Fact Check: ಜರ್ಮನಿಯಲ್ಲಿ ಆಕಾಶದಿಂದ ಅಜಾನ್ ಕೇಳಿಸಿತೇ?; ಕಾಲ್ಪನಿಕ ಹೇಳಿಕೆ ಜೊತೆಗೆ ಹಳೆಯ ವಿಡಿಯೋ ವೈರಲ್

ಜರ್ಮನಿಯ ಬರ್ಲಿನ್‌ನಲ್ಲಿ ಇಸ್ಲಾಮಿನ ಪ್ರಾರ್ಥನೆಯ ಕರೆಯಾದ ಅಜಾನ್ ಆಕಾಶದಿಂದ ಕೇಳಿಸುತ್ತಿದೆ ಮತ್ತು ಈ ಧ್ವನಿಯನ್ನು ಜನರು ರೆಕಾರ್ಡ್ ಮಾಡಲು ಪ್ರಾರಂಭಿಸಿದ್ದು, ಇದು ನೋಡುಗರನ್ನು ಆಶ್ಚರ್ಯಗೊಳಿಸಿದೆ ಎಂಬ ಹೇಳಿಕೆಯೊಂದಿಗೆ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗುತ್ತಿದೆ. ಈ ಘಟನೆ ಪವಾಡಗಳಿಗೇನೂ ಕಡಿಮೆ ಇಲ್ಲ ಎಂಬಂತೆ ಬಿಂಬಿಸಲಾಗುತ್ತಿದೆ. ಫೇಸ್‌ಬುಕ್ ಬಳಕೆದಾರರು ವಿಡಿಯೋವನ್ನು ಹಂಚಿಕೊಂಡು ಅಜಾನ್‌ ಬಗ್ಗೆ ಪ್ರಚಾರ ಮಾಡಿದ್ದಾರೆ. (ಪೋಸ್ಟ್‌ನ ಆರ್ಕೈವ್ ಲಿಂಕ್ ಇಲ್ಲಿದೆ)

2020 ರಲ್ಲಿ, ಫೇಸ್‌ಬುಕ್ ಬಳಕೆದಾರ ಮೊಹಮ್ಮದ್ ಅಖ್ತರ್ ವೀಡಿಯೊ ಮತ್ತು ಅದರ ಜೊತೆಗಿನ ಹೇಳಿಕೆಯನ್ನು ಹಂಚಿಕೊಂಡಿದ್ದರು. ಅದರ ಆರ್ಕೈವ್ ಲಿಂಕ್ ಇಲ್ಲಿ ನೋಡಬಹುದು.

ಈ ವಿಡಿಯೋ ಫೇಸ್‌ಬುಕ್‌ನಲ್ಲಿ ವ್ಯಾಪಕವಾಗಿ ವೈರಲ್‌ ಅಗಿದೆ. ಅದೇ ಸಂದೇಶದೊಂದಿಗೆ ವಾಟ್ಸಾಪ್‌ನಲ್ಲೂ ಹಂಚಿಕೊಳ್ಳಲಾಗಿದೆ.

ಸತ್ಯ-ಪರಿಶೀಲನೆ:

ವೈರಲ್ ವೀಡಿಯೊವನ್ನು ಸೂಕ್ಷ್ಮವಾಗಿ ನೋಡಿದರೆ, ನಾವು ಗಮನಿಸಬೇಕಾದ ಕೆಲವು ವಿವರಗಳು ಕಂಡುಬರುತ್ತವೆ. ವಿಡಿಯೋದಲ್ಲಿರುವ ಬಹು-ಬಣ್ಣದ ಕಟ್ಟಡದ ಸ್ಕ್ರೀನ್‌ ಶಾಟ್‌ಅನ್ನು ರಿವರ್ಸ್‌ ಇಮೇಜ್‌ ಮೂಲಕ ಹುಡುಕಿದಾಗ, ಇದು ಜರ್ಮನಿಯ ಬರ್ಲಿನ್‌ನ ಫ್ಲುಘಾಫೆನ್‌ಸ್ಟ್ರಾಸ್ ಬೀದಿಯಲ್ಲಿರುವ ಕಟ್ಟಡವೆಂದು ಕಂಡುಬಂದಿದೆ. ಅದಕ್ಕೆ ಸಂಬಂಧಿಸಿದ ಕೆಲವು ಲಿಂಕ್‌ಗಳು ದೊರೆತಿವೆ.

ಗೂಗಲ್ ಸ್ಟ್ರೀಟ್ ವ್ಯೂ ಬಳಸಿ ನೋಡಿದಾಗ, ಈ ಕಟ್ಟಡದ ಪಕ್ಕದಲ್ಲಿ ದಾರ್ ಅಸ್ಸಲಾಮ್ ಮಸೀದಿ ಇರುವುದು ತಿಳಿದು ಬಂದಿದೆ. ಸ್ಟ್ರೀಟ್ ವ್ಯೂನಲ್ಲಿ ಪಟ್ಟಿ ಮಾಡಲಾದ ಫೋಟೋ 2008 ರದ್ದಾಗಿದೆ ಮತ್ತು ಅಂದಿನಿಂದ ಕಟ್ಟಡದ ಬಾಹ್ಯ ಗೋಡೆಯ ಬಣ್ಣವನ್ನು ಬದಲಾಯಿಸಲಾಗಿದೆ.

ಕೆಳಗಿನ Google ಸ್ಟ್ರೀಟ್ ವ್ಯೂ ಚಿತ್ರವನ್ನು ನಾವು ವೈರಲ್‌ ವೀಡಿಯೊದಲ್ಲಿರುವ ಸ್ಕ್ರೀನ್‌ಗ್ರಾಬ್‌ಗೆ ಹೋಲಿಸಬಹುದು. ಗೋಡೆಗಳ ಬಣ್ಣವನ್ನು ಹೊರತುಪಡಿಸಿ ಉಳಿದ ಹೋಲಿಕೆಗಳು ಸ್ಪಷ್ಟವಾಗಿವೆ. ಎರಡೂ ಕಟ್ಟಡಗಳ ಪಕ್ಕದಲ್ಲಿ ಮಸೀದಿಯನ್ನು ಸ್ಪಷ್ಟವಾಗಿ ಕಾಣಬಹುದು.

ಇನ್ನೂ ಹೆಚ್ಚಿನ ಮಾಹಿತಿಗಾಗಿ ಹುಡುಕಿದಾಗ, ರಪ್ಟ್‌ಲಿ ಅವರ ವೀಡಿಯೊ ವರದಿ ದೊರೆತಿದೆ. ಏಪ್ರಿಲ್ 5, 2020 ರಂದು, ಜರ್ಮನಿಯ ಬರ್ಲಿನ್‌ನಲ್ಲಿ ಕೊರೊನಾ ಕಾರಣಕ್ಕಾಗಿ ವಿಧಿಸಲಾಗಿದ್ದ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮಾನದಂಡಗಳನ್ನು ಉಲ್ಲಂಘಿಸಿದ್ದಕ್ಕಾಗಿ, ಮಸೀದಿಯ ಪ್ರಾರ್ಥನೆಯ ಕರೆ ಬೇಗನೆ ಕೊನೆಗೊಂಡಿತು ಎಂದು ಹಲವಾರು ಮಾಧ್ಯಮಗಳು ವರದಿ ಮಾಡಿವೆ. ವಿಡಿಯೋದ 0:21 ಮಾರ್ಕ್‌ನಲ್ಲಿ, ಒಬ್ಬ ವ್ಯಕ್ತಿಯು ಹಾಡುವುದನ್ನು ಸ್ಪಷ್ಟವಾಗಿ ಕಾಣಬಹುದು. ಹೀಗಾಗಿ, ಅಜಾನ್ ಆಕಾಶದಿಂದ ಕೇಳಿಬಂದಿಲ್ಲ ಎಂದು ಖಚಿತವಾಗಿ ತಿಳಿಯಬಹುದು.

ಏಪ್ರಿಲ್ 4, 2020 ರ ರಪ್ಟ್‌ಲಿ ಲೇಖನದ ಪ್ರಕಾರ, ಬರ್ಲಿನ್‌ನ ದಾರ್ ಅಸ್ಸಲಾಮ್ ಮಸೀದಿಯ ಹೊರಗೆ ಸುಮಾರು 300 ಜನರು ಜಮಾಯಿಸಿದ್ದಾರೆ. ಆದಾಗ್ಯೂ, ಅವರು ಸಾಮಾಜಿಕ ಅಂತರದ ನಿಯಮಗಳನ್ನು ಉಲ್ಲಂಘಿಸಿತು. ನಂತರ ಗುಂಪು ಚದುರಿತು.

ಇದನ್ನು ಸಂಕ್ಷಿಪ್ತವಾಗಿ ಹೇಳುವುದಾದರೆ, ಜರ್ಮನಿಯ ಮಸೀದಿಯೊಂದರ ಧ್ವನಿವರ್ಧಕದಲ್ಲಿ ಪ್ರಾರ್ಥನೆಯ ಕರೆಯನ್ನು ಪ್ರಸಾರ ಮಾಡಲಾಗಿತ್ತು. ಈ ಧ್ವನಿಯು ಬೀದಿಗಳಲ್ಲಿ ಗುಂಪನ್ನು ಸೇರಲು ಪ್ರೇರೇಪಿಸಿತು. ಈ ಘಟನೆಯ ವಿಡಿಯೋವನ್ನು ಅಜಾನ್ ಪ್ರಾರ್ಥನೆಗಳು ಆಕಾಶದಿಂದ ಕೇಳಿಬರುತ್ತಿದೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.

ಕೃಪೆ: ಆಲ್ಟ್‌ ನ್ಯೂಸ್‌

ಇದನ್ನೂ ಓದಿ: Fact Check: ಯುಪಿಯಲ್ಲಿ ಮುಲಾಯಂ ಸಿಂಗ್ ಅಧಿಕಾರದಲ್ಲಿದ್ದಾಗ ಸಂತರ ಮೇಲೆ ದಾಳಿ ನಡೆಸಲಾಗಿದೆ ಎಂದು ಗುಜರಾತ್‌ನ ಚಿತ್ರವನ್ನು ಹಂಚಿಕೊಳ್ಳಲಾಗಿದೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights