‘ಆಯುಷ್ಮಾನ್ ಭಾರತ್ ಯೋಜನೆಯಡಿ ಕೊರೊನಾಕ್ಕೆ ಉಚಿತ ಚಿಕಿತ್ಸೆ ನೀಡಬೇಕು’ – ಹೆಚ್ಡಿಕೆ ಆಗ್ರಹ!

ಕೊರೊನಾದಿಂದಾಗಿ ಜನ ತೀವ್ರ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಒಂದು ಹೊತ್ತಿನ ಊಟಕ್ಕೂ ಕಷ್ಟಪಡುತ್ತಿರುವ ಜನಸಾಮಾನ್ಯರಿಗೆ ಕೊರೊನಾ ಚಿಕಿತ್ಸೆಗೂ ಹಣ ಕೊಡಬೇಕು ಅಂದರೆ ಅದು ಗಾಯದ ಮೇಲೆ ಬರೆ ಎಳೆದಂತೆ. ಹೀಗಾಗಿ ‘ಆಯುಷ್ಮಾನ್ ಭಾರತ್’ ಯೋಜನೆಯಡಿ ಕೊರೊನಾಕ್ಕೆ ಉಚಿತ ಚಿಕಿತ್ಸೆ ಕೊಡಿ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು,  ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್ ಆರೋಗ್ಯ ಯೋಜನೆಯ ಅಡಿಯಲ್ಲಿ ನಾಗರಿಕರಿಗೆ ಮಹಾಮಾರಿ ಕೊರೋನಾ ವೈರಸ್ ಸೋಂಕಿಗೆ ಚಿಕಿತ್ಸೆ ಪಡೆಯಲು ಇರುವ ನಿರ್ಬಂಧಗಳನ್ನು ಸಡಿಲಗೊಳಿಸಿ ಕೇಂದ್ರ ಸರ್ಕಾರ ತಕ್ಷಣವೇ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದ್ದಾರೆ. 

ಆಯುಷ್ಮಾನ್ ಭಾರತ ಯೋಜನೆ ಅಡಿ ಕೊರೊನಾ ಸೋಂಕಿತರು ಉಚಿತವಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರ ನಿರ್ಬಂಧಿಸಿರುವ 5 ಲಕ್ಷ ರೂಪಾಯಿ ವ್ಯಾಪ್ತಿಯಲ್ಲಿ ಚಿಕಿತ್ಸೆ ಪಡೆಯಲು ಎರೆಡು ತೊಡರುಗಳಿವೆ. ಮಹಾಮಾರಿ ಕೊರೊನಾ ದೇಶವನ್ನು ನಲುಗಿಸುತ್ತಿರುವ ಈ ದುರಿತ ಕಾಲದಲ್ಲಿ ಕೇಂದ್ರ ಸರ್ಕಾರ ಸೌಹರ್ದ ಪ್ರದರ್ಶಿಸಬೇಕಾದ ತುರ್ತು ಅಗತ್ಯವಿದೆ.

ಬಿಪಿಎಲ್ ಕಾರ್ಡುದಾರರು ಆಯುಷ್ಮಾನ್ ಭಾರತ ಯೋಜನೆ ಅಡಿ 5 ಲಕ್ಷ ರೂಪಾಯಿಗಳವರೆಗೆ ಮಾರಣಾಂತಿಕ ಕಾಯಿಲೆಗಳಿಗೆ ಉಚಿತ ಚಿಕಿತ್ಸೆ ಪಡೆಯಬಹುದಾಗಿದೆ. ಎಪಿಎಲ್ ಕಾರ್ಡ್ ದಾರರಿಗೆ ಗರಿಷ್ಠ 5 ಲಕ್ಷ ರೂಪಾಯಿಗಳವರೆಗೆ ಶೇಕಡ 30ರಷ್ಟು ಚಿಕಿತ್ಸಾ ವೆಚ್ಚದಲ್ಲಿ ರಿಯಾಯಿತಿ ದಕ್ಕಲಿದೆ.

ಆಯುಷ್ಮಾನ್ ಭಾರತ್ ಫಲಾನುಭವಿಗಳಿಗೆ ಸರಾಗವಾಗಿ ಕೊರೋನಾ ಉಚಿತ ಚಿಕಿತ್ಸೆ ಕೊಡುವುದಿಲ್ಲವಾದರೆ ಈ ಯೋಜನೆ ಮತ್ತಿನ್ಯಾವ ಪುರುಷಾರ್ಥಕ್ಕೆ?
ಕೇಂದ್ರ ಸರ್ಕಾರ ತಕ್ಷಣ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ತುರ್ತು ಅಗತ್ಯವಿದೆ. ದೇಶದ ಬಹುಸಂಖ್ಯಾತರ ಆಗ್ರಹ ಕೂಡ ಇದೇ ಆಗಿದೆ ಎಂದು ಒತ್ತಾಯಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights