ಬಸವ ಕಲ್ಯಾಣದಲ್ಲಿ ಚತುಷ್ಕೋನ ಸ್ಪರ್ಧೆ: ವರ್ಕ್‌ ಆಗತ್ತಾ ಸ್ವಾಭಿಮಾನ, ಜಾತಿ ರಾಜಕಾರಣ!

ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಚಚುನಾವಣಾ ಕಣದಲ್ಲಿ 10ಕ್ಕೂ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇವರಲ್ಲಿ ಮುಖ್ಯವಾಗಿ ನಾಲ್ಕು ಅಭ್ಯರ್ಥಿಗಳ ನಡುವೆ ಹೋರಾಟ ನಡೆಯಲಿದ್ದು, ಅನುಕಂಪದ ಅಲೆ, ಜಾತಿ ಸಮೀಕರಣ ಮತ್ತು ಸ್ವಾಭಿಮಾನ ಎಂಬ ಚರ್ಚೆಗಳು ಜೋರಾಗಿವೆ. ಇವುಗಳಲ್ಲಿ ಯಾವುದು ವರ್ಕ್‌ ಆಗತ್ತೆ, ಮತದಾರರು ಯಾರ ಕೈ ಹಿಡಿಯಲಿದ್ದಾರೆ ಎಂಬುದು ಚುನಾವಣೆಯ ನಂತರವೇ ತಿಳಿಯಲಿದೆ.

ಕಳೆದ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಬಿ.ನಾರಾಯಣರಾವ್‌ ಅವರು ಗೆಲವು ಸಾಧಿಸಿದ್ದರು. 35 ವರ್ಷಗಳ ಬಳಿಕ ಬಸವ ಕಲ್ಯಾಣದ ಜನರು ಕಾಂಗ್ರೆಸ್‌ ಕೈ ಹಿಡಿದಿದ್ದರು. ಆದರೆ, ಆರೋಗ್ಯ ಸಮಸ್ಯೆಯಿಂದ ತಮ್ಮ ಅಧಿಕಾರಾವಧಿ ಮುಗಿಯುವುದಕ್ಕೂ ಮೊದಲೇ ನಾರಾಯಣರಾವ್‌ ನಿಧನರಾದರು.

ಹೀಗಾಗಿ, ಈ ಬಾರಿ ನಾರಾಯಣರಾವ್‌ ಅವರ ಪತ್ನಿ ಮಾಲಾ ಅವರು ಕಣಕ್ಕಿಳಿದಿದ್ದಾರೆ. ಹಾಲಿ ಶಾಸಕರಾಗಿದ್ದ ನಾರಾಯಣರಾವ್‌ ಅವರ ಸಾವಿನ ಬಗೆಗಿನ ಅನುಕಂಪವು ಮಾಲಾ ಅವರಿಗೆ ಒಲಿಯಬಹುದು ಎಂದು ಕಾಂಗ್ರೆಸ್‌ ಲೆಕ್ಕಚಾರ ಹಾಕಿದೆ. ಅಲ್ಲದೆ, ಪರಿಶಿಷ್ಟ ಸಮುದಾಯ, ಮುಸ್ಲಿಂ ಹಾಗೂ ಇತರೆ ಹಿಂದುಳಿದ ವರ್ಗಗಳ ಮತಗಳನ್ನು ಸೆಳೆಯುವ ತಂತ್ರಗಾರಿಕೆಯನ್ನೂ ಕಾಂಗ್ರೆಸ್‌ ನಡೆಸುತ್ತಿದೆ.

ಕಾಂಗ್ರೆಸ್‌ ಪಕ್ಷದ ವರಿಷ್ಠರು ವಿವಿಧ ಸಮುದಾಯಗಳ ಮುಖಂಡರನ್ನು ಕರೆಸಿ ಪ್ರಚಾರ ಸಭೆಗಳನ್ನು ನಡೆಸುವ ಮೂಲಕ ಮತದಾರರ ಮೇಲೆ ಪ್ರಭಾವ ಬೀರಲು ಯತ್ನಿಸುತ್ತಿದ್ದಾರೆ. ಮುಖಂಡರು ಗ್ರಾಮಗಳಲ್ಲೇ ವಾಸ್ತವ್ಯ ಮಾಡಿ ಪ್ರಚಾರ ಕೈಗೊಳ್ಳುತ್ತಿರುವುದು ಮಾಲಾ ಅವರ ಆತ್ಮವಿಶ್ವಾಸ ಹೆಚ್ಚಿಸಿದೆ.

ಇನ್ನೊಂದೆಡೆ, ಕಳೆದ ಚುನಾವಣೆಯ ಸಂದರ್ಭದಲ್ಲಿ ಜೆಡಿಎಸ್‌ ತೊರೆದು ಬಿಜೆಪಿ ಸೇರಿ, ಬಿಜೆಪಿಯ ಅಭ್ಯರ್ಥಿಯಾಗಿ ಸೋಲನುಭವಿಸಿದ್ದ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಅವರಿಗೆ ಈ ಬಾರಿ ಬಿಜೆಪಿ ಟಿಕೆಟ್‌ ನಿರಾಕರಿಸಿದೆ. ಉಪಚುನಾವಣೆಗೆ ಪ್ರಬಲ ಆಕಾಂಕ್ಷಿಯಾಗಿದ್ದ ಖೂಬಾ ಅವರಿಗೆ ಬಿಜೆಪಿ ಟಿಕೆಟ್‌ ನೀಡದೇ ಇರುವುದರಿಂದ ಸಿಟ್ಟಗಿದ್ದಾರೆ. ಹೀಗಾಗಿ ‘ಬಸವಕಲ್ಯಾಣ ಸ್ವಾಭಿಮಾನಿ ಬಳಗ’ ಎಂಬ ವೇದಿಕೆಯನ್ನು ಕಟ್ಟಿಕೊಂಡು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

ಕ್ಷೇತ್ರದಾದ್ಯಂತ ಸ್ವಾಭಿಮಾನದ ಬಗ್ಗೆ ಪ್ರಚಾರ ನಡೆಸುತ್ತಿದ್ದು, ಸ್ವಾಭಿಮಾನದ ಹೆಸರಿನಲ್ಲಿ ಮತಯಾಚನೆ ಮಾಡುತ್ತಿದ್ದಾರೆ. ಖೂಬಾ ಜೆಡಿಎಸ್‌ನಿಂದ ಎರಡು ಬಾರಿ ಶಾಸಕರಾಗಿದ್ದರು. ಆದರೆ, ಕಳೆದ ಚುನಾವಣೆಯಲ್ಲಿ ಬಿಜೆಪಿ ಸೇರಿದ್ದರು.

ಇನ್ನು ಬಿಜೆಪಿಯು ಕಲಬುರ್ಗಿ ಜಿಲ್ಲೆಯ ಶರಣು ಸಲಗರ ಅವರನ್ನು ಕಣಕ್ಕಿಳಿಸಿದೆ. ಶರಣು ಸಲಗರ ಅವರ ಪತ್ನಿ ಸಾವಿತ್ರಿ ಸಲಗರ ಎರಡು ವರ್ಷಗಳ ಹಿಂದೆ ಬಸವಕಲ್ಯಾಣದ ತಹಶೀಲ್ದಾರರಾಗಿ ನಿಯೋಜನೆಗೊಂಡಿದ್ದರು. ಇತ್ತೀಚಿನ ವರೆಗೂ ಅವರು ಅಲ್ಲಿ ಕಾರ್ಯನಿರ್ವಹಿಸಿದರು. ಎರಡು ವರ್ಷಗಳಿಂದ ಈ ಕ್ಷೇತ್ರದಲ್ಲಿ ಠಿಕಾಣಿ ಹೂಡಿರುವ ಶರಣು ಕ್ಷೇತ್ರ ಸುತ್ತಿ ಲಾಕ್‌ಡೌನ್‌ ಸಮಯದಲ್ಲಿ ‘ಸಮಾಜ ಸೇವೆ’ಯ ಮೂಲಕ ಹೆಸರು ಮಾಡಿದ್ದಾರೆ. ಅದೇ ಕಾರಣಕ್ಕೆ ಅವರಿಗೆ ಟಿಕೆಟ್‌ ನೀಡಲಾಗಿದೆ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ.

ಶರಣು ಹಾಗೂ ಮಲ್ಲಿಕಾರ್ಜುನ ಖೂಬಾ ಇಬ್ಬರೂ ಲಿಂಗಾಯತ ಸಮುದಾಯಕ್ಕೆ ಸೇರಿದವರು. ಬಿಜೆಪಿಗೆ ಲಿಂಗಾಯತರ ಮತ ವಿಭಜನೆಯ ಆತಂಕ ಎದುರಾಗಿದೆ.

ಅಲ್ಲದೆ, ಈ ಕ್ಷೇತ್ರದಲ್ಲಿ ಮುಸ್ಲಿಂ ಮತಗಳ ಸಂಖ್ಯೆ ಹೆಚ್ಚಿನ ಪಾಲು ಹೊಂದಿದೆ. ಇದೂವರೆಗೂ ಬಿ.ನಾರಾಯಣರಾವ್ ಮುಸ್ಲಿಮರಿಗೆ ಆಪ್ತರಾಗಿದ್ದರು. ಅವರ ನಿಧನದಿಂದಾಗಿ ಮುಸ್ಲಿಂ ಮತಗಳನ್ನೂ ಸೆಳೆಯಲು ಜೆಡಿಎಸ್‌ ಮುಸ್ಲಿಂ ಅಭ್ಯರ್ಥಿಯನ್ನೇ ಕಣಕ್ಕಿಳಿಸಿದೆ. 15 ವರ್ಷ ಕಾಂಗ್ರೆಸ್‌ನಲ್ಲಿದ್ದ ಲಾರಿ ಉದ್ಯಮಿ ಸೈಯದ್ ಯಸ್ರಬ್ ಅಲಿ ಖಾದ್ರಿ ಅವರನ್ನು ಜೆಡಿಎಸ್‌ ಕರೆತಂದು ಕಣಕ್ಕಿಳಿಸಿದೆ.  ಎಚ್‌.ಡಿ.ಕುಮಾರಸ್ವಾಮಿ ಕ್ಷೇತ್ರದಲ್ಲಿ ವಾಸ್ತವ್ಯ ಹೂಡಿ ಮತಗಳ ಕ್ರೋಡೀಕರಣಕ್ಕೆ ಯತ್ನಿಸುತ್ತಿದ್ದಾರೆ. ಹೀಗಾಗಿ ಮುಸ್ಲಿಮರು ಯಾರ ಪರವಾಗಿ ನಿಲ್ಲುತ್ತಾರೆ ಎಂಬುದರ ಮೇಲೆ ಕಾಂಗ್ರೆಸ್‌ ಅಭ್ಯರ್ಥಿಯ ಗೆಲುವು ನಿರ್ಧಾರವಾಗಲಿದೆ.

ಮಾಜಿ ಶಾಸಕ, ಮರಾಠ ಸಮುದಾಯದ ಮುಖಂಡ ಮಾರುತಿರಾವ್‌ ಮುಳೆ ಕಳೆದ ಬಾರಿ ಬಿಜೆಪಿ ತೊರೆದು ಜೆಡಿಎಸ್‌ಗೆ ಸೇರಿದ್ದರು. ಈಗ ಎನ್‌ಸಿಪಿ ಸೇರಿ ನಾಮಪತ್ರ ಸಲ್ಲಿಸಿದ್ದ ಅವರನ್ನು ಬಿಜೆಪಿ ಸೆಳೆದುಕೊಂಡಿದೆ. ಕಳೆದ ಬಾರಿ ಈ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಪಿ.ಜಿ.ಆರ್. ಸಿಂಧ್ಯಾ ಕಾಂಗ್ರೆಸ್ ಸೇರಿದ್ದಾರೆ. ಮರಾಠ ಸಮುದಾಯದ ಮತ ಸೆಳೆಯಲು ಬಿಜೆಪಿ-ಕಾಂಗ್ರೆಸ್‌ ಪೈಪೋಟಿ ನಡೆಸುತ್ತಿವೆ.

ಈ ಕ್ಷೇತ್ರದಲ್ಲಿ ಲಿಂಗಾಯತ, ಮರಾಠ, ಮುಸ್ಲಿಂ ಮತದಾರರು ಹೆಚ್ಚೂ-ಕಡಿಮೆ ಸಮ ಸಂಖ್ಯೆಯಲ್ಲಿದ್ದಾರೆ. ಅವರನ್ನು ಓಲೈಸಿಕೊಳ್ಳಲು ಮೂರೂ ಪಕ್ಷಗಳು ಕಸರತ್ತು ನಡೆಸಿವೆ.

ಈ ಎಲ್ಲಾ ಕಾರಣಗಳಿಂದಾಗಿ ಬಸವ ಕಲ್ಯಾಣ ಕ್ಷೇತ್ರ ಭಾರೀ ಚರ್ಚೆಗೆ ಗ್ರಾಸವಾಗಿರುವ ಕ್ಷೇತ್ರವಾಗಿದೆ. ಇಲ್ಲಿ ಯಾರು ಗೆಲ್ಲುತ್ತಾರೆ ಎಂಬುದು ಬಹಳ ಕುತೂಹಲಕಾರಿಯಾಗಿದೆ. ಒಂದೊಂದು ಪಕ್ಷಗಳೂ ಒಂದೊಂದು ಸ್ಟಾಟಜಿ ಇಟ್ಟುಕೊಂಡು ಚುನಾವಣೆ ಎದುರಿಸುತ್ತಿವೆ. ಯಾರ ಸ್ಟಾಟಜಿ ವರ್ಕ್‌ ಆಗುತ್ತದೆ ಎಂಬುದನ್ನು ಮತದಾರರು ನಿರ್ಧರಿಸಲಿದ್ದಾರೆ.

ಇದನ್ನೂ ಓದಿ: ಉಪ ಸಮರ: ಬಿಜೆಪಿ ಸೋಲುವ ಸಾಧ್ಯತೆ; ಇವೆ ಸಾಕಷ್ಟು ಕಾರಣಗಳು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights