ಸಾವಿಗೆ ಹೆದರಿ ಮನೆಯಲ್ಲಿ ಕೂರುವವನಲ್ಲ, ರಾಜ್ಯಾದ್ಯಂತ ಸರ್ಕಾರದ ವಿರುದ್ಧ ಹೋರಾಟ ಕಟ್ಟುತ್ತೇನೆ: ಹೆಚ್ಡಿ ದೇವೇಗೌಡ
ಸಾವು ಯಾರಿಗೆ ಯಾವಾಗ ಯಾವ ರೀತಿಯಲ್ಲಿ ಬರುತ್ತದೆ ಎಂಬುದು ಯಾರಿಗೂ ತಿಳಿದಿಲ್ಲ. ಹಾಗಾಗಿ ಕೊರೊನಾಗೆ ಭಯಪಟ್ಟು, ಸಾವಿಗೆ ಹೆದರಿ ಮನೆಯಲ್ಲಿ ಕೂರುವ ಜಾಯಮಾನ ನನ್ನದಲ್ಲ. ರಾಜ್ಯ ಸರ್ಕಾರ ತಂದಿರುವ ಜನ ವಿರೋಧಿ ನೀತಿಗಳನ್ನು ಹಿಂಪಡೆಯುವಂತೆ ರಾಜ್ಯದ್ಯಂತ ಹೋರಾಟ ಮಾಡುತ್ತೇನೆ ಎಂದು ಜೆಡಿಎಸ್ ವರಿಷ್ಠ ಹೆಚ್ಡಿ ದೇವೇಗೌಡ ಹೇಳಿದ್ದಾರೆ.
ಜೆಡಿಎಸ್ ಪಕ್ಷ ಹುಟ್ಟಿರೋದೆ ರೈತರ ಪರವಾಗಿ ಹೋರಾಟ ಮಾಡೋಕೆ, ಅರವತ್ತು ವರ್ಷದ ರಾಜಕೀಯ ಜೀವನದಲ್ಲಿ ಹೋರಾಟ ಮಾಡಿಕೊಂಡೆ ಬಂದಿದ್ದೀನಿ, ರಾಜ್ಯದಲ್ಲಿ ಜನ ವಿರೋಧಿ ಕಾನೂನುಗಳಿಂದ ಆಗುವ ಪರಿಣಾಮದ ಬಗ್ಗೆ ಚರ್ಚೆ ಮಾಡಬೇಕಿದೆ. ಎಷ್ಟು ಸಾಧ್ಯವೊ ಅಷ್ಟು ಹೋರಾಟ ಮಾಡುತ್ತೇನೆ ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರವು ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿಗಳಂತಹ ಜನ ವಿರೋಧಿ ತಿದ್ದುಪಡಿ ಕಾಯ್ದೆಗಳನ್ನು ವಿರೋಧಿಸಿ ಹಾಸನದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಈ ಕಾನೂನಿನ ಅಪಾಯದ ಬಗ್ಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಜನರಿಗೆ ತಿಳಿಸಬೇಕಿದೆ. ಇದು ದ್ವೇಷದಿಂದ ಮಾಡುತ್ತಿರೋ ಹೋರಾಟ ಅಲ್ಲ.ನಮ್ಮ ರೈತರ ಸಂಕಷ್ಟಕ್ಕೆ ನಾವು ನೆರವಾಗಬೇಕು.ರಾಜ್ಯದ 30 ಜಿಲ್ಲೆಗಳಲ್ಲೂ ಇದರ ವಿರುದ್ಧ ಹೋರಾಟ ಮಾಡುತ್ತೇವೆ, ಜನರಿಗೆ ಆಗಿರುವ ಅನ್ಯಾಯ ತಡೆಗಟ್ಟಲು ಹೋರಾಟ ಅನಿವಾರ್ಯವಾಗಿದೆ ಎಂದು ಅವರು ತಿಳಿಸಿದರು.
ನಾನು ಸುಮ್ಮನೆ ಕೂರುವ ಪ್ರಶ್ನೆಯೇ ಇಲ್ಲ, ಈ ಹೋರಾಟ ಹಾಸನದಿಂದ ಪ್ರಾರಂಭ ಮಾಡುತ್ತಿದ್ದೇವೆ. ಕೊರೊನಾದಿಂದ ನನಗೇನಾದ್ರು ತೊಂದರೆ ಆಗುತ್ತೆ ಎಂದು ಕೆಲವರು ಹೆದರುತ್ತಾರೆ. ಆದ್ರೆ ನಾನು ಧೃತಿ ಗೆಡೋದಿಲ್ಲ, ಸಾವು ಯಾವಾಗ ಯಾರಿಗೆ ಹೇಗೆ ಬರುತ್ತದೆ ಎಂಬುದು ಯಾರಿಗೂ ಗೊತ್ತಾಗುವುದಿಲ್ಲ. ಹಾಗಾಗಿ ರಾಜ್ಯ ಸರ್ಕಾರ ತಂದಿರುವ ಜನ ವಿರೋಧಿ ತಿದ್ದುಪಡಿಗಳ ವಿರುದ್ಧ ರಾಜ್ಯದ್ಯಂತ ಹೋರಾಟ ಕಟ್ಟುತ್ತೇನೆ ಎಂದು ದೇವೇಗೌಡರು ಹೇಳಿದ್ದಾರೆ.
Read Also: ಶಂಕರಾಚಾರ್ಯ ಪ್ರತಿಮೆ ಮೇಲೆ ಮುಸ್ಲೀಂ ಸಂಘಟನೆ ಬಾವುಟ! ಕೋಮುಗಲಬೆಗೆ ಸಂಘಿಗಳ ಸಂಚು?

