FACT CHECK | ಬಿಹಾರದಲ್ಲಿ ಮುಸ್ಲಿಮರು ವಂದೇ ಭಾರತ್ ರೈಲಿಗೆ ಕಲ್ಲು ತೂರಿದ್ದು ನಿಜವೇ?
ಭಾರತದಲ್ಲಿ ಯಾವುದೇ ಭಾಗದಲ್ಲಿ ರೈಲು ಅಪಘಾತ ಸಂಭವಿಸಿದರೆ ಅದಕ್ಕೆ ಮುಸ್ಲಿಮರನ್ನು ಹೊಣೆ ಮಾಡಿ ಸೋಶಿಯಲ್ಲಿ ಮೀಡಿಯಾ ಫ್ಲಾಟ್ಫಾರ್ಮ್ನಲ್ಲಿ ಹಂಚಿಕೊಳ್ಳುವುದು ಸಾಮಾನ್ಯ ಸಂಗತಿಯಾಗಿದೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಬಿಹಾರದ ಗಯಾ ನಗರದಲ್ಲಿ ವಂದೇ ಭಾರತ್ ರೈಲಿಗೆ ಕಲ್ಲು ತೂರಾಟ ನಡೆಸಿದ್ದು ಮುಸ್ಲಿಮರು ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ಅನ್ನು ಹಂಚಿಕೊಳ್ಳಲಾಗುತ್ತಿದೆ.

ಇದೀಗ ಪೊಲೀಸರೊಂದಿಗೆ ಇಬ್ಬರು ನಿಂತಿರುವ ಚಿತ್ರ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಈ ಚಿತ್ರವು ಬಿಹಾರದ ಗಯಾ ನಗರದಲ್ಲಿ ವಂದೇ ಭಾರತ್ ರೈಲಿಗೆ ಕಲ್ಲು ತೂರಾಟ ನಡೆಸಿದ್ದಕ್ಕಾಗಿ ಬಂಧಿತರಾದ ಶಾಹಿದ್ ಹುಸೇನ್ ಮತ್ತು ಸಲ್ಮಾನ್ ಎಂಬ ಇಬ್ಬರು ಮುಸ್ಲಿಂ ಪುರುಷರು ಎಂದು ಹೇಳಿಕೊಳ್ಳಲಾಗುತ್ತಿದೆ. ಹಾಗಿದ್ದರೆ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಈ ಟ್ವೀಟ್ಗೆ ಪ್ರತಿಕ್ರಿಯೆಯಾಗಿ ಬಿಜೆಪಿ ವಕ್ತಾರ ಪ್ರಶಾಂತ್ ಉಮ್ರಾವ್, “ಶಾಹಿದ್ ಹುಸೇನ್ ಮತ್ತು ಸಲ್ಮಾನ್” ಎಂದು ಬರೆದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಪೋಸ್ಟ್ ಈ ಟ್ವೀಟ್ನಿಂದ ಪ್ರಾರಂಭವಾಗಿರುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.
वंदे भारत एक्सप्रेस पर पथराव करने वाले दो अपराधी गया में गिरफ्तार!
भारतीय रेल राष्ट्रीय संपत्ति है, आपकी संपत्ति है।इसको नुकसान पहुंचाने वालों पर कानूनी कार्रवाई की जाएगी। pic.twitter.com/VK954dZT1P
— Ministry of Railways (@RailMinIndia) November 22, 2024
ಈ ಘಟನೆ ಕುರಿತು ಗೂಗಲ್ ಸರ್ಚ್ ಮಾಡಿದಾಗ, ಹಲವು ವರದಿಗಳು ಲಭ್ಯವಾಗಿವೆ. ವರದಿಗಳ ಪ್ರಕಾರ, ಗಯಾದ ಮನ್ಪುರ್ ರೈಲ್ವೆ ವಿಭಾಗದಲ್ಲಿ ಎರಡು ವಂದೇ ಭಾರತ್ ಎಕ್ಸ್ಪ್ರೆಸ್ ಮೇಲೆ ಕಲ್ಲು ತೂರಾಟದ ಘಟನೆ ನಡೆದಿದೆ. ಪ್ರಕರಣದಲ್ಲಿ ಇಬ್ಬರನ್ನು ಆರ್ಪಿಎಫ್ ಬಂಧಿಸಿದೆ. ಈ ವರದಿಗಳಲ್ಲಿ ಆರೋಪಿಗಳ ಹೆಸರನ್ನು ವಿಕಾಸ್ ಕುಮಾರ್ ಮತ್ತು ಮನೀಶ್ ಕುಮಾರ್ ಎಂದು ಬರೆಯಲಾಗಿದ್ದು, ಅವರು ಮಾನ್ಪುರ ನಿವಾಸಿಗಳಾಗಿದ್ದಾರೆ. ಇಬ್ಬರೂ ಹಳಿಯಲ್ಲಿ ಗಂಟೆಗಟ್ಟಲೆ ರೈಲಿಗಾಗಿ ಕಾದು ಕುಳಿತಿದ್ದು, ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಬಂದ ಕೂಡಲೇ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
ನವೆಂಬರ್ 16, 2024 ರಂದು ಮನ್ಪುರ್ ರೈಲ್ವೆ ಸೆಕ್ಷನ್ ಸೆಂಟ್ರಲ್ ಬಳಿ ಪಾಟ್ನಾ-ಟಾಟಾ ವಂದೇ ಭಾರತ್ ಎಕ್ಸ್ಪ್ರೆಸ್ ಮತ್ತು ಗಯಾ-ಹೌರಾ ವಂದೇ ಭಾರತ್ ಎಕ್ಸ್ಪ್ರೆಸ್ ಮೇಲೆ ಕಲ್ಲು ತೂರಾಟ ನಡೆದಿದೆ ಎಂದು ಟ್ವೀಟ್ ಮೂಲಕ ದೂರು ನೀಡಲಾಗಿದೆ ಎಂದು ಸುದ್ದಿಯಲ್ಲಿ ವರದಿಯಾಗಿದೆ. ಈ ಘಟನೆಯಲ್ಲಿ ರೈಲಿನ ಗಾಜು ಒಡೆದಿದೆ. ಮಾಹಿತಿ ಪಡೆದ ತಕ್ಷಣ ಆರ್ಪಿಎಫ್ ವಿಶೇಷ ತಂಡ ರಚಿಸಿ ಘಟನಾ ಸ್ಥಳದ ಬಳಿ ದಾಳಿ ನಡೆಸಿ ಆರೋಪಿಗಳಿಬ್ಬರನ್ನೂ ಬಂಧಿಸಿದ್ದಾರೆ.
ವರದಿಗಳ ಪ್ರಕಾರ, ಇಬ್ಬರೂ ಆರೋಪಿಗಳು ಹಿಂದಿನ ಅಪರಾಧ ಇತಿಹಾಸವನ್ನು ಹೊಂದಿದ್ದು, ಇಬ್ಬರೂ ಜಾಮೀನಿನ ಮೇಲೆ ಹೊರಗಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು ತಮ್ಮ ಅಪರಾಧವನ್ನು ಒಪ್ಪಿಕೊಂಡು ಇತರ ರೈಲುಗಳನ್ನು ಗುರಿಯಾಗಿಸಲು ಯೋಜಿಸಿದ್ದರು ಎಂದು ಹೇಳಿದ್ದಾರೆ.
ರೈಲ್ವೆ ಸಂರಕ್ಷಣಾ ಪಡೆ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ನಿಂದ ನವೆಂಬರ್ 23, 2024 ರಂದು ಪತ್ರಿಕೆಯ ಸುದ್ದಿಯನ್ನು ಟ್ವೀಟ್ ಮಾಡಿದೆ. ಇದೇ ಮಾಹಿತಿ ನೀಡಿ ಆರೋಪಿಗಳ ಹೆಸರನ್ನು ವಿಕಾಸ್ ಕುಮಾರ್ ಮತ್ತು ಮನೀಶ್ ಕುಮಾರ್ ಎಂದು ನಮೂದಿಸಲಾಗಿದೆ. ಅಲ್ಲದೆ, ಈ ಕುರಿತು ಮಾಧ್ಯಮಗಳಿಗೆ ನೀಡಿರುವ ರೈಲ್ವೇ ಅಧಿಕೃತ ಹೇಳಿಕೆಯಲ್ಲಿ ಮನೀಶ್ ಕುಮಾರ್ ಅವರ ತಂದೆಯ ಹೆಸರನ್ನು ಸೂರಜ್ ಪ್ರಸಾದ್ ಎಂದು ನಮೂದಿಸಿದ್ದರೆ, ವಿಕಾಸ್ ಕುಮಾರ್ ಅವರ ತಂದೆಯ ಹೆಸರನ್ನು ಛೋಟಾನ್ ಪಾಸ್ವಾನ್ ಎಂದು ಬರೆಯಲಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಸಿದ್ದಿ ವಿನಾಯಕ ದೇವಸ್ಥಾನದ ಆಸ್ತಿಯು ವಕ್ಫ್ ಬೋರ್ಡ್ಗೆ ಸೇರಿದೆ ಎಂದು ನಕಲಿ ಪೋಸ್ಟ್ ಹಂಚಿಕೆ

