ಜನಾಶೀರ್ವಾದ ಯಾತ್ರೆಯಲ್ಲಿ ಮೊಳಗಿದ ಗುಂಡಿನ ಸದ್ದು : ಚಿಂಚನಸೂರ್ ಕೈಯಲ್ಲಿ ಬಂದೂಕು!

ಜನಾಶೀರ್ವಾದ ಯಾತ್ರೆಗೆಂದು ಯಾದಗಿರಿಗೆ ಆಗಮಿಸಿದ್ದ ಕೇಂದ್ರ ಸಚಿವ ಖೂಬಾ ಅವರ ಸ್ವಾಗತಕ್ಕೆ ಬಿಜೆಪಿ ಕಾರ್ಯಕರ್ತರು ಗಾಳಿಯಲ್ಲಿ ಗುಂಡು ಹಾರಿಸಿದ್ದು ಭಾರೀ ಜನಾಕ್ರೋಶಕ್ಕೆ ಗುರಿಯಾಗಿದೆ.

ಖೂಬಾ ಅವರ ಸ್ವಾಗತಕ್ಕೆ ಯರಗೋಳ ಗ್ರಾಮದ ಸ್ಥಳೀಯ ಬಿಜೆಪಿ ಕಾರ್ಯಕರ್ತರು ನಾಡಬಂದೂಕು ಸಿಡಿಸಿ ಭರ್ಜರಿಯಾಗಿ ಸ್ವಾಗತ ಮಾಡಿದ್ದಾರೆ.

ಕೊರೊನಾ ನಿಯಮಗಳನ್ನು ಮೀರಿ ನೂರಾರು ಜನ ಸಚಿವರ ಸ್ವಾಗತಕ್ಕೆ ಸೇರಿದ್ದು ಜಿಲ್ಲಾಡಳಿತ ಕಣ್ಣಿದ್ದು ಕುರುಡಾಗಿದ್ದು ಯಾಕೆ ಎನ್ನುವ ಆಕ್ರೋಶ ವ್ಯಕ್ತವಾಗಿದೆ. ಜನಸಾಮಾನ್ಯರನ್ನು ಪ್ರಶ್ನೆ ಮಾಡುವಷ್ಟೇ ಚುರುಕಾಗಿ ಜನನಾಯಕರನ್ನು ಯಾಕೆ ಪ್ರಶ್ನೆ ಮಾಡಲ್ಲ..? ಎನ್ನುವ ಪ್ರಶ್ನೆ ಸಾರ್ವಜನಿಕರಲ್ಲಿ ಉದ್ಬವಿಸಿದೆ.

ಇನ್ನೂ ಯಾದಗಿರಿಗೆ ಜನಾಶೀರ್ವಾದ ಕಾರ್ಯಕ್ರಮಕ್ಕೆ ಭಾಗವಹಿಸಲು ಆಗಮಿಸಿದ ಸಚಿವ ಖೂಬಾ ಅವರನ್ನು ಸ್ವಾಗತಿಸಲು ಮಾಜಿ ಸಚಿವ ಬಾಬೂರಾವ್ ಚಿಂಚನಸೂರು, ಶಾಸಕರಾದ ರಾಜೂಗೌಡ, ವೆಂಕಟರೆಡ್ಡಿ ಮುದ್ನಾಳ ಭಾಗವಹಿಸಿದರು.

ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ಚಿಂಚನಸೂರು, ‘ಅದು ಕಾಡು ಪ್ರಾಣಿ ಓಡಿಸಲು ಇಟ್ಟಿದ್ದ ಬಂದೂಕು’ ಎಂದು ಉಡಾಫೆ ಮಾತನಾಡಿದ್ದಾರೆ. ಜನಸಾಮಾನ್ಯರು ಈ ರೀತಿ ಸೇರಿದ್ರೆ ಜಿಲ್ಲಾಡಳಿತ ಪ್ರಶ್ನೆ ಮಾಡುತ್ತದೆ. ಆದರೆ ಜನನಾಯಕರು ಸೇರಿದ್ರೆ ಯಾಕೆ ಮೌನ ತಾಳುತ್ತದೆ ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ.

ಕೈಯಲ್ಲಿ ಬಂದೂಕು ಹಿಡಿದ ಜನನಾಯಕರು ಜನರಿಗೆ ಅದ್ಯಾವ ಸಂದೇಶ ರವಾನೆ ಮಾಡುತ್ತಾರೆ ಎನ್ನುವ ಬಗ್ಗೆ ತಮ್ಮನ್ನ ತಾವೇ ಪ್ರಶ್ನೆ ಮಾಡಿಕೊಳ್ಳಬೇಕಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights