ಸಿಎಂ ಯಡಿಯೂರಪ್ಪರನ್ನು ಭೇಟಿ ಮಾಡಿದ 40 BJP ಶಾಸಕರು; ಯತ್ನಾಳ್‌ ವಿರುದ್ದ ಕ್ರಮಕ್ಕೆ ಆಗ್ರಹ!

ಬಿಜೆಪಿಯ 40 ಶಾಸಕರು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಸೋಮವಾರ ರಾತ್ರಿ ಭೇಟಿ ಮಾಡಿದ್ದು, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ ಎಂದು ತಿಳಿದುಬಂದಿದೆ.

ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌ ಅವರು ಎಚ್ಚರಿಕೆ ನೀಡಿದ್ದರೂ ಲೆಕ್ಕಿಸದೇ ವಾಗ್ದಾಳಿ ಮುಂದುವರಿಸಿದ್ದಾರೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಪರಿಸ್ಥಿತಿ ಸುಧಾರಿಸದೇ ಇದ್ದರೆ ವರಿಷ್ಠರಿಗೆ ದೂರು ನೀಡುತ್ತೇವೆ ಎಂದು ಹೇಳಿದ್ದಾರೆ.

ಯತ್ನಾಳ್ ಅವರಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುತ್ತಿದೆ. ಇದು ಹೀಗೆ ಮುಂದುವರಿದರೇ ಮುಂದಿನ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಿದ್ದಾರೆ.

ದಿನಕ್ಕೊಂದು ಹೇಳಿಕೆಗಳನ್ನು ನೀಡಿ ಮುಖ್ಯಮಂತ್ರಿಯವರಿಗೆ ಮುಜುಗರ ತರುತ್ತಿದ್ದಾರೆ. ಇದು ವಿರೋಧಿಗಳಿಗೆ ಅಸ್ತ್ರವಾಗಿದೆ. ಇದರಿಂದ ವಿಧಾನಸಭೆಯಲ್ಲೂ ಸರ್ಕಾರ ಇಕ್ಕಟ್ಟಿಗೆ ಸಿಲುಕುವಂತಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವಿರುದ್ಧ ಹೇಳಿಕೆ ನೀಡುತ್ತಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರಿಗೆ ದೂರು ನೀಡುವುದಾಗಿ ಶಾಸಕರು ಹೇಳಿದ್ದಾರೆ.

ಇನ್ನು ತಮ್ಮ ಕ್ಷೇತ್ರಗಳಿಗೆ ಸಂಬಂಧಿಸಿದ ಅನುದಾನ ಬಿಡುಗಡೆ ಮಾಡುವಂತೆ ಸಿಎಂ ಬಳಿ ಶಾಸಕರು ಮನವಿ ಮಾಡಿದ್ದಾರೆ.ಕೆಲವು ಸಚಿವರ ಕಾರ್ಯವೈಖರಿಯ ಬಗ್ಗೆಯೂ ಶಾಸಕರು ಮುಖ್ಯಮಂತ್ರಿಯವರಿಗೆ ದೂರು ನೀಡಿದರು. ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ಕೆಲಸಗಳನ್ನು ಮಾಡಿಕೊಡುತ್ತಿಲ್ಲ. ಪಕ್ಷದ ಶಾಸಕರ ಬಗ್ಗೆ ನಿರ್ಲಕ್ಷ್ಯ ತಾಳಿದ್ದಾರೆ. ವಿಶೇಷವಾಗಿ ಗ್ರಾಮೀಣಾಭಿವೃದ್ಧಿ ಇಲಾಖೆಯ ಕೆಲಸಗಳು ಆಗುತ್ತಿಲ್ಲ ಎಂದು ದೂರಿದರು.

ಮಾರ್ಚ್ 25 ರಂದು ಎಲ್ಲಾ ಸಚಿವರು ಮತ್ತು ಶಾಸಕರ ಸಭೆಯನ್ನು ಕರೆದು ಸಮಸ್ಯೆ ಬಗೆಹರಿಸುವುದಾಗಿ ಸಿಎಂ ಭರವಸೆ ನೀಡಿದರು. ಕೆಲವು ದಿನಗಳ ಹಿಂದೆ ಇದೇ ವಿಷಯಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ಧರಣಿ ನಡೆಸುವುದಾಗಿ ಜೆಡಿಎಸ್ ಶಾಸಕ ಎಚ್.ಡಿ ರೇವಣ್ಣ ಬೆದರಿಕೆ ಹಾಕಿದ್ದರು, ಆದರೆ ಸಿಎಂ ಮದ್ಯ ಪ್ರವೇಶದಿಂದ ಧರಣಿ ಕೈ ಬಿಡಲಾಯಿತು.

ಇದನ್ನೂ ಓದಿ: ರಮೇಶ್ ಸಿಡಿಯನ್ನ ಹನಿ ಟ್ರ್ಯಾಪ್ ಅಂತ ಹೇಳಿದ್ರೆ ಹನಿ ತಿಂದವರು ಯಾರು? ಡಿಕೆಶಿ ಪ್ರಶ್ನೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights