ರೈತಾಂದೋಲನ: ಸರ್ವಾಧಿಕಾರದ ಅಹಂ ಮುರಿದ ಸಮರ ಸತ್ಯಾಗ್ರಹ!

ಇದೊಂದು ಪವಾಡ ಸದೃಷ ಸಾಧನೆ. ಈ ಅಮೋಘ ಯಶಸ್ಸಿಗೆ ಅನೇಕ ಕಾರಣಗಳಿವೆ. ಒಡೆದು ಹೋದ ಸಂಘಟನೆಗಳನ್ನು ಒಟ್ಟುಗೂಡಿಸಿದ್ದು, ಎಲ್ಲರಿಗೂ ಒಪ್ಪಿತ ಕೇಂದ್ರ ಹಕ್ಕೊತ್ತೋಯಗಳನ್ನು ಪದೇ ಪದೇ ಪುನರುಚ್ಛರಿಸುತ್ತಾ ಅದನ್ನು ಇಡೀ ದೇಶದ ಹಕ್ಕೊತ್ತಾಯಗಳನ್ನು ರೂಪಿಸಿದ್ದು, ಆಹಾರದ ಸ್ವಾವಲಂಬನೆಯನ್ನು ಸಾಧಿಸಿದ್ದು, ಹಣಕಾಸಿನ ಪಾರದರ್ಶಕತೆಯನ್ನು ಪಾಲಿಸಿದ್ದು, ‘ಗೋದಿ’ ಮಾಧ್ಯಮವನ್ನು ಉಗಿದು ಹೊರಗಿಟ್ಟಿದ್ದು, ರಾಜಕೀಯ ಪಕ್ಷಗಳ ಜೊತೆ ಸುರಕ್ಷಿತ ಅಂತರ ಕಾಪಾಡಿಕೊಂಡಿದ್ದು ಇತ್ಯಾದಿ – ರೈತಾಂದೋಲನದ ಯಶಸ್ಸಿನ ಹೆಜ್ಜೆ.

ಜನಾಂದೋಲನಗಳ ಬಗ್ಗೆ ವಿಶ್ವಾಸ ಮತ್ತು ಜಯದ ಬಗ್ಗೆ ಭರವಸೆ ಕುಂದುತಿದ್ದ ಕಾಲದಲ್ಲಿ ಧಿಗ್ಗನೆ ಎದ್ದುನಿಂತ ರೈತಾಂದೋಲನ ದೇಶದ ಜನತೆಯ ಮನೋಬಲ ಕುಸಿಯದಂತೆ ಕಾಪಾಡಿದೆ ಮತ್ತು ಎತ್ತಿಹಿಡಿದಿದೆ. ರೈತಾಂದೋಲನದ ಸಫಲತೆ ಮುಂದಿನ ಜನಾಂದೋಲನಗಳಿಗೆ ಪ್ರೇರಣೆಯಾಗಲಿದೆ. ಎನ್ ಆರ್ ಸಿ ವಿರೋಧಿ ಚಳವಳಿ ಮತ್ತು ರೈತ ಚಳವಳಿ ಇವೆರಡು 21ನೇ ಶತಮಾನದ ಈ ಮೊದಲೆರಡು ದಶಕಗಳು ಕಂಡು ಅತಿಮುಖ್ಯ ಜನಾಂದೋಲನಗಳು ಎಂದು ಹೇಳಬಹುದು.

ಎನ್ ಆರ್ ಸಿ ಆಂದೋಲನವೂ ಸಹ ದೊಡ್ಡ ಮಟ್ಟದಲ್ಲಿ ಜನಸಮೂಹವನ್ನು, ವಿಶೇಷವಾಗಿ ಮುಸ್ಲಿಂ ಜನಸಮುದಾಯವನ್ನು ಹೋರಾಟದ ಕಣಕ್ಕಿಳಿಸಿತು. ಈ ಆಂದೋಲನ ಬಹಳ ಪ್ರಬುದ್ಧ ರೀತಿಯಲ್ಲಿ ನಡೆಯಿತು. ದೊಡ್ಡ ಸಂಖ್ಯೆಯಲ್ಲಿ, ಆದರೆ ಶಾಂತಿಯುತ ರೀತಿಯಲ್ಲಿ, ಸಂವಿಧಾನ ಮತ್ತು ರಾಷ್ಟ್ರಧ್ವಜವನ್ನು ಎತ್ತಿಹಿಡಿದು ದೇಶದ ಮೂಲೆಮೂಲೆಗಳಲ್ಲೂ ಜನ ಹೋರಾಟಗಳು ನಡೆದವು. ಮಹಿಳೆಯರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದರು. ಶಾಹಿನ್ ಬಾಗ್ ಒಂದು ಮಾದರಿ ಹೋರಾಟ ರೂಪವಾಗಿ ದೇಶದ ನೂರಾರು ನಗರಗಳಲ್ಲಿ ನಡೆಯಿತು. ಕೋವಿಡ್ ಲಾಕ್ ಡೌನ್ ಆಗಿರದಿದ್ದರೆ ಆಳುವ ದೊರೆಗಳಿಗೆ ದೊಡ್ಡ ಮುಖಭಂಗ ಆಗಲೇ ಕಾದಿತ್ತು. ಬೀಸೋದೊಣ್ಣೆಯಿಂದ ಸರ್ಕಾರ ಬಚಾವಾಯಿತು. ಆದರೆ ಅದರ ಅಹಂಕಾರ ಕಡಿಮೆಯಾಗಲಿಲ್ಲ.

ಕೋವಿಡ್ ಹೆಸರಲ್ಲಿ ಜನರನ್ನು ಮನೆಯೊಳಗಿಟ್ಟು ರೈತ ವಿರೋಧಿ ಕಾರ್ಪೊರೇಟ್ ಕಾಯ್ದೆಗಳನ್ನು ಸರ್ವಾಧಿಕಾರಿ ಶೈಲಿಯಲ್ಲಿ ಜಾರಿಗೆ ತಂದಿತು. ಮೊದಲು ಸುಗ್ರೀವಾಜ್ಞೆ, ನಂತರ ಚರ್ಚೆಗೂ ಅವಕಾಶವಿಲ್ಲದೆ ದನಿ ಮತದಾನದ ಮೂಲಕ ಸಂಸತ್ತಿನಲ್ಲಿ ಅನುಮೋದನೆ. ನಮ್ಮನ್ನ್ಯಾರು ತಡೆಯಬಲ್ಲರು ಎಂಬ ಅಹಂ ಸರ್ಕಾರದ ಪ್ರತಿ ಹಾವಭಾವದಲ್ಲೂ ಎದ್ದು ಕಾಣುತ್ತಿತ್ತು. ಈ ಸರ್ವಾಧಿಕಾರಿ ಧೋರಣೆಯ ವಿರುದ್ಧ ತನ್ನ ಸರ್ವ ಶಕ್ತಿಯನ್ನೂ ಒಗ್ಗೂಡಿಸಿಕೊಂಡು ರೈತಕುಲ ಸಿಡಿದು ನಿಂತಿತು, ಕೋವಿಡ್ ಮೊದಲ ಅಲೆಯ ಅಪಾಯವಿದ್ದರೂ ಜೀವವನ್ನು ಪಣಕ್ಕಿಟ್ಟು ಭವಿಷ್ಯ ಉಳಿಸಲು ಬೀದಿಗಿಳಿಯಿತು. ಒಡ್ಡಿದ ಅಡೆತಡೆಗಳನ್ನೆಲ್ಲಾ ಮುರಿದು ದೆಹಲಿಗೆ ಮುತ್ತಿಗೆ ಹಾಕಿತು.

ಒಂದು ವರ್ಷ ಬೀದಿಗಳಲ್ಲಿ ಸಾತ್ವಿಕ ತಪ್ಪಸ್ಸು ಮಾಡುವ ಮೂಲಕ ರೈತಾಂದೋಲನ ದೇಶದ ಆತ್ಮಸಾಕ್ಷಿಯನ್ನು ಗೆದ್ದುಕೊಂಡಿತು ಮತ್ತು ತನ್ನೊಳಗಿನ ಅಂತಃಶಕ್ತಿಯನ್ನು ಹೆಚ್ಚಿಸಿಕೊಂಡಿತು. ಹಾಕಿದ ಬೀಜವನ್ನು ಕಾಪಿಟ್ಟುಕೊಳ್ಳುತ್ತಾ, ಸಸಿಯನ್ನು ಕ್ರಮೇಣ ಬಲಪಡಿಸುತ್ತಾ ಬೆಳೆಗಾಗಿ ಇಡೀ ವರ್ಷ ಕಾದಂತೆ, ಆರಂಭಿಸಿದ ಹೋರಾಟವನ್ನು ಶಾಂತವಾಗಿ ಜೋಪಾನ ಮಾಡುತ್ತಾ ಅದನ್ನು ವಿಶಾಲ ಹೋರಾಟದ ಹೊಲವನ್ನಾಗಿ ಪರಿವರ್ತಿಸಿತು. ಪೈರು ನಾಶಗೊಳಿಸುವ ಪ್ರಯತ್ನಗಳನ್ನೆಲ್ಲಾ ಹುಸಿಗೊಳಿಸುತ್ತಾ ರೈತರನ್ನು ಶಾಂತಿಯುತ ಸೈನಿಕರನ್ನಾಗಿ ರೂಪಾಂತರಿಸಿತು. ಹಸಿರು ಭಲ್ಲೆಗಳು ಬಾರುಕೋಲುಗಳ ಸಾಗರವಾಗಿ ಗೋಚರಿಸತೊಡಗಿದವು. ಸತ್ಯದ ಛಡಿಏಟುಗಳು ಸರ್ವಾಧಿಕಾರಿ ಸಿಂಹದ ನೀರಿಳಿಸಿದವು. ಬರಲಿರುವ ಚುನಾವಣೆಗಳು ದುಃಸ್ವಪ್ನವಾಗಿ ಕಾಡತೊಡಿಗದವು. ತಕ್ಷಣಕ್ಕಾದರೂ ಮಂಡಿಯೂರಲೇಬೇಕಾದ ಸಂದರ್ಭ ಸೃಷ್ಟಿಯಾಯಿತು. ಇದರ ಪರಿಣಾಮವೇ ಪ್ರಧಾನಿ ಮೋದಿಯವರು ಮೂರು ‘ಕೃಷಿ’ ಕಾಯ್ದೆಗಳನ್ನು ವಾಪಾಸ್ ತೆಗೆದುಕೊಳ್ಳುವ ಘೋಷಣೆ ಮಾಡಿದ್ದಾರೆ.

ಮೂರು ಕಾಯ್ದೆಗಳನ್ನು ವಾಪಾಸ್ ಪಡೆಯುವ ತೀರ್ಮಾನ ಘೋಷಿಸಿದ್ದರ ಪರಿಣಾಮ ಈಗ ಎಂ ಎಸ್ ಪಿ ಯನ್ನು [ರೈತರು ಬೆಳೆದ ಬೆಲೆಗೆ ನ್ಯಾಯಯುತ ಬೆಲೆಯನ್ನು] ಶಾಸನಗೊಳಿಸಬೇಕಾದ ಚರ್ಚೆ ಮುನ್ನೆಲೆಗೆ ಬಂದಿದೆ. ಈಗ ಇದರಿಂದ ತಪ್ಪಿಸಿಕೊಳ್ಳಲು ಸರ್ಕಾರಕ್ಕೆ ಸಾಧ್ಯವೇ ಇಲ್ಲ. “ಮನಸ್ಸಿಲ್ಲ, ಆದರೆ ವಿಧಿ ಇಲ್ಲ” ಎಂಬ ಇಕ್ಕಟ್ಟಿನಲ್ಲಿ ಸರ್ಕಾರ ಸಿಲುಕಿದೆ. ಒಂದಲ್ಲಾ ಒಂದು ರೀತಿಯ ಪರಿಹಾರ ಸೂತ್ರವನ್ನು ಅದು ಒಪ್ಪಲೇಬೇಕಾಗುತ್ತದೆ.

ಇದೊಂದು ಪವಾಡ ಸದೃಷ ಸಾಧನೆ. ಈ ಅಮೋಘ ಯಶಸ್ಸಿಗೆ ಅನೇಕ ಕಾರಣಗಳಿವೆ. ಒಡೆದು ಹೋದ ಸಂಘಟನೆಗಳನ್ನು ಒಟ್ಟುಗೂಡಿಸಿದ್ದು, ಎಲ್ಲರಿಗೂ ಒಪ್ಪಿತ ಕೇಂದ್ರ ಹಕ್ಕೊತ್ತೋಯಗಳನ್ನು ಪದೇ ಪದೇ ಪುನರುಚ್ಛರಿಸುತ್ತಾ ಅದನ್ನು ಇಡೀ ದೇಶದ ಹಕ್ಕೊತ್ತಾಯಗಳನ್ನು ರೂಪಿಸಿದ್ದು, ಆಹಾರದ ಸ್ವಾವಲಂಬನೆಯನ್ನು ಸಾಧಿಸಿದ್ದು, ಹಣಕಾಸಿನ ಪಾರದರ್ಶಕತೆಯನ್ನು ಪಾಲಿಸಿದ್ದು, ‘ಗೋದಿ’ ಮಾಧ್ಯಮವನ್ನು ಉಗಿದು ಹೊರಗಿಟ್ಟಿದ್ದು, ರಾಜಕೀಯ ಪಕ್ಷಗಳ ಜೊತೆ ಸುರಕ್ಷಿತ ಅಂತರ ಕಾಪಾಡಿಕೊಂಡಿದ್ದು ಇತ್ಯಾದಿ. ಆದರೆ ಇವೆಲ್ಲದರಲ್ಲಿ ಪಂಜಾಬ್ ರೈತ ಸಂಘಟನೆಗಳು ಅಭಿವೃದ್ಧಿಪಡಿಸಿದ ಹೋರಾಟದ ವಿಧಾನ ಒಂದು ಪರಿಣಾಮಕಾರಿ ಮಾದರಿಯಾಗಿ ನಮ್ಮ ಮುಂದಿದೆ. ಈ ಮಾದರಿಯನ್ನು ಆಳವಾಗಿ ಅವಲೋಕಿಸಬೇಕಿರುವುದು, ಕಲಿಯಬೇಕಿರುವುದು ಮತ್ತು ನಾವೂ ಅಳವಡಿಸಿಕೊಳ್ಳಬೇಕಿರುವುದು ಎಲ್ಲಾ ಆಂದೋಲನಗಳಿಗೂ ಜರೂರಾಗಿದೆ.

ಬಿಡಿಬಿಡಿಯಾಗಿ ನಡೆಯುತ್ತಿದ್ದ ಒಂದು ದಿನದ ಪ್ರತಿಭಟನೆಗಳು, ಪ್ರದರ್ಶನಗಳು, ಧರಣಿಗಳು, ಸಮಾವೇಶಗಳು ಸರ್ಕಾರದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದು ಹೋಗಿ ಬಹಳ ಕಾಲವಾಯಿತು. ಸರ್ಕಾರದ ದಪ್ಪ ಚರ್ಮೆಕ್ಕೆ ಅದು ನಾಟುತ್ತಲೂ ಇರಲಿಲ್ಲ, ಬದಲಿಗೆ ದಿನಕ್ಕೊಂದು ವಿಚಾರ ಮುನ್ನೆಲೆಗೆ ಬರುವ ಈ ಹೊತ್ತಿನಲ್ಲಿ ಎಂತಹುದೇ ಹೋರಾಟ ಸಮಾಜದ ಸ್ಮೃತಿಪಟಲದಲ್ಲೂ ಹೆಚ್ಚುಕಾಲ ಉಳಿಯುತ್ತಿಲ್ಲ. ಬಿಡಿಬಿಡಿಯಾದ ಮತ್ತು ಒಂದು ದಿನದ ಹೋರಾಟಗಳು ಅರ್ಥ ಕಳೆದುಕೊಂಡ ಸಾಂಕೇತಿಕ ಹೋರಾಟಗಳಾಗಿಬಿಟ್ಟಿದ್ದವು. ಈ ಸಂದರ್ಭದಲ್ಲಿ ಎಲ್ಲರೂ ಒಟ್ಟುಗೂಡಿ, ಒಂದು ವಿಚಾರದ ಸುತ್ತ, ಸತತವಾದ ಸುದೀರ್ಘವಾದ, ಫಲಿತಾಂಶ ಸಿಕ್ಕುವ ತನಕ ತಪ್ಪಸ್ಸಿನಂತೆ ಪಟ್ಟುಹಿಡಿದು ಕೂರುವ ಹೋರಾಟದ ವಿಧಾನವನ್ನು ಪಂಜಾಬ್ ಸಂಘಟನೆಗಳು ಅಭಿವೃದ್ಧಿಪಡಿಸಿದವು.

ಪಂಜಾಬಿನಲ್ಲಿ ಹೊಸ ಹೋರಾಟದ ಮಾದರಿಯ ಆಚರಣೆ ಸುಮಾರು 20 ವರ್ಷಗಳ ಹಿಂದಿನಿಂದ ಪ್ರಾರಂಭವಾಯಿತು. ವೈಚಾರಿಕ ಹಾಗೂ ಸಂಘಟನಾತ್ಮಕ ಭಿನ್ನಾಭಿಪ್ರಾಯಗಳು ಗಂಭೀರವಾಗಿದ್ದಾಗಲೂ ಸಮಸ್ಯೆಯಾಧಾರಿತವಾಗಿ ಎಲ್ಲರೂ ಜೊತೆಗೂಡಿ, ಸಮಸ್ಯೆ ಇತ್ಯಾರ್ಥವಾಗುವ ತನಕ ಹೋರಾಡುವ ವಿಧಾನವನ್ನು ಅಲ್ಲಿನ ಸಂಘಟನೆಗಳು ಬಹಳ ಪ್ರಜ್ಞಾಪೂರ್ವಕವಾಗಿ ಅಭ್ಯಾಸಮಾಡತೊಡಗಿದವು. ದಲಿತ ಯುವಕನ ಲಾಕಪ್ ಕೊಲೆ ವಿರುದ್ಧ ಪ್ರಾರಂಭಗೊಂಡ ಈ ಹೋರಾಟ ಮಾದರಿ ಕ್ರಮೇಣ ವಿಸ್ತರಿಸತೊಡಗಿತು. ಯುವತಿಯೊಬ್ಬಳನ್ನು ಪ್ರಭಾವಿ ರಾಜಕೀಯ ಮನೆತನದವರ ಮಕ್ಕಳು ಅತ್ಯಾಚರಗೈದು ಕೊಲೆ ಮಾಡಿದ್ದರ ವಿರುದ್ಧ ಸತತ 42 ದಿನಗಳ ಕಾಲ ಹೋರಾಡಿ ಅವರ ಬಂಧನವಾಗಿ, ಶಿಕ್ಷೆಯಾಗುವಂತೆ ನೋಡಿಕೊಂಡರು. ಈ ಆಂದೋಲನಕ್ಕೆ ನಾಯಕತ್ವ ನೀಡಿದ ಮನ್ಜೀತ್ ಸಿಂಗ್ ಅವರ ಮೇಲೆ ಸೇಡು ತೀರಿಸಿಕೊಳ್ಳಲು ಸರ್ಕಾರ ಮತ್ತು ಹಣವಂತರು ಸೇರಿ ಕೊಲೆ ಆರೋಪವನ್ನು ಹೊರಿಸಿದರು. ಸುಳ್ಳು ಸಾಕ್ಷಿಗಳನ್ನು ಸೃಷ್ಟಿಸಿ ಜೀವಾವಧಿ ಶಿಕ್ಷೆಯಾಗುವಂತೆ ಮಾಡಿದರು. ಹೈ ಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಸಹ ಶಿಕ್ಷೆಯನ್ನು ಎತ್ತಿಹಿಡಿದವು. ಸಂಘಟನೆಗಳೆಲ್ಲಾ ಕೂಡಿ ಮೆರವಣಿಗೆಯಲ್ಲಿ ಮನ್ಜೀತ್ ಸಿಂಗ್ ಅವರನ್ನು ಬಂದೀಖಾನೆಗೆ ಒಯ್ದು ಒಳಕಳಿಸಿ, ಅವರನ್ನು ಬಿಡುಗಡೆ ಮಾಡುವ ತನಕ ಮನೆಗೆ ತೆರಳುವುದಿಲ್ಲ ಎಂದು ಜೈಲಿನ ಮುಂದೆಯೇ ಸತ್ಯಾಗ್ರಹ ಆರಂಭಿಸಿದರು. ಪೂರ್ತಿ 30 ದಿನಗಳ ಕಾಲ ಸಹಸ್ರಾರು ಜನರು ಜೈಲಿನ ಮುಂದೆಯೇ ಕೂತಿದ್ದರು. ಸರ್ಕಾರ ಷಡ್ಯಂತ್ರವನ್ನೆಲ್ಲಾ ಬೆತ್ತಲೆಗೊಳಿಸಿದರು. ಸರ್ಕಾರಕ್ಕೆ ಬೇರೆ ದಾರಿ ಇಲ್ಲದೆ ಅವರನ್ನು ಬಿಡುಗಡೆಗೊಳಿಸಲೇಬೇಕಾಯಿತು. ಮನ್ಜೀತ್ ಸಿಂಗ್ ಅವರನ್ನು ಮೆರವಣಿಗೆಯಲ್ಲಿ ಹೊರಕರೆದುಕೊಂಡು ಬಂದರು. ಕೋರ್ಟುಗಳು ನೀಡಿದ (ಅ)ನ್ಯಾಯವನ್ನು ಧಿಕ್ಕರಿಸಿ ಜನತೆಯ ನ್ಯಾಯವನ್ನು ಗೆಲ್ಲಿಸಿಕೊಂಡರು. ವಿದ್ಯುತ್ ಖಾಸಗೀಕರಣ ಮಾಡಲು ರಾಜ್ಯ ಸರ್ಕಾರ ಮುಂದಾದಾಗ 23 ದಿನಗಳ ಕಾಲ ಸಂಯುಕ್ತ ಮತ್ತು ಸತತ ಹೋರಾಟ ನಡೆಸಿ ಪ್ರಸ್ತಾಪಿದ ಕಾಯ್ದೆಯನ್ನು ಸರ್ಕಾರ ಕೈಬಿಡುವಂತೆ ಮಾಡಿದರು.

ಈ ರೀತಿಯ ಹೋರಾಟದ ಮಾದರಿ  ಮೂಲಕ ಸರ್ಕಾರವನ್ನು ಮಣಿಸಿದ್ದು ಮಾತ್ರವಲ್ಲ ಜನರನ್ನು ಸುದೀರ್ಘ ಹೋರಾಟಗಳಿಗೆ ಸಜ್ಜುಗೊಳಿಸಿದರು. ಹೋರಾಟ ನಡೆಯುವಾಗ ಹತ್ತಿರದ್ಲಲೇ ಗುರುದ್ವಾರವಿದ್ದರೂ ಊಟಕ್ಕಾಗಿ ಅದನ್ನು ಅವಲಂಬಿಸದೆ ರೈತರೇ ತಮ್ಮ ಆಹಾರದ ವ್ಯವಸ್ಥೆ ಮಾಡಿಕೊಳ್ಳುವ ಪದ್ದತಿಯನ್ನು ಅಭ್ಯಾಸ ಮಾಡಿದರು. ಜನರೇ ತಮ್ಮ ಮನೆಗಳಿಂದ ದವಸ ಧಾನ್ಯಗಳನ್ನು, ಉಳಿಯಲು ಅಗತ್ಯವಿರುವ ಪರಿಕರಗಳನ್ನು ತಂದುಕೊಂಡು, ಕನಿಷ್ಟ ಅಗತ್ಯಗಳ ಜೊತೆ ಸುದೀರ್ಘ ಕಾಲ ಬೀದಿಯಲ್ಲೇ ಉಳಿದು ಹೋರಾಡಿ ಗೆಲ್ಲುವ ವಿಧಾನವನ್ನು ತರಭೇತುಗೊಳಿಸಿದರು. ಪಂಜಾಬಿನಲ್ಲಿರುವ ಸೈನಿಕ ಸಂಸ್ಕೃತಿ ಅವರ ನೆರವಿಗೆ ಬಂದಿತು. ನಾವೂ ಸೈನಿಕರಿದ್ದಂತೆ, ಸೈನಿಕರು ಯುದ್ಧಕ್ಕೆ ಹೋಗುವಾಗ ತಮಗೆ ಅಗತ್ಯವಿರುವ ಸಾಮಗ್ರಿಗಳನ್ನು ತಾವೇ ಒಯ್ಯುತ್ತಾರೆ. ಅನಾನುಕೂಲ ಪರಿಸ್ಥಿತಿಗಳಲ್ಲಿಯೂ ಇದ್ದುದರಲ್ಲೇ ಬದುಕಿ ಹೋರಾಡುತ್ತಾರೆ. ನಾವೂ ಹಾಗೆಯೇ ಹೋರಾಡಬೇಕು ಎಂಬ ಮನೋಭಾವವನ್ನು ಬೆಳೆಸಿದರು. ಇದೊಂದು ರೀತಿಯಲ್ಲಿ ಸಮೂಹ ಸೈನಿಕ ತರಭೇತಿಯಾಗಿತ್ತು. ತುಪಾಕಿ ಇಲ್ಲ ಎಂಬುದನ್ನು ಬಿಟ್ಟರೆ ತಯಾರಿ ಮಾತ್ರ ಹಾಗೇ ನಡಿಯುತ್ತಿತ್ತು. ಅದನ್ನೇ ಈ ದೆಹಲಿ ರೈತಾಂದೋಲನಕ್ಕೂ ಅವರು ಅಳವಡಿಸಿದರು.

ಕೋವಿಡ್ ಲಾಕ್ ಡೌನ್ ಕಾಲದಲ್ಲಿ ಕೇಂದ್ರ ಸರ್ಕಾರ ಮೂರು ರೈತ ವಿರೋಧಿ ಕಾರ್ಪೊರೇಟ್ ಕೃಷಿ ನೀತಿಗಳನ್ನು ಜಾರಿಗೆ ತಂದಿತು. ಪಂಜಾಬ್ ರೈತ ಸಂಘಟನೆಗಳ ಮುಖಂಡರು ಸಭೆ ಸೇರಿ ಇದನ್ನು ಹಿಮ್ಮೆಟ್ಟಿಸದಿದ್ದರೆ ಭೂಮಿಯೂ ಉಳಿಯುವುದಿಲ್ಲ, ಬೆಳೆಗೆ ಬೆಲೆಯೂ ದಕ್ಕುವುದಿಲ್ಲ ಎಂಬ ತೀರ್ಮಾನಕ್ಕೆ ಬಂದರು. ಕೋವಿಡ್ ಅನ್ನು ಲೆಕ್ಕಿಸದೆ  ಜುಲೈ, ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್ ತಿಂಗಳುಗಳಲ್ಲಿ ಸತತ ರೈಲ್ ರೋಕೋ ಚಳವಳಿ ನಡೆಸಿದರು. ರೈಲ್ವೆ ಸಂಚಾರವನ್ನು ಸಂಪೂರ್ಣ ಸ್ಥಬ್ದಗೊಳಿಸಿದರು. ಎಲ್ಲಾ ರೈಲ್ವೆ ಸ್ಟೇಷನ್ನುಗಳೂ ರೈತರ ನೆಲೆಗಳಾಗಿಬಿಟ್ಟವು. ಅಷ್ಟರಲ್ಲಿ ಎಐಕೆಸಿಸಿಐ [ಆಲ್ ಇಂಡಿಯಾ ಕಿಸಾನ್ ಕೋಆರ್ಡಿನೆಷನ್ ಕಮಿಟಿ] ಕಡೆಯಿಂದ ನವೆಂಬರ್ 25-26 ದೆಹಲಿ ಚಲೋ ಕರೆ ಕೊಟ್ಟರು. ದೇಶದ ರೈತ ಸಂಘಟನೆಗಳೆಲ್ಲಾ ಎರಡು ದಿನದ ದೆಹಲಿ ಹೋರಾಟಕ್ಕೆ ಸಿದ್ಧತೆ ಮಾಡಿದರೆ ಪಂಜಾಬ್ ಸಂಘಟನೆಗಳು ಕನಿಷ್ಟ ಒಂದು ತಿಂಗಳ ತಯಾರಿಯಾದರೂ ಬೇಕು ಎಂದು ತೀರ್ಮಾನಿಸಿದವು. ಹಾಗಾಗಿ ಪ್ರತಿ ಹಳ್ಳಿಯಿಂದ 10-20 ಟ್ರಾಕ್ಟರ್, ಪ್ರತಿ ಟ್ರಾಕ್ಟರ್ ಹಿಂದೆ ಒಂದರಲ್ಲಿ ಜನ, ಮತ್ತೊಂದರಲ್ಲಿ ಒಂದು ತಿಂಗಳಿಗೆ ಆಗುವಷ್ಟು ದನಸಿ ಮತ್ತು ಸಾಮಗ್ರಿ ತುಂಬಿಕೊಂಡು ಹೊರಟರು. ಎಲ್ಲೇ ತಡೆದರೂ ಅಲ್ಲೇ ನಿಲ್ಲೋಣ. ಆದರೆ ಕಾಯ್ದೆ ವಾಪಾಸ್ ಆಗುವ ತನಕ ಮರಳುವ ಪ್ರಶ್ನೆ ಇಲ್ಲ ಎಂಬ ತೀರ್ಮಾನಕ್ಕೆ ಬಂದರು. ಈ ತೀರ್ಮಾನದ ಜೊತೆ ರೈತ ದಂಡು ದಿಲ್ಲಿಗೆ ಕಡೆ ಹೊರಟಿತು.

ಪಂಜಾಬಿನಿಂದ ಹರಿದುಬರತೊಡಗಿದ ರೈತರ ಟ್ರಾಕ್ಟರ್ ಗಳ ಸಾಲು ಸೈನಿಕ ವಾಹನಗಳ ಕಾರವಾನ್ ರೀತಿ ಕಾಣುತ್ತಿತ್ತು. ಪಂಜಾಬಿನಿಂದ ಹರಿದುಬರತೊಡಿಗದ ಸಾವಿರಾರು ಟ್ರಾಕ್ಟರುಗಳ ಈ ರೈತ ದಂಡನ್ನು ಕಂಡು ಕೇಂದ್ರ ಸರ್ಕಾರ ದಂಗಾಗಿ ಹೋಯಿತು. ಗಾಬರಿಗೊಂಡು ರಸ್ತೆಗೆ ತಡೆಗೋಡೆಗಳನ್ನು ನಿರ್ಮಿಸತೊಡಗಿತು. ರೈತ ಯುವಕರು ಅವನ್ನು ಮುರಿದು ಟ್ರಾಕ್ಟರುಗಳಿಗೆ ದಾರಿ ಮಾಡಿಕೊಟ್ಟರು. ಕ್ರೇನುಗಳಲ್ಲಿ ದೊಡ್ಡ ದೊಡ್ಡ ಹೆಬ್ಬಂಡೆಗಳನ್ನು ತಂದು ರಸ್ತೆಗೆ ಸುರಿಯಲಾಯಿತು, ರಸ್ತೆಯನ್ನು ತೋಡಿ ಕಂದಕಗಳನ್ನು ನಿರ್ಮಿಸಿ ರಸ್ತೆ ದಾಟದಂತೆ ತಡೆಯುವ ಪ್ರಯತ್ನ ಮಾಡಲಾಯಿತು. ಆದರೆ ರೈತ ಸೈನ್ಯಕ್ಕೆ ಇದ್ಯಾವುದೂ ಸಾಟಿಯಾಗಲಿಲ್ಲ. ಹರಿಯಾಣದ ರೈತರು ಪಂಜಾಬಿನ ರೈತರ ಜೊತೆಗೂಡಿದ್ದು ಅವರ ಶಕ್ತಿಯನ್ನು ಇಮ್ಮಡಿಗೊಳಿಸಿತ್ತು. ಪೋಲೀಸ್ ತಡೆಗೋಡೆಗಳನ್ನು ದಾಟುತ್ತಾ ದೆಹಲಿ ಬಾಗಿಲವರೆಗೆ ರೈತ ದಂಡು ತಲುಪೇಬಿಟ್ಟಿತು. ಅಷ್ಟು ಹೊತ್ತಿಗೆ ದೆಹಲಿ ಪೋಲೀಸರು ದೆಹಲಿ ಗಡಿಗಳನ್ನು ಶತೃಗಡಿಗಳಂತೆ ಸಜ್ಜುಗೊಳಿಸಿದ್ದರು. ಅನೇಕ ಸುತ್ತಿನ ಮುಳ್ಳಿನ ಬೇಲಿಗಳು, ಸಿಮೆಂಟ್ ತಡೆಗೋಡೆಗಳು, ಪೋಲೀಸ್ ವಾಹನುಗಳು, ಶಸ್ತ್ರಸಜ್ಜಿತ ಅರೆಸೇನಾಪಡೆ ಇತ್ಯಾದಿ. ಇನ್ನೂ ಮುನ್ನುಗ್ಗಿದರೆ ರಕ್ತಪಾತಕ್ಕೆ ದಾರಿಯಾಗಬಹುದೆಂದು ರೈತ ದಂಡು ಅಲ್ಲೇ ಬೀಡುಬಿಟ್ಟಿತು. ಶತೃಕೋಟೆಯನ್ನು ಸುತ್ತುವರೆದ ದೇಶಪ್ರೇಮಿ ಪಡೆಯಂತೆ. ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡು ಬಂದಿದ್ದರಿಂದ ಯಾವ ಚಿಂತೆಯೂ ಇರಲಿಲ್ಲ. ಕೇವಲ ತಮ್ಮ ಊಟ ಮಾತ್ರವಲ್ಲ ಚಳವಳಿಗೆ ಬಂದ ಎಲ್ಲಾ ರಾಜ್ಯದ ಜನರಿಗೆ ಊಟ ಹಾಕುವಷ್ಟು ತಯಾರಿ ಅವರಲ್ಲಿತ್ತು. ರೈತರ ಈ ಸಾಧನೆ ಇಡೀ ಪಂಜಾಬಿಗರ ಮನ ಗೆದ್ದಿತ್ತು. ಬೆಂಬಲದ, ನೆರವಿನ ಹೊಳೆ ಹರಿದುಬರತೊಡಗಿತು. ಪರಿಣಾಮ ಒಂದು ಸುದೀರ್ಘ ವರ್ಷ ಚಳವಳಿಯನ್ನು ಕಾಪಿಟ್ಟುಕೊಳ್ಳಲು, ಕಾಯ್ದುಕೊಳ್ಳಲು ಅವರಿಗೆ ಸಾಧ್ಯವಾಯಿತು. ಈ ಕೇಂದ್ರೀಯ ರೈತ ಪಡೆಯ ಸುತ್ತ ಇಡೀ ಚಳವಳಿ ಕಟ್ಟಲ್ಪಟ್ಟಿತು. ಎಸ್ ಕೆ ಎಂ ಇದಕ್ಕೆ ನೇತೃತ್ವ ನೀಡುತ್ತಿದ್ದರೂ ಪಂಜಾಬಿನ 31 ಸಂಘಟನೆಗಳ ಒಕ್ಕೂಟ ಇದರಲ್ಲಿ ನಿರ್ಣಾಯಕ ಪಾತ್ರ ನಿರ್ವಹಸಿತು.

ಪಂಜಾಬಿನ ರೈತ ಸೇನೆ ನಡೆಸಿದ ಹಲವು ವರ್ಷಗಳ ತಯಾರಿ, ಸಂಸಿದ್ಧತೆ ಫಲ ನೀಡಿತು. ದೇಶದ ಭವ್ಯ ದೇಶಪ್ರೇಮಿ ಆಂದೋಲನವಾಗಿ ಅದು ಹೊರಹೊಮ್ಮಿತು. ದೇಶದ ಜನತೆಗೆ ಹೊಸ ಹೋರಾಟದ ಮಾರ್ಗವನ್ನು ತೋರಿಸಿಕೊಟ್ಟಿತು. ಹೋರಾಡಿತು ಮತ್ತು ಗೆಲುವಿನ ಹೊಸ್ತಿಲಿಗೆ ತಲುಪಿತು.

ಪಂಜಾಬಿನ ರೈತ ಚಳವಳಿ ಅಭಿವೃದ್ಧಿಪಡಿಸಿದ ಈ ಹೋರಾಟ ರೂಪವನ್ನು ಸಮರ ಸತ್ಯಾಗ್ರಹ ಎಂದು ಕರೆಯೋಣವೆ? ಈ ಮಾದರಿಯ ಸ್ಪೂರ್ತಿಯಲ್ಲಿ ಕರ್ನಾಟಕದ ನಾವು ನಮ್ಮದೇ ಮಾದರಿಯನ್ನು ಅಭಿವೃದ್ಧಿಪಡಿಸೋಣವೆ?

– ನೂರ್ ಶ್ರೀಧರ್, ಕರ್ನಾಟಕ ಜನಶಕ್ತಿ

Spread the love

Leave a Reply

Your email address will not be published. Required fields are marked *