ಸಿಡಿಲು ಬಡಿದು ರಾಜಸ್ಥಾನದಲ್ಲಿ 23 ಜನರು ಸಾವು; 27 ಮಂದಿಗೆ ಗಂಭೀರ ಗಾಯ!

ಜೈಪುರ ಸೇರಿದಂತೆ ವಿವಿಧೆಡೆ ಸಿಡಿಲು ಬಡಿದು ಒಂದೇ ದಿನ 23 ಜನರು ಸಾವನ್ನಪ್ಪಿದ್ದು, 27 ಜನರಿಗೆ ಗಂಭೀರ ಗಾಯಗಳಾಗಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

ರಾಜಸ್ಥಾನ ರಾಜಧಾನಿ ಜೈಪುರದಲ್ಲಿ 12 ಜನರು ಸಾವನ್ನಪ್ಪಿದ್ದರೆ, ರಾಜ್ಯದ ಉಳಿದೆಡೆಗಳಲ್ಲಿ 11 ಜನರು ಸಾವನ್ನಪ್ಪಿದ್ದಾರೆ. ಕೊಟಾ, ಜಾಲ್ವಾರ್, ಬಾರನ್, ದೋಲ್ಫುರ್, ಸವಾಯ್ ಮಾಧೋಪುರ ಮತ್ತು ಟೊಂಕ್ ಜಿಲ್ಲೆಗಳಲ್ಲಿ ಸಾವಿನ ಘಟನೆಗಳು ವರದಿಯಾಗಿವೆ ಎಂದು ವಿಪತ್ತು ನಿರ್ವಹಣಾ ಮತ್ತು ಪುನರ್ವಸತಿ ಇಲಾಖೆ ತಿಳಿಸಿದೆ.

ಜೈಪುರದಲ್ಲಿ ಸಂಭವಿಸಿದ ದೊಡ್ಡ ದುರಂತದಲ್ಲಿ, ಅಂಬರ್ ಕೋಟೆ ಬಳಿಯ ಐಕಾನಿಕ್ ವಾಚ್ ಟವರ್‌ನಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದ 12 ಮಂದಿ ಯುವಕರು ಸಿಡಿಲು ಬಡಿದು ಸಾವನ್ನಪ್ಪಿದ್ದರೆ, 11 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜಸ್ಥಾನದ ಏಳು ಜಿಲ್ಲೆಯಲ್ಲಿ ಭಾನುವಾರ ಸಿಡಿಲು ಬಡಿದು ಏಳು ಮಕ್ಕಳು ಸೇರಿದಂತೆ 23 ಜನರು ಸಾವನ್ನಪ್ಪಿದ್ದಾರೆ. 27 ಮಂದಿ ಗಾಯಗೊಂಡಿದ್ದಾರೆ ಎಂದು ವಿಪತ್ತು ನಿರ್ವಹಣಾ ಮತ್ತು ಪುನರ್ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಆನಂದ್ ಕುಮಾರ್ ತಿಳಿಸಿದ್ದಾರೆ.

ಸಿಡಿಲು ಬಡಿದು ಸಾವನ್ನಪ್ಪಿದ್ದ ಕುಟುಂಬಸ್ಥರಿಗೆ ಪರಿಹಾರ ಹಾಗೂ ಗಾಯಾಳುಗಳಿಗೆ ಚಿಕಿತ್ಸೆ ನೀಡಲು ರಾಜ್ಯ ಸರ್ಕಾರ 1.65 ಕೋಟಿ ರೂಪಾಯಿಯನ್ನು ಜಿಲ್ಲಾಧಿಕಾರಿಗಳಿಗೆ ಬಿಡುಗಡೆ ಮಾಡಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಇಲಾಖೆ ಪ್ರಕಾರ, 11 ಆಡುಗಳು ಸೇರಿದಂತೆ 16 ಜಾನುವಾರು ಸಿಡಿಲು ಬಡಿದು ಸಾವನ್ನಪ್ಪಿವೆ. ಈ ಅಂಕಿ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: ಬಿಹಾರದಲ್ಲಿ ಬಿಜೆಪಿ ವಿರುದ್ದ ಹೊಸ ಮೈತ್ರಿ; ಚಿರಾಗ್‌ ಪಾಸ್ವಾನ್‌ – ಆರ್‌ಜೆಡಿ ನಾಯಕರ ಭೇಟಿ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights