FACT CHECK | ಮುಸ್ಲಿಮರಿಗೆ ಈ ದೇಶದ ಸಂಪತ್ತಿನ ಮೇಲೆ ಅಧಿಕಾರವಿದೆ ಎಂದು ಹೇಳಿದರೆ ಯೋಗಿ ಆದಿತ್ಯನಾಥ್

ಉತ್ತರಪ್ರದೇಶದ ಚುನಾವಣೆ ಫಲಿತಾಂಶದ ನಂತರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮುಸ್ಲಿಮರ ಬಗ್ಗೆ ಮೃದು ಧೋರಣೆ ತಾಳಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ಸಾಮಾಜಿಕ ಜಾಲತಾಣ ಬಳಕೆದಾರರು ವಿಡಿಯೋ ತುಣುಕನ್ನು ಪೋಸ್ಟ್ ಮಾಡಿದ್ದಾರೆ.

ಈ ದೇಶದ ಸಂಪತ್ತಿನಲ್ಲಿ ಮುಸ್ಲಿಮರಿಗೆ ಅಧಿಕಾರವಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ ಎಂದು ವಿಡಿಯೋ ತುಣುಕೊಂದನ್ನು ಹರಿಯ ಬಿಡಲಾಗಿದೆ. ಲೋಕಸಭಾ ಚುನಾವಣೆಯಲ್ಲಿ 80 ಕ್ಷೇತ್ರಗಳಿರುವ ಉತ್ತರ ಪ್ರದೇಶದಲ್ಲಿ ಬಿಜೆಪಿ ಕಳಪೆ ಸಾಧನೆ ತೋರಿದ ಬಳಿಕ ಯೋಗಿ ಆದಿತ್ಯನಾಥ್ ಅವರ ವರ್ತನೆಯಲ್ಲಿ ಬದಲಾವಣೆ ಬಂದಿದೆ ಎಂದು ಹೇಳಲಾಗಿದೆ.

Farhat Official ಎಂಬ ಯೂಟ್ಯೂಬ್ ಚಾನಲ್‌ನಲ್ಲಿ ‘ಮುಸಲ್ಮಾನರ ಬಗ್ಗೆ ಯೋಗಿಜಿ ಎಂತಹ ಒಳ್ಳೆಯ ಮಾತನ್ನಾಡಿದ್ದಾರೆ’ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋ ತುಣುಕೊಂದನ್ನು ಅಪ್ಲೋಡ್ ಮಾಡಲಾಗಿದೆ.X ಬಳಕೆದಾರರೊಬ್ಬರು ‘ಉತ್ತರ ಪ್ರದೇಶದ ಮತದಾರರು ಯೋಗಿಯವರ ರಾಗವನ್ನೇ ಬದಲಿಸಿದ್ದಾರೆ’ ಎಂದು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದೇ ರೀತಿ ಹಲವಾರು ಇನ್‌ಸ್ಟಾಗ್ರಾಂ ರೀಲ್ಸ್‌ಗಳು, ಯೂಟ್ಯೂಬ್ ಶಾರ್ಟ್ಸ್‌ಗಳಾಗಿಯೂ ಕೂಡ ಈ ವಿಡಿಯೋ ತುಣುಕನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ ಎನ್ನಲಾದ ಹೇಳಿಕೆಯ ವಿಡಿಯೋದ ಕೀಫ್ರೇಮ್‌ಗಳನ್ನು ತೆಗೆದು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 23 ಏಪ್ರಿಲ್‌ 2024ರಮದು  ANI ಎಕ್ಸ್‌ ಖಾತೆಯಲ್ಲಿ ಅಪ್ಲೋಡ್ ಮಾಡಿದ ವಿಡಿಯೋಗೆ ಲಭ್ಯವಾಗಿದೆ. ಆ ವಿಡಿಯೋದಲ್ಲಿ 0.32 ರಿಂದ ಪ್ರಾರಂಭವಾಗುವ ಟೈಮ್ ಸ್ಪಾನ್‌ನಲ್ಲಿ ಯೋಗಿಯವರು ಮಾಜಿ ಪ್ರಧಾನ ಮಂತ್ರಿ ಡಾ. ಮನಮೋಹನ್ ಸಿಂಗ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ಮಾತನಾಡುತ್ತಿದ್ದರು ಎಂದು ವರದಿಯಾಗಿದೆ.

‘ಡಾ. ಮನಮೋಹನ್ ಸಿಂಗ್ ಅವರು ದೇಶದ ಪ್ರಧಾನಿ ಆಗಿದ್ದರು. ಈ ದೇಶದ ಸಂಪತ್ತಿನ ನಿಜವಾದ ಹಕ್ಕುದಾರರು ಮುಸಲ್ಮಾನರು ಎಂದು ಅವರು ಯಾವ ಆಧಾರದ ಮೇಲೆ ಹೇಳಿದರು? ಹಲವಾರು ವರ್ಷಗಳಿಂದ ಅವರು ದೇಶದ ಸಂಪತ್ತನ್ನು ತಮ್ಮ ಪರಿವಾರದ ಸ್ವತ್ತೆಂದು ಭಾವಿಸಿದ್ದರು. ಜಾತಿ – ಧರ್ಮಗಳ ನಡುವೆ ವೈಮನಸ್ಯ ಬಿತ್ತಿ, ದೇಶವನ್ನು ಒಡೆಯುವ ಕೆಲಸವನ್ನು ಅವರು ಮಾಡುತ್ತಲೇ ಬಂದಿದ್ದಾರೆ’ ಎಂದು ಯೋಗಿ ಹೇಳುತ್ತಿರುವುದು ಕೇಳಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ವಿಡಿಯೋದಲ್ಲಿ ಯೋಗಿಯವರು ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡುವಾಗ ಮನಮೋಹನ್ ಸಿಂಗ್ ಅವರು ಹೇಳಿದ್ದರು ಎನ್ನಲಾದ ಒಂದು ಹೇಳಿಕೆಯನ್ನು ಉಲ್ಲೇಖಿಸಿ ಮಾತನಾಡಿದ್ದರೇ ಹೊರತು ‘ಈ ದೇಶದ ಸಂಪತ್ತಿನಲ್ಲಿ ಮುಸ್ಲಿಮರಿಗೆ ಹಕ್ಕು ಇದೆ’ ಎಂದು ಅವರು ಹೇಳಿರಲಿಲ್ಲ. ಆದ್ದರಿಂದ ವೈರಲ್ ವಿಡಿಯೋವನ್ನು ಎಡಿಟ್‌ ಮಾಡಿ ತಿರುಚಿ ಹಂಚಿಕೊಂಡಿರುವುದು ಸ್ಪಷ್ಟವಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಮಸೀದಿಗಳಿಗೆ ಬಾಣ ಬಿಟ್ಟಂತೆ ನಟಿಸಿ ಸೋತ್ತಿದ್ದ ಬಿಜೆಪಿಯ ಮಾಧವಿ ಲತಾ ಈಗ ಮುಸ್ಲಿಂ ಪರ ಮಾತನಾಡಿದರೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights