FACT CHECK | ಪವಿತ್ರ ಬಕ್ರೀದ್ ಹಬ್ಬದಂದು ಮುಸ್ಲಿಮರು ಎಮ್ಮೆ ತಲೆಯನ್ನು ದೇವಸ್ಥಾನದ ಆವರಣಕ್ಕೆ ಎಸೆದಿದ್ದಾರೆ ಎಂದು ಸಂಬಂಧವಿಲ್ಲದ ಫೋಟೊ ಹಂಚಿಕೆ

ಪ್ರವಾದಿ ಹಜರತ್ ಇಬ್ರಾಹಿಂ ಅವರ ತ್ಯಾಗ, ಬಲಿದಾನ, ಅಚಲ ದೈವಭಕ್ತಿ ಹಾಗೂ ಅವರ ಪುತ್ರ ಹಜರತ್ ಇಸ್ಮಾಯಿಲ್ ಅವರ ದೈವಭಕ್ತಿಯನ್ನು ಸಾಂಕೇತಿಕರಿಸುವ ಬಕ್ರೀದ್ ತ್ಯಾಗ-ಬಲಿದಾನವನ್ನು ಸ್ಮರಿಸುವ ಮಹತ್ವದ ಹಬ್ಬ.

ಭಾರತದಾದ್ಯಂತ 17 ಜೂನ್ , 2024 ರಂದು ಮುಸ್ಲಿಂ ಬಾಂಧವರು ಬಕ್ರೀದ್ ಅಥವಾ ಈದ್ ಉಲ್-ಅಧಾವನ್ನು ಅತ್ಯಂತ ಉತ್ಸಾಹದಿಂದ ಆಚರಿಸಿದ್ದಾರೆ. ವಿಶೇಷ ಈದ್ ಪ್ರಾರ್ಥನೆಗಳನ್ನು ನಡೆಸಲು ಮಸೀದಿಗಳು ಮತ್ತು ಈದ್ಗಾಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸಿ, ಶುಭಾಶಯ ವಿನಿಮಯ ಮಾಡಿಕೊಂಡರು. ಇಂತಹ ಪವಿತ್ರ ಹಬ್ಬದ ಸಂದರ್ಭದಲ್ಲಿ ಇಬ್ಬರು ಮುಸ್ಲಿಂ ಯುವಕರು ಕೋಣದ ತಲೆಯನ್ನು ದೇವಸ್ಥಾನದ ಆವರಣದಲ್ಲಿ ಎಸೆದು ಹೋಗಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ.

” ಕತ್ತರಿಸಿದ ಹಸುವಿನ ತಲೆಯನ್ನು ಇಬ್ಬರು ಮುಸಿಮರು ದೇವಸ್ಥಾನದಲ್ಲಿ ಎಸೆದಿದ್ದಾರೆ, ಪೂಜಾರಿಯೇ ದೇವಸ್ಥಾನದ ಪಾವಿತ್ರ್ಯತೆಯನ್ನು ಕಾಪಾಡಲು ಹೀಗೆ ಮಾಡಬೇಕಾಗಿತ್ತು ಮತ್ತು ಈ ಇಸ್ಯಾಮಿಸ್ಟ್ ಅದನ್ನು ಹೇಗೆ ಗೇಲಿ ಮಾಡುತ್ತಿದ್ದಾನೆ ನೋಡಿ. ರಕ್ತಸಿಕ್ತ ಸೆಕ್ಯುಲರಿಸಂ.” ಎಂಬ ಹೇಳಿಕೆಯೊಂದಿಗೆ ಪೂಜಾರಿಯೊಬ್ಬ ಕೋಣದ ತಲೆಯನ್ನು ಹೊತ್ತುಕೊಂಡಿರುವ ಪೋಸ್ಟ್‌ಅನ್ನು ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Image

ವೈರಲ್ ಪೋಸ್ಟ್ಅನ್ನು ಹಂಚಿಕೊಂಡಿರುವ ಎಕ್ಸ್‌ ಖಾತೆ ಬಳಕೆದಾರರು, ಇಬ್ಬರು ಮುಸ್ಲಿಂ ವ್ಯಕ್ತಿಗಳು ಹಸುವಿನ ತಲೆಯನ್ನು ಕಡಿದು ದೇವಸ್ಥಾನದಲ್ಲಿ ಎಸೆದಿದ್ದಾರೆ ಮತ್ತು ದೇವಾಲಯದ ಪಾವಿತ್ರ್ಯತೆಯನ್ನು ಕಾಪಾಡಲು ಪೂಜಾರಿಯೇ ಅದನ್ನು ತೆರುವು ಮಾಡಿದ್ದಾರೆ ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ಇದೇ ರೀತಿಯ ಪೋಸ್ಟ್ ಅನ್ನು ನೀವು ಇಲ್ಲಿ ವೀಕ್ಷಿಸಬಹುದು. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, “ನವಮಿ ದುರ್ಗಾ ಪೂಜೆ ಹಬ್ಬದ ಸಂದರ್ಭದಲ್ಲಿ ಹಿಂದೂ ದೇವತೆ ದುರ್ಗೆಯ ಬಿಲ್ಲೇಶ್ವರ ದೇವಸ್ಥಾನದಲ್ಲಿ ಎಮ್ಮೆ ಬಲಿ ನೀಡಲಾಯಿತು” ಎಂಬ ಶೀರ್ಷಿಕೆಯೊಂದಿಗೆ ಈ ಫೋಟೋವನ್ನು ಪೋಸ್ಟ್ ಮಾಡಲಾಗಿದೆ.

A buffalo sacrificed at Billeshwar Dewalaya Temple of Hindu goddess
Durga on the occasion of Navami Durga Puja Festival.

“ 29 ಸೆಪ್ಟೆಂಬರ್, 2017ರಂದು, ಬೆಲ್ಸೋರ್, ಭಾರತದ ಅಸ್ಸಾಂನ ಗುವಾಹಟಿಯ ಹೊರವಲಯದಲ್ಲಿರುವ ಬೆಲ್ಸೋರ್‌ನಲ್ಲಿ ನವಮಿ ದುರ್ಗಾ ಪೂಜೆ ಉತ್ಸವದ ಸಂದರ್ಭದಲ್ಲಿ ಹಿಂದೂ ದೇವತೆ ದುರ್ಗೆಯ ಬಿಲ್ಲೇಶ್ವರ  ದೇವಸ್ಥಾನದಲ್ಲಿ ಬಲಿಕೊಟ್ಟ ಎಮ್ಮೆಯ ತಲೆಯನ್ನು ತಲೆಯ ಮೇಲೆ ಹೊತ್ತುಕೊಂಡಿದ್ದಾನೆ ಎಂಬ ಶೀರ್ಷಿಕೆಯೊಂದಿಗೆ ಗೆಟ್ಟಿ ಇಮೇಜಸ್‌ನಲ್ಲಿ ಹಂಚಿಕೊಳ್ಳಲಾಗಿದೆ.

ಕೆಲವು ಸಂಬಂಧಿತ ಕೀವರ್ಡ್‌ಗಳನ್ನು ಬಳಸಿ ಪರಿಶೀಲಿಸಿದಾಗ, 28 ಸೆಪ್ಟೆಂಬರ್, 2017 ರಂದು ಟೈಮ್ಸ್ ಆಫ್ ಇಂಡಿಯಾದಲ್ಲಿ “500 ವರ್ಷಗಳಷ್ಟು ಹಳೆಯದಾದ ದೇವಾಲಯದಲ್ಲಿ, ಎಮ್ಮೆ ಬಲಿಯು ನಿರಾತಂಕವಾಗಿ ಮುಂದುವರಿಯುತ್ತದೆ” ಎಂಬ ಶೀರ್ಷಿಕೆಯೊಂದಿಗೆ ಪ್ರಕಟವಾದ ವರದಿಯೊಂದು ಲಭ್ಯವಾಗಿದೆ.

ಟೈಮ್ಸ್‌ ಆಫ್ ಇಂಡಿಯಾದ ಲೇಖನದ ಪ್ರಕಾರ, ಪ್ರಾಣಿ ಹತ್ಯೆಯನ್ನು ನಿಯಂತ್ರಿಸುವ ಹೊಸ ನಿಯಮಗಳನ್ನು ಅಳವಡಿಸಿಕೊಳ್ಳುವುದರಿಂದ ನಲ್ಬರಿಯಲ್ಲಿ ಭಕ್ತರು ದುರ್ಗಾ ಪೂಜೆಗಾಗಿ ಎಮ್ಮೆಗಳನ್ನು ಬಲಿ ನೀಡಲು ಕೆಳ ಅಸ್ಸಾಂನ ಪ್ರಾಚೀನ ಬಿಲ್ಬೇಶ್ವರ ದೇವಾಲಯಕ್ಕೆ ಕೊಠಡಿಗಳನ್ನು ಕಾಯ್ದಿರಿಸುವುದನ್ನು ನೋಡಬಹುದು. 500 ವರ್ಷಗಳಷ್ಟು ಹಳೆಯದಾದ ಮಹಾ ನವಮಿ ದೇವಸ್ಥಾನದಲ್ಲಿ ಸಾಂಪ್ರದಾಯಿಕ ಪ್ರಾಣಿ ಬಲಿಯನ್ನು ವೀಕ್ಷಿಸಲು ಸಾವಿರಾರು ಜನರು ನಲ್ಬರಿಯ ಬೆಲ್ಸೋರ್ ಪ್ರದೇಶದಲ್ಲಿ ಸೇರುತ್ತಾರೆ ಎಂದು ವರದಿಯಾಗಿದೆ.

2017ರಲ್ಲಿ ಅಸ್ಸಾಂನಲ್ಲಿ ನವಮಿ ದುರ್ಗಾ ಪೂಜೆ ಉತ್ಸವದ ಸಂದರ್ಭದಲ್ಲಿ ತೆಗೆದಿರುವ ಫೋಟೋವನ್ನು ವ್ಯಾಪಕವಾಗಿ ಹಂಚಿಕೊಂಡಿರುವ ಫೋಟೋ ಹಳೆಯದಾಗಿದೆ ಎಂಬುದನ್ನು ಈ ಎಲ್ಲಾ ಮಾಹಿತಿಗಳು ಸ್ಪಷ್ಟಪಡಿಸುತ್ತವೆ.

ಹೆಚ್ಚುವರಿಯಾಗಿ, ಗೋಹತ್ಯೆಯಂತಹ ಯಾವುದೇ ಪ್ರಸ್ತುತ ಸುದ್ದಿ ವರದಿಯಾಗಿದೆಯೇ ಎಂದು ನೋಡಲು  Google ಸರ್ಚ್ ಮಾಡಿದ್ದಾಗ 15 ಜೂನ್, 2024 ರ ಔಟ್ ಲುಕ್ ಸುದ್ದಿ ತಾಣದಲ್ಲಿ ಲೇಖನವೊಂದು ಲಭ್ಯವಾಗಿದೆ. ಲೇಖನವು “ಹಸುವನ್ನು ಕೊಂದು ಅದರ ದೇಹದ ಭಾಗಗಳನ್ನು ಮಧ್ಯಪ್ರದೇಶದ ರತ್ಲಾಮ್‌ನಲ್ಲಿ ದೇವಸ್ಥಾನಕ್ಕೆ ಎಸೆದ ನಾಲ್ವರು ಆರೋಪಿಗಳ ವಿರುದ್ಧ ಎನ್‌ಎಸ್‌ಎ ಅರ್ಜಿ ಸಲ್ಲಿಸಿದೆ” ಎಂದು ಶೀರ್ಷಿಕೆ ನೀಡಲಾಗಿದೆ.

ಲೇಖನದ ಪ್ರಕಾರ, “ಜೂನ್ 15 ರಂದು ಮಧ್ಯಪ್ರದೇಶ ಪೊಲೀಸರು ರತ್ಲಾಮ್ ಜಿಲ್ಲೆಯ ಜಯೋರಾ ಪಟ್ಟಣದ ದೇವಸ್ಥಾನದ ಆವರಣದಲ್ಲಿ ಗೋವನ್ನು ಕೊಂದು ಅದರ ದೇಹದ ಭಾಗಗಳನ್ನು ಎಸೆದ ಆರೋಪದ ಮೇಲೆ ನಾಲ್ಕು ಜನರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದ ಅಡಿಯಲ್ಲಿ (ಎನ್ಎಸ್ಎ) ಪ್ರಕರಣ ದಾಖಲಿಸಲಾಗಿದೆ. ಶಾರುಖ್, 25, ಮತ್ತು ನೌಶಾದ್, 40, ಪ್ರಾಣಿಗಳನ್ನು ಕೊಂದ ಆರೋಪ ಮತ್ತು, ಇತರ ಇಬ್ಬರು ವ್ಯಕ್ತಿಗಳಾದ ಸಲ್ಮಾನ್, 24 ಮತ್ತು ಶಾಕಿರ್, 18, ಪ್ರಾಣಿಯ ದೇಹದ ಭಾಗಗಳನ್ನು ಎಸೆದಿದ್ದಕ್ಕಾಗಿ ಬಂಧಿಸಲಾಗಿದೆ ಎಂದು  ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಅಸ್ಸಾಂನಲ್ಲಿ 2017 ರಲ್ಲಿ ನವಮಿ ದುರ್ಗಾ ಪೂಜೆ ಉತ್ಸವದ ಸಮಯದಲ್ಲಿ ಸಾಂಪ್ರದಾಯಿಕವಾಗಿ ನಡೆದುಕೊಂಡು ಬಂದಿರುವ ಆಚರಣೆಯ ಚಿತ್ರವನ್ನು ತೆಗೆದುಕೊಂಡು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ. ಆದರೆ ಮಧ್ಯಪ್ರದೇಶದಲ್ಲಿ ನಡೆದ ಘಟನೆಗೂ ವೈರಲ್ ಫೋಟೋದಲ್ಲಿ ಬಳಸಲಾದ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಹ್ಯಾಂಡ್‌ ಶೇಕ್ ಮಾಡಲು ಮುಂದಾದ ಅಮೆರಿಕ ಅಧ್ಯಕ್ಷ ಜೋ ಬೈಡನ್ ಮನವಿಯನ್ನು ತಿರಸ್ಕರಿಸಿದ್ರಾ ಪ್ರಧಾನಿ ಮೋದಿ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights