ಫ್ಯಾಕ್ಟ್‌ಚೆಕ್ : ಗ್ಯಾಸ್ ಸಂಪರ್ಕ ಇದ್ದವರು ಡಿಸೆಂಬರ್ 31ರೊಳಗೆ ಕಡ್ಡಾಯವಾಗಿ KYC ಮಾಡಿಸಬೇಕೆ? ಈ ಸ್ಟೋರಿ ಓದಿ

“ಡಿಸೆಂಬರ್ 31ರೊಳಗೆ ಗ್ಯಾಸ್ ಸಂಪರ್ಕ ಇದ್ದವರು ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ, ಗ್ಯಾಸ್ ಏಜೆನ್ಸಿ ನೀಡಿದ ಪುಸ್ತಕ ಅಥವಾ ಕಾರ್ಡ್  ಈ ಮೂರನ್ನು ತೆಗೆದುಕೊಂಡು ತಮ್ಮ ಗ್ಯಾಸ್ ನೀಡುವ ಏಜೆನ್ಸಿಯ ಕಚೇರಿಗೆ ಹೋಗಿ ಕಡ್ಡಾಯವಾಗಿ KYC ಮಾಡಿಸಬೇಕು. KYC ಮಾಡಿಸಿದರೆ ನಿಮಗೆ ಜನವರಿ 1 ರಿಂದ 1ರಿಂದ ಪ್ರತೀ ಅನಿಲ ಗ್ರಾಹಕರಿಗೆ 500 ರೂ. ಸಬ್ಸಿಡಿ ಸಿಗುತ್ತದೆ. ಇಲ್ಲದಿದ್ದರೆ ‘ಅಡುಗೆ ಅನಿಲ’ವು 2024ರ ಜನವರಿ 1ರ ಬಳಿಕ ‘ವಾಣಿಜ್ಯ ಅನಿಲ’ವಾಗಿ ಮಾರ್ಪಾಡು ಹೊಂದಲಿದೆ. ಆಗ 1400 ರೂ ಹಣ ಖರ್ಚು ಮಾಡಬೇಕಾಗುತ್ತದೆ. ಇದರಿಂದ ನಿಮಗೆ ನಷ್ಟವಾಗಲಿದೆ. ಹಾಗಾಗಿ ತಕ್ಷಣ ‘ಗ್ಯಾಸ್ ಏಜೆನ್ಸಿದಾರರ ಕಚೇರಿಗೆ ತೆರಳಿ KYC ಮಾಡಿಸಿರಿ” ಎಂಬ ಪ್ರತಿಪಾದನೆಯೊಂದಿಗೆ ಪೋಸ್ಟ್‌ಅನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

‘ಅಡುಗೆ ಅನಿಲ’ ಗ್ರಾಹಕರಿಗೆ ‘ಕೆವೈಸಿ’ ಕಡ್ಡಾಯ ಎಂಬ ಗೊಂದಲ ಸೃಷ್ಟಿ

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ? ನಿಜವಾಗಿಯೂ ಗ್ರಾಹಕರು ಗ್ಯಾಸ್ ಏಜೆನ್ಸಿಗಳಿಗೆ ದಾಖಲೆ ಸಲ್ಲಿಸಿ KYC ಮಾಡಿಸದಿದ್ದರೆ ಜನವರಿ 1ರ ಬಳಿಕ ‘ವಾಣಿಜ್ಯ ಅನಿಲ’ವಾಗಿ ಮಾರ್ಪಾಡು ಹೊಂದಲಿದೆಯೇ? ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗ್ಯಾಸ್ ಏಜೆನ್ಸಿಗಳ ಡೀಲರ್ಸ್‌ಗಳನ್ನು ಸಂಪರ್ಕಿಸಿದಾಗ KYC ಅಪ್ಡೆಟ್ ಮಾಡಿಸುವಂತೆ ಸರ್ಕಾರವಾಗಲಿ ಅಥವಾ ನಾವಾಗಲಿ ಯಾವುದೇ ಪ್ರಕಟಣೆಯನ್ನು ಹೊರಡಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇಲಾಖೆಯಿಂದ ಸ್ಪಷ್ಟನೆ :

“ಅಡುಗೆ ಅನಿಲ ಪಡೆಯಲು ಕೆವೈಸಿ ಕಡ್ಡಾಯ ಎಂಬ ಸಂದೇಶವು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿ ಇಲಾಖೆಯ ಗಮನಕ್ಕೂ ಬಂದಿದ್ದು,  ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಸಂದೇಶ ಸುಳ್ಳು. ಉಜ್ವಲ ಗ್ಯಾಸ್ ಸಂಪರ್ಕ ಪಡೆದಿರುವವರಿಗೆ ಮಾತ್ರ ಆಧಾರ್ ದೃಢೀಕರಣವು ಕಡ್ಡಾಯವಾಗಿದೆ. ಉಳಿದ ಬಳಕೆದಾರರಿಗೆ ಗ್ಯಾಸ್ ಸಬ್ಸಿಡಿಯ ಬಗ್ಗೆ ಕೇಂದ್ರ ಸರಕಾರವು ಯಾವುದೇ ಘೋಷಣೆ ಈವರೆಗೆ ಮಾಡಿಲ್ಲ. ಹಾಗಾಗಿ ಯಾವ ಕಾರಣಕ್ಕೂ ಗ್ಯಾಸ್ ಬಳಕೆದಾರರು ಯಾವುದೇ ಗೊಂದಲಕ್ಕೊಳಕ್ಕೆ ಒಳಗಾಗಬಾರದು” ಎಂದು ಸ್ಪಷ್ಟಪಡಿಸಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಸಂದೇಶದ ಸತ್ಯಾಸತ್ಯತೆಯನ್ನು ಅರಿಯದ ಗ್ರಾಹಕರು ಗ್ಯಾಸ್ ಏಜೆನ್ಸಿಯ ಕಚೇರಿಗೆ ಅಲೆದಾಡುತ್ತಿದ್ದಾರೆ. ಕೆಲವರು ಕೆಲಸಕ್ಕೆ ರಜೆ ಹಾಕಿ ಮುಂಜಾನೆಯಿಂದಲೇ ಸರದಿ ಸಾಲಿನಲ್ಲಿ ನಿಲ್ಲುತ್ತಾರೆ. ಗ್ರಾಹಕರು ತಮ್ಮ ಬಳಿಗೆ ಯಾಕೆ ಬರುತ್ತಿದ್ದಾರೆ ಎಂಬ ಮಾಹಿತಿಯೂ ಬಹುತೇಕ ಏಜೆನ್ಸಿಗಳಿಗೂ ಇಲ್ಲ, ಕಚೇರಿಯ ಸಿಬ್ಬಂದಿಗಳಿಗೂ ಇಲ್ಲ.

ಯಾರೋ ಹರಿಯಬಿಟ್ಟ ಸಂದೇಶವನ್ನು ನಂಬಿಕೊಂಡು ಏಜೆನ್ಸಿಯ ಕಚೇರಿಗೆ ತಡಕಾಡುವುದು ಇದೀಗ ಎಲ್ಲರಿಗೂ ಸಮಸ್ಯೆಯಾಗಿ ಪರಿಣಮಿಸಿದೆ. ಆಹಾರ ಮತ್ತು ನಾಗರಿಕ ಇಲಾಖೆಯ ಕಚೇರಿಗೂ ಕೆಲವರು ದೂರವಾಣಿ ಕರೆ ಮಾಡಿ ಮಾಹಿತಿ ಪಡೆಯುತ್ತಿದ್ದಾರೆ. ಇಲಾಖೆಯ ಅಧಿಕಾರಿ/ಸಿಬ್ಬಂದಿ ವರ್ಗಕ್ಕೆ ಸ್ಪಷ್ಟನೆ ನೀಡಿ ಗೊಂದಲ ನಿವಾರಿಸುವುದು ಅನಿವಾರ್ಯವಾಗಿದೆ. ಒಟ್ಟಿನಲ್ಲಿ ಈ ಸಂದೇಶದ ಮೂಲಕ ಗ್ರಾಹಕರಲ್ಲಿ ಗೊಂದಲ ಸೃಷ್ಟಿಯಾಗಿದೆ.

ಇಲಾಖೆಯವರು ಹೇಳುತ್ತಿರುವಂತೆ, ಯಾರೆಲ್ಲ ಉಜ್ವಲ ಯೋಜನೆಯ ಫಲಾನುಭವಿಗಳೋ ಅವರು ಮಾತ್ರವೇ ಆಧಾರ್ ದೃಢೀಕರಣವನ್ನು ಕಡ್ಡಾಯವಾಗಿ ಮಾಡಿಸಬೇಕಿದೆ. ಉಳಿದಂತೆ ಯಾರು ಮಾಡುಸುವಂತಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ಡಿಸೆಂಬರ್ 31ರೊಳಗೆ ಗ್ಯಾಸ್ ಸಂಪರ್ಕ ಇದ್ದವರು ಕೆವೈಸಿ ಮಾಡಿಸದಿದ್ದರೆ, ಅನಿಲ ಸಂಪರ್ಕ ವಾಣಿಜ್ಯ ಅನಿಲ’ವಾಗಿ ಬದಲಾಗಲಿದೆ ಆಗ ಪ್ರತಿ ಸಿಲಿಂಡರ್‌ಗೆ 1400 ರೂಪಾಯಿ ಭರಿಸಬೇಕಿದೆ. ಹಾಗಾಗಿ ಎಲ್ಲರೂ ಕಡ್ಡಾಯವಾಗಿ ಕೆವೈಸಿ ಮಾಡಿಸಿ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಸಂದೇಶ ನಕಲಿ ಎಂಬುದು ಸ್ಪಷ್ಟವಾಗಿದೆ. ಉಜ್ವಲ ಗ್ಯಾಸ್ ಸಂಪರ್ಕ ಹೊಂದಿರುವರೋ ಅಂತಹವರಿಗೆ ಮಾತ್ರವೇ ಆಧಾರ್ ದೃಢೀಕರಣವನ್ನು ಕಡ್ಡಾಯವಾಗಿ ಮಾಡಿಸಬೇಕಿದೆ. ಎಂದು ಇಲಾಖೆ ಸ್ಪಷ್ಟಪಡಿಸಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ₹100 ಮುಖ ಬೆಲೆಯ ಹಳೆಯ ನೋಟುಗಳನ್ನು RBI ರದ್ದು ಮಾಡಿದೆಯೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights