ಅಯೋಧ್ಯೆ ರಾಮ ಮಂದಿರ: ಶ್ರೀರಾಮನ ಹೆಸರಲ್ಲಿ ಭ್ರಷ್ಟಾಚಾರ; ಟ್ರಸ್ಟ್‌ ವಿರುದ್ದ 16 ಕೋಟಿ ರೂ ಅವ್ಯವಹಾರ ಆರೋಪ!

ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಇದ್ದ ಜಾಗದಲ್ಲಿ ರಾಮ ಮಂದಿರ ನಿರ್ಮಾಣ ಮಾಡಲು ಸುಪ್ರೀಂ ಕೋರ್ಟ್‌ ತೀರ್ಪು ನೀಡಿದ ನಂತರ, ಕೇಂದ್ರ ಸರ್ಕಾರ ಮಂದಿರ ನಿರ್ಮಾಣಕ್ಕೆ ಟ್ರಸ್ಟ್‌ಅನ್ನು ನೇಮಿಸಿದೆ. ಇದೀಗ ಟ್ರಸ್ಟ್‌ ವಿರುದ್ದ 16.5 ಕೋಟಿ ರೂಗಳ ಭ್ರಷ್ಟಾಚಾರದ ಆರೋಪ ಕೇಳಿಬಂದಿದೆ.

ಉತ್ತರಪ್ರದೇಶದ ವಿರೋಧ ಪಕ್ಷಗಳಾದ ಸಮಾಜವಾದಿ ಹಾಗೂ ಆಮ್‌ ಆದ್ಮಿ ಪಕ್ಷಗಳು ರಾಮ ಮಂದಿರ ಟ್ರಸ್ಟ್‌ ವಿರುದ್ಧ ಭೂ ಹಗರಣದ ಆರೋಪವನ್ನು ಮಾಡಿವೆ. ಆಸ್ತಿ ಖರೀದಿಯ ಸಂದರ್ಭದಲ್ಲಿ ಟ್ರಸ್ಟ್‌ನ ಇಬ್ಬರು ಡೀಲರ್‌ಗಳು 16.5 ಕೋಟಿ ಅವ್ಯವಹಾರ ನಡೆಸಿದ್ದಾರೆ. 2 ಕೋಟಿ ಬೆಲೆ ಬಾಳುವ ಭೂಮಿಯನ್ನು 18.5 ಕೋಟಿ ರೂಪಾಯಿಗೆ ಖರೀದಿಸಲಾಗಿದೆ ಎಂದು ಆರೋಪಿಸಲಾಗಿದೆ. ಆದರೆ, ಈ ಆರೋಪವನ್ನು ಟ್ರಸ್ಟ್ ನಿರಾಕರಿಸಿದೆ.

ಉತ್ತರ ಪ್ರದೇಶದ ಮಾಜಿ ಸಚಿವ ಪವನ್ ಪಾಂಡೆ ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್‌ ವಿರುದ್ದ ಆರೋಪ ಮಾಡಿದ್ದಾರೆ. ಅಯೋಧ್ಯೆಯ ಸ್ಥಳೀಯ ಬಿಜೆಪಿ ಮುಖಂಡರು ಹಾಗೂ ಟ್ರಸ್ಟ್‌ನ ಕೆಲ ಸದಸ್ಯರ ಸಹಕಾರದೊಂದಿಗೆ ಈ ಅವ್ಯವಹಾರವನ್ನು ನಡೆಸಲಾಗಿದೆ. ಇದಕ್ಕೆ ಸಂಬಂಧಪಟ್ಟ ಕೆಲ ದಾಖಲೆಗಳಿವೆ. ವ್ಯವಹಾರಕ್ಕೆ ಸಾಕ್ಷಿಗಳಾಗಿ ಅಯೋಧ್ಯೆಯ ಮೇಯರ್ ಹಾಗೂ ಟ್ರಸ್ಟ್‌ನ ಸದಸ್ಯರೊಬ್ಬರು ಸಹಿ ಹಾಕಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಖರೀದಿಸಲಾಗಿರುವ ಭೂಮಿಯ ಬೆಲೆ 2 ಕೋಟಿ ರೂ ಇತ್ತು. ಕೆಲವೇ ನಿಮಿಷಗಳಲ್ಲಿ ಅದರ ಬೆಲೆ 18.5 ಕೋಟಿ ಆಗಲು ಹೇಗೆ ಸಾಧ್ಯ. ಭೂಮಿ ಖರೀದಿ ಹೆಸರಿನಲ್ಲಿ 16.5 ಕೋಟಿ ರೂ ಲೂಟಿ ಮಾಡಲಾಗಿದೆ. ರಾಮ ಮಂದಿರಕ್ಕಾಗಿ ಜನರು ದೇಣಿಗೆ ನೀಡಿದ್ದಾರೆ. ಜನರು ನೀಡಿದ ಹಣವನ್ನು ಟ್ರಸ್ಟ್‌ನ ಕೆಲವರು ಲೂಟಿ ಮಾಡುತ್ತಿದ್ದಾರೆ. ಇದು 120 ಕೋಟಿ ಜನರಿಗೆ ಮಾಡಿದ ಅವಮಾನ. ಈ ಭ್ರಷ್ಟಾಚಾರದ ಕುರಿತು ಸಿಬಿಐ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಮತ್ತೊಂದೆಡೆ ಸುದ್ದಿಗೋಷ್ಟಿ ನಡೆಸಿದ ಎಎಪಿ ಮುಖಂಡ, ರಾಜಸಭಾ ಸದಸ್ಯ ಸಂಜಯ್ ಸಿಂಗ್, “ಶ್ರೀರಾಮ ದೇವರ ಹೆಸರಿನಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಇದನ್ನು ಯಾರೂ ಕೂಡ ಊಹಿಸಲು ಸಾಧ್ಯವಿಲ್ಲ. ಆದರೆ ಈ ದಾಖಲೆಗಳು ಕೋಟ್ಯಂತರ ರೂಪಾಯಿಯ ಅವ್ಯವಹಾರ ನಡೆದಿರುವುದನ್ನು ಸ್ಪಷ್ಟಪಡಿಸುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಎಪಿ ಹಾಗೂ ಬಿಎಸ್‌ಪಿ ಪಕ್ಷಗಳ ಆರೋಪವನ್ನು ಟ್ರಸ್ಟ್‌ ನಿರಾಕಸಿದೆ. ಈ ರೀತಿಯ ಆರೋಪಗಳು ಶತಮಾನಗಳಿಂದ ಕೇಳಿಬರುತ್ತಿವೆ. ಈ ಬಗ್ಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಕಾರ್ಯದರ್ಶಿ ವಿಹೆಚ್‌ಪಿ ನಾಯಕ ಚಂಪತ್ ರಾಯ್ ಹೇಳಿದ್ದಾರೆ.

ರಾಮಮಂದಿರ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರ ರಚಿಸಿರುವ ಟ್ರಸ್ಟ್‌ನಲ್ಲಿ 15 ಸದಸ್ಯರಿದ್ದಾರೆ. ಈ ಪೈಕಿ 12 ಜನರನ್ನು ಸರ್ಕಾರ ನೇಮಿಸಿದೆ.

ಇದನ್ನೂ ಓದಿ: ನರೇಂದ್ರ ಮೋದಿ ಸರ್ಕಾರ ‘ಥರ್ಡ್‌ ಕ್ಲಾಸ್‌’ ರಾಜಕಾರಣದಲ್ಲಿ ತೊಡಗಿದೆ: ಸಂಜಯ್ ರಾವತ್

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights