FACT CHECK | ದುರ್ಗಾ ಮಾತೆಯ ಮೂರ್ತಿಯನ್ನು ಧ್ವಂಸ ಮಾಡಿದ್ದು ಮುಸ್ಲಿಮರಲ್ಲ ! ಮತ್ತ್ಯಾರು?

ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದು ಪ್ರಸಾರವಾಗುತ್ತಿದ್ದು, ಪೂಜಾ ಮಂಟಪದಲ್ಲಿ ಇರಿಸಲಾಗಿದ್ದ ಪೂಜಾ ಸಾಮಗ್ರಿಗಳೆಲ್ಲ ನೆಲದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು , ದುರ್ಗಾ ದೇವಿಯ  ಮೂರ್ತಿಯನ್ನು ವಿರೂಪಗೊಳಿಸಿರುವುದನ್ನು ನೋಡಬಹುದು. ಇದನ್ನು ಮುಸ್ಲಿಮರು ಮಾಡಿದ್ದಾರೆ ಎಂದು ಆರೋಪಿಸಿ ಎಕ್ಸ್‌ ಖಾತೆ ಬಳಕೆದಾರರು ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

ಅಕ್ಟೋಬರ್ 12, 2024 ರಂದು ಎಕ್ಸ್​ ಬಳಕೆದಾರರೊಬ್ಬರು ಈ ವಿಡಿಯೋವನ್ನು ಹಂಚಿಕೊಂಡು, ‘‘ಇದು ಪಾಕಿಸ್ತಾನ, ಬಾಂಗ್ಲಾದೇಶ ಅಲ್ಲ.. ಇದು ಹೈದರಾಬಾದ್. ಹೈದರಾಬಾದ್‌ನಲ್ಲಿ ಮಾತೆ ದುರ್ಗಾ ಮೂರ್ತಿ ಧ್ವಂಸ ಮಾಡಿದ ಜಿಹಾದಿ ಮುಸ್ಲಿಮರು. ಗಣೇಶನ ಮೂರ್ತಿ ಆಯಿತು ಈಗ ದುರ್ಗಾ ಮೂರ್ತಿ.. ಹಿಂದೂಗಳೆ ಇನ್ನಾದರು ಎಚ್ಚೆತ್ತುಕೊಳ್ಳಿ ಇಲ್ಲದಿದ್ದರೆ ಸನಾತನ ಧರ್ಮನಾಶ ನಿಶ್ಚಿತ’’ ಎಂದು ಬರೆದುಕೊಂಡಿದ್ದಾರೆ. ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವಿಡಿಯೋವನ್ನು ನೀವು ಇಲ್ಲಿಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಅಕ್ಟೋಬರ್ 12, 2024 ರಂದು ಎಎನ್‌ಐ ಈ ಘಟನೆಯ ಕುರಿತು ಮಾಡಿದ ವರದಿ ಲಭ್ಯವಾಗಿದೆ.

ಎಎನ್‌ಐ ವರದಿಯಲ್ಲಿ ಪೊಲೀಸರ ಹೇಳಿಕೆಯನ್ನು ಉಲ್ಲೇಖಿಸಿದ್ದು, ‘ಬೆಳಗ್ಗೆ 6 ಗಂಟೆ ಸುಮಾರಿಗೆ ನಮಗೆ ಫೋನ್‌ನಲ್ಲಿ ದೂರು ಬಂದಿದೆ. ನಾವು ಅಲ್ಲಿಗೆ ತಲುಪಿದಾಗ ಮೈದಾನದಲ್ಲಿ ಇರಿಸಲಾಗಿದ್ದ ದುರ್ಗಾ ಮಾತೆಯ ಪ್ರತಿಮೆಯ ಬಲಗೈಗೆ ಹಾನಿಯಾಗಿದ್ದು, ಪ್ರತಿಮೆಯ ಬುಡದಲ್ಲಿ ಹಾಕಲಾಗಿದ್ದ ಪ್ರಸಾದ್ ಮತ್ತಿತರ ವಸ್ತುಗಳು ಚೆಲ್ಲಾಪಿಲ್ಲಿಯಾಗಿವೆ. ನಾವು ತ್ವರಿತವಾಗಿ ತನಿಖೆಯನ್ನು ಪ್ರಾರಂಭಿಸಿದ್ದೇವೆ ಮತ್ತು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ ಆರೋಪಿಯನ್ನು ರಾತ್ರಿ 8:15 ರ ಸುಮಾರಿಗೆ ಬಂಧಿಸಿದ್ದೇವೆ. ಆರೋಪಿಯ ಹೆಸರು ಕೃಷ್ಣಗೌಡ, ಆತ ಮಾನಸಿಕ ಅಸ್ವಸ್ಥ. ಬೆಳಿಗ್ಗೆ ಹಸಿವಿನಿಂದಾಗಿ ಈ ಪೂಜಾ ಮಂಟಪಕ್ಕೆ ಬಂದಿದ್ದರು’ ಎಂದು ಡಿಸಿಪಿ ಅಕ್ಷಯ್ ಯಾದವ್ ಹೇಳಿಕೆಯನ್ನು ಉಲ್ಲೇಖಿಸಲಾಗಿದೆ.

Siasat.com ಕೂಡ ಈ ಕುರಿತು ಸುದ್ದಿ ಪ್ರಕಟಿಸಿದ್ದು, ‘ನಗರದ ನುಮಾಯಿಷ್ ಮೈದಾನದಲ್ಲಿ ಗುರುವಾರ ರಾತ್ರಿ ದುರ್ಗಾ ವಿಗ್ರಹಕ್ಕೆ ಹಾನಿ ಮಾಡಿದ ಆರೋಪದ ಮೇಲೆ ಬೇಗಂ ಬಜಾರ್ ಪೊಲೀಸರು ವ್ಯಕ್ತಿಯನ್ನು ಬಂಧಿಸಿದ್ದಾರೆ. ಆರೋಪಿ ಕೃಷ್ಣಯ್ಯಗೌಡ ಮಾನಸಿಕ ಅಸ್ವಸ್ಥನಾಗಿದ್ದು, ನಾಗರಕರ್ನೂಲ್ ಜಿಲ್ಲೆಯವನಾಗಿದ್ದಾನೆ. ಮಂಗಳವಾರ ರಾತ್ರಿ 10 ಗಂಟೆಗೆ ನುಮೈಸ್ ಮಲಾದ ದುರ್ಗಾ ಪೂಜಾ ಮಂಟಪವನ್ನು ಈತ ಧ್ವಂಸಗೊಳಿಸಿದ್ದ’ ಎಂದು ವರದಿಯಲ್ಲಿದೆ.

ತೆಲಂಗಾಣ ಟುಡೇ ಕೂಡ ಈ ಸುದ್ದಿಯನ್ನು ಪ್ರಕಟಿಸಿದ್ದು, ಈ ಘಟನೆಯಲ್ಲಿ ಕೃಷ್ಣಗೌಡ ಎಂಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಕೃಷ್ಣಯ್ಯಗೌಡ ಎಂಬ ಮಾನಸಿಕ ಅಸ್ವಸ್ಥ ವ್ಯಕ್ತಿಯು ನುಮೈಸ್ ಮೈದಾನದಲ್ಲಿನ ದುರ್ಗಾ ಮಾತೆಯ ಪ್ರತಿಮೆಗೆ ಹಾನಿ ಮಾಡಿದ ಘಟನೆಯನ್ನು ಮುಸಲ್ಮಾನರಿಂದ ದುರ್ಗಾ ದೇವಿಯ ಮೂರ್ತಿ ಧ್ವಂಸ ಎಂದು ಸುಳ್ಳು ಮತ್ತು ಕೋಮು ದ್ವೇಷದ ಹಿನ್ನಲೆಯಲ್ಲಿ ತಪ್ಪಾಗಿ ಹಂಚಿಕೊಳ್ಳಲಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಎಪಿಜೆ ಅಬ್ದುಲ್ ಕಲಾಂ ಬಾಲ್ಯದ ಫೋಟೊ ಎಂದು ಸಂಬಂಧವಿಲ್ಲದ ಫೋಟೊ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights