ಪರಿಷತ್‌ನಲ್ಲಿ BJP-JDS ಮೈತ್ರಿ: ಹೊರಟ್ಟಿಗೆ ಸಭಾಪತಿ ಸ್ಥಾನ? ಉಪಸಭಾಪತಿಗೆ BJPಯ ಮೂವರು ಮುಂಚೂಣಿಯಲ್ಲಿ!
ಕಾಂಗ್ರೆಸ್ ಪಾಳಯದೊಂದಿಗೆ ಮೈತ್ರಿ ಮಾಡಿಕೊಂಡು, ಸರ್ಕಾರ ಉರುಳಿದ ನಂತರ ಸಿಂಗಲ್ ಅಗಿದ್ದ ಜೆಡಿಎಸ್, ಇದೀಗ ಬಿಜೆಪಿಯ ಸಖ್ಯ ಮಾಡಿಕೊಳ್ಳುತ್ತಿದೆ. ಲಾಕ್‌ಡೌನ್ ಸಮಯದಲ್ಲಿ ನಡೆದ ಅಧಿವೇಶನದಲ್ಲಿ ಭೂಸುಧಾರಣಾ ತಿದ್ದುಪಡಿ ಮತ್ತು ಎಪಿಎಂಸಿ ತಿದ್ದುಪಡಿ ಕಾಯ್ದೆಗಳು ರೈತ ವಿರೋಧಿಯಾಗಿವೆ ಎಂದು ವಿರೋಧಿಸಿದ್ದ ಜೆಡಿಎಸ್, ಕಳೆದ ಅಧಿವೇಶನದಲ್ಲಿ ಅದೇ ಮಸೂದೆಗಳಿಗೆ ಬೆಂಬಲ ನೀಡಿತ್ತು. ನಂತರದಲ್ಲಿ ಬಿಜೆಪಿ-ಜೆಡಿಎಸ್ ದೋಸ್ತಿ ಮುಂದುವರೆಯುತ್ತಲೇ ಇದ್ದು, ಇದೀಗ ಪರಿಷತ್‌ನಲ್ಲಿ ದೋಸ್ತಿ ಬೆಳೆಸಿದೆ.
ವಿಧಾನಪರಿಷತ್ ಸಭಾಪತಿ ಪ್ರತಾಪ್‍ಚಂದ್ರ ಶೆಟ್ಟಿ ವಿರುದ್ಧ ಬಿಜೆಪಿಯು ಅವಿಶ್ವಾಸ ನಿರ್ಣಯ ಮಂಡಿಸಿದ್ದು, ಇದಕ್ಕೆ ಜೆಡಿಎಸ್ ಬೆಂಬಲ ನೀಡಿದೆ. ಹೀಗಾಗಿ ಹಾಲಿ ಸಭಾಪತಿಗಳು ರಾಜೀನಾಮೆ ನೀಡಬಹುದಾದ ಸಾಧ್ಯತೆ ಹೆಚ್ಚಾಗಿದೆ. ತೆರವಾಗು ಸಭಾಪತಿ ಸ್ಥಾನವನ್ನು ಜೆಡಿಎಸ್‌ಗೆ ನೀಡಲು ಬಿಜೆಪಿ ತೀರ್ಮಾಸಿದೆ. ಅಲ್ಲದೆ, ಉಪಸಭಾಪತಿ ಸ್ಥಾನವನ್ನು ತಾನು ಪಡೆದುಕೊಳ್ಳಲು ಮುಂದಾಗಿದೆ.
ಹೀಗಾಗಿ, ಸದನದ ಹಿರಿಯ ಸದಸ್ಯ ಹಾಗೂ ಜೆಡಿಎಸ್ ಮುಖಂಡ ಬಸವರಾಜ್ ಹೊರಟ್ಟಿ ವಿಧಾನಪರಿಷತ್‍ನ ನೂತನ ಸಭಾಪತಿ ಯಾಗುವುದು ಬಹುತೇಕ ಖಚಿತವಾಗಿದೆ. ಉಪಸಭಾಪತಿ ಸ್ಥಾನಕ್ಕೆ ಸದಸ್ಯರಾದ ಶಶಿಲ್ ನಮೋಶಿ, ಅರುಣ್ ಶಹಾಪುರ್, ಮಹಾಂತೇಶ್ ಕವಟಗಿಮಠ ಹೆಸರುಗಳು ಮುಂಚೂಣಿಯಲ್ಲಿವೆ.
ಇದನ್ನೂ ಓದಿ: ಅಧಿಕಾರಕ್ಕಾಗಿ BJP-JDS ನಡುವೆ ಒಪ್ಪಂದ; ಧರ್ಮಸ್ಥಳದಲ್ಲಿ ಆಣೆ-ಪ್ರಮಾಣ!
ನಿನ್ನೆ (ಬುಧವಾರ) ಬೆಳಗ್ಗೆ ಸಿಎಂ ನಿವಾಸ ಕಾವೇರಿಗೆ ಭೇಟಿ ನೀಡಿದ್ದ ಬಸವರಾಜ್ ಹೊರಟ್ಟಿ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಜೊತೆ ಮಾತುಕತೆ ನಡೆಸಿದ್ದು, ಸಭಾಪತಿ ಸ್ಥಾನವನ್ನು ಜೆಡಿಎಸ್‍ಗೆ ಬಿಟ್ಟುಕೊಡಬೇಕೆಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಇದೇ 29ರಂದು ಉಪಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಈಗಾಗಲೇ ಸಭಾಪತಿ ಪ್ರತಾಪ್‍ಚಂದ್ರಶೆಟ್ಟಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲಾಗಿದೆ. ನಮಗೆ ಸಭಾಪತಿ ಸ್ಥಾನ ನೀಡಬೇಕೆಂದು ಮನವಿ ಮಾಡಿದ್ದೇವೆ ಎಂದು ಹೊರಟ್ಟಿ ಹೇಳಿದ್ದಾರೆ.
ಈವರೆಗೂ ಬಿಎಸ್‍ವೈ ಅವರಿಂದ ಯಾವುದೇ ರೀತಿಯ ಸ್ಪಷ್ಟ ಭರವಸೆ ಸಿಕ್ಕಿಲ್ಲ. ಅವರು ಏನೇನು ಮಾಡುತ್ತಾರೆ ಎಂಬುದನ್ನು ಕಾದು ನೋಡುತ್ತೇವೆ. ನಮಗೆ ಸಭಾಪತಿ ಸ್ಥಾನವನ್ನು ನೀಡಬೇಕೆಂದು ಪಕ್ಷದ ವೇದಿಕೆಯಲ್ಲಿ ತೀರ್ಮಾನವಾಗಿದೆ ಎಂದು ಹೇಳಿದ್ದಾರೆ.
ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಜೊತೆ ಹೋಗುವ ಪ್ರಶ್ನೆಯೇ ಇಲ್ಲ. ಬಿಜೆಪಿಯವರು ಸಭಾಪತಿ ಸ್ಥಾನವನ್ನು ನಮಗೆ ನೀಡಿದರೆ ಉಪ ಸಭಾಪತಿ ಚುನಾವಣೆಯಲ್ಲಿ ನಾವು ಬಿಜೆಪಿಗೆ ಬೆಂಬಲ ಕೊಡುತ್ತೇವೆ. ಅವರು ತಮ್ಮ ರಾಷ್ಟ್ರ ನಾಯಕರೊಂದಿಗೆ ಚರ್ಚಿಸಿ ತೀರ್ಮಾಸಲಿದ್ದಾರೆ. ಸದ್ಯದಲ್ಲೇ ನಿರ್ಧಾರ ಗೊತ್ತಾಗಲಿದೆ ಎಂದು ಅವರು ಹೇಳಿದ್ದಾರೆ.
ವಿಧಾನಪರಿಷತ್‍ನ ಒಟ್ಟು 75 ಸ್ಥಾನಗಳಲ್ಲಿ ಆಡಳಿತಾರೂಢ ಬಿಜೆಪಿ 33, ಕಾಂಗ್ರೆಸ್ 27, ಜೆಡಿಎಸ್ 13, ಒಬ್ಬ ಪಕ್ಷೇತರ ಹಾಗೂ ಓರ್ವ ಸಭಾಪತಿ ಇದ್ದಾರೆ. ಯಾವುದೇ ಪಕ್ಷ ಸಭಾಪತಿ ಸ್ಥಾನವನ್ನು ಅಲಂಕರಿಸಬೇಕಾದರೆ 38 ಸ್ಥಾನಗಳನ್ನು ಪಡೆಯಬೇಕು.
ಇದನ್ನೂ ಓದಿ: ಯಡಿಯೂರಪ್ಪ ವಿರುದ್ಧ ಬಂಡಾಯ; ಸಿಎಂ ಸ್ಥಾನ ಅಸ್ಥಿರಗೊಳಿಸಲು BJPಯಲ್ಲೇ ಸಂಚು!