FACT CHECK | ‘ಭಾರತ್ ಮಾತಾ ಕೀ ಜೈ’ ಎಂದಿದ್ದಕ್ಕೆ ಮುಸ್ಲಿಮರಿಂದ ವೃದ್ದನ ಮೇಲೆ ಹಲ್ಲೆ! ವಾಸ್ತವವೇನು?

ವಯೋವೃದ್ಧರೊಬ್ಬರ ಮೇಲೆ ಗುಂಪೊಂದು ಹಲ್ಲೆ ನಡೆಸಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿದೆ. ಮುಂಬೈನಲ್ಲಿ ಈ ಘಟನೆ ನಡೆದಿದ್ದು, ‘ಭಾರತ್ ಮಾತಾ ಕಿ ಜೈ’ ಎಂದು ಹೇಳಿದ್ದಕ್ಕೆ ಮುಸ್ಲಿಮ್ ಯುವಕರ ಗುಂಪು  ವೃದ್ಧರನ್ನು ಥಳಿಸಿದೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.

ಕಿಶೋರ್ ಎಂಬ ಎಕ್ಸ್ ಖಾತೆಯಿಂದ 9 ಆಗಸ್ಟ್, 2024 ರಂದು ಈ ವಿಡಿಯೋ ಅಪ್ಲೊಡ್ ಆಗಿದ್ದು, “ಭಾರತ ಮಾತೆಗೆ ಜೈ ಎನ್ನಲಾಗದ ಪರಿಸ್ಥಿತಿ. ಘಟನೆ ಮುಂಬೈನ ಭಿಂಡಿ ಬಜಾರ್‌ನಲ್ಲಿ ನಡೆದಿದೆ. ಇದು ಭಾರತದಲ್ಲಿನ ಜಿಹಾದಿ ಮುಸಲ್ಮಾನರ ಒಕ್ಕಲಿಗ ಪ್ರದೇಶಗಳಲ್ಲಿ *ಭಾರತ್ ಮಾತಾಕಿ ಜೈ* ಎನ್ನಲಾಗದ ಪರಿಸ್ಥಿತಿ. ಇದು ಇಸ್ಲಾಮಿಕ್ ದೇಶ ಅಲ್ಲ. ಇದು ಭಾರತದ ಮುದುಕನ ಪರಿಸ್ಥಿತಿ. ಈ ವಿಡಿಯೋವನ್ನು ಆದಷ್ಟು ಶೇರ್ ಮಾಡಿ..” ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

ಹಾಗೆಯೆ ಜುಲೈ 31, 2024 ರಂದು ಪ್ರಭಾಕರ್ ಭಟ್ ಎಂಬವರು ತಮ್ಮ ಫೇಸ್​ಬುಕ್ ಖಾತೆಯಲ್ಲಿ ಇದೇ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು ” ಎಚ್ಚೆತ್ತುಕೊಳ್ಳಿ ಭಾರತೀಯರೇ.. ಒಬ್ಬ ರಾಷ್ಟ್ರೀಯವಾದಿ ವೃದ್ಧರು ಭಾರತ ಮಾತೆಗೆ ಜೈ ಎಂದಾಗ ಅವರನ್ನು ಹೊಡೆದು ಬಡಿದು ದೈಹಿಕ ಹಲ್ಲೆ ಮಾಡಿದ ಘಟನೆ ಮುಂಬೈನ ಭಿಂಡಿ ಬಜಾರ್‌ನಲ್ಲಿ ನಡೆದಿದೆ. ಮಹಾರಾಷ್ಟ್ರ ಪೋಲೀಸರು ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಸ್ವಯಂ ಈ ಘಟನೆಯ ತನಿಖೆ ನಡೆಸಿ ಅಪರಾಧಿಗಳನ್ನು ಶಿಕ್ಷಿಸ ಬೇಕು.” ಎಂದು ಬರೆದಿದ್ದಾರೆ. ಹಾಗಿದ್ದರೆ ಈ ವಿಡಿಯೋ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ,

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಭಾರತೀಯ ಜನತಾ ಪಕ್ಷದ ನಾಯಕ ಮಂಜಿಂದರ್ ಸಿಂಗ್ ಅವರು ಅಕ್ಟೋಬರ್ 19, 2019 ರಂದು ತಮ್ಮ ಫೇಸ್‌ಬುಕ್ ಪೇಜ್​ನಲ್ಲಿ ಹಂಚಿಕೊಂಡ ಇದೇ ವಿಡಿಯೋ ಲಭ್ಯವಾಗಿದೆ. ಬೀದಿಯಲ್ಲಿ ಹಾದು ಹೋಗುತ್ತಿದ್ದ ಜನರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದ ಕಾರಣಕ್ಕೆ ಕೋಪಗೊಂಡ ಜನರು ವೃದ್ಧನನ್ನು ಥಳಿಸಿದ್ದಾರೆ ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

ಈ ವಿಡಿಯೋದಲ್ಲಿ ವಯೋವೃದ್ಧರು “ಭಾರತ್ ಮಾತಾ ಕಿ ಜೈ” ಘೋಷಣೆ ಮಾಡುವ ಮೊದಲು ಬಿಜೆಪಿ ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಸುವುದನ್ನು ಕಾಣಬಹುದು. ಆ ಬಳಿಕ, ಅವರ ಸುತ್ತಲು ಸ್ಥಳೀಯ ಜನರು ಬಂದು ನಂತರ ಹಲ್ಲೆ ನಡೆಸಲಾಗಿದೆ. ಸಿಂಗ್ ಅವರು ತಮ್ಮ ಪೋಸ್ಟ್‌ನಲ್ಲಿ, ಭಿಲ್ವಾರದ ಆಜಾದ್ ಚೌಕ್ ಮಾರ್ಕೆಟ್‌ನಲ್ಲಿ ಈ ಘಟನೆ ನಡೆದಿದ್ದು, ವೃದ್ಧರೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸುವಂತೆ ರಾಜಸ್ಥಾನ ಪೊಲೀಸರಿಗೆ ಕರೆ ನೀಡಿರುವುದು ಇದೆ.

ಬಳಿಕ 21 ಅಕ್ಟೋಬರ್ 2019 ರಂದು ಮಂಜಿಂದರ್ ಸಿಂಗ್ ಅವರು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಈ ಘಟನೆಗೆ ಸಂಬಂಧಿಸಿದ ವರದಿಯ ಫೋಟೋವನ್ನು ಹಂಚಿಕೊಂಡಿದ್ದಾರೆ. ವರದಿಯ ಪ್ರಕಾರ, ”ಈ ವಿಡಿಯೋ ಅಕ್ಟೋಬರ್ 15, 2019 ರಂದು ನಡೆದ ಘಟನೆಯಾಗಿದೆ. ವ್ಯಕ್ತಿಯ ಹೆಸರು ಹಾಟ್ಮಂಡ್ ಸಿಂಧಿ. ಇವರು ಮಾನಸಿಕ ಅಸ್ವಸ್ಥ. ದಾರಿಹೋಕರಿಗೆ ಕಿರುಕುಳ ನೀಡುತ್ತಿದ್ದರು ಮತ್ತು ನಿಂದಿಸುತ್ತಿದ್ದರು, ಇದರಿಂದ ಕೆಲವರು ಆತನಿಗೆ ಥಳಿಸಿದ್ದಾರೆ,” ಎಂದು ಬರೆಯಲಾಗಿದೆ.

“ಭಾರತ್ ಮಾತಾ ಕಿ ಜೈ” ಎಂದು ಘೋಷಣೆ ಕೂಗಿದ್ದಕ್ಕಾಗಿ ಮುಸ್ಲಿಂ ಯುವಕರು ಸಿಖ್ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದಾನೆ ಎಂಬ ಇದೇ ರೀತಿಯ ಆರೋಪಗಳೊಂದಿಗೆ 2019 ಮತ್ತು 2023 ರಲ್ಲಿ ಕೂಡ ಇದೇ ವೀಡಿಯೊ ವೈರಲ್ ಆಗಿರುವುದನ್ನು ನಾವು ಕಂಡುಕೊಂಡಿದ್ದೇವೆ.

2019 ರಲ್ಲಿ ವಿಶ್ವಾಸ್ ನ್ಯೂಸ್ ತನ್ನ ಫ್ಯಾಕ್ಟ್ ಚೆಕ್ ವರದಿಯಲ್ಲಿ ಈ ಕುರಿತು ಮಾಹಿತಿ ನೀಡಿರುವುದು ಕಂಡುಬಂತು. ಇದರಲ್ಲಿ ಎಫ್​ಐಆರ್ ಕಾಪಿ ಬಗ್ಗೆ ಮಾಹಿತಿ ನೀಡಲಾಗಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಮನೋಜ್, ಹೇಮಂತ್ ನಥಾನಿ, ಭಗವಾನ್ ದಾಸ್, ಮೇಜೂರ್ ಶೇಖ್ ಮತ್ತು ಇರ್ಫಾನ್ ಎಂಬ ಆರೋಪಿಗಳನ್ನು ಬಂದಿಸಲಾಗಿದೆ ಎಂದು ಬರೆಯಲಾಗಿದೆ. ಎಫ್ಐಆರ್ ಪ್ರಕಾರ, ಘಟನೆಯಲ್ಲಿ ಯಾವುದೇ ಕೋಮು ಗಲಭೆಯ ಉಲ್ಲೇಖವಿಲ್ಲ, ಮತ್ತು ಆರೋಪಿಗಳನ್ನು ಹಿಂದೂಗಳು ಮತ್ತು ಮುಸ್ಲಿಮರು ಎಂದು ಗುರುತಿಸಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಮುಂಬೈನಲ್ಲಿ ಭಾರತ್ ಮಾತಾ ಕಿ ಜೈ ಎಂದು ಹೇಳಿದ್ದಕ್ಕೆ ವಯೋವೃದ್ಧರೊಬ್ಬರಿಗೆ ಥಳಿಸಿದ್ದಾರೆ ಎನ್ನಲಾಗುತ್ತಿರುವ ವಿಡಿಯೋ ಸುಳ್ಳು ಮತ್ತು ಕೋಮು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ರಾಜಸ್ಥಾನದಲ್ಲಿ ವೃದ್ಧ ಜನರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದ ಕಾರಣಕ್ಕೆ ಕೋಪಗೊಂಡ ಸ್ಥಳೀಯರು ಥಳಿಸಿದ್ದಘಟನೆ 2019ರಲ್ಲಿ ನಡೆದಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ  ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದ್ದನ್ನು ಓದಿರಿ : FACT CHECK | ಬಾಂಗ್ಲಾದೇಶದಲ್ಲಿ ಹಿಂದೂ ದೇವಾಲಯಕ್ಕೆ ಬೆಂಕಿ ಹಚ್ಚಲಾಗಿದೆ ಎಂದು ಸುಳ್ಳು ಪೋಸ್ಟ್‌ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights