ್ಟ್ ನೇಮಿಸಲಿರುವ ಸಮಿತಿಯ ಸಭೆಗಳಲ್ಲಿ ಭಾಗವಹಿಸುವುದಿಲ್ಲ ಎಂದು ರೈತ ಮುಖಂಡರ ಹೇಳಿಕೆಯ ಹಿನ್ನೆಲೆಯಲ್ಲಿ ಸಿಜೆಐ ಮೇಲಿನ ಮಾತುಗಳನ್ನಾಡಿದ್ದಾರೆ.
ಇದನ್ನು ಓದಿ: ಸುಪ್ರೀಂ ಕೋರ್ಟ್ ನೇಮಿಸುವ ಯಾವ ಸಮಿತಿಗೂ ನಾವು ಹೋಗುವುದಿಲ್ಲ: ಹೋರಾಟನಿರತ ರೈತರು