DRDO ಮಾಜಿ ವಿಜ್ಞಾನಿ, ಹೆಚ್ಎಎಲ್ ನಿವೃತ್ತ ಇಂಜಿನಿಯರ್ ಸುಧೀಂದ್ರ ಹಾಲ್ದೊಡ್ಡೇರಿ ನಿಧನ!

DRDO ಮಾಜಿ ವಿಜ್ಞಾನಿ, ಹೆಚ್ಎಎಲ್ ಸಂಸ್ಥೆಯ ಹಿರಿಯ ನಿವೃತ್ತ ಇಂಜಿನಿಯರ್, ಖ್ಯಾತ ವಿಜ್ಞಾನ ಬರಹಗಾರ ಸುಧೀಂದ್ರ ಹಾಲ್ದೊಡ್ಡೇರಿ ಅವರು ಶುಕ್ರವಾರ ಮಧ್ಯಾಹ್ನ ಸಾವನ್ನಪ್ಪಿದ್ದಾರೆ.

ತೀವ್ರ ಹೃದಯಾಘಾತಕ್ಕೀಡಾಗಿ ಒಂದು ವಾರದ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ಅವರ ಆರೊಗ್ಯ ಸ್ಥಿತಿಯ ಬಗ್ಗೆ ಮಾಹಿತಿ ನೀಡಿದ್ದ ವೈದ್ಯರು “ಸುಧೀಂದ್ರ ಹಾಲ್ದೊಡ್ಡೇರಿ ಅವರ ಆರೋಗ್ಯ ಸುಧಾರಣೆ ಪರಿಸ್ಥಿತಿ ಕಷ್ಟವಿದೆ. ಅವರ ಮೆದುಳು ನಿಷ್ಕ್ರಿಯ ಹಂತಕ್ಕೆ ತಲುಪಿದೆ ” ಎಂಬ ಮಾಹಿತಿ ನೀಡಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಕೊನೆಯುಸಿರೆಳೆದಿದ್ದಾರೆ.

ವಿಜ್ಞಾನ ಬರಹಗಾರ ಸುಧೀಂದ್ರ ಹಾಲ್ದೊಡ್ಡೇರಿ ಅವರ ಮೆದುಳಿಗೆ ಆಮ್ಲಜನಕ ಪೂರೈಕೆಯಾಗುವುದು ಸ್ಥಗಿತಗೊಂಡಿದ್ದರಿಂದ ಅವರ ಮೆದುಳು ನಿಷ್ಕ್ರಿಯಗೊಂಡಿತ್ತು. ಸದ್ಯ ಕುಟುಂಬ ಸದಸ್ಯರು ಸುಧೀಂದ್ರ ಹಾಲ್ದೊಡ್ಡೇರಿ ಅವರ ದೇಹವನ್ನು ಬೆಂಗಳೂರಿನ ಮೆಡಿಕಲ್ ಕಾಲೇಜಿಗೆ ದೇಹದಾನ ಮಾಡಲು ನಿರ್ಧರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: ಉತ್ತರಾಖಂಡ BJPಯಲ್ಲೂ ಬಂಡಾಯ ಸ್ಪೋಟ; ಅಲುಗಾಡುತ್ತಿದೆ ತಿರತ್ ಸಿಂಗ್ ಸಿಎಂ ಖುರ್ಚಿ!

ಖಾಸಗಿ ಆಸ್ಪತ್ರೆಯಲ್ಲಿ ಐಸಿಯುನಲ್ಲಿದ್ದ ಸುಧೀಂದ್ರ ಅವರನ್ನು ತಜ್ಞ ವೈದ್ಯರ ತಂಡ ನೋಡಿಕೊಳ್ಳುತ್ತಿತ್ತು. ಆದರೆ, ತೀವ್ರ ಹೃದಯಾಘಾತವಾದ ಕಾರಣ ಅವರ ಸ್ಥಿತಿ ಗಂಭೀರಗೊಂಡು, ಬ್ರೈನ್​ ಡೆಡ್ ಆಗುವ ಹಂತ ತಲುಪಿತ್ತು. ಅವರಿಗೆ ಕೊರೊನಾ ಸೋಂಕು ತಗುಲಿರಲಿಲ್ಲ ಎಂದು ಆಸ್ಪತ್ರೆಯ ಮೂಲಗಳು ಸ್ಪಷ್ಟಪಡಿಸಿವೆ.

ಎಚ್‌ಎಎಲ್‌ನಲ್ಲಿ ಸುಮಾರು 22 ವರ್ಷಗಳ ಕಾಲ ಅವರು ಸೇವೆ ಸಲ್ಲಿಸಿದ್ದರು. ಜೈನ್ ಹಾಗೂ ಅಲೆಯನ್ಸ್‌ ವಿವಿಗಳಲ್ಲಿ ಏರೋಸ್ಪೇಸ್‌ ಎಂಜಿನಿಯರ್ ವಿಭಾಗದ ಪ್ರಾಧ್ಯಾಪಕರಾಗಿಯೂ ಸುಧೀಂದ್ರ ಹಾಲ್ಡೊಡ್ಡೇರಿ ಸೇವೆ ಸಲ್ಲಿಸಿದ್ದರು. ಕರ್ನಾಟಕ ಸರ್ಕಾರದಿಂದ ‘ಅತ್ಯುತ್ತಮ ವಿಜ್ಞಾನ ಸಂವಹನಕಾರ’ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳಿಗೆ ಪಾತ್ರರಾಗಿದ್ದರು.

ಸುಧೀಂದ್ರ ಹಾಲ್ದೊಡ್ಡೇರಿ ಅವರು ವಿಜಯ ಕರ್ನಾಟಕ, ಕನ್ನಡ ಪ್ರಭ ಸೇರಿದಂತೆ ಅನೇಕ ಪತ್ರಿಕೆಗಳಿಗೆ ವಿಜ್ಞಾನ ಅಂಕಣಗಳನ್ನು ಬರೆಯುತ್ತಿದ್ದರು. ಕನ್ನಡದ ವಿಜ್ಞಾನಾಸಕ್ತರಿಗೆ ಮಾಹಿತಿ ನೀಡುವ, ವಿಜ್ಞಾನವನ್ನು ಸಾಮಾನ್ಯರಿಗೆ ತಲುಪಿಸುವ ಕೆಲಸಕ್ಕೆ ತಮ್ಮ ವಿಶ್ರಾಂತ ಜೀವನವನ್ನು ಮುಡುಪಾಗಿ ಇಟ್ಟಿದ್ದರು.

ಇದನ್ನೂ ಓದಿ: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ ನೌಕಾಪಡೆಯ ಜಾಬಿರ್‌!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights