Fact Check: ಗುಜರಾತ್‌ನ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ‘ಪಾಕಿಸ್ತಾನ ಪರ’ ಘೋಷಣೆ ಕೂಗಿದ್ದು ಸತ್ಯವೇ?

ಗುಜರಾತ್‌ನ ಕಛ್‌ನಲ್ಲಿ ಜನರ ಗುಂಪೊಂದು ಘೋಷಣೆಗಳನ್ನು ಕೂಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಚುನಾವಣಾ ಫಲಿತಾಂಶ ಪ್ರಕಟವಾದ ನಂತರ ಕಚ್ಛ್‌ನ ದುಧೈ ಗ್ರಾಮದಲ್ಲಿ ಸ್ಥಳೀಯರು ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಘೋಷಣೆ ಕೂಗಿದ್ದಾರೆ ಎಂಬ ಹೇಳಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ.

ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶದ ಬಳಿಕ ಈ ಘಟನೆ ನಡೆದಿದೆ ಎಂದು ನ್ಯೂಸ್ 24 ವರದಿ ಮಾಡಿದೆ. ನಂತರ ಚಾನಲ್ ತನ್ನ ಟ್ವೀಟ್ ಅನ್ನು ಅಳಿಸಿ ಹಾಕಿದೆ. ಆದರ ಆರ್ಕೈವ್ ಮಾಡಿದ ಲಿಂಕ್ ಅನ್ನು ಇಲ್ಲಿ ನೋಡಬಹುದು.

ವಿಟಿವಿ ಗುಜರಾತಿ ಸೇರಿದಂತೆ ಹಲವಾರು ಸ್ಥಳೀಯ ಮಾಧ್ಯಮಗಳು ಕೂಡ ಹೇಳಿಕೆಯೊಂದಿಗೆ ವಿಡಿಯೋವನ್ನು ಪ್ರಚಾರ ಮಾಡಿವೆ. ‘ವೈಬ್ಸ್ ಆಫ್ ಇಂಡಿಯಾ‘ ಹೆಸರಿನ ವೆಬ್ ಪೋರ್ಟಲ್ ಕೂಡ ವೈರಲ್ ಹೇಳಿಕೆಗಳಿಗೆ ಕವರೇಜ್ ನೀಡಿದೆ.

2021-12-23 17_48_25-Window

ಕಚ್‌ನ ದುಧೈನಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆಗಳನ್ನು ಕೂಗಲಾಗಿದೆ ಎಂಬ ಹೇಳಿಕೆಯೊಂದಿಗೆ ವೀಡಿಯೊವನ್ನು ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲಿಯೂ ಹಂಚಿಕೊಳ್ಳಲಾಗಿದೆ.

ಸತ್ಯ-ಪರಿಶೀಲನೆ

ವೀಡಿಯೋವನ್ನು ಕೂಲಂಕುಷವಾಗಿ ಪರಿಶೀಲಿಸಿದ ನಂತರ, ಅಲ್ಲಿ ಕೂಗಲಾಗಿರುವ ಘೋಷಣೆಯು ‘ಪಾಕಿಸ್ತಾನ್ ಜಿಂದಾಬಾದ್’ ಅಲ್ಲ ಎಂದು ಗೊತ್ತಾಯಿತು. ರೀನಾಬೆನ್ ರಾಧುಭಾಯಿ ಕೋಠಿವಾಡ್ ಅವರನ್ನು ವಿಜೇತ ಅಭ್ಯರ್ಥಿ ಎಂದು ಘೋಷಿಸಿದ ಗ್ರಾಮ ಪಂಚಾಯಿತಿ ಚುನಾವಣೆಯ ಫಲಿತಾಂಶ ಪ್ರಕಟವಾದ ನಂತರ ಈ ವೀಡಿಯೊವನ್ನು ಸೆರೆಹಿಡಿಯಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಕೀವರ್ಡ್‌ಗಳನ್ನು ಬಳಸಿ ಹುಡುಕಿದಾಗ, ದೈನಿಕ್ ಭಾಸ್ಕರ್ ಅವರ ಗುಜರಾತಿ ಪ್ರಕಾಶನ ದಿವ್ಯಾ ಭಾಸ್ಕರ್‌ನಲ್ಲಿ ಪ್ರಕಟವಾದ ವರದಿ ದೊರೆತಿದೆ. ಚುನಾವಣಾ ಫಲಿತಾಂಶ ಪ್ರಕಟವಾದ ನಂತರ ಕಚ್ಛ್‌ನ ದುಧೈ ಗ್ರಾಮದ ಅಂಜಾರ್ ಪ್ರದೇಶದಲ್ಲಿ ಜನರು ಘೋಷಣೆಗಳನ್ನು ಕೂಗಿದರು ಎಂದು ಔಟ್‌ಲೆಟ್ ವರದಿ ಮಾಡಿದೆ. ಈ ವಿಡಿಯೋವನ್ನು ಭಾರತ ವಿರೋಧಿ ಘೋಷಣೆಯ ಸುಳ್ಳು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ಪೊಲೀಸರು ಈ ಹೇಳಿಕೆಯ ಬಗ್ಗೆ ತನಿಖೆ ನಡೆಸಿದ್ದಾರೆ ಮತ್ತು ಆ ವಿಡಿಯೋವನ್ನು ಜನರನ್ನು ತಪ್ಪುದಾರಿಗೆಳೆಯಲು ಬಳಸಲಾಗಿದೆ ಎಂದು ಪತ್ತೆಮಾಡಿದ್ದಾರೆ. ಸ್ಥಳೀಯರು ನಿಜವಾಗಿ ‘ರಾಧೂಭಾಯ್ ಜಿಂದಾಬಾದ್’ ಎಂದು ಘೋಷಣೆ ಕೂಗುತ್ತಿದ್ದಾರೆ ಎಂದು ಕಛ್ ಪೊಲೀಸ್ ವರಿಷ್ಠಾಧಿಕಾರಿ ಮಯೂರ್ ಪಟೇಲ್ ಹೇಳಿದ್ದಾರೆಂದು ವರದಿ ಉಲ್ಲೇಖಿಸಿದೆ.

ಈಸ್ಟ್ ಕಚ್ ಎಸ್‌ಪಿಯ ಟ್ವಿಟರ್ ಹ್ಯಾಂಡಲ್ ಕೂಡ ವೈರಲ್ ಹೇಳಿಕೆ ಸುಳ್ಳು ಎಂದು ಸ್ಪಷ್ಟಪಡಿಸಿದೆ. ವಿಡಿಯೋದಲ್ಲಿರುವವರು ‘ಪಾಕಿಸ್ತಾನ್ ಜಿಂದಾಬಾದ್’ ಅಲ್ಲ ‘ರಾಧೂಭಾಯ್ ಜಿಂದಾಬಾದ್’ ಎಂದು ಘೋಷಣೆ ಕೂಗುತ್ತಿದ್ದಾರೆ ಎಂದು ಟ್ವೀಟ್ ನಲ್ಲಿ ಹೇಳಲಾಗಿದೆ. ರಾಧುಭಾಯ್ ಅವರು ವಿಜೇತ ಅಭ್ಯರ್ಥಿ ರೀನಾಬೆನ್ ಅವರ ಪತಿ ಎಂದು ಸ್ಪಷ್ಟಪಡಿಸಿದ್ದಾರೆ.

ಎಸ್‌ಪಿ ಮಯೂರ್ ಪಟೇಲ್ ಅವರ ಕಚೇರಿಯನ್ನು ಸಂಪರ್ಕಿಸಿದಾಗ, ಜನರು ಪಾಕಿಸ್ತಾನದ ಪರ ಘೋಷಣೆಗಳನ್ನು ಕೂಗಿಲ್ಲ ಎಂದು ಅವರು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ಎಸ್‌ಪಿಯವರ ವಿಡಿಯೋ ಹೇಳಿಕೆಯು ಇಲ್ಲಿದೆ.

ನಿನ್ನೆ ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ದುದಾಯಿ ಗ್ರಾಮದ ಮಹಿಳಾ ಅಭ್ಯರ್ಥಿ ರೀನಾಬೆನ್ ರಾಧುಭಾಯಿ ಕೋತಿವಾಡ್ ಅವರನ್ನು ನೂತನ ಸರಪಂಚ್ ಆಗಿ ಘೋಷಿಸಲಾಯಿತು. ನಂತರ ರ್ಯಾಲಿಯನ್ನು ನಡೆಸಲಾಗಿತು. ಈ ಸಂದರ್ಭದಲ್ಲಿ ರ್ಯಾಲಿಯಲ್ಲಿ ಹಾಜರಿದ್ದವರು ‘ರಾಧೂಭಾಯ್ ಜಿಂದಾಬಾದ್’ ಎಂದು ಎರಡು ಬಾರಿ ಘೋಷಣೆ ಕೂಗಿದ್ದಾರೆ. ‘ಪಾಕಿಸ್ತಾನ್ ಜಿಂದಾಬಾದ್’ ಎಂಬ ಘೋಷವಾಕ್ಯ ಕೇಳಿಬರುತ್ತಿದೆ ಎಂಬ ಸುಳ್ಳು ಹೇಳಿಕೆಯೊಂದಿಗೆ ಇದರ ವಿಡಿಯೋವನ್ನು ಪ್ರಸಾರ ಮಾಡಲಾಗಿದೆ. ಆದಾಗ್ಯೂ, ನೀವು ಹತ್ತಿರದಿಂದ ಕೇಳಿದರೆ, ಜನರು ನಿಜವಾಗಿ ಏನೆಂದು ಕೂಗುತ್ತಿದ್ದಾರೆ ಎಂಬುದು ತಿಳಿಯುತ್ತದೆ.

“ಈ ದಾರಿತಪ್ಪಿಸುವ ಹೇಳಿಕೆಯೊಂದಿಗೆ ದೃಶ್ಯಗಳನ್ನು ಹಂಚಿಕೊಳ್ಳುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು” ಎಂದು ಎಸ್‌ಪಿ ಪಟೇಲ್ ಹೇಳಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಕಚ್ಛ್‌ನ ದುಧೈ ಗ್ರಾಮದಲ್ಲಿ ಸ್ಥಳೀಯರು ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆಗಳನ್ನು ಕೂಗಲಿಲ್ಲ. ವಿಡಿಯೋವನ್ನು ಬಳಸಿಕೊಂಡು ತಪ್ಪಾಗಿ ಹಂಚಿಕೊಳ್ಳಲಾಗಿದೆ.

ಕೃಪೆ: ಆಲ್ಟ್‌ನ್ಯೂಸ್‌

ಇದನ್ನೂ ಓದಿ: Fact Check: ಜರ್ಮನಿಯಲ್ಲಿ ಆಕಾಶದಿಂದ ಅಜಾನ್ ಕೇಳಿಸಿತೇ?; ಕಾಲ್ಪನಿಕ ಹೇಳಿಕೆ ಜೊತೆಗೆ ಹಳೆಯ ವಿಡಿಯೋ ವೈರಲ್

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights