ಕೇರಳದಲ್ಲಿ ಭಾರೀ ಮಳೆ; 18 ಮಂದಿ ಸಾವು; ಹಲವರು ನಾಪತ್ತೆ

ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಪರಿಣಾಮ ಮಧ್ಯ ಕೇರಳ ಹಾಗೂ ದಕ್ಷಿಣ ಭಾಗಗಳಲ್ಲಿ ಭಾರಿ ಮಳೆಯಿಂದಾಗಿ ಪ್ರವಾಹವುಂಟಾಗಿದ್ದು, ಇವರೆಗೆ 18 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

’ಶನಿವಾರ ಭಾರಿ ಮಳೆಯಿಂದಾಗಿ 18 ಜನರು ಸಾವನ್ನಪ್ಪಿದ್ದಾರೆ. 12 ಕ್ಕೂ ಹೆಚ್ಚು ಮಂದು ನಾಪತ್ತೆಯಾಗಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

“ರಾಜ್ಯದ ಕೆಲವು ಭಾಗಗಳಲ್ಲಿ ಪರಿಸ್ಥಿತಿ ನಿಜಕ್ಕೂ ಗಂಭೀರವಾಗಿದೆ. ಜೀವ ಉಳಿಸಲು ಸಾಧ್ಯವಿರುವ ಎಲ್ಲ ಕ್ರಮವನ್ನೂ ನಾವು ತೆಗೆದುಕೊಳ್ಳುತ್ತೇವೆ. ಸೇನೆ, ನೌಕಾಪಡೆ ಮತ್ತು ವಾಯುಪಡೆಯಿಂದ ಸಹಾಯವನ್ನು ಕೋರಿದ್ದೇವೆ. ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ನಿರಾಶ್ರಿತರ ಶಿಬಿರಗಳನ್ನು ಸ್ಥಾಪಿಸಲಾಗಿದೆ” ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.

ಕೊಟ್ಟಾಯಂ, ಪತ್ತನಂತಿಟ್ಟ ಮತ್ತು ಇಡುಕ್ಕಿ ಜಿಲ್ಲೆಗಳು ಧಾರಾಕಾರ ಮಳೆಯಿಂದಾಗಿ ಹೆಚ್ಚು ಹಾನಿಗೊಳಗಾಗಿವೆ. ಹಾನಿಗೊಳಗಾಗಿರುವ ಪ್ರದೇಶಗಳಿಂದ ಜನರನ್ನು ರಕ್ಷಿಸಲು ಮತ್ತು ಭೂಕುಸಿತ, ಪ್ರವಾಹಕ್ಕೆ ಒಳಗಾಗುವ ಸಂಭವವಿರುವ ಪ್ರದೇಶಗಳಲ್ಲಿ ವಾಸಿಸುತ್ತಿರುವವರನ್ನು ಸ್ಥಳಾಂತರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಎಲ್ಲಾ ಸರ್ಕಾರಿ ಸಂಸ್ಥೆಗಳಿಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ವಿಜಯನ್ ತಿಳಿಸಿದ್ದಾರೆ.

ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ನಿರಾಶ್ರಿತರ ಶಿಬಿರಗಳನ್ನು ತೆರೆಯುವಂತೆ ಮತ್ತು ಶಿಬಿರಗಳಲ್ಲಿ ಕೋವಿಡ್ ಪ್ರೋಟೋಕಾಲ್ ಅನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.

ಭಾರತೀಯ ಹವಾಮಾನ ಇಲಾಖೆಯು ಪತ್ತನಂತಿಟ್ಟ, ಕೊಟ್ಟಾಯಂ, ಎರ್ನಾಕುಲಂ, ಇಡುಕ್ಕಿ ಮತ್ತು ತ್ರಿಶೂರ್ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ರಾಜ್ಯದ ತಿರುವನಂತಪುರಂ, ಕೊಲ್ಲಂ, ಅಲಪುಳ, ಪಾಲಕ್ಕಾಡ್, ಮಲಪ್ಪುರಂ, ಕೋಯಿಕ್ಕೋಡ್ ಮತ್ತು ವಯನಾಡ್ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ತಿರುವನಂತಪುರಂನಲ್ಲಿ ಭಾರಿ ಮಳೆಯಿಂದಾಗಿ ಪ್ರವಾಸಿ ತಾಣಗಳಿಗೆ ಭೇಟಿ ನೀಡದಂತೆ, ನದಿಗಳು ಮತ್ತು ಇತರ ಜಲಮೂಲಗಳ ಬಳಿ ಹೋಗದಂತೆ ಅಧಿಕಾರಿಗಳು ಜನರಿಗೆ ಸಲಹೆ ನೀಡಿದ್ದಾರೆ. ಕೊಲ್ಲಂ ಮತ್ತು ಕೊಟ್ಟಾಯಂ ಜಿಲ್ಲೆಗಳು ಸೇರಿದಂತೆ ಹಲವು ಸ್ಥಳಗಳಲ್ಲಿ ರಸ್ತೆಗಳು ಕುಸಿದಿವೆ.

Spread the love

Leave a Reply

Your email address will not be published. Required fields are marked *