ಉತ್ತರಾಖಂಡ BJPಯಲ್ಲೂ ಬಂಡಾಯ ಸ್ಪೋಟ; ಅಲುಗಾಡುತ್ತಿದೆ ತಿರತ್ ಸಿಂಗ್ ಸಿಎಂ ಖುರ್ಚಿ!

ಉತ್ತರಾಖಂಡದ ಆಡಳಿತಾರೂಢ ಬಿಜೆಪಿಯಲ್ಲಿ ಬಂಡಾಯದ ಬಿರುಕು ಭುಗಿಲೆದ್ದಿದೆ. ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಿ ಇನ್ನೂ ನಾಲ್ಕು ತಿಂಗಳೂ ಕೂಡ ಕಳೆಯದೇ ಇರುವಾಗಲೇ ಉತ್ತರಾಖಂಡ ಸಿಎಂ ತಿರತ್ ಸಿಂಗ್ ರಾವತ್‌ ಅವರಿಗೆ ತಮ್ಮ ಖುರ್ಚಿ ಉರುಳುವ ಭಯ ದಟ್ಟವಾಗಿದೆ. ಹೀಗಾಗಿ ಅವರು ಬಿಜೆಪಿ ಹೈಕಮಾಂಡ್‌ ಜೊತೆ ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ.

ಸದ್ಯಕ್ಕೆ ಉತ್ತರಾಖಂಡ ಬಿಜೆಪಿ ರಾಜ್ಯ ಘಟಕದಲ್ಲಿ ಉಂಟಾಗಿರುವ ಬಿರುಕನ್ನು ಸರಿದೂಗಿಸುವುದು ಹಾಗೂ 2022ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವುದು ಬಿಜೆಪಿಗೆ ಅನಿವಾರ್ಯವಾಗಿದೆ. ಸದ್ಯ, ಬಿಜೆಪಿ ರಾಜ್ಯ ಘಟಕದ ಜವಾಬ್ದಾರಿ ಮತ್ತು ಸಿಎಂ ಹುದ್ದೆಯಲ್ಲಿರುವ ತಿರತ್ ಸಿಂಗ್ ರಾವತ್ ಅವರು ಈ ಎಲ್ಲವನ್ನು ಎದುರಿಸಿ ಪಕ್ಷವನ್ನು ಮುನ್ನಡೆಸಬೇಕಾಗಿದೆ. ಹೀಗಾಗಿ, ಇದು ತಮ್ಮಿಂದ ಸಾಧ್ಯವೇ, ತಮ್ಮ ಸಿಎಂ ಹುದ್ದೆ ಉಳಿಯಲಿದೆಯೇ ಎಂಬ ಆತಂಕ ರಾವತ್‌ ಅವರಲ್ಲಿದೆ.

ಮುಖ್ಯಮಂತ್ರಿ ತಿರತ್ ಸಿಂಗ್ ರಾವತ್‌ ಅವರನ್ನು ಬಿಜೆಪಿ ನಾಯಕತ್ವ ಬುಧವಾರ ದೆಹಲಿಗೆ ಕರೆಸಿಕೊಂಡಿದ್ದು, ಅಂದಿನಿಂದಲೂ ರಾಜ್ಯದ ಸ್ಥಿತಿಗತಿ ಮತ್ತು ಚುನಾವಣೆ ಬಗ್ಗೆ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಜೊತೆಗೆ ಚರ್ಚೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ತಿರತ್ ಸಿಂಗ್ ರಾವತ್‌ ಮುಖ್ಯಮಂತ್ರಿಯಾಗಿ ಉಳಿಯುತ್ತಾರೆಯೇ ಎಂಬುದು ಚುನಾವಣಾ ಆಯೋಗದ ನಿರ್ಧಾರವನ್ನು ಅವಲಂಬಿಸಿದೆ.

ಇದನ್ನೂ ಓದಿ: ಲಕ್ಷದ್ವೀಪ: ನಟಿ, ನಿರ್ಮಾಪಕಿ ವಿರುದ್ದ ದೇಶದ್ರೋಹ ಕೇಸ್‌; ಬಿಜೆಪಿ ತೊರೆದ 15 ನಾಯಕರು!

ಉತ್ತರಾಖಂಡ ರಾಜ್ಯದ ಅಂದಿನ ಮುಖ್ಯಮಂತ್ರಿ ತ್ರಿವೇಂದ್ರ ರಾವತ್ ವಿರುದ್ಧ ಬಿಜೆಪಿ ರಾಜ್ಯ ಘಟಕದಲ್ಲಿ ತೀವ್ರ ಅಸಮಾಧಾನ ಉಂಟಾಗಿದ್ದರಿಂದ ಬಿಜೆಪಿ ಹೈಕಮಾಂಡ್, ಉತ್ತರಾಖಂಡ ಚುನಾವಣೆಗೆ ಕೇವಲ ಒಂದು ವರ್ಷವಿರುವಾಗಲೇ ಮಾರ್ಚ್‌ನಲ್ಲಿ ತಿರತ್ ಸಿಂಗ್ ರಾವತ್ ಅವರಿಗೆ ಅಧಿಕಾರ ಹಸ್ತಾಂತರಿಸಿತ್ತು.

ಆದರೆ, ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಲು ಸಂಸದರಾಗಿರುವ ತಿರತ್ ಸಿಂಗ್ ರಾವತ್ ಅವರು ವಿಧಾನಸಭಾ ಸ್ಥಾನವನ್ನು ಗೆದ್ದು ಸೆಪ್ಟೆಂಬರ್ 10 ರೊಳಗೆ ಉತ್ತರಾಖಂಡ ಶಾಸಕಾಂಗ ಸಭೆಯ ಸದಸ್ಯರಾಗಬೇಕಾಗಿದೆ.

ಕೋವಿಡ್ ಬಿಕ್ಕಟ್ಟು ಮತ್ತು ಮಾರ್ಚ್-ಏಪ್ರಿಲ್‌ನಲ್ಲಿ ನಡೆದ ಚುನಾವಣೆಯ ದೊಡ್ಡ ವಿವಾದ ಹೊತ್ತಿರುವ ಚುನಾವನಾ ಆಯೋಗ ಇದನ್ನು ಹೇಗೆ ಪರಿಹರಿಸುತ್ತದೆಯೋ ನೋಡಬೇಕಾಗಿದೆ. ಚುನಾವಣೆಯ ಕುರಿತು ವಿವಿಧ ರಾಜ್ಯಗಳೊಂದಿಗೆ ಸಮಾಲೋಚಿಸುತ್ತಿದೆ ಎಂದು ಚುನಾವಣಾ ಆಯೋಗದ ಮೂಲಗಳನ್ನು ಎನ್‌ಡಿಟಿವಿ ಉಲ್ಲೇಖಿಸಿದೆ. ಅನೇಕ ಉಪಚುನಾವಣೆಗಳು ಬಾಕಿ ಉಳಿದಿದ್ದು, ಕೋವಿಡ್ ಪರಿಸ್ಥಿತಿ ಪ್ರಮುಖವಾದ ಪರಿಗಣನೆಯಾಗಿದೆ, ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿ ಪದವಿ ವಹಿಸಿಕೊಂಡ ಮಾರ್ಚ್‌ನಿಂದಲೂ ತಿರತ್ ಸಿಂಗ್ ರಾವತ್‌ ಸರಣಿ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಬಿಜೆಪಿಯ ಉತ್ತರಾಖಂಡ ನಾಯಕರು ದೆಹಲಿ ನಾಯಕತ್ವಕ್ಕೆ ಅವರ ಹೇಳಿಕೆಗಳ ಬಗ್ಗೆ ಸಾರ್ವಜನಿಕರಲ್ಲಿ ಉಂಟಾಗಿರುವ ಆಕ್ರೋಶದ ಬಗ್ಗೆ ದೂರು ನೀಡಿದ್ದಾರೆ. ಜೊತೆಗೆ ಬಿಜೆಪಿಯ ಹಿಂದಿನ ನೀತಿ ನಿರ್ಧಾರಗಳನ್ನು ಟೀಕಿಸುವ ಮೂಲಕ ತಮ್ಮದೇ ಪಕ್ಷವನ್ನು ಮುಜುಗರಕ್ಕೀಡು ಮಾಡಿದ್ದಾರೆ.

ಅಧಿಕಾರ ವಹಿಸಿಕೊಂಡ ಕೂಡಲೇ, ರಾವತ್ ಅವರು ‘ರಿಪ್ಪಡ್‌ ಜೀನ್ಸ್ ಪ್ಯಾಂಟ್‌‌’ ಧರಿಸಿದ ಮಹಿಳೆಯರ ಬಗ್ಗೆ ಹೇಳಿಕೆ ನೀಡಿ, ವ್ಯಾಪಕ ಆಕ್ರೋಶವನ್ನು ಎದುರಿಸಿದ್ದರು. ಜೊತೆಗೆ 200 ವರ್ಷಗಳ ಕಾಲ ಭಾರತವನ್ನು ಬ್ರಿಟನ್ ಅಲ್ಲ, ಅಮೆರಿಕಾ ಆಳ್ವಿಕೆ ಮಾಡಿತ್ತು ಎಂದಿದ್ದರು.

ಇನ್ನು, ಕೊರೊನಾ ಉಲ್ಬಣದಲ್ಲಿದ್ದ ದಿನಗಳಲ್ಲಿ ಕುಂಭಮೇಳವನ್ನು ಆಯೋಜಿಸಿ, “ಯಾವುದೇ ಆರ್‌ಟಿ-ಪಿಸಿಆರ್ ಪರೀಕ್ಷೆಯ ಅಗತ್ಯವಿಲ್ಲ” ಎಂಬ ಅಭಿಪ್ರಾಯ ಹೊರ ಹಾಕಿದ್ದರು. ಈ ಎಲ್ಲಾ ವಿವಾದಗಳು ಮತ್ತು ಬಿಜೆಪಿ ರಾಜ್ಯ ಘಟಕದಲ್ಲಿನ ಭಾರಿ ಬಿರುಕು ಇವರ ಸ್ಥಾನಕ್ಕೆ ಕುತ್ತು ತರಬಹುದು ಎನ್ನಲಾಗಿದೆ.

ಇದನ್ನೂ ಓದಿ: ಲಂಚ ಪ್ರಕರಣ: ಕೇರಳ ಬಿಜೆಪಿ ಅಧ್ಯಕ್ಷರ ವಿರುದ್ದ ಪ್ರಕರಣ ದಾಖಲಿಸಲು ಕೋರ್ಟ್‌ ಆದೇಶ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights