ಮೋದಿಯ ಗಡ್ಡ ತೆಗೆಸಲು 100 ರೂ ಮನಿ ಆರ್ಡರ್‌ ಮಾಡಿದ ಚಾಯ್‌ ವಾಲಾ!

ಪ್ರಧಾನಿ ನರೇಂದ್ರ ಮೋದಿಯವರಿಗೆ ಗಡ್ಡ ಬೋಳಿಸಿಕೊಳ್ಳಲು ಮಹಾರಾಷ್ಟ್ರದ ಬಾರಾಮತಿಯ ಚಹಾ ಮಾರಾಟಗಾರರೊಬ್ಬರು 100 ರೂಪಾಯಿ ಮನಿ ಆರ್ಡರ್‌ ಮಾಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಕೊರೊನಾ ಲಾಕ್‌ಡೌನ್‌ನಿಂದಾಗಿ ಕಳೆದ ಒಂದೂವರೆ ವರ್ಷಗಳಲ್ಲಿ ಅಸಂಘಟಿತ ವಲಯಕ್ಕೆ ತೀವ್ರ ಪೆಟ್ಟು ಬಿದ್ದಿದೆ. ಇದರಿಂದ ಅಸಮಾಧಾನಗೊಂಡಿರುವ ಬಾರಾಮತಿಯ ಇಂದಾಪುರ ರಸ್ತೆಯ ಖಾಸಗಿ ಆಸ್ಪತ್ರೆಯ ಎದುರಿನ ಸಣ್ಣ ಚಹಾ ಅಂಗಡಿಯೊಂದರ ಮಾಲೀಕ ಅನಿಲ್ ಮೋರೆ ಪ್ರಧಾನಿ ಮೋದಿಯವರಿಗೆ 100 ರೂಪಾಯಿಗಳನ್ನು ಮನಿ ಆರ್ಡರ್‌ ಮಾಡಿದ್ದಾರೆ.

“ಪ್ರಧಾನಿ ಮೋದಿ ತಮ್ಮ ಗಡ್ಡ ಬೆಳೆಸಿದ್ದಾರೆ. ಅವನು ಏನನ್ನಾದರೂ ಬೆಳೆಸಬೇಕಾದರೆ, ಅದು ಈ ದೇಶದ ಜನರಿಗೆ ಉದ್ಯೋಗಾವಕಾಶಗಳಾಗಿರಬೇಕು. ಜನಸಂಖ್ಯೆಗೆ ವ್ಯಾಕ್ಸಿನೇಷನ್ ವೇಗಗೊಳಿಸಲು ಪ್ರಯತ್ನಿಸಬೇಕು ಮತ್ತು ಅಸ್ತಿತ್ವದಲ್ಲಿರುವ ವೈದ್ಯಕೀಯ ಸೌಲಭ್ಯಗಳನ್ನು ಹೆಚ್ಚಿಸುವ ಪ್ರಯತ್ನಗಳು ನಡೆಯಬೇಕು. ಕೊನೆಯ ಎರಡು ಲಾಕ್‌ಡೌನ್‌ಗಳಿಂದ ಉಂಟಾಗಿರುವ ಸಂಕಷ್ಟಗಳಿಂದ ಜನ ಹೊರ ಬಂದಿದ್ದಾರೆಯೇ ಎಂಬುದನ್ನು ಪ್ರಧಾನಿ ಖಚಿತಪಡಿಸಿಕೊಳ್ಳಬೇಕು” ಎಂದು ಅನಿಲ್ ಮೋರೆ ಹೇಳಿದ್ದಾರೆ.

ಪ್ರಧಾನಮಂತ್ರಿಯ ಸ್ಥಾನವು ದೇಶದಲ್ಲಿ ಅತ್ಯುನ್ನತವಾಗಿದೆ ಎಂದಿರುವ ಅವರು, “ನಮ್ಮ ಪ್ರಧಾನ ಮಂತ್ರಿಯ ಬಗ್ಗೆ ನನಗೆ ಅತ್ಯಂತ ಗೌರವ ಮತ್ತು ಮೆಚ್ಚುಗೆ ಇದೆ. ನನ್ನ ಉಳಿತಾಯದಿಂದ ನಾನು 100 ರೂಪಾಯಿಗಳನ್ನು ಅವರಿಗೆ ಕಳುಹಿಸುತ್ತಿದ್ದೇನೆ. ಈ ಹಣದಿಂದ ಅವರು ತಮ್ಮ ಗಡ್ಡ ಕ್ಷೌರ ಮಾಡಿಸಿಕೊಳ್ಳಲಿ” ಎಂದಿದ್ದಾರೆ.

“ಪ್ರಧಾನಿ ಮೋದಿ ಸರ್ವೋಚ್ಚ ನಾಯಕರಾಗಿದ್ದಾರೆ. ನಾನು ಅವರನ್ನು ನೋಯಿಸುವ ಉದ್ದೇಶ ಹೊಂದಿಲ್ಲ. ಆದರೆ, ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ದಿನದಿಂದ ದಿನಕ್ಕೆ ಬಡವರ ಸಮಸ್ಯೆಗಳು ಹೆಚ್ಚಾಗುತ್ತಿರುವ ಸಮಯದಲ್ಲಿ ಈ ರೀತಿ ಅವರ ಗಮನ ಸೆಳೆಯಲು ಈ ಮಾರ್ಗ ಬಳಸಿದ್ದೇನೆ” ಎಂದು ಹೇಳಿದ್ದಾರೆ.

ಗಡ್ಡ ತೆಗೆಸಿಕೊಳ್ಳಲು 100 ರೂಪಾಯಿಗಳ ಮನಿ ಆರ್ಡರ್‌ ಜೊತೆಗೆ, ಕೋವಿಡ್‌ನಿಂದ ಸಾವನ್ನಪ್ಪಿದವರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಮತ್ತು ಲಾಕ್‌ಡೌನ್‌ನಿಂದ ಹಾನಿಗೊಳಗಾದ ಕುಟುಂಬಗಳಿಗೆ 30,000 ರೂ.ಗಳ ಆರ್ಥಿಕ ನೆರವು ನೀಡುವಂತೆ ಪ್ರಧಾನ ಮಂತ್ರಿಗೆ ಬರೆದ ಪತ್ರದಲ್ಲಿ ಅನಿಲ್ ಮೋರೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ರಾಹುಲ್‌ಗಾಂಧಿ ಆಪ್ತ, ಮಾಜಿ ಕೇಂದ್ರ ಸಚಿವ ಜಿತಿನ್‌ ಪ್ರಸಾದ ಬಿಜೆಪಿಗೆ ಸೇರ್ಪಡೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights