ತೌಕ್ತೆ ಚಂಡಮಾರುತ: ಪಿ305 ಬಾರ್ಜ್‌ನಲ್ಲಿ ಸಿಲುಕಿದ್ದ 89 ಜನರು ನಾಪತ್ತೆ!

ಅರಬ್ಬೀ ಸಮುದ್ರದದಲ್ಲಿ ಎದ್ದಿರುವ ತೌಕ್ತೆ ಚಂಡಮಾರುತ ಅಬ್ಬರದಿಂದಾಗಿ ಸಮುದ್ರದಲ್ಲಿ ಸಿಲುಕಿದ್ದ ‘ಪಿ305’ ಬಾರ್ಜ್‌ನಲ್ಲಿದ್ದವರ ಪೈಕಿ 89 ಜನರು ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ. ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ನೌಕಾಪಡೆ ಬುಧವಾರ ತಿಳಿಸಿದೆ.

‘ಪಿ305’ ಬಾರ್ಜ್‌ನಲ್ಲಿದ್ದ 273 ಸಿಬ್ಬಂದಿ ಪೈಕಿ 184 ಜನರನ್ನು ರಕ್ಷಿಸಲಾಗಿದೆ. ಇನ್ನೂ ಎರಡು ಬಾರ್ಜ್‌ಗಳು ಹಾಗೂ ತೈಲ ಘಟಕದ ಸಿಬ್ಬಂದಿಯೂ ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿದ್ದಾರೆ.

ಐಎನ್‌ಎಸ್‌ ತೇಗ್‌, ಐಎನ್‌ಎಸ್‌ ಬೆಟ್ವಾ, ಐಎನ್‌ಎಸ್‌ ಬಿಯಾಸ್‌ ಹಡಗುಗಳು, ಪಿ8ಐ ವಿಮಾನ ಹಾಗೂ ನೌಕಾಪಡೆಯ ಹೆಲಿಕಾಪ್ಟರ್‌ಗಳು ಶೋಧ ಹಾಗೂ ರಕ್ಷಣಾ ಕಾರ್ಯವನ್ನು ಮುಂದುವರಿಸಿವೆ ಎಂದು ನೌಕಾಪಡೆಯ ವಕ್ತಾರರೊಬ್ಬರು ಹೇಳಿದ್ದಾರೆ.

ಒಎನ್‌ಜಿಸಿ ಹಾಗೂ ಶಿಪ್ಪಿಂಗ್ ಕಾರ್ಪೊರೇಷನ್‌ ಆಫ್‌ ಇಂಡಿಯಾದ ಹಡಗುಗಳು, ಬಾರ್ಜ್‌ಗಳನ್ನು ಸುರಕ್ಷಿತವಾಗಿ ತೀರಕ್ಕೆ ತರುವ ಕಾರ್ಯದಲ್ಲಿ ತೊಡಗಿವೆ. ಐಎನ್‌ಎಸ್‌ ತಲ್ವಾರ್‌ ಸಹ ಈ ಕಾರ್ಯದಲ್ಲಿ ನೆರವಾಗುತ್ತಿದೆ ಎಂದು ಅವರು ಹೇಳಿದ್ದಾರೆ.

‘ಕಳೆದ ನಾಲ್ಕು ದಶಕಗಳಲ್ಲಿ ನಡೆಸಿದ ವಿವಿಧ ರಕ್ಷಣಾ ಕಾರ್ಯಗಳ ಪೈಕಿ ಈಗ ನಡೆಯುತ್ತಿರುವುದು ಅತ್ಯಂತ ಸವಾಲಿನದ್ದಾಗಿದೆ’ ಎಂದು ನೌಕಾಪಡೆಯ ವೈಸ್‌ಅಡ್ಮಿರಲ್‌ ಮುರಳೀಧರ್‌ ಎಸ್‌.ಪವಾರ್‌ ತಿಳಿಸಿದ್ದಾರೆ.

ಇದನ್ನೂ ಓದಿ: ಕೋವಿಡ್ ವೈಫಲ್ಯ- ಮೋದಿ ಸರ್ಕಾರದ 11 ಸುಳ್ಳು ಸಮರ್ಥನೆಗಳು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights