ಬ್ರಿಟನ್ ಪ್ರಯಾಣಿಕರು ನಾಪತ್ತೆ : ಕಾನೂನು ಕ್ರಮದ ಬಗ್ಗೆ ಸಚಿವ ಡಾ. ಸುಧಾಕರ್ ಸುಳಿವು..!
ರಾಜ್ಯದಲ್ಲಿ ಕೊರೋನಾ ಅಬ್ಬರ ಕಡಿಮೆಯಾಗುತ್ತಿದ್ದು, ಇಂದು 911 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ 9,16,256ಕ್ಕೆ ಏರಿಕೆಯಾಗಿದೆ. ಆದರೆ ಬ್ರಿಟನ್ ನ ರೂಪಾಂತರ ಕೊರೊನಾ ಹರಡುವ ಭೀತಿ ಮಾತ್ರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದಕ್ಕೆ ಕಾರಣ ಬ್ರಿಟನ್ ನಿಂದ ಬಂದವರು ಫೋನ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿರುವುದು.
ಇಂದು ಬೆಂಗಳೂರಿನಲ್ಲಿ 542 ಮಂದಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, ನಗರದಲ್ಲಿ ಸೋಂಕಿನಿಂದ ಎಂಟು ಜನ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ಈ ವಿಚಾರದಲ್ಲಿ ಕೊಂಚ ಭೀತಿ ಕಡಿಮೆಯಾದರೂ ಸೋಂಕಿತರು ನಾಪತ್ತೆಯಾಗಿರುವುದು ಆತಂಕವನ್ನು ಹೆಚ್ಚಿಸುತ್ತಲೇ ಇದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಡಾ.ಸುಧಾಕರ್ ಇಂಥವರ ವಿರುದ್ದ ಕ್ರಮ ಕೈಗೊಳ್ಳುವ ಸುಳಿವು ಕೊಟ್ಟಿದ್ದಾರೆ.
ಹೌದು.. ಬ್ರಿಟನ್ ನಿಂದ ಪ್ರಯಾಣ ಬೆಳಸಿ ನಾಪತ್ತೆಯಾಗಿರುವವ ವಿರುದ್ಧ ಪೊಲೀಸ್ ಕ್ರಮವೂ ತೆಗೆದುಕೊಳ್ಳಬಹುದು ಎಂದು ಸಚಿವರು ಹೇಳಿದ್ದಾರೆ. ಜವಾಬ್ದಾರಿಯುತ ನಾಗರಿಕರಾಗಿ ನಮ್ಮೊಂದಿಗೆ ಸಹಕರಿಸುವಂತೆ ಬ್ರಿಟನ್ ನಿಂದ ಹಿಂದಿರುಗಿದವರಿಗೆ ನಾನು ವಿನಂತಿ ಮಾಡುತ್ತೇನೆ. ನೀವು ಪರೀಕ್ಷೆಗೆ ಒಳಗಾಗಬೇಕು. ನೀವು ಪರೀಕ್ಷೆಗೆ ಒಳಗಾಗದಿದ್ದರೆ ಮತ್ತು ನಿಮ್ಮ ಫೋನ್ ಸ್ವಿಚ್ ಆಫ್ ಮಾಡದಿದ್ದರೆ, ಅದು ನಿಜವಾದ ಅರ್ಥದಲ್ಲಿ ಅಪರಾಧವಾಗುತ್ತದೆ ಎಂದು ಸುಧಾಕರ್ ವರದಿಗಾರರಿಗೆ ತಿಳಿಸಿದ್ದಾರೆ.
ರಾಜ್ಯದಲ್ಲಿ ಇಂದು 1214 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 8,91,095ಕ್ಕೆ ಏರಿಕೆಯಾಗಿದೆ. ಇನ್ನು 13,080 ಸಕ್ರೀಯ ಪ್ರಕರಣಗಳಿದ್ದು, ಈ ಪೈಕಿ 209 ಮಂದಿ ಕೋವಿಡ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.