ರೋಗಗ್ರಸ್ಥ ಮನಸ್ಸಿನ ಬಿಜೆಪಿ ಸರ್ಕಾರದ ಬಗ್ಗೆ ಮರುಕವಿದೆ: ಹೆಚ್‌ಡಿ ಕುಮಾರಸ್ವಾಮಿ

ಹಸಿರು ಶಾಲು ಹೊದ್ದು, ನಮ್ಮದು ರೈತ ಪರ ಸರ್ಕಾರವೆಂದು ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಅಧಿಕಾರ ಇದ್ದಾಗಲೂ ಕೊಟ್ಟ ಮಾತು ಉಳಿಸಿ ಕೊಳ್ಳಲಾಗದವರ ಹಾಗೂ ರೋಗಗ್ರಸ್ತ ಮನಸ್ಸಿನವರ ಬಗ್ಗೆ ನನಗೆ ಮರುಕವಿದೆ ಎಂದು ಬಿಜೆಪಿ ಸರ್ಕಾರವನ್ನು ಛೇಡಿಸಿದ್ದಾರೆ.

ಕೊಪ್ಪಳ ಜಿಲ್ಲೆಯಲ್ಲಿ ರೈತರೊಬ್ಬರು ಗೊಬ್ಬರಕ್ಕಾಗಿ ಹಲವು ಅಂಗಡಿಗಳಿಗೆ ಹೋದರೂ ಗೊಬ್ಬರ ಸಿಗದೆ ಕಂಗಾಲಾಗಿದ್ದ ರೈತ ಅಸಹಾಯಕತೆ ವ್ಯಕ್ತಿ ಪಡಿಸಿದ್ದರು, ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಹೆಚ್‌ಡಿಕೆ,  ಕೊಪ್ಪಳ ಜಿಲ್ಲೆಯ ರೈತರೊಬ್ಬರು ವಾರದಿಂದ ಅಲೆದರೂ ಒಂದು ಚೀಲ ಗೊಬ್ಬರ ಸಿಕ್ಕಿಲ್ಲ ಎಂದು ಅಳುತ್ತಿದ್ದರೆ, ಆಸ್ಪತ್ರೆಗಳಲ್ಲಿ ಆಕ್ಸಿಜನ್ ಇಲ್ಲದೇ ರೋಗಿಗಳು ನರಳಾಡುತ್ತಿರುವುದು ಸರ್ಕಾರ ಸಶಕ್ತವಾಗಿರುವ ಲಕ್ಷಣವೋ? ನಿಶಕ್ತವಾಗಿರುವ ಲಕ್ಷಣವೋ? ಎಂದು ಪ್ರಶ್ನಿಸಿದ್ದಾರೆ.

ಅಧಿಕಾರ ಇದ್ದಾಗಲೂ ಕೊಟ್ಟ ಮಾತು ಉಳಿಸಿ ಕೊಳ್ಳಲಾಗದವರ ಹಾಗೂ ರೋಗಗ್ರಸ್ತ ಮನಸ್ಸಿನವರ ಬಗ್ಗೆ ನನಗೆ ಮರುಕವಿದೆ. ಪತ್ರಿಕಾಗೋಷ್ಠಿ ಕರೆಯದೆ “ಈ ದಿನ ಪತ್ರಿಕಾಗೋಷ್ಠಿ ಇರುವುದಿಲ್ಲ” ಎಂದು ಸ್ಪಷ್ಟನೆ ನೀಡುವ ಬೌದ್ಧಿಕ ದಾರಿದ್ರ್ಯ ನಿಮ್ಮಂತೆ ನನಗೆ ಬಂದೊದಗಿಲ್ಲ ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ.

ಕರೋನಾ ಸೋಂಕಿತರು ಬೆಡ್ ಗಳಿಲ್ಲದೆ, ಅಂಬುಲೆನ್ಸ್ ದಕ್ಕದೆ, ಸೂಕ್ತ ವೈದ್ಯಕೀಯ ಚಿಕಿತ್ಸೆಗಾಗಿ ಪರದಾಡುವಾಗ ನಿಮ್ಮ ಸಶಕ್ತತೆ ಎಲ್ಲಿ ಅಡಗಿತ್ತು? ಕರೋನಾ ನಿಯಂತ್ರಣಕ್ಕೆ ಎಷ್ಟೊಂದು ಸಚಿವರು? ಕಮೀಷನ್ ದಂಧೆ, ಸಮನ್ವಯದ ಕೊರತೆಯಿಂದ ಬಳಲಿ ಹೈರಾಣಾದಿರಿ ಎಂದು ಪ್ರಶ್ನಿಸಿದ್ದಾರೆ.

ಮಾಧ್ಯಮಗಳ ವರದಿಗಳನ್ನು ಗಮನಿಸುವಷ್ಟು ವ್ಯವಧಾನವಿರದ ನೀವು ಮಾಧ್ಯಮಗಳ ಮುಂದೆ ಕುಳಿತು “ಪೋಜು” ಕೊಡುವುದು ಬಿಟ್ಟು ಮೈಬಗ್ಗಿಸಿ ಕೆಲಸ ಮಾಡಿ ತೋರಿಸಿ. ಕರೋನಾ ಸೋಂಕಿನ ವಿಷಯದಲ್ಲಿ ಆರು ತಿಂಗಳಿಂದ ಮಾತಿನ ಮಂಟಪ ಕಟ್ಟಿದರೆ ಹೊರತು ಅನುಷ್ಠಾನದಲ್ಲಿ ಮಕಾಡೆ ಮಲಗಿದ್ದು ರಾಜ್ಯದ ಜನತೆಗೆ ಗೊತ್ತಿದೆ ಎಂದು ಹೇಳಿದ್ದಾರೆ.


Read Also:  ರಾಮಮಂದಿರ ಬಿಜೆಪಿಗೆ ರಾಜಕೀಯ ದಾಳವಾಗಿದ್ದು ವಿಪರ್ಯಾಸ; ಮಂದಿರ ನಿರ್ಮಾಣ ಏಕತೆಯ ಪ್ರತಿಬಿಂಬವಾಗಲಿ: ಹೆಚ್‌ಡಿಕೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights