ರೈತರಿಗೆ ಹೆದರಿದ ಸರ್ಕಾರ; ಉತ್ತರ ಪ್ರದೇಶದಲ್ಲಿ ಟ್ರಾಕ್ಟರ್‌ಗಳಿಗೆ ಡೀಸೆಲ್‌ ಹಾಕದಂತೆ ಆದೇಶ!

ಜನವರಿ 26 ರ ಗಣರಾಜ್ಯೋತ್ಸವದಂದು ದೆಹಲಿಯಲ್ಲಿ ಬೃಹತ್ ಟ್ರ್ಯಾಕ್ಟರ್ ಪರೇಡ್ ನಡೆಸುವ ಮೂಲಕ ಇಡೀ ಪ್ರಪಂಚಕ್ಕೆ ತಮ್ಮ ಹೋರಾಟದ ಶಕ್ತಿ ಸಾರಲು ರೈತರು ಹೊರಟಿದ್ದಾರೆ. ಆದರೆ ಅದನ್ನು ಶತಾಯಗತಾಯ ತಡೆಯಲು ಸರ್ಕಾರ ಮುಂದಾಗಿದೆ. ದೆಹಲಿಯೆಡೆಗೆ ಸಾಗುತ್ತಿರುವ ಟ್ರ್ಯಾಕ್ಟರ್‌ಗಳಿಗೆ ಡೀಸೆಲ್ ಹಾಕದಂತೆ ಸಿಎಂ ಯೋಗಿ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ಆದೇಶಿಸಿದೆ ಎಂದು ಹಿಂದುಸ್ತಾನ್ ಟೈಮ್ಸ್ ವರದಿ ಮಾಡಿದೆ.

ಟ್ರ್ಯಾಕ್ಟರ್‌ಗಳಿಗೆ ಡೀಸೆಲ್ ಹಾಕುವುದಿಲ್ಲ ಮತ್ತು ಕ್ಯಾನ್/ಬಾಟಲಿಗಳಿಗೆ ಡೀಸೆಲ್ ತುಂಬಿಕೊಡುವುದಿಲ್ಲ ಎಂದು ಕೆಲ ಪೆಟ್ರೋಲ್ ಬಂಕ್‌ಗಳಲ್ಲಿ ನೋಟಿಸ್ ಅಂಟಿಸಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಈ ಸಂದರ್ಭದಲ್ಲಿಯೆ ಟ್ರ್ಯಾಕ್ಟರ್‌ಗಳಿಗೆ ಡೀಸೆಲ್ ಹಾಕಬೇಡಿ ಎಂದು ಎಲ್ಲಾ ಪೆಟ್ರೋಲ್ ಪಂಪ್‌ಗಳಿಗೆ ಉತ್ತರ ಪ್ರದೇಶ ಸರ್ಕಾರ ಆದೇಶಿಸಿರುವುದು ರೈತರ ಆಕ್ರೋಶ ಕೆರಳುವಂತೆ ಮಾಡಿದೆ.

ಸರ್ಕಾರದ ಆದೇಶ ಹೊರಬಿದ್ದ ಕೂಡಲೇ ರೈತರು ಇರುವಲ್ಲಿಯೇ ರಸ್ತೆಗಳನ್ನು ತಡೆದು ಬೃಹತ್ ಪ್ರತಿಭಟನೆ ನಡೆಸಬೇಕೆಂದು ರೈತ ಮುಖಂಡ ರಾಕೇಶ್ ಟಿಕಾಯತ್ ಕರೆ ನೀಡಿದ್ದಾರೆ. ಹಳ್ಳಿಗಳು ಮತ್ತು ನಗರಗಳು ಎಲ್ಲೆಡೆ ರಸ್ತೆ ಬಂದ್ ಮಾಡಿ ಸರ್ಕಾರಕ್ಕೆ ಬಿಸಿಮುಟ್ಟಿಸಬೇಕೆಂದು ಅವರು ರೈತರಿಗೆ ತಿಳಿಸಿದ್ದಾರೆ.

ಇನ್ನೊಂದೆಡೆ ಟ್ರ್ಯಾಕ್ಟರ್ ರ್ಯಾಲಿಗೆ ಕೇವಲ ಎರಡು ದಿನ ಬಾಕಿ ಇದ್ದರೂ ಪೊಲೀಸರು ಅನುಮತಿ ನೀಡಿಲ್ಲ ಎಂದಿದ್ದಾರೆ. ಉದ್ದೇಶಿತ ರ್‍ಯಾಲಿಗೆ ತಾವು ಪೊಲೀಸ್‌‌‌ ಅನುಮತಿ ಪಡೆದಿದ್ದೇವೆ ಎಂದು ಶನಿವಾರ ರೈತರು ಹೇಳಿಕೊಂಡಿದ್ದರು. ಆದರೆ ಇದನ್ನು ದೆಹಲಿ ಪೊಲೀಸರು ವಿರೋಧಿಸಿದ್ದು, “ರೈತರು ನಮಗೆ ರ್‍ಯಾಲಿ ನಡೆಯುವ ಮಾರ್ಗದ ಬಗ್ಗೆ ಲಿಖಿತವಾಗಿ ತಿಳಿಸಿಲ್ಲ. ಅದನ್ನು ಲಿಖಿತವಾಗಿ ಸ್ವೀಕರಿಸಿದ ನಂತರ ಈ ಬಗ್ಗೆ ತಿಳಿಸುತ್ತೇವೆ” ಎಂದು ದೆಹಲಿ ಪೊಲೀಸ್ ಆಯುಕ್ತ ಎಸ್.ಎನ್. ಶ್ರೀವಾಸ್ತವ ಹೇಳಿದ್ದಾರೆ.

ದೆಹಲಿ ಒಳಕ್ಕೆ ಬರುವ ರಿಂಗ್ ರೋಡ್ ನಲ್ಲಿಯೇ ರೈತರ ಟ್ರಾಕ್ಟರ್ ರ್ಯಾಲಿ ನಡೆಯುತ್ತದೆ ಮತ್ತು ಅದು ಕಿಸಾನ್‌ಘಾಟ್‌ವರೆಗೂ ಮುಂದುವರೆಯಲಿದೆ ಎಂದು ಕ್ರಾಂತಿಕಾರಿ ಕಿಸಾನ್ ಯೂನಿಯನ್ ಮುಖ್ಯಸ್ಥ ದರ್ಶನ್ ಪಾಲ್ ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಗಣರಾಜ್ಯೋತ್ಸವ ನಡೆಯುವ ಸಮಯದಲ್ಲಿಯೇ ರೈತರ ಟ್ರಾಕ್ಟರ್ ಪೆರೇಡ್ ಸಹ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

Read Also: ಪೊಲೀಸರೇ ಸರ್ಕಾರದ ಕೈಗೊಂಬೆಯಾಗಬೇಡಿ; ರೈತರ ಟ್ರಾಕ್ಟರ್ ಜಪ್ತಿ ಮಾಡಿದ್ರೆ ಬಿಡಿಸಲು ನಾವೇ ಬರ್ತೀವಿ: ಪೊಲೀಸರಿಗೆ ಡಿಕೆಶಿ ಎಚ್ಚರಿಕೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights