ಅನರ್ಹ ಸಂಪುಟ, ಅತೃಪ್ತ ಸರ್ಕಾರ: ಹೈದರಾಬಾದ್ ಕರ್ನಾಟಕಕ್ಕೆ ಭಾರೀ ಅನ್ಯಾಯ…

ಅಂತೂ ಇಂತೂ ಗಜಪ್ರಸವದಂತೆ ಯಡಿಯೂರಪ್ಪ ತಮ್ಮ ಅರೆಬರೆ ಸಂಪುಟವನ್ನು ರಚಿಸಿದ್ದಾರೆ. ಆದರೆ ಸಾಮಾಜಿಕ ನ್ಯಾಯ ಹಾಗೂ ಪ್ರಾದೇಶಿಕ ಸಮತೋಲನವನ್ನು ಗಮನದಲ್ಲಿಟ್ಟುಕೊಳ್ಳದೇ ಮಾಡಿರುವ ಈ ಸಂಪುಟವನ್ನು ಅನರ್ಹ ಸಂಪುಟವೆನ್ನಬಹುದು. ಇನ್ನು ತಾನು ಭರವಸೆ ಕೊಟ್ಟಿದ್ದವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲು ಆಗದಿದ್ದಕ್ಕಾಗಿ ಅಸಮಧಾನದಿಂದ ಕುದಿಯುತ್ತಿರುವ ಯಡಿಯೂರಪ್ಪ, ಉಪ – ಮುಖ್ಯಮಂತ್ರಿ ಸ್ಥಾನ ಸಿಗದೆ ಬೇಸರಗೊಂಡಿರುವ ಕೆ.ಎಸ್. ಈಶ್ವರಪ್ಪ, ಆರ್.ಅಶೋಕ, ಗೋವಿಂದ ಕಾರಜೋಳ, ಬಿ.ಶ್ರೀರಾಮುಲು ಹಾಗೂ ಪ್ರಮುಖ ಖಾತೆಗಳಿಗಾಗಿ ಹಾತೊರೆಯುತ್ತಿರುವ ಇತರ ಸಚಿವರಿಂದಾಗಿ ಇದನ್ನು ಅತೃಪ್ತ ಸರ್ಕಾರವೆಂದೇ ಕರೆಯಬೇಕಾಗುತ್ತದೆ.

ಯಾವುದೇ ಬದ್ಧತೆ, ಸಾಮಾಜಿಕ ಕಾಳಜಿಗಳಿಲ್ಲದ ಆರ್.ಎಸ್.ಎಸ್ ನ ಬಿ.ಎಲ್ ಸಂತೋಷ್‍ ಸಲಹೆಯಂತೆ, ಕರ್ನಾಟಕದ ಸಾಮಾಜಿಕ ಸಂರಚನೆ ಮತ್ತು ಪ್ರಾದೇಶಿಕ ಅಸಮತೋಲನ ಕುರಿತು ಪ್ರಾಥಮಿಕ ಜ್ಞಾನವೂ ಇರದ “ಮೋಟಾಭಾಯ್” ಅಮಿತ್ ಷಾ ಅಂತಿಮಗೊಳಿಸಿದ ಸಚಿವ ಸಂಪುಟವು ಮುಂದಿನ ದಿನಗಳಲ್ಲಿ ಭಾರೀ ರಾಜಕೀಯ ಪಲ್ಲಟಗಳಿಗೆ ಕಾರಣವಾಗಬಹುದು. ಸೇರ್ಪಡೆಯಾದ 17 ಜನರಲ್ಲಿ 7 ಲಿಂಗಾಯತ, 3 ಒಕ್ಕಲಿಗ, 2 ಹಿಂದುಳಿದ ವರ್ಗ, 3 ಪರಿಶಿಷ್ಟ ಜಾತಿ, 1 ಪರಿಶಿಷ್ಟ ಪಂಗಡ ಹಾಗು 1 ಬ್ರಾಹ್ಮಣರಿದ್ದಾರೆ.

2018 ರ ವಿಧಾನಸಭಾ ಚುನಾವಣೆಯಲ್ಲಿ ಮತ್ತು ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸಾರಾಸಗಟಾಗಿ ಬೆಂಬಲಿಸಿದ್ದ ಬೋವಿ, ಯಾದವ, ಮರಾಠ ಹಾಗೂ ಮೀನುಗಾರ ಸಮುದಾಯಗಳಿಗೆ ಇಲ್ಲಿ ಯಾವುದೇ ಪ್ರಾತಿನಿಧ್ಯ ಇಲ್ಲ. ಇನ್ನು ರೆಡ್ಡಿ, ಕಮ್ಮ ಹಾಗು ಬಲಿಜ ಜಾತಿಗಳಿಗೆ ಸಂಪುಟದಲ್ಲಿ ಯಾವುದೇ ಸ್ಥಾನ ದೊರೆತಿಲ್ಲ. ಇದಲ್ಲದೆ ಕರಾವಳಿಯಲ್ಲಿ ಬಿಜೆಪಿಯ ಕಟ್ಟಾ ಬೆಂಬಲಿಗರಾಗಿರುವ ಬಂಟ ಮತ್ತು ಮೊಗವೀರ ಸಮುದಾಯಗಳಿಗೂ ನಿರಾಶೆಯಾಗಿದೆ.

ಇತ್ತ ಜಿಲ್ಲಾವಾರು ಪ್ರಾತಿನಿಧ್ಯವನ್ನು ನೋಡಿದರೆ ಬೆಳಗಾವಿ (2), ಬೆಂಗಳೂರು ನಗರ (3), ಶಿವಮೊಗ್ಗ(2), ಧಾರವಾಡ, ಗದಗ, ಹಾವೇರಿ, ಬಾಗಲಕೋಟೆ, ಬೀದರ್, ಚಿತ್ರದುರ್ಗ, ತುಮಕೂರು, ಕೋಲಾರ, ಚಿಕ್ಕಮಗಳೂರು ಹಾಗೂ ಉಡುಪಿ ಜಿಲ್ಲೆಗಳಿಗೆ ತಲಾ ಒಂದೊಂದು ಸಚಿವ ಸ್ಥಾನ ದೊರೆತಿದೆ. ಉಳಿದ ವಿಜಯಪುರ, ಕಲ್ಬುರ್ಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ಉತ್ತರ ಕನ್ನಡ, ದಾವಣಗೆರೆ, ಹಾಸನ, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು, ಮಂಗಳೂರು, ಬೆಂಗಳೂರು ಗ್ರಾಮಾಂತರ ಹಾಗೂ ಚಿಕ್ಕಬಳ್ಳಾಪುರ. ಈ 17 ಜಿಲ್ಲೆಗಳಿಗೆ ಪ್ರಾತಿನಿಧ್ಯವೇ ಇಲ್ಲ. ಇವುಗಳಲ್ಲಿ ಅರ್ಧದಷ್ಟು ಜಿಲ್ಲೆಗಳು ಇತ್ತೀಚಿನ ಪ್ರವಾಹ, ಭೂ ಕುಸಿತದಂತಹ ಪ್ರಾಕೃತಿಕ ವಿಕೋಪಕ್ಕೆ ಬಲಿಯಾಗಿವೆ. ಇಲ್ಲಿ ತುರ್ತು ಪರಿಹಾರ ಕಾರ್ಯದ ಉಸ್ತುವಾರಿಯ ಅವಶ್ಯಕತೆ ಇದೆ.

ಸಂಪುಟ ವಿಸ್ತರಣೆಯಲ್ಲಿ ಪ್ರಾದೇಶಿಕವಾಗಿ ಅತಿಹೆಚ್ಚು ಅನ್ಯಾಯವಾಗಿರುವುದು ಅತ್ಯಂತ ಹಿಂದುಳಿದ ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ಎನ್ನುವುದೇ ದುರಂತ. ಇಲ್ಲಿನ 6 ಜಿಲ್ಲೆಗಳ ಪೈಕಿ ಬೀದರ್ ಜಿಲ್ಲೆಯ ಔರಾದ್‍ನ ಪ್ರಭು ಚವ್ಹಾಣ್‍ಗೆ ಮಾತ್ರ ಸಂಪುಟದಲ್ಲಿ ಸ್ಥಾನ ದೊರೆತಿದೆ. ಅದು ಕೂಡ ಪಶುಸಂಗೋಪನಾ ಇಲಾಖೆಯಾಗಿದೆ. ಹೈ.ಕರ್ನಾಟಕದ ಒಟ್ಟು 40 ಶಾಸಕರಲ್ಲಿ 15 ಜನ ಬಿಜೆಪಿಯವರಿದ್ದಾರೆ. ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾದ ಒಬ್ಬ ವಿಧಾನ ಪರಿಷತ್ ಸದಸ್ಯರೂ ಇದ್ದಾರೆ. ಮೊನ್ನೆ ತಾನೇ ನಡೆದ ಲೋಕಸಭಾ ಚುನಾವಣೆಯಲ್ಲಿ 5 ಕ್ಕೆ 5 ಕ್ಷೇತ್ರಗಳಲ್ಲಿ ಬಿಜೆಪಿಯ ಸಂಸದರೇ ಆಯ್ಕೆಯಾಗಿದ್ದಾರೆ.

ಯಾದಗಿರಿ ಜಿಲ್ಲೆಯಿಂದ ರಾಜು ಗೌಡ ಹಾಗು ಬಳ್ಳಾರಿ ಜಿಲ್ಲೆಯ ಕರುಣಾಕರ ರೆಡ್ಡಿಯವರಿಗೆ ಸಂಪುಟ ವಿಸ್ತರಣೆಯಲ್ಲಿ ಸ್ಥಾನ ಸಿಗುವ ಭರವಸೆ ಕೊನೆಯ ಕ್ಷಣದವರೆಗೂ ಇತ್ತು. ಹೀಗಿದ್ದೂ ಕೂಡ ಕೇವಲ ಒಬ್ಬರಿಗೆ ಮಾತ್ರ ಅವಕಾಶ ನೀಡಿರುವುದು ಈ ಭಾಗದ ಬಿಜೆಪಿಯ ಶಾಸಕರು ಹಾಗೂ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ. ಹೀಗಾಗಿ ಅವರನ್ನು ಸಮಾಧಾನ ಪಡಿಸಲು ಬಳ್ಳಾರಿ ಜಿಲ್ಲೆಯ ಶ್ರೀರಾಮುಲು ಅವರಿಗೂ ಅವಕಾಶ ನೀಡಿರುವುದಾಗಿ ಹೇಳಲಾಗುತ್ತಿದೆ. ಆದರೆ ಶ್ರೀರಾಮುಲು ಆಯ್ಕೆಯಾಗಿರುವುದು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಕ್ಷೇತ್ರದಿಂದ ಹಾಗಾಗಿ ಆ ಜಿಲ್ಲೆಯಿಂದ ಆಯ್ಕೆಯಾದ ಬಿಜೆಪಿಯ 5 ಜನ ಶಾಸಕರಿಗೂ ಶ್ರೀರಾಮಲುರನ್ನೇ ತೋರಿಸಿ ಸಮಾಧಾನ ಪಡಿಸುತ್ತಿದ್ದಾರೆ.

ಹೈ.ಕರ್ನಾಟಕದಲ್ಲಿ ರಾಯಚೂರು, ಯಾದಗಿರಿ ಹಾಗು ಕಲ್ಬುರ್ಗಿ ಜಿಲ್ಲೆಗಳು ತೀವ್ರ ಮಳೆ ಮತ್ತು ಭೀಮಾ, ಕೃಷ್ಣ, ತುಂಗಭದ್ರಾ ನದಿಗಳ ಪ್ರವಾಹದಿಂದ ತತ್ತರಿಸಿ ಹೋಗಿವೆ. ಜನಜೀವನ ಸಹಜ ಪರಿಸ್ಥಿತಿಗೆ ಬರಲು ಪರಿಹಾರ ಕಾರ್ಯಗಳು ಸಮರೋಪಾದಿಯಲ್ಲಿ ನಡೆಯಬೇಕಾದ ಅಗತ್ಯವಿದೆ. ಹಾಗೆ ನೋಡಿದರೆ ಹಿಂದಿನ ಮೈತ್ರಿ ಸರ್ಕಾರದಲ್ಲಿ ಬೀದರ್‍ನಿಂದ 3 , ಬಳ್ಳಾರಿಯಿಂದ 2 , ರಾಯಚೂರು ಮತ್ತು ಕಲ್ಬುರ್ಗಿಯಿಂದ ತಲಾ ಒಬ್ಬರು ಹೀಗೆ ಹೈ.ಕರ್ನಾಟಕದಿಂದ ಒಟ್ಟು 7 ಜನ ಸಚಿವರಿದ್ದರು. ಈಗ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹೈ.ಕರ್ನಾಟಕ ಪ್ರದೇಶ ನಿರ್ಲಕ್ಷ್ಯಕ್ಕೊಳಗಾಗಿರುವುದು ಈ ಭಾಗದ ಜನರ ಆಕ್ರೋಶಕ್ಕೆ ಕಾರಣವಾಗಿದೆ.

– ಭೀಮನಗೌಡ ಕಾಶಿರೆಡ್ಡಿ, ಕಂಪ್ಲಿ-ಕೋಟೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights