ಯಡಿಯೂರಪ್ಪ ವಿರುದ್ಧ ಬಂಡಾಯ; ಸಿಎಂ ಸ್ಥಾನ ಅಸ್ಥಿರಗೊಳಿಸಲು BJPಯಲ್ಲೇ ಸಂಚು!
ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿಯಾಗಿಯೇ ಇದೆ. ಯಾರಲ್ಲೂ ಭಿನ್ನಾಭಿಪ್ರಾಯವಿಲ್ಲ. ಎಲ್ಲರೂ ಸಿಎಂ ಯಡಿಯೂರಪ್ಪ ಅವರ ಜೊತೆಗಿದ್ದೇವೆ ಎಂದು ರಾಜ್ಯ ಬಿಜೆಪಿ ನಾಯಕರು ಬಹಿರಂಗವಾಗಿ ಹೇಳಿಕೆ ಕೊಡುತ್ತಿದ್ದರೂ, ಆಂತರಿಕ ಬಿನ್ನಾಭಿಪ್ರಾಯಗಳು ಒಳಗೊಳಗೇ ಕೆಲಸ ಮಾಡುತ್ತಿವೆ ಎಂದು ಸಿಎಂ ಬಿಎಸ್‌ವೈ ಆಪ್ತ ಮೂಲಗಳು ತಿಳಿಸಿವೆ.
ಸಚಿವ ಸಂಪುಟ ಪುನರ್ ರಚನೆಯಾದ ನಂತರ, ಇದೂ ವರೆಗೆ ನಾಲ್ಕು ಬಾರಿ ಖಾತೆಗಳನ್ನು ಬದಲಿಸಲಾಗಿದೆ. ಇದು ಬಿಎಸ್‌ವೈ ಗೊಂದಲ ಮತ್ತು ಪೀಕಲಾಟಕ್ಕೆ ಕಾರಣವಾಗಿದೆ. ಖಾತೆ ಹಂಚಿಕೆಯಲ್ಲಿ ತಲೆ ಕೆಡಿಸಿಕೊಂಡು ಎಣಗಾಡುತ್ತಿರುವ ಯಡಿಯೂರಪ್ಪನವರನ್ನು ನೋಡಿ, ಬಿಜೆಪಿಯಲ್ಲಿರುವ ಅವರ ಒಂದು ವಿರೋಧಿ ಗುಂಪು ಖುಷಿಪಡುತ್ತಿದೆ ಎಂದು ಸಿಎಂ ಆಪ್ತ ಮೂಲಗಳು ತಿಳಿಸಿರುವುದಾಗಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
2019ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ, ಮೈತ್ರಿ ಸರ್ಕಾರವನ್ನು ಉರುಳಿಸಿ, ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ತೊರೆದು ಬಂದ 17 ಮಂದಿ ವಲಸಿಗರಿಗೆ ಮಂತ್ರಿಗಿರಿ ನೀಡುವ ಆಮಿಷ ವೊಡ್ಡಲಾಗಿತ್ತು. ಹೀಗಾಗಿ ಅವರಿಗೆ ಸಂಪುಟದಲ್ಲಿ ಮೊದಲ ಆದ್ಯತೆ ನೀಡಿದರೂ, ಎಲ್ಲರಿಗೂ ಮಂತ್ರಿಗಿರಿ ಸಿಕ್ಕಿಲ್ಲ. ಹೀಗಾಗಿ ಸಚಿವ ಸ್ಥಾನ ಸಿಗದೇ ಇರುವವರು ಬಿಎಸ್‌ವೈ ವಿರುದ್ದ ಕಿಡಿ ಕಾರುತ್ತಿದ್ದಾರೆ.
ಇದನ್ನೂ ಓದಿ: ರಾಜ್ಯ BJPಗೆ ಮತ್ತೊಂದು ಸವಾಲು: ಕೋರ್ ಕಮಿಟಿ ಪುನರ್‌ರಚನೆಗೆ ಪರ-ವಿರೋಧ!
ಸಂಪುಟ ವಿಸ್ತರಣೆಯ ವೇಳೆ ಮಂತ್ರಿಗಿರಿ ಸಿಗದೇ ಬೇಸರಗೊಂಡಿರುವ, ಬಂಡಾಯ ಎಂದಿರುವವರನ್ನು ಸಿಎಂ ವಿರೋಧಿ ಗುಂಪು ಮತ್ತಷ್ಟು ಪ್ರಚೋದಿಸುತ್ತಿದೆ. ಇದರಿಂದ ಅತೃಪ್ತರ ಕೋಪ ಮತ್ತಷ್ಟು ಹೆಚ್ಚಾಗಬಹುದು. ಇದು ಯಡಿಯೂರಪ್ಪನವರಿಗೆ ತೊಡಕಾಗಬಹುದು ಎಂದು ಸಿಎಂ ಆಪ್ತರು ಆತಂಕಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಇದೀಗ ಎಂಎಲ್‌ಸಿ ಆಗಿರುವ ಹಳ್ಳಿಹಕ್ಕಿ ವಿಶ್ವನಾಥ್‌ಗೆ ಮಂತ್ರಿ ಸ್ಥಾನ ಸಿಕ್ಕಿಲ್ಲ. ಅಲ್ಲದೆ, ನಾಗೇಶ್ ಅವರಿಗೆ ಸಿಚಿವ ಸ್ಥಾನಕ್ಕೆ ರಾಜೀನಾಮೆ ಪಡೆದುಕೊಳ್ಳಲಾಗಿದೆ. ಇನ್ನು ಬಿಜೆಪಿ ಮೂಲ ಶಾಸಕರಾದ ರೇಣುಕಾಚಾರ್ಯ, ಬಸನಗೌಡ ಯತ್ನಾಳ್ ಸೇರಿದಂತೆ ಇನ್ನೂ ಹಲವರು ತಮಗೆ ಮಂತ್ರಿಗಿರಿ ನೀಡದೇ ಇರುವುದರಿಂದಾಗಿ ಸಿಟ್ಟಾಗಿದ್ದಾರೆ. ಯಡಿಯೂರಪ್ಪ ಮೇಲೆ ತೀವ್ರ ಒತ್ತಡ ಹಾಕಲಾಗುತ್ತಿದೆ. ಇದಲ್ಲದೆ, ಪ್ರತಾಪ್ ಗೌಡ ಪಾಟೀಲ್ ಹೊರತುಪಡಿಸಿದಂತೆ ಉಳಿದ ಎಲ್ಲಾ ಬಂಡಾಯಗಾರರು ಶಾಸಕರಾಗಿದ್ದಾರೆ. ಪ್ರತಾಪ್ ಗೌಡ ಪಾಟೀಲ್ ಕೂಡಾ ಶೀಘ್ರದಲ್ಲಿಯೇ ಚುನಾವಣೆ ಎದುರಿಸಲಿದ್ದಾರೆ.
ಇದೆಲ್ಲವೂ, ಸಿಎಂ ಬಿಎಸ್‌ವೈ ಅವರಿಗೆ ನುಂಗಲೂ-ಅರಗಿಸಿಕೊಳ್ಳಲೂ ಆಗದ ತುತ್ತಾಗಿ ಉಳಿದಿದೆ. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ವಿರೋಧಿ ಬಣ ಇದನ್ನು ಬಳಸಿಕೊಂಡು ಯಡಿಯೂರಪ್ಪನವರ ಸ್ಥಾನವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದೆ ಎಂದು ಯಡಿಯೂರಪ್ಪ ಬೆಂಬಲಿಗರು ಹೇಳಿರುವುದಾಗಿ ತಿಳಿದುಬಂದಿದೆ.
ಇದನ್ನೂ ಓದಿ: ಅಧಿಕಾರಕ್ಕಾಗಿ BJP-JDS ನಡುವೆ ಒಪ್ಪಂದ; ಧರ್ಮಸ್ಥಳದಲ್ಲಿ ಆಣೆ-ಪ್ರಮಾಣ!

