FACT CHECK | ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಕಚೇರಿಯಲ್ಲಿ ಮೊಘಲ್ ದೊರೆ ಬಾಬರ್‌ನ ಚಿತ್ರವನ್ನು ಹಾಕಲಾಗಿದೆಯೇ?

ಲೋಕಸಭೆ ವಿರೋದ ಪಕ್ಷದ ನಾಯಕ ರಾಹುಲ್ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸೇರಿದಂತೆ ಇತರ ಕಾಂಗ್ರೆಸ್ ನಾಯಕರೊಂದಿಗೆ ಇರುವ ಫೋಟೋವನ್ನು ವಾಟ್ಸಾಪ್‌ನಲ್ಲಿ ಪ್ರಸಾರ ಮಾಡಲಾಗುತ್ತಿದೆ. ಕಾಂಗ್ರೆಸ್ ಪಕ್ಷದ ಪ್ರಧಾನ ಕಚೇರಿಯಿಂದ ತೆಗೆದ ಈ ಫೋಟೋದಲ್ಲಿ ರಾಹುಲ್ ಗಾಂಧಿ ಹಿಂದೆ ಮೊಘಲ್ ಚಕ್ರವರ್ತಿ ಬಾಬರ್ ಚಿತ್ರವಿದ್ದು, ರಾಹುಲ್ ಗಾಂಧಿ ಮೊಘಲ್ ವಾರಸುದಾರ ಎಂದು ಪೋಸ್ಟ್ ನಲ್ಲಿ ಉಲ್ಲೇಖಿಸಲಾಗಿದೆ. ಅದೇ ಮಾಹಿತಿಯು ತೆಲುಗು ಭಾಷೆಯಲ್ಲಿ ಫೇಸ್‌ಬುಕ್‌ನಲ್ಲಿ ಪ್ರಸಾರವಾಗಿದೆ.

‘ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ರಾಹುಲ್ ಗಾಂಧಿಯ ಹಿಂದೆ ಇರುವ ಫೋಟೋ ರಾಮ, ಕೃಷ್ಣ ಅಥವಾ ಗಾಂಧಿಯದ್ದಲ್ಲ, ಅದು ಮೊಘಲ್ ಚಕ್ರವರ್ತಿ ಬಾಬರ್‌ನದು, ಕಾಂಗ್ರೆಸ್ ರಾಮಮಂದಿರದ ವಿರುದ್ಧ ಏಕೆ ಎಂದು ಈಗ ನಿಮಗೆ ಅರ್ಥವಾಗಿದೆ.’ಎಂಬ ಬರಹದೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಫ್ಯಾಕ್ಟ್‌ಚೆಕ್ :

ವಾಟ್ಸಾಪ್‌ಗಳಲ್ಲಿ ಪ್ರಸಾರವಾಗುತ್ತಿರುವ ಫೋಟೊವನ್ನು ಪರಿಶೀಲಿಸಲು ಗೂಗಲ್ ಲೆನ್ಸ್‌ ಮೂಲಕ ಸರ್ಚ್ ಮಾಡಿದಾಗ, 11ನೇ ಡಿಸೆಂಬರ್ 2017 ರಂದು ಇಂಡಿಯಾ ಟುಡೇ ವೆಬ್‌ಸೈಟ್‌ನಲ್ಲಿನ ಪ್ರಕಟಿಸಿದ ಸುದ್ದಿ ವರದಿಯಲ್ಲಿ ಮೂಲ ಚಿತ್ರ ಲಭ್ಯವಾಗಿದೆ.

vishvasnews

2017 ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (AICC) ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ರಾಹುಲ್ ಗಾಂಧಿ ಚುನಾವಣೆಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿರುವ ಬಗ್ಗೆ ಸುದ್ದಿ ಪ್ರಸಾರವಾಗಿತ್ತು. ಆದರೆ, ರಾಹುಲ್ ಗಾಂಧಿ ಹಿಂಭಾಗ ಇರುವ ಫೋಟೊದಲ್ಲಿ ಇರುವುದು ಮಹಾತ್ಮ ಗಾಂಧಿ ಫೋಟೊ ಬಾಬರ್ ಫೋಟೋ ಅಲ್ಲ.

ಡಿಸೆಂಬರ್ 5, 2017 ರಂದು ಪ್ರಕಟಿಸಲಾದ ಈ ಚಿತ್ರದಲ್ಲಿ ಮೊಘಲ್ ಚಕ್ರವರ್ತಿಯ ಫೋಟೋ ಇರಲಿಲ್ಲ, ಆದರೆ ಮಹಾತ್ಮ ಗಾಂಧಿಯವರ ಚಿತ್ರವಿತ್ತು. ಫೋಟೋ ಎಡಿಟಿಂಗ್ ಉಪಕರಣಗಳನ್ನು ಬಳಸಿ ಮೂಲ ಚಿತ್ರವನ್ನು ಎಡಿಟ್ ಮಾಡಲಾಗಿದೆ ಮತ್ತು ಮೊಘಲ್ ಚಕ್ರವರ್ತಿಯ ಚಿತ್ರವನ್ನು ಪ್ರತ್ಯೇಕವಾಗಿ ಅಂಟಿಸಲಾಗಿದೆ ಎಂಬುದು ಸ್ಪಷ್ಟವಾಗಿದೆ. ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಸುವ ವೇಳೆಯ ನೈಜ ಚಿತ್ರವನ್ನು ಇಲ್ಲಿ ನೋಡಿ.

ಅಲ್ಲದೆ, ಇದೇ ಫೋಟೋವನ್ನು ಡಿಸೆಂಬರ್ 4, 2017 ರಂದು ಕಾಂಗ್ರೆಸ್ ಪಕ್ಷದ ಅಧಿಕೃತ ಎಕ್ಸ್ ಪುಟದಲ್ಲಿ ಪೋಸ್ಟ್ ಮಾಡಲಾಗಿದೆ. ಅದರಲ್ಲಿ ಗಾಂಧಿ ಫೋಟೋ ಕೂಡ ಇದೆ. ಕಾಂಗ್ರೆಸ್ ಪಕ್ಷದ ಕೇಂದ್ರ ಕಚೇರಿಯಲ್ಲಿ ಬಾಬರ್ ಚಿತ್ರದೊಂದಿಗೆ ಹರಿದಾಡಿರುವ ಫೋಟೋ ನಕಲಿ ಎಡಿಟ್ ಆಗಿರುವುದು ಗೊತ್ತಾಗುತ್ತದೆ. ಗಾಂಧಿ ಚಿತ್ರವನ್ನು ಎಡಿಟ್ ಮಾಡಿ ತಪ್ಪು ಪ್ರಚಾರ ಮಾಡಲಾಗುತ್ತಿದೆ.

ಮಾಜಿ ಪ್ರಧಾನಿ ನೆಹರು ಅವರ ಕುಟುಂಬ (ಇಂದಿರಾ ಗಾಂಧಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ)ದವರು ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದವರು ಎಂದು ಈ ಹಿಂದೆಯೂ ಅನೇಕ ಸುಳ್ಳು ಸುದ್ದಿಗಳನ್ನು ಹರಡಲಾಗಿದೆ. ಇದು ಕೂಡ ಅದರ ಮುಂದುವರೆದ ಭಾಗ ಎಂಬುದು ಈ ತನಿಖೆ ಮೂಲಕ ಪತ್ತೆ ಹಚ್ಚಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, 2017ರಲ್ಲಿ ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ನಡೆಯುತ್ತಿದ್ದ ಚುನಾವಣೆಗೆ ಕಾಂಗ್ರೆಸ್‌ ನಾಯಕರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸುವ ವೇಳೆ ತೆಗೆದ ಹಳೆಯ ಚಿತ್ರದಲ್ಲಿ ಗಾಂಧಿಜಿ ಇರುವ ಚಿತ್ರವನ್ನು, ಎಡಿಟ್‌ ಮಾಡಿ ಮೊಗಲ್ ದೊರೆ ಬಾಬರ್ ಚಿತ್ರವನ್ನು ಸೇರಿಸಿ ತಪ್ಪಾಗಿ ಹಂಚಿಕೊಳ್ಳಲಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಜ್ಯೋತಿರಾದಿತ್ಯ ಸಿಂಧಿಯಾ BJP ಮತ್ತು ಬಜರಂಗದಳವನ್ನು ಟೀಕಿಸಿದ್ದ ಹಳೆಯ ವಿಡಿಯೋವನ್ನು ಇತ್ತೀಚಿನದ್ದು ಎಂದು ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights