ಸುವೇಂದು ಭೇಟಿ ಮಾಡಿದ ‘ತುಷಾರ್‌ ಮೆಹ್ತಾ’ರನ್ನು ಸಾಲಿಟರ್ ಜನರಲ್‌ ಹುದ್ದೆಯಿಂದ ವಜಾಗೊಳಿಸಿ: ಮೋದಿಗೆ ಟಿಎಂಸಿ ಪತ್ರ

ಭಾರತದ ಸಾಲಿಟರ್ ಜನರಲ್‌ ತುಷಾರ್‌ ಮೆಹ್ತಾ ಅವರನ್ನು ಪಶ್ವಿಮ ಬಂಗಾಳದ ವಿಪಕ್ಷ ನಾಯಕ, ಬಿಜೆಪಿ ಮುಖಂಡ ಸುವೇಂದು ಅಧಿಕಾರಿ ಭೇಟಿ ಮಾಡಿದ್ದಾರೆ. ಹೀಗಾಗಿ ಮೆಹ್ತಾ ಅವರನ್ನು ‘ಸಾಲಿಟರ್ ಜನರಲ್‌’ ಹುದ್ದೆಯಿಂದ ವಜಾ ಮಾಡಬೇಕೆಂದು ಟಿಎಂಸಿ ನಾಯಕರು ಒತ್ತಾಯಿಸಿದ್ದಾರೆ.

ಈ ಬಗ್ಗೆ, ಟಿಎಂಸಿ ನಾಯಕರು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದು, “ಸಾಲಿಸಿಟರ್‌ ಜನರಲ್ ತುಷಾರ್ ಮೆಹ್ತಾ ಅವರು ಬಿಜೆಪಿ ಮುಖಂಡ ಸುವೆಂದು ಅಧಿಕಾರಿಯನ್ನು ಭೇಟಿಯಾಗಿದ್ದು ಅವರ ಹುದ್ದೆಯ ಬದ್ಧತೆಯ ಬಗ್ಗೆ ಕೆಲವು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ” ಎಂದು ಹೇಳಿದ್ದಾರೆ.

ಸಾಲಿಸಿಟರ್ ಜನರಲ್ ಅವರನ್ನು ತೆಗೆದುಹಾಕಬೇಕೆಂದು ಕೋರಿ ಪ್ರಧಾನಿ ಮೋದಿಗೆ ಕಳುಹಿಸಿದ ಪತ್ರಕ್ಕೆ ಮೂವರು ಟಿಎಂಸಿ ಸಂಸದರಾದ ಡೆರೆಕ್ ಒ’ಬ್ರಿಯೆನ್, ಸುಖೇಂದು ಶೇಖರ್ ರಾಯ್ ಮತ್ತು ಮಹುವ ಮೊಯಿತ್ರಾ ಸಹಿ ಹಾಕಿದ್ದಾರೆ.

ಸುವೆಂದು ಅಧಿಕಾರಿಯು ಬಿಜೆಪಿ ನಾಯಕನಾಗಿರುವುದರ ಜೊತೆಗೆ ಅವರ ವಿರುದ್ದ ಸಿಬಿಐ ಮತ್ತು ಇಡಿ ತನಿಖೆ ನಡೆಸುತ್ತಿರುವ ವಿವಿಧ ಅಪರಾಧಗಳ ಆರೋಪವೂ ಇದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ:  ಉತ್ತರಾಖಂಡ BJPಯಲ್ಲೂ ಬಂಡಾಯ ಸ್ಪೋಟ; ಅಲುಗಾಡುತ್ತಿದೆ ತಿರತ್ ಸಿಂಗ್ ಸಿಎಂ ಖುರ್ಚಿ!

ದೇಶದಾದ್ಯಂತ ಸುದ್ದಿಯಾಗಿದ್ದ ‘ನಾರದಾ ಸ್ಟಿಂಗ್ ಆಪರೇಷನ್’ ಪ್ರಕರಣದ ವಿಡಿಯೊದಲ್ಲಿ ಸುವೆಂದು ಅಧಿಕಾರಿ ಲಂಚ ತೆಗೆದು ಕೊಳ್ಳುವುದು ದಾಖಲಾಗಿತ್ತು. ಈ ವಿಡಿಯೊವನ್ನು ಸ್ವತಃ ಬಿಜೆಪಿಯೆ ಈ ಹಿಂದೆ ಸಾರ್ವಜನಿಕವಾಗಿ ಪ್ರಸಾರ ಮಾಡಿತ್ತು. ಇನ್ನೊಂದು ಶಾರದಾ ಚಿಟ್ ಫಂಡ್ ಪ್ರಕರಣವಾಗಿದ್ದು, ಇದರಲ್ಲಿ ಪ್ರಕರಣದ ಪ್ರಮುಖ ಆರೋಪಿ ಸುದೀಪ್ತಾ ಸೇನ್ ಅವರು ಸುವೆಂದು ಅಧಿಕಾರಿಯ ವಿರುದ್ಧ ಗಂಭೀರ ಆರೋಪಗಳನ್ನು ಎತ್ತಿದ್ದರು.

ಈ ಎರಡೂ ಪ್ರಕರಣಗಳಲ್ಲಿ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸಿಬಿಐ ಅನ್ನು ಪ್ರತಿನಿಧಿಸಿ, ನ್ಯಾಯಾಂಗದ ಮುಂದೆ ಹಾಜರಾಗಿದ್ದಾರೆ ಎಂದು ಟಿಎಂಸಿ ಹೇಳಿದೆ.

ಸಿಬಿಐ ಮತ್ತು ಇಡಿಯಂತಹ ತನಿಖಾ ಸಂಸ್ಥೆಗಳಿಗೆ ಸಲಹೆ ನೀಡುತ್ತಿರುವ ತುಷಾರ್‌‌ ಮೆಹ್ತಾ ಅವರು ಸುವೆಂದು ಅಧಿಕಾರಿ ನಡುವೆ ನಡೆದಿರುವ ಆಪಾದಿತ ಭೇಟಿಯು, ಭಾರತದ ಸಾಲಿಸಿಟರ್ ಜನರಲ್‌‌ನ ಶಾಸನಬದ್ಧ ಕರ್ತವ್ಯಗಳೊಂದಿಗೆ “ಆಸಕ್ತಿಯ ನೇರ ಸಂಘರ್ಷ” ಇದೆ ಎಂದು ತೋರಿಸುತ್ತದೆ ಎಂದು ಟಿಎಂಸಿ ಹೇಳಿದೆ. ಅಲ್ಲದೆ ಒಕ್ಕೂಟ ಸರ್ಕಾರದ ಗೃಹಸಚಿವ ಅಮಿತ್‌ ಶಾ ಅವರನ್ನು ಸುವೆಂದು ಅಧಿಕಾರಿ ಭೇಟಿಯಾದ ಬಗ್ಗೆಯೆ ಟಿಎಂಸಿ ಆಶ್ಚರ್ಯ ವ್ಯಕ್ತಪಡಿಸಿದೆ.

“ಸಾಲಿಸಿಟರ್ ಜನರಲ್‌‌ ಉನ್ನತ ಕಚೇರಿಗಳನ್ನು ಬಳಸಿಕೊಂಡು ಸುವೆಂದು ಅಧಿಕಾರಿಯು ಆರೋಪಿಯಾಗಿರುವ ಪ್ರಕರಣಗಳ ಮೇಲೆ ಪ್ರಭಾವ ಬೀರಲು ಇಂತಹ ಸಭೆಯನ್ನು ಆಯೋಜಿಸಲಾಗಿದೆ ಎಂದು ನಾವು ನಂಬುತ್ತೇವೆ” ಎಂದು ಟಿಎಂಸಿ ಪತ್ರದಲ್ಲಿ ಉಲ್ಲೇಖಿಸಿದೆ. ಆದ್ದರಿಂದ ಈ ಬೆಳವಣಿಗೆಗಳ ಹಿನ್ನಲೆಯಲ್ಲಿ ತುಷಾರ್ ಮೆಹ್ತಾ ಅವರನ್ನು ಅವರ ಹುದ್ದೆಗಳಿಂದ ಕಿತ್ತು ಹಾಕಬೇಕೆಂದು ಪಕ್ಷವು ಪ್ರಧಾನಮಂತ್ರಿಯನ್ನು ಒತ್ತಾಯಿಸಿದೆ.

ಇದನ್ನೂ ಓದಿ: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ ನೌಕಾಪಡೆಯ ಜಾಬಿರ್‌!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights