ನಟ ಸುಶಾಂತ್ ಸಿಂಗ್ ಕುಟುಂಬದ ಸದಸ್ಯರು ತೆರಳುತ್ತಿದ್ದ ವಾಹನಕ್ಕೆ ಅಪಘಾತ; ಐವರ ದುರ್ಮರಣ
ಕಳೆದ ವರ್ಷ ಆತ್ಮಹತ್ಯೆಗೆ ಶರಣಾಗಿದ್ದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಕುಟುಂಬದ ಸದಸ್ಯರು ಪ್ರಯಾಣಿಸುತ್ತಿದ್ದ ವಾಹನವು ಅಪಘಾತಕ್ಕೀಡಾಗಿದ್ದು, ಘಟನೆಯಲ್ಲಿ ಕನಿಷ್ಠ ಐವರು ಸದಸ್ಯರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ತೀವ್ರ ಗಾಯಗೊಂಡಿರುವ ಬಾಲ್‌ಮುಕುಂದ್ ಸಿಂಗ್ ಮತ್ತು ದಿಲ್‌ಖುಷ್ ಸಿಂಗ್ ಅವರನ್ನು ಪಾಟ್ನಾಕ್ಕೆ ಕರೆದೊಯ್ಯಲಾಗಿದ್ದು, ಬಾಲ್ಮಿಕಿ ಸಿಂಗ್ ಹಾಗೂ ತೋನು ಸಿಂಗ್ ಅವರನ್ನು ಲಖಿಸರಾಯ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಿಹಾರದ ಲಖಿಸರಾಯ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 333ರಲ್ಲಿ ಮಂಗಳವಾರ ಬೆಳಿಗ್ಗೆ ಸುಶಾಂತ್ ಸಿಂಗ್ ರಜಪೂತ್ ಅವರ ಕುಟುಂಬದ ಸದಸ್ಯರು ಪ್ರಯಾಣಿಸುತ್ತಿದ್ದಾಗ ವಾಹನವು ಟ್ರಕ್‌ಗೆ ಡಿಕ್ಕಿಯಾಗಿದ್ದು ಐವರು ಮೃತಪಟ್ಟಿದ್ದಾರೆ.
ಹರಿಯಾಣದ ಹಿರಿಯ ಪೊಲೀಸ್ ಅಧಿಕಾರಿ ಒಪಿ ಸಿಂಗ್ ಅವರ ಸಹೋದರಿ ಗೀತಾ ದೇವಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಪಾಟ್ನಾದಿಂದ ವಾಪಾಸ್ಸಾಗುತ್ತಿದ್ದರು. ಓಪಿ ಸಿಂಗ್ ಅವರು ಸುಶಾಂತ್ ಸಿಂಗ್ ರಜಪೂತ್ ಅವರ ಸೋದರ ಮಾವನಾಗಿದ್ದಾರೆ. ಸುಶಾಂತ್ ಸಿಂಗ್ ಅವರು 2020ರ ಜೂನ್ 14ರಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು.
ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ಭೀಕರ ಅಪಘಾತ : 7 ಜನ ದುರ್ಮರಣ – 13 ಮಂದಿಗೆ ಗಾಯ
ಹಲ್ಸಿ ಪೊಲೀಸ್ ಠಾಣೆ ವ್ಯಾಪ್ತಿಯ ಪಿಪ್ರಾದ ಪ್ರೌಢಶಾಲೆ ಬಳಿ ಅಪಘಾತ ಸಂಭವಿಸಿದೆ. ಲಖಿಸರಾಯ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಶೀಲ್ ಕುಮಾರ್, “ಟ್ರಕ್ ಮತ್ತು ಸುಮೋ [ಎಸ್‌ಯುವಿ] ನಡುವೆ ಭಾರಿ ಡಿಕ್ಕಿ ಸಂಭವಿಸಿದ್ದು, ಹತ್ತು ಜನರು ಪಾಟ್ನಾದಿಂದ ಹಿಂತಿರುಗುತ್ತಿದ್ದರು. ಸುಮೋ ಚಾಲಕ ಸೇರಿದಂತೆ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ನಾಲ್ವರು ಗಾಯಾಳುಗಳನ್ನು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ರವಾನಿಸಲಾಗಿದೆ” ಎಂದು ತಿಳಿಸಿದ್ದಾರೆ.
ಗಾಯಗೊಂಡಿರುವ ಬಾಲ್‌ಮುಕುಂದ್ ಸಿಂಗ್ ಮತ್ತು ದಿಲ್ ಖುಷ್ ಸಿಂಗ್ ಇಬ್ಬರನ್ನು ಉತ್ತಮ ಚಿಕಿತ್ಸೆಗಾಗಿ ಪಾಟ್ನಾಗೆ ಕಳುಹಿಸಲಾಗಿದ್ದು, ಉಳಿದ ಇಬ್ಬರಾದ ಬಾಲ್ಮಿಕಿ ಸಿಂಗ್ ಮತ್ತು ತೋನು ಸಿಂಗ್ ಅವರನ್ನು ಲಖಿಸರಾಯ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಲಖಿಸರಾಯ್ ಆಸ್ಪತ್ರೆಗೆ ರವಾನಿಸಲಾಗಿದೆ.
ಮೃತರನ್ನು ಲಾಲ್ಜಿತ್ ಸಿಂಗ್ (ಒಪಿ ಸಿಂಗ್ ಅವರ ಸೋದರ ಸಂಬಂಧಿ), ಅವರ ಇಬ್ಬರು ಮಕ್ಕಳಾದ ಅಮಿತ್ ಶೇಖರ್ ಅಲಿಯಾಸ್ ನೇಮಾನಿ ಸಿಂಗ್ ಮತ್ತು ರಾಮಚಂದ್ರ ಸಿಂಗ್ ಎಂದು ಗುರುತಿಸಲಾಗಿದೆ. ಉಳಿದವರನ್ನು ಬೇಬಿದೇವಿ, ಅನಿತಾದೇವಿ ಮತ್ತು ಚಾಲಕ ಪ್ರೀತಂ ಕುಮಾರ್ ಎಂದು ಗುರುತಿಸಲಾಗಿದೆ. ಸಾವಿಗೀಡಾಗಿರುವ ಕುಮಾರ್, ಇದೇ ಕುಟುಂಬದವರೇ ಎಂಬುದು ಖಚಿತವಾಗಿಲ್ಲ.
ಜಮುಯಿ ಜಿಲ್ಲೆಯ ಭಂಡಾರ್ ಗ್ರಾಮದಲ್ಲಿನ ತಮ್ಮ ಮನೆಗೆ ಕುಟುಂಬವು ಹಿಂದಿರುಗುತ್ತಿದ್ದಾಗ ಅವರ ವಾಹನವು ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಭೀಕರ ಅಪಘಾತ: ಅಂಗಡಿ ಬಳಿ ಕುಳಿತಿದ್ದವರ ಮೇಲೆ ಲಾರಿ ಹರಿದು ಇಬ್ಬರ ದಾರುಣ ಸಾವು