ಐತಿಹಾಸಿಕ ರೈತ ಹೋರಾಟಕ್ಕೆ ತೆರೆ: ಸಂಭ್ರಮದ ಮೆರವಣಿಗೆಯೊಂದಿಗೆ ಪಂಜಾಬ್‌ನತ್ತ ರೈತರು!

ದೆಹಲಿ ಗಡಿಯಲ್ಲಿ ಕಳೆದ ಒಂದು ವರ್ಷದಿಂದ ನಡೆಯುತ್ತಿರುವ ರೈತ ಹೋರಾಟ ಯಶಸ್ವಿಯೊಂದಿಗೆ ತೆರೆ ಕಾಣುತ್ತಿದೆ. ರೈತರ ಎಲ್ಲಾ ಹಕ್ಕೊತ್ತಾಯಗಳನ್ನು ಒಪ್ಪಿಕೊಂಡಿರುವ ಕೇಂದ್ರ ಸರ್ಕಾರ, ಅವುಗಳನ್ನು ಈಡೇರಿಸುವುದಾಗಿ ಲಿಖಿತ ಭರವಸೆ ನೀಡಿದ ನಂತರ ಸಂಯುಕ್ತ ಕಿಸಾನ್ ಮೋರ್ಚಾವು ರೈತ ಹೋರಾಟ ಕೊನೆಗೊಳಿಸಲು ತೀರ್ಮಾನಿಸಲಾಗಿದೆ.

ಈ ಹಿನ್ನಲೆಯಲ್ಲಿ, ದೆಹಲಿ ಗಡಿ ಮಾತ್ರವಲ್ಲದೆ ಪಂಜಾಬ್ ಹಾಗೂ ಹರಿಯಾಣದ ಹಳ್ಳಿ-ಹಳ್ಳಿಗಳಲ್ಲಿಯೂ ನಡಯುತ್ತಿದ್ದ ಪ್ರತಿಭಟನೆಗಳನ್ನು ಡಿ. 11ರಿಂದ ಕೊನೆಗೊಳಿಸಲು ಪಂಜಾಬ್‌ನ 32 ಸಂಘಟನೆಗಳು ನಿರ್ಧರಿಸಿವೆ.

ಎಂಎಸ್‌ಪಿಗೆ ಶಾಸನಬದ್ಧ ಮಾನ್ಯತೆ, ರೈತರ ಮೇಲಿನ ಎಲ್ಲಾ ಪೊಲೀಸ್ ಪ್ರಕರಣಗಳನ್ನು ವಾಪಸ್ ಪಡೆಯುವುದು, ಹುತಾತ್ಮ ರೈತ ಕುಟುಂಬಕ್ಕೆ ಪರಿಹಾರ ಮತ್ತು ಸರ್ಕಾರಿ ಉದ್ಯೋಗ, ವಿದ್ಯುತ್ ಮಸೂದೆ ಹಿಂಪಡೆಯುವುದು ಮತ್ತು ಕೃಷಿ ತ್ಯಾಜ್ಯ ಸುಡುವುದನ್ನು ಅಪರಾಧೀಕರಿಸುವುದಕ್ಕೆ ತಡೆಗೆ ಕೇಂದ್ರ ಸರ್ಕಾರ ಒಪ್ಪಿಕೊಂಡಿದ್ದು ಇದನ್ನು ಅಧಿಕೃತವಾಗಿ ಲಿಖಿತ ರೂಪದಲ್ಲಿ ಬರೆದು ಸಂಯುಕ್ತ ಕಿಸಾನ್ ಮೋರ್ಚಾಗೆ ನೀಡಿದೆ.

ನಂತರ ಪಂಜಾಬ್‌ನ 32 ರೈತ ಸಂಘಗಳು ಹೋರಾಟ ಅಂತ್ಯಗೊಳಿಸಿ ವಿಜಯೀ ಮೆರವಣಿಗೆಯ ಮೂಲಕ ಪಂಜಾಬ್‌ಗೆ ತೆರಳಲು ನಿರ್ಧರಿಸಿವೆ. ಇಂದು ಸಂಜೆ ದೆಹಲಿ ಗಡಿಗಳಲ್ಲಿ ವಿಜಯೋತ್ಸವ ಆಚರಿಸಲಿದ್ದು, ಶನಿವಾರ (ಡಿ.11) ದಿಂದ ಪಂಜಾಬ್ ಕಡೆಗೆ ವಿಜಯೀ ಮೆರವಣಿಗೆ ಆರಂಭವಾಗಲಿದೆ ಎಂದು ಟ್ರಾಕ್ಟರ್‌ ಟು ಟ್ವಿಟರ್ ಟ್ವೀಟ್ ಮೂಲಕ ದೃಢಪಡಿಸಿದೆ.

  1. ಇಂದು ಡಿಸೆಂಬರ್ 9 ರಂದು ಸಂಜೆ 5:30 ಕ್ಕೆ ಸಿಂಘು ಗಡಿಯಲ್ಲಿ ಫತೇ ಅರ್ದಾಸ್ (ವಿಜಯೋತ್ಸವ) ನಡೆಯಲಿದೆ.
  2. ಡಿಸೆಂಬರ್ 11 ರ ಶನಿವಾರ ಸಿಂಘು ಮತ್ತು ಟಿಕ್ರಿ ಗಡಿಯಿಂದ ಫತೇಹ್ ಮೆರವಣಿಗೆ (ವಿಜಯೀ ಮೆರವಣಿಗೆ) ಆರಂಭವಾಗುತ್ತದೆ.
  3. ಡಿಸೆಂಬರ್ 13ರಂದು ಅಮೃತಸರದ ಗೋಲ್ಡನ್ ಟೆಂಪಲ್ ಮತ್ತು ದರ್ಬಾರ್ ಸಾಹಿಬ್ ನಮಸ್ಕರಿಸುವ ಕಾರ್ಯಕ್ರಮ.
  4. ಡಿಸೆಂಬರ್ 15 ರಂದು ಪಂಜಾಬ್‌ನಲ್ಲಿ ವಿಜಯೀ ಮೆರವಣಿಗೆ ಅಂತ್ಯವಾಗಲಿದೆ.

    ಈ ವಿಜಯೀ ಮೆರವಣಿಗೆಗೆ ಪಂಜಾಬ್ ಸರ್ಕಾರ ಕೆಲವು ಸಿದ್ದತೆಗಳನ್ನು ಮಾಡಿಕೊಡಬೇಕೆಂದು ಪಂಜಾಬ್ ಸರ್ಕಾರಕ್ಕೆ ರೈತರು ಪತ್ರ ಬರೆದಿದ್ದಾರೆ. ಅವುಗಳೆಂದರೆ

  • ‘ಫತೇ ಮಾರ್ಚ್ (ವಿಜಯೀ ಮೆರವಣಿಗೆ)ಗೆ’ ಹೂವುಗಳನ್ನು ಸುರಿಸುವುದಕ್ಕಾಗಿ ವಿಮಾನ ವ್ಯವಸ್ಥೆ ಮಾಡಬೇಕು.
  • ಎಲ್ಲಾ ಹೆದ್ದಾರಿಗಳಲ್ಲಿ ಸ್ವಾಗತ ಫಲಕಗಳನ್ನು ಹಾಕಬೇಕು.
  • ಫತೇ ಮಾರ್ಚ್ ಸ್ವಾಗತಿಸಲು ಪಂಜಾಬ್‌ನಲ್ಲಿ ಮೂರು ದಿನಗಳ ರಜೆ ಘೋಷಿಸಬೇಕು.
  • ಪಂಜಾಬ್‌ನ ಪ್ರತಿ ಜಿಲ್ಲೆಯಲ್ಲಿ ಕಿಸಾನ್ ಘರ್ (ರೈತ ಸಂಪರ್ಕ ಕೇಂದ್ರ) ಸ್ಥಾಪಿಸಬೇಕು.
  • ಕಿಸಾನ್ ಮೋರ್ಚಾದ ಮ್ಯೂಸಿಯಂ ಸ್ಥಾಪಿಸಬೇಕು.
  • ಲುಧಿಯಾನದಲ್ಲಿ 200 ಅಡಿ ರಸ್ತೆ (ಫುಲ್ಲನ್ವಾಲ್ ಚೌಕ್‌ನಿಂದ ಗಿಲ್ ರಸ್ತೆ) ‘ಶಹೀದ್ ಕಿಸಾನ್ ರಸ್ತೆ’ ಎಂದು ಘೋಷಿಸಬೇಕು (ಜನವರಿಯಲ್ಲಿ ಇದೇ ರಸ್ತೆಯಲ್ಲಿ ಕಿಸಾನ್ ಶಹೀದ್ ಮಾರ್ಚ್ ಆಯೋಜಿಸಲಾಗಿತ್ತು)

ಒಟ್ಟಿನಲ್ಲಿ ರೈತರು ಅದ್ವಿತೀಯ ಗೆಲುವು ಸಾಧಿಸಿ ಪಂಜಾಬ್‌ಗೆ ಮರಳಿ ಹೊರಟಿದ್ದಾರೆ. ಐತಿಹಾಸಿಕ ರೈತ ಹೋರಾಟ ಚಿರಸ್ಥಾಯಿಯಾಗಿ ಉಳಿಯುವಂತೆ ಮಾಡಿದ್ದಾರೆ.

ಇದನ್ನೂ ಓದಿ: ರೈತಾಂದೋಲನ ವಾರ್ಷಿಕೋತ್ಸವ: ದೆಹಲಿ ಗಡಿಗಳಲ್ಲಿ ರೈತರಿಂದ ರಕ್ತದಾನ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights