FACT CHECK | ಶರವೇಗದಲ್ಲಿ ಹೆಚ್ಚಿದ ಜಲಪಾತದ ನೀರಿನ ಹರಿವು, ತಾಯಿ ಮಗು ಗ್ರೇಟ್‌ ಎಸ್ಕೇಪ್ ! ಆದ್ರೆ ಇದು ಹೊಗೇನಕಲ್‌ನಲ್ಲಿ ನಡೆದ ಘಟನೆಯಲ್ಲ! ಮತ್ತೆಲ್ಲಿಯದ್ದು?

ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ವೊಂದು ವೈರಲ್ ಆಗುತ್ತಿದ್ದು, ಹೊಗೇನಕಲ್‌ ಜಲಪಾತದಲ್ಲಿ ಪ್ರವಾಹದಲ್ಲಿ ಜನರು ಸಿಕ್ಕಿಬಿದ್ದ ದೃಶ್ಯ ಎಂದು ವಿಡಿಯೋವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಲಾಗಿದೆ.

Fact Check: ಹೊಗೇನಕಲ್‌ ಜಲಪಾತದ ಪ್ರವಾಹದಲ್ಲಿ ಜನರು ಸಿಕ್ಕಿಬಿದ್ದ ದೃಶ್ಯವೆಂದು ಹಳೆಯ ವೀಡಿಯೋ ವೈರಲ್

ಫೇಸ್‌ಬುಕ್ ನಲ್ಲಿ ಕಂಡುಬಂದ ಪೋಸ್ಟ್ ನಲ್ಲಿ “ಮಳೆಗಾಲದಲ್ಲಿನದಿಗಳ ಪಕ್ಕ ಹೋಗಬೇಡಿ ಯಾವ ಸಮಯದಲ್ಲಾದರು ನದಿ ನೀರಿನ ಮಟ್ಟ ಶರವೇಗದಲ್ಲಿ ಹೆಚ್ಚಿ ನಿಮ್ಮ ಪ್ರಾಣವನ್ನು ಹಾರಿಸಿಬಿಡುತ್ತದೆ ಇದು ನೆನ್ನೆ ಹೋಗೆನಕಲ್ಲಿನಲ್ಲಿ ನಡೆದ ಘಟನೆ”  ಎಂಬ ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.

ಜಲಪಾತದ ದಡದಲ್ಲಿ ತಾಯಿ ಮತ್ತು ಮಗು ನಿಂತಿದ್ದಾಗ, ನೀರಿನ ಮಟ್ಟ ದಢೀರ್ ಏರಿಯಾಗಿ ಭೋರ್ಗರೆಯಲು ಪ್ರಾರಂಭಿಸಿದೆ ಇನ್ನೇನು ತಾಯಿ ಮತ್ತು ಮಗು ಪ್ರಹಾಹಕ್ಕೆ ಸಿಲುಕಿದರು ಎನ್ನುಷ್ಟರಲ್ಲಿ ಸ್ಥಳೀಯರು ರಕ್ಷಿಸುವುದನ್ನು ಕೆಲವರು ಸೆರೆಹಿಡಿದು ಸೋಶಿಯಲ್ ಮೋಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಇದೇ ಪ್ರತಿಪಾದನೆಯೊಂದಿಗೆ ಫೇಸ್‌ಬುಕ್‌ನಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದ್ದು, ಈ ವಿಡಿಯೋದ ಸತ್ಯಾಸತ್ಯತೆ ಏನೆಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 16 ಅಕ್ಟೋಬರ್ 2021ರಂದು ಎಕ್ಸ್ ಪ್ರೆಸ್ ಚೆನ್ನೈ ಎಕ್ಸ್ ನಲ್ಲಿ ಹಂಚಿಕೊಂಡ ಪೋಸ್ಟ್‌ವೊಂದು ಲಭ್ಯವಾಗಿದೆ.

ಪೋಸ್ಟ್‌ನ ಹೇಳಿಕೆಯ ಪ್ರಕಾರ, ಸೇಲಂ ಜಿಲ್ಲೆಯ ಅತ್ತೂರ್ ಬಳಿಯ ಅನೈವಾರಿ ಜಲಪಾತದಲ್ಲಿ ಪ್ರವಾಹಕ್ಕೆ ಸಿಲುಕಿದ್ದ ಮಹಿಳೆ ಮತ್ತು ಆಕೆಯ ಮಗುವನ್ನು ತಮಿಳುನಾಡು ಅರಣ್ಯ ಅಧಿಕಾರಿಗಳು ರಕ್ಷಿಸಿದ್ದಾರೆ. ಕೋವಿಡ್ 19 ಬಳಿಕ ಎರಡು ತಿಂಗಳ ಹಿಂದೆ ಈ ಸ್ಥಳವನ್ನು ಸಾರ್ವಜನಿಕರಿಗಾಗಿ ಪುನಃ ತೆರೆಯಲಾಯಿತು ಎಂದಿದೆ.

ಇದನ್ನೆ ಆಧಾರವಾಗಿಟ್ಟುಕೊಂಡು ನಾವು ಕೀ ವರ್ಡ್ ಬಳಸಿ ಗೂಗಲ್ ಸರ್ಚ್ ಮಾಡಿದಾಗ, ಮತ್ತಷ್ಟು ವರದಿಗಳು ಲಭ್ಯವಾಗಿವೆ. 27 ಅಕ್ಟೋಬರ್, 2021ರಂದು ಫಸ್ಟ್ ಪೋಸ್ಟ್ ಮಾಡಿದ ವರದಿಯಲ್ಲಿ, ತಮಿಳುನಾಡಿನ ಅರಣ್ಯಾಧಿಕಾರಿಗಳು ನಡೆಸಿದ ವೀರ ರಕ್ಷಣಾ ಕಾರ್ಯಾಚರಣೆಯ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಂತರ್ಜಾಲ ಬಳಕೆದಾರರಿಂದ ಪ್ರಶಂಸೆಗೆ ಪಾತ್ರವಾಗಿದೆ. ಕಲ್ಲವರಾಯನ ಬೆಟ್ಟದ ಅನೈವಾರಿ ಮುಟ್ಟಲ್ ಜಲಪಾತದಲ್ಲಿ ಪ್ರವಾಹಕ್ಕೆ ಸಿಲುಕಿದ್ದ ಮಹಿಳೆ ಮತ್ತು ಆಕೆಯ ಮಗುವನ್ನು ಅರಣ್ಯ ಅಧಿಕಾರಿಗಳು ರಕ್ಷಿಸಿದ್ದಾರೆ ಎಂದಿದೆ.

27 ಅಕ್ಟೋಬರ್ , 2021ರ ಎನ್‌ಡಿಟಿವಿ ವರದಿಯಲ್ಲಿ, ತಮಿಳುನಾಡಿನಲ್ಲಿ ಭೋರ್ಗರೆಯುತ್ತಿರುವ ಜಲಪಾತದಿಂದ ತಾಯಿ ಮತ್ತು ಮಗುವನ್ನು ರಕ್ಷಿಸುವ ಧೈರ್ಯಶಾಲಿ ಕಾರ್ಯಾಚರಣೆಯನ್ನು ರಾಜ್ಯದ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಬಳಕೆದಾರರು ವ್ಯಾಪಕವಾಗಿ ಶ್ಲಾಘಿಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ದೃಶ್ಯಾವಳಿಗಳು ಮಹಿಳೆ ತನ್ನ ಮಗುವನ್ನು ಹಿಡಿದು ಬಂಡೆಯ ಮೇಲೆ ಅಪಾಯಕಾರಿಯಾಗಿ ನಿಂತಿರುವುದನ್ನು ತೋರಿಸುತ್ತದೆ. ಆನೈವಾರಿ ಮುಟ್ಟಲ್ ಜಲಪಾತದ ನೀರು ಬೀಳುತ್ತಿರುವುದರಿಂದ ಆಕೆಗೆ ಚಲಿಸಲು ಸಾಧ್ಯವಾಗುತ್ತಿಲ್ಲ ಎಂದಿದೆ.

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು 26 ಅಕ್ಟೋಬರ್ , 2021ರಂದು ಮಾಡಿದ ಎಕ್ಸ್ ಪೋಸ್ಟ್ ಲಭ್ಯವಾಗಿದೆ. ಇದರಲ್ಲಿ ಅವರು ತಾಯಿ ಮಗುವನ್ನು ರಕ್ಷಿಸಿದವರನ್ನು ಅಭಿನಂದಿಸಿದ್ದು, ವೈರಲ್ ವಿಡಿಯೋವನ್ನು ಜೊತೆಗೆ ಪೋಸ್ಟ್ ಮಾಡಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, 2021ರಲ್ಲಿ ತಮಿಳುನಾಡಿನ ಕಲ್ಲವರಾಯನ ಬೆಟ್ಟದ ಅನೈವಾರಿ ಮುಟ್ಟಲ್ ಜಲಪಾತದಲ್ಲಿ ಪ್ರವಾಹಕ್ಕೆ ಸಿಲುಕಿದ್ದ ಮಹಿಳೆ ಮತ್ತು ಆಕೆಯ ಮಗುವನ್ನು ಅರಣ್ಯ ಅಧಿಕಾರಿಗಳು ರಕ್ಷಿಸಿದ್ದ ಹಳೆಯ ವಿಡಿಯೋವನ್ನು ಹಂಚಿಕೊಂಡು, ಹೊಗೇನಕಲ್‌ ಜಲಪಾತದಲ್ಲಿ ನಡೆದ ಘಟನೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.


ಇದನ್ನು ಓದಿರಿ : FACT CHECK | ತಂಗಿಯ ಅತ್ಯಾಚಾರ ಮಾಡಿದವನ ತಲೆ ಕತ್ತರಿಸಿದನೇ ಅಣ್ಣ? ಫೋಟೊದ ಅಸಲೀಯತ್ತೇನು ಗೊತ್ತೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights