ಫ್ಯಾಕ್ಟ್‌ಚೆಕ್ : ಹಿಂದೂ ಗೆಳತಿಗೆ ಚಾಕುವಿನಿಂದ ಇರಿದ ವ್ಯಕ್ತಿ ಮುಸ್ಲಿಮನಲ್ಲ! ಮತ್ತ್ಯಾರು?

ಮುಸ್ಲಿಂ ವ್ಯಕ್ತಿಯೊಬ್ಬ ತನ್ನ ಹಿಂದೂ ಗೆಳತಿಯ ಕತ್ತು ಕೊಯ್ದ ಚಾಕುವಿನಿಂದ ದಾಳಿ ಮಾಡಿರುವ ದೃಶ್ಯಗಳು ಎಂದು ಹೇಳುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಜನರ ಗುಂಪೊಂದು ವ್ಯಕ್ತಿಯೊಬ್ಬನನ್ನು ಸಾರ್ವಜನಿಕವಾಗಿ ಥಳಿಸುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದು.

ಮುಸ್ಲಿಂ ವ್ಯಕ್ತಿ ಹಿಂದೂ ಹುಡುಗಿಯನ್ನು ತನ್ನ ಜೊತೆ ಬರುವಂತೆ ಒತ್ತಾಯಿಸಿದ್ದಾನೆ, ಅದಕ್ಕೆ ಆಕೆ ಒಪ್ಪದಿದ್ದಾಗ ಸಾರ್ವಜನಿಕವಾಗಿ ಎಳೆದಾಡಲು ಪ್ರಾರಂಭಿಸಿದಾನೆ. ಆಗಲೂ ಆತ ಬಿಡದಿದ್ದಾಗ, ಕೂಗಿಕೊಳ್ಳಲು ಪ್ರಯತ್ನಿಸಿದ್ದಾಳೆ ಆಗ ಕೋಪಗೊಂಡ ಯುವಕ ಹುಡುಗಿಯ ಕುತ್ತಿಗೆಯ ಭಾಗಕ್ಕೆ ಚಾಕುವಿನಿಂದ ಹಲ್ಲೆ ನಡೆಸುತ್ತಾನೆ. ತಕ್ಷಣವೇ ಸಾರ್ವಜನಿಕರು ಹುಡುಗಿಯ  ಸಹಾಯಕ್ಕೆ ಧಾವಿಸಿ ಯುವಕನನ್ನು ಥಳಿಸುತ್ತಿರುವ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಹಾಗಿದ್ದರೆ ಈ ವಿಡಿಯೋ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸಲು, ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 16 ಸೆಪ್ಟೆಂಬರ್ 2019 ರಂದು ‘ಇಟಿವಿ ಭಾರತ್’ ಪ್ರಕಟಿಸಿದ ಲೇಖನದಲ್ಲಿ ವೀಡಿಯೊದ ಸ್ಕ್ರೀನ್‌ಗ್ರಾಬ್ ಕಂಡುಬಂದಿದೆ. ಚಿತ್ರವನ್ನು ಹಂಚಿಕೊಳ್ಳುವ ಈ ಸುದ್ದಿಯು ಲತೇಹರ್ ನಿವಾಸಿ ಅರವಿಂದ್ ಅವರನ್ನು ಥಳಿಸಲಾಗಿದೆ ಎಂದು ವರದಿ ಮಾಡಿದೆ. ರಾಂಚಿಯ ಪತ್ರಾಟು ಕಣಿವೆ ಬಳಿ ತನ್ನ ಗೆಳತಿಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸುತ್ತಿದ್ದ ವೇಳೆ ಸ್ಥಳೀಯರ ಗುಂಪೊಂದು ಆತನನ್ನು ಹಿಡಿದು ಚೆನ್ನಾಗಿ ಥಳಿಸಿದ್ದಾರೆ ಎಂದು ವರದಿಯಾಗಿದೆ.

ಘಟನೆಯ ವಿವರಗಳನ್ನು ವರದಿ ಮಾಡುತ್ತಾ, ಹಲವು ಇತರ ಸುದ್ದಿ ಸಂಸ್ಥೆಗಳು ಸೆಪ್ಟೆಂಬರ್ 2019 ರಲ್ಲಿ ಲೇಖನಗಳನ್ನು ಪ್ರಕಟಿಸಿವೆ. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ವರದಿಗಳ ಪ್ರಕಾರ, 15 ಸೆಪ್ಟೆಂಬರ್ 2019 ರಂದು ಅರವಿಂದ್ ಮತ್ತು ಅವರ ಗೆಳತಿ ಇಬ್ಬರೂ ರಾಂಚಿಯ ಪತ್ರಾಟ್ರು ಕಣಿವೆಗೆ ಭೇಟಿ ನೀಡಿದ್ದರು. ಪತ್ರಾಟ್ರು ಕಣಿವೆಯಿಂದ ಬೈಕ್‌ನಲ್ಲಿ ಹಿಂತಿರುಗುತ್ತಿದ್ದಾಗ ಅರವಿಂದ್ ತನ್ನ ಗೆಳತಿಗೆ ಬೇರೊಬ್ಬ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಆರೋಪಿಸಿ ಆಕೆಯೊಂದಿಗೆ ಜಗಳ ನಡೆಸಿದ್ದಾನೆ ಎನ್ನಲಾಗಿದೆ. ಜಗಳ ವಿಕೋಪಕ್ಕೆ ತಿರುಗಿ ಅರವಿಂದ್ ತನ್ನ ಗೆಳತಿಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಸಂತ್ರಸ್ತೆಯ ಕಿರುಚಾಟವನ್ನು ಕೇಳಿದ ಸ್ಥಳೀಯರು ಸ್ಥಳಕ್ಕಾಗಮಿಸಿ ಅರವಿಂದ್ ಕುಮಾರ್‌ಗೆ ಥಳಿಸಿ ಪಿಥೋರಿಯಾ ಪೊಲೀಸರಿಗೆ ಒಪ್ಪಿಸಿದ್ದಾರೆ.

ಅರವಿಂದ್ ಎಂಬ ವ್ಯಕ್ತಿಯು ತನ್ನ ಸ್ನೇಹಿತೆಯೊಂದಿಗೆ ಜಗಳ ನಡೆಸಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿದಾಗ ಅರವಿಂದ್ ಆಕೆಯ ಮೇಲೆ ದಾಳಿ ಮಾಡಿ ಆಕೆಯ ಮುಖ ಮತ್ತು ಕುತ್ತಿಗೆಯ ಭಾಗಕ್ಕೆ ಚಾಕುವಿನಿಂದ ಹಲ್ಲೆ ನಡೆಸಿ ಗಾಯಗೊಳಿಸಿದ್ದಾನೆ ಎಂದು ವರದಿಯಾಗಿದೆ. ರಾಂಚಿ (ಗ್ರಾಮೀಣ) ಎಸ್‌ಎಸ್‌ಪಿ, ಮಾತನಾಡಿ ಈ ಪ್ರಕರಣಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಲವ್ ಜಿಹಾದ್ ಬಣ್ಣ ಹಚ್ಚಲಾಗಿದೆ. ಆದರೆ ಆರೋಪಿ ಮತ್ತು ಸಂತ್ರಸ್ತೆ ಇಬ್ಬರೂ ಒಂದೇ ಜಿಲ್ಲೆಯವರು ಮತ್ತು ಒಂದೇ ಸಮುದಾಯದವರು  ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ತನ್ನ ಗೆಳತಿಗೆ ಬೇರೊಬ್ಬ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಇದೆ ಎಂದು ಆರೋಪಿಸಿ  ಆಕೆಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ  ಹಳೆಯ ವೀಡಿಯೊವನ್ನು, ಹಿಂದೂ ಹುಡುಗಿಯೊಂದಿಗೆ ಲವ್ ಜಿಹಾದ್ ನಡೆಸಿದ ಮುಸ್ಲಿಂ ವ್ಯಕ್ತಿ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಫ್ಯಾಕ್ಟ್‌ಲಿ

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಕೇದಾರನಾಥ ಹಿಂದೂ ಯಾತ್ರಿಗಳ ಮೇಲೆ ಹಲ್ಲೆ ನಡೆಸಿದ್ದು ಮುಸ್ಲಿಮರಲ್ಲ! ಮತ್ತ್ಯಾರು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights