FACT CHECK | ಇಸ್ಕಾನ್‌ ಟೆಂಪಲ್‌ನಿಂದ ಬಾಂಗ್ಲಾ ನಿರಾಶ್ರಿತರಿಗೆ ನೆರವು ಎಂಬ ವಿಡಿಯೋದ ಅಸಲೀಯತ್ತೇನು ಗೊತ್ತೇ?

ತಿನ್ನುವ ಬಟ್ಟಲಿಗೆ ವಿಷ ಹಾಕಿದರು ತಿರುಗಿ ಅವರಿಗೆ ಅಮೃತ ಬಡಿಸುವ ಧರ್ಮ ಅಂತ ಈ ಭೂಮಿಯ ಮೇಲೆ ಇದ್ದರೆ ಅದು ಸನಾತನ ಹಿಂದೂ ಧರ್ಮ ಮಾತ್ರ ಯಾವ ಜನರು ಬಾಂಗ್ಲಾದೇಶದಲ್ಲಿ ಇಸ್ಕಾನ್ ಟೆಂಪಲ್ ಧ್ವಂಸ ಮಾಡಿದರೋ ಇಂದು ಅದೇ ಪ್ರವಾಹ ಪೀಡಿತ ಜನರಿಗೆ ಇಸ್ಕಾನ್ ಆಹಾರವನ್ನು ಬಡಿಸುವ ಮೂಲಕ ಅವರ ನೆರವಿಗೆ ಧಾವಿಸಿದೆ. ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನುಹಂಚಿಕೊಳ್ಳಲಾಗುತ್ತಿದೆ.


ಬಾಂಗ್ಲಾ ಪ್ರವಾಹದ ಕುರಿತು ಅನೇಕ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಇದೀಗ ಇತ್ತೀಚೆಗಷ್ಟೆ ನಡೆದ ಹಿಂಸಾಚಾರದಲ್ಲಿ ಕಿಡಿಗೇಡಿಗಳು ಬಾಂಗ್ಲಾದ ಖುಲ್ನಾ ವಿಭಾಗದಲ್ಲಿ ನೆಲೆಗೊಂಡಿರುವ ಮೆಹರ್‌ಪುರದಲ್ಲಿರುವ ಇಸ್ಕಾನ್ ದೇವಾಲಯವನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಿದ್ದರು. ಹೀಗಿದ್ದರೂ ಇಸ್ಕಾನ್, ಪ್ರವಾಹದಲ್ಲಿ ಸಿಲುಕಿರುವ ಬಾಂಗ್ಲಾ ಪ್ರಜೆಗಳಿಗೆ ಸಹಾಯ ಮಾಡುತ್ತಿದೆ ಎಂಬ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. 

ಪ್ರವಾಹ ಪೀಡಿತ ಬಾಂಗ್ಲಾ ಜನರಿಗೆ ಇಸ್ಕಾನ್ ಸಹಾಯ ಮಾಡುತ್ತಿದೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋಗಳನ್ನು  ನೀವು ಇಲ್ಲಿಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ವಿಡಿಯೋದ ಕೀ ಫ್ರೇಮ್‌ಗಳನ್ನು ತೆಗೆದು, ಇಸ್ಕಾನ್ ಬಾಂಗ್ಲಾದೇಶ ಪ್ರಹಾವ ಎಂಬ ಕೀ ವರ್ಡ್‌ ಬಳಸಿ ಗೂಗಲ್ ಸರ್ಚ್ ಮಾಡಿದಾಗ, ಇಸ್ಕಾನ್​ ಬಾಂಗ್ಲಾದೇಶ ವೆಬ್​ಸೈಟ್​ನಲ್ಲಿ ಜೂನ್ 22, 2022 ರಲ್ಲಿ ಪ್ರಕಟವಾದ ಲೇಖನ ಲಭ್ಯವಾಗಿದೆ. ಇದಕ್ಕೆ ‘ಇಸ್ಕಾನ್ ಸಿಲ್ಹೆಟ್ ಪ್ರವಾಹ ಸಂತ್ರಸ್ತರ ಪರವಾಗಿ ನಿಂತಿದೆ’ ಎಂಬ ಶೀರ್ಷಿಕೆಯೊಂದಿಗೆ ವೈರಲ್ ಆಗುತ್ತಿರುವ ವಿಡಿಯೋವನ್ನು ಲಗತ್ತಿಸಿದೆ.

ಇಸ್ಕಾನ್​ ಬಾಂಗ್ಲಾದೇಶ ವೆಬ್​ಸೈಟ್​ನಲ್ಲಿ ಪ್ರಕಟವಾದ ಲೇಖನ.

ವೆಬ್‌ಸೈಟ್‌ನಲ್ಲಿ ಲಭ್ಯವಾದ ವರದಿಯ ಪ್ರಕಾರ, ‘ಭಾರೀ ಮಳೆ ಮತ್ತು ಭೂಕುಸಿತದಿಂದಾಗಿ ಸಿಲ್ಹೆಟ್ ಮತ್ತು ಸುನಮ್‌ಗಂಜ್‌ನಲ್ಲಿ ಪ್ರವಾಹದಿಂದ  ಪರಿಸ್ಥಿತಿ ಗಂಭೀರವಾಗಿದೆ. ಸರ್ಕಾರ ವಿವಿಧೆಡೆ ಪರಿಹಾರ ವಿತರಣೆ ಮಾಡಿದರೂ ಹಲವರಿಗೆ ಕೈತುಂಬ ಆಹಾರ ಸಿಕ್ಕಿಲ್ಲ. ಪ್ರವಾಹ ಸಂತ್ರಸ್ತರ ಮನೆಗಳಿಗೆ ತೆರಳಿ ಸಾಧ್ಯವಾದಷ್ಟು ಆಹಾರ ನೆರವು ನೀಡುತ್ತಿದ್ದೇವೆ. ಸಿಲ್ಹೆಟ್ ನಗರದ ಹೊರತಾಗಿ, ಸಮೀಪದ ಉಪಜಿಲಾಗಳಲ್ಲಿ ಪ್ರತಿದಿನ 3-4 ಸಾವಿರ ಜನರಿಗೆ ಬೇಯಿಸಿದ ಆಹಾರವನ್ನು ವಿತರಿಸಲಾಗುತ್ತದೆ. ಆಹಾರದ ಜೊತೆಗೆ, ಇಸ್ಕಾನ್ ಬಟ್ಟೆಗಳು, ಅಗತ್ಯ ಔಷಧಗಳು, ನೀರು ಶುದ್ಧೀಕರಣಕ್ಕಾಗಿ ಮಾತ್ರೆಗಳು ಮತ್ತು ವೈದ್ಯಕೀಯ ಆರೈಕೆಯಂತಹ ಇತರ ಅಗತ್ಯ ಸಹಾಯವನ್ನು ವಿತರಿಸುತ್ತದೆ. ಪ್ರವಾಹ ಪರಿಸ್ಥಿತಿ ಸಹಜ ಸ್ಥಿತಿಗೆ ಬರುವವರೆಗೆ ಇಸ್ಕಾನ್ ಪ್ರವಾಹ ಸಂತ್ರಸ್ತರ ಪಕ್ಕದಲ್ಲಿರುತ್ತದೆ’ ಎಂದು ವರದಿಯಲ್ಲಿದೆ.

ಹಾಗೆಯೆ ಜೂನ್ 20, 2022 ರಂದು Iskcon Youth Forum, Sylhet ಫೇಸ್​ಬುಕ್ ಖಾತೆಯಲ್ಲಿ ‘ಇದು ಅನ್ನವಲ್ಲ ಕೋಟ್ಯಾಂತರ ರೂಪಾಯಿಗಳ ಸಂಪತ್ತು. ಸ್ವಲ್ಪ ಆಹಾರಕ್ಕಾಗಿ ಜನರು ಎಷ್ಟು ಚಡಪಡಿಸುತ್ತಾರೆ ನೋಡಿ. ಪ್ರವಾಹ ಸಂತ್ರಸ್ತರ ಪಕ್ಕದಲ್ಲಿ ಇಸ್ಕಾನ್ ಸಿಲ್ಹೆಟ್‌. ನೀವೂ ಮುಂದೆ ಬನ್ನಿ’ ಎಂಬ ಅಡಿಬರಹದೊಂದಿಗೆ ಇದೇ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ.

ಸಂಕೀರ್ತನ್ ಫೆಸ್ಟ್ ಎಂಬ ಯೂಟ್ಯೂಬ್ ಚಾನೆಲ್​ನಲ್ಲಿಯೂ ಜೂನ್ 20, 2022 ರಂದು ಇದೇ ವೀಡಿಯೊವನ್ನು ಶೇರ್ ಮಾಡಲಾಗಿದ್ದು, ‘ಇಸ್ಕಾನ್ ಸಿಲ್ಹೆಟ್ ಮತ್ತು ಸಂಕೀರ್ತನ್ ಫೆಸ್ಟ್ ಸಿಲ್ಹೆಟ್-ಸುನಮ್‌ಗಂಜ್‌ನಲ್ಲಿನ ಪ್ರವಾಹ ಪೀಡಿತರಿಗೆ ಸಹಾಯ ಮಾಡುತ್ತಿರುವುದು’ ಎಂಬ ಶೀರ್ಷಿಕೆ ನೀಡಿದೆ.  ಹೀಗಾಗಿ ಬಾಂಗ್ಲಾದೇಶದ ಇತ್ತೀಚಿನ ಗಲಭೆಯಲ್ಲಿ ಕಿಡಿಗೇಡಿಗಳು ಇಸ್ಕಾನ್ ದೇವಾಲಯಕ್ಕೆ ಹಾನಿ ಮಾಡಿದ್ದರೂ, ಇಸ್ಕಾನ್ ಅಲ್ಲಿನ ಪ್ರವಾಹ ಸಂತ್ರಸ್ತರಿಗೆ ಸಹಾಯ ಮಾಡಿದೆ ಎಂಬುದು ಸುಳ್ಳು ಎಂದು ವಿಡಿಯೋ ಆಧರಿಸಿ ಸೌತ್‌ಚೆಕ್ ವೆಬ್‌ಸೈಟ್ ವರದಿ ಮಾಡಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಬಾಂಗ್ಲಾದೇಶದಲ್ಲಿ 2022ರಲ್ಲಿ ಭಾರೀ ಮಳೆಯಿಂದಾಗಿ ಉಂಟಾದ ಪ್ರವಾಹದಿಂದ ಅಲ್ಲಿನ ಜನ ತೊಂದರೆ ಅನುಭವಿಸುವಂತಾಗಿತ್ತು. ಆಗ ಸಿಲ್ಹೆಟ್ ಪ್ರವಾಹ ಸಂತ್ರಸ್ತರಿಗೆ ಇಸ್ಕಾನ್ ಸಹಾಯ ಮಾಡುತ್ತಿರುವ ವಿಡಿಯೋವನ್ನು 2024ರದ್ದು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ  ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ವಿಜ್ಞಾನಿಯೊಬ್ಬರು ಬಾಹ್ಯಾಕಾಶದಿಂದ ಜಿಗಿದು ಭೂಮಿಯನ್ನು ತಲುಪಿದ್ದಾರೆ ಎಂಬುದು ನಿಜ ಆದರೆ ಆವರು ಆಸ್ಟ್ರೇಲಿಯಾದವರಲ್ಲ!


ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights